ಶನಿವಾರ, ಜೂನ್ 6, 2020
27 °C

ಬಹುತ್ವದ ನಾಡಲ್ಲಿ ಮಾಧ್ಯಮ ಸ್ವಾತಂತ್ರ್ಯವಿಲ್ಲವೇ?

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಪ್ಯಾರಿಸ್ ಮೂಲದ ಎನ್‌ಜಿಒ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (RSF: Reporters sans frontières–ಆರ್‌ಎಸ್‌ಎಫ್– ಗಡಿಗಳಿಲ್ಲದ ವರದಿಗಾರರು) ತನ್ನ ಇತ್ತೀಚಿನ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಪತ್ರಕರ್ತರಿಗೆ ಲಭ್ಯವಿರುವ ಸ್ವಾತಂತ್ರ್ಯದ ಮಟ್ಟವನ್ನು ನಿರ್ಣಯಿಸಿದೆ. ಈ ಸೂಚ್ಯಂಕವು ವಿಶ್ವದ ಅತಿದೊಡ್ಡ ಉದಾರವಾದಿ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ಸಮಾಜವನ್ನು ಹೊಂದಿರುವ ಭಾರತವನ್ನು ಮೌಲ್ಯಮಾಪನ ಮಾಡಿದ 180 ದೇಶಗಳ ಪೈಕಿ 142ನೇ ಸ್ಥಾನದಲ್ಲಿರಿಸಿದೆ. ಇದು ಒಂದು ವರ್ಷದ ಹಿಂದೆ ಭಾರತವಿದ್ದ 140ನೇ ಸ್ಥಾನಕ್ಕಿಂತ ಎರಡು ಸ್ಥಾನಗಳು ಕಡಿಮೆ.

ಆರ್‌ಎಸ್‌ಎಫ್‌ ಪ್ರಕಾರ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಏಕೆ ಕಳಪೆಯಾಗಿದೆ? ಇದು ಪ್ರಜಾಪ್ರಭುತ್ವದ ಬಗ್ಗೆ ಆರ್‌ಎಸ್‌ಎಫ್‌ನ ತಿಳಿವಳಿಕೆ ಮತ್ತು ಅದು ಬಳಸುವ ವಿಧಾನದ ಬಗ್ಗೆ ಗಂಭೀರ ವಿಶ್ಲೇಷಣೆಯನ್ನು ಬಯಸುತ್ತದೆ.
ಆರ್‌ಎಸ್‌ಎಫ್‌ ವೆಬ್‌ಸೈಟ್ ಹೇಳುವಂತೆ ಪತ್ರಕರ್ತರಿಗೆ ಲಭ್ಯವಿರುವ ಸ್ವಾತಂತ್ರ್ಯದ ಮಟ್ಟವನ್ನು ಅದು ರೂಪಿಸಿದ ವಿಸ್ತೃತ ಪ್ರಶ್ನಾವಳಿಗೆ ತಜ್ಞರ ಪ್ರತಿಕ್ರಿಯೆಗಳನ್ನು ಪಡೆಯುವ ಮೂಲಕ ನಿರ್ಧರಿಸಲಾಗುತ್ತದೆ. ಪರಿಮಾಣಾತ್ಮಕ ದತ್ತಾಂಶವನ್ನು ಮೌಲ್ಯಮಾಪನ ಮಾಡಿದ ಅವಧಿಯಲ್ಲಿ ಪತ್ರಕರ್ತರ ಮೇಲಿನ ದುರುಪಯೋಗ ಮತ್ತು ಹಿಂಸಾಚಾರದ ಗುಣಾತ್ಮಕ ವಿಶ್ಲೇಷಣೆಯೊಂದಿಗೆ ಸಂಯೋಜಿಸಲಾಗಿದೆ.

87 ಪ್ರಶ್ನೆಗಳನ್ನು ಹೊಂದಿರುವ ಪ್ರಶ್ನಾವಳಿಯಲ್ಲಿ ಮೌಲ್ಯಮಾಪನ ಮಾಡಲಾದ ಮಾನದಂಡಗಳಿವು... ಬಹುತ್ವ, ಮಾಧ್ಯಮ ಸ್ವಾತಂತ್ರ್ಯ, ಮಾಧ್ಯಮ ಪರಿಸರ ಮತ್ತು ಸ್ವಯಂ ನಿರ್ಬಂಧ, ಶಾಸಕಾಂಗದ ಚೌಕಟ್ಟು, ಪಾರದರ್ಶಕತೆ, ಸುದ್ದಿ ಮತ್ತು ಮಾಹಿತಿ ರೂಪುಗೊಳ್ಳುವ ಪ್ರಕ್ರಿಯೆಯನ್ನು ಬೆಂಬಲಿಸುವ ಮೂಲಸೌಕರ್ಯಗಳ ಗುಣಮಟ್ಟ. ಈ ಆನ್‌ಲೈನ್ ಪ್ರಶ್ನಾವಳಿಯನ್ನು ಆರ್‌ಎಸ್‌ಎಫ್‌ ಪ್ರಪಂಚದಾದ್ಯಂತದ 18 ಎನ್‌ಜಿಒಗಳಿಗೆ ಮತ್ತು 150 ವರದಿಗಾರರ ಜಾಲಕ್ಕೆ ಮತ್ತು ಈ ವರದಿಗಾರರು ಆಯ್ಕೆ ಮಾಡಿದ ಸಂಶೋಧಕರು, ನ್ಯಾಯಶಾಸ್ತ್ರಜ್ಞರು, ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಕಳುಹಿಸುತ್ತದೆ. ಪ್ರತಿಕ್ರಿಯಿಸಿದವರಲ್ಲಿ ಶೇಕಡಾ ಹತ್ತು ಮಂದಿ ದೇಶದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ವರದಿಗಾರರಾಗಿದ್ದಾರೆ.

ಇಲ್ಲೇ ಇರೋದು ಸಮಸ್ಯೆ. 130 ಕೋಟಿ ನಾಗರಿಕರನ್ನು ಹೊಂದಿರುವ ಭಾರತದಂತಹ ಬೃಹತ್ ದೇಶದ ಸಮೀಕ್ಷೆಯ ಮಾದರಿಯ ಗಾತ್ರ ತುಂಬಾ ಸಣ್ಣದಾಗಿದೆ ಮತ್ತು ಪ್ರತಿಕ್ರಿಯಿಸಲು ಆಯ್ಕೆ ಮಾಡಿರುವವರ ಬಗ್ಗೆ ಹೆಚ್ಚು ತಿಳಿದಿಲ್ಲ. ಇದರ ಬಗ್ಗೆ ನಾವು ಆಮೇಲೆ ಮಾತಾಡೋಣ.

ಮೊದಲನೆಯದಾಗಿ, ಉತ್ತಮ ಪ್ರಜಾಪ್ರಭುತ್ವದ ವಾತಾವರಣವು ಮುಕ್ತ ಪತ್ರಿಕಾ ಸ್ವಾತಂತ್ರ್ಯಕ್ಕೆ ಅತ್ಯಗತ್ಯ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ವಿಚಿತ್ರವೆಂದರೆ ಗಣರಾಜ್ಯ ಸರ್ಕಾರ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕ ಬದ್ಧತೆ, ಜಾತ್ಯತೀತ ಮೌಲ್ಯಗಳಿಗೆ ನಿಸ್ಸಂದಿಗ್ಧವಾದ ಸಾಂವಿಧಾನಿಕ ಬದ್ಧತೆ, ಧರ್ಮ ಮತ್ತು ರಾಷ್ಟ್ರದ ಪ್ರತ್ಯೇಕತೆ, ಕಾನೂನಿನಲ್ಲಿ ಸಮಾನತೆಯ ಮೂಲಭೂತ ಹಕ್ಕು ಮತ್ತು ಕಾನೂನುಗಳ ಸಮಾನ ರಕ್ಷಣೆ, ಲಿಂಗ ಸಮಾನತೆ, ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು ಇಂತಹ  ಮೂಲಭೂತ ವಿಷಯಗಳಿಗೆ ಈ ಸೂಚ್ಯಂಕದಲ್ಲಿ ಯಾವುದೇ ಸ್ಥಾನವಿಲ್ಲ ಅಥವಾ ನಗಣ್ಯವಾಗಿದೆ. ಒಂದು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆಯೇ ಎಂದು ನಿರ್ಣಯಿಸುವಾಗ ಆರ್‌ಎಸ್‌ಎಫ್‌ಗೆ ಇದ್ಯಾವುದರ ಅಗತ್ಯವೂ ಕಾಣುವುದಿಲ್ಲ. ಇದು ಅದರ ದೊಡ್ಡ ನ್ಯೂನತೆಯಾಗಿದೆ.

ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಅರ್ಹತೆ ಪಡೆಯಲೂ ಸಾಧ್ಯವಿಲ್ಲದ ಕೆಲವು ರಾಷ್ಟ್ರಗಳು ಶ್ರೇಯಾಂಕದಲ್ಲಿ ಭಾರತಕ್ಕಿಂತ ಮುಂದಿರುವುದನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಕೆಲವು ಉದಾಹರಣೆಗಳು ಇಲ್ಲಿವೆ...

ಆರ್‌ಎಸ್‌ಎಫ್‌ ಸೂಚ್ಯಂಕದಲ್ಲಿ ಭಾರತವು 142 ನೇ ಸ್ಥಾನದಲ್ಲಿದ್ದರೆ, ನೂರು ಪಾಯಿಂಟ್‌ಗಳಷ್ಟು ಮುಂದಿರುವ ಬುರ್ಕಿನಾ ಫಾಸೊ 36ನೇ ಸ್ಥಾನದಲ್ಲಿದೆ. ಅಮೆರಿಕ ಸರ್ಕಾರವು ಇತ್ತೀಚೆಗೆ ತನ್ನ Trafficking in Persons Reportನಲ್ಲಿ ಬುರ್ಕಿನಾ ಫಾಸೊದಲ್ಲಿ ಗುಲಾಮಗಿರಿಯು ಮುಂದುವರೆದಿದೆ. ಬುರ್ಕಿನಾಬೆಯ ಮಕ್ಕಳು ಹೆಚ್ಚಾಗಿ ಬಲಿಪಶುಗಳಾಗಿದ್ದಾರೆ ಎಂದು ಹೇಳಿದೆ. ಗುಲಾಮಗಿರಿಯು ಅರಬ್ ಗುಲಾಮರ ವ್ಯಾಪಾರದಷ್ಟು ಹಿಂದಿನ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಅದು ಹೇಳಿದೆ. 2018 ರ ಜಾಗತಿಕ ಗುಲಾಮಗಿರಿ ಸೂಚ್ಯಂಕದ ಪ್ರಕಾರ, ದೇಶದಲ್ಲಿ ಅಂದಾಜು 82,000 ಜನರು ‘ಆಧುನಿಕ ಗುಲಾಮಗಿರಿ’ಯಲ್ಲಿ ವಾಸಿಸುತ್ತಿದ್ದಾರೆ.

ಮಾಲ್ಡೀವ್ಸ್ ಗಣರಾಜ್ಯ ಆರ್‌ಎಸ್‌ಎಫ್‌ ಸೂಚ್ಯಂಕದಲ್ಲಿ 79 ನೇ ಸ್ಥಾನದಲ್ಲಿದೆ. ಇದರ ಸಂವಿಧಾನವು ಇಸ್ಲಾಂ ಧರ್ಮ ಮಾಲ್ಡೀವ್ಸ್ ರಾಷ್ಟ್ರಧರ್ಮವಾಗಿದೆ ಮತ್ತು ‘ಇಸ್ಲಾಂ ಧರ್ಮದ ಸಿದ್ಧಾಂತಗಳಿಗೆ ವಿರುದ್ಧವಾದ ಯಾವುದೇ ಕಾನೂನು ಮಾಲ್ಡೀವ್ಸ್‌ನಲ್ಲಿ ಜಾರಿಯಾಗುವುದಿಲ್ಲ’ ಎಂದು ಹೇಳುತ್ತದೆ. ಸಂವಿಧಾನದ 9 (ಡಿ) ಕಲಂ ‘ಮುಸ್ಲಿಮೇತರರು ಮಾಲ್ಡೀವ್ಸ್ ಪ್ರಜೆಯಾಗಬಾರದು’ ಎಂದು ಘೋಷಿಸುತ್ತದೆ.

ಸೂಚ್ಯಂಕದಲ್ಲಿ 135ನೇ ಸ್ಥಾನದಲ್ಲಿರುವ ಒಮಾನ್ ಒಂದು ಅರಬ್, ಇಸ್ಲಾಮಿಕ್ ರಾಷ್ಟ್ರ. ಒಮಾನ್‌ನ ಸಂವಿಧಾನದ 2 ನೇ ವಿಧಿಯು ದೇಶದ ಧರ್ಮ ಇಸ್ಲಾಂ ಮತ್ತು ಇಸ್ಲಾಮಿಕ್ ಷರಿಯಾ ಶಾಸನಕ್ಕೆ ಆಧಾರವಾಗಿದೆ ಎಂದು ಹೇಳುತ್ತದೆ. ಆಡಳಿತ ವ್ಯವಸ್ಥೆಯು ಸುಲ್ತಾನಿ, ಸಯ್ಯಿದ್ ತುರ್ಕಿ ಬಿನ್ ಸೈದ್ ಬಿನ್ ಸುಲ್ತಾನ್ ಅವರ ಪುರುಷ ವಂಶಪಾರಂಪರ್ಯದ ಸ್ವತ್ತಾಗಿದೆ. ಅವರಲ್ಲಿ ಯಾರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಬೇಕಾದರೂ ಆತ ‘ಮುಸ್ಲಿಂ, ಪ್ರಬುದ್ಧ, ತರ್ಕಬದ್ಧ ಮತ್ತು ಒಮಾನಿ ಮುಸ್ಲಿಂ ತಂದೆ ತಾಯಿಯ ನ್ಯಾಯಸಮ್ಮತ ಮಗನಾಗಿರಬೇಕು’.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ಜಾತ್ಯತೀತ ರಾಷ್ಟ್ರ ಅಥವಾ ಗಣರಾಜ್ಯವಲ್ಲ ಮತ್ತು ಯಾವುದೇ ಲಿಂಗ ಸಮಾನತೆಯಿಲ್ಲ. ಏಕೆಂದರೆ ಸಂವಿಧಾನವು ರಾಷ್ಟ್ರದ ಮುಖ್ಯಸ್ಥ ಮುಸ್ಲಿಂ ಪುರುಷನಾಗಿರಬೇಕು ಎಂದು ಆದೇಶಿಸುತ್ತದೆ.

ಸೂಚ್ಯಂಕವು ಕೊಮೊರೊಸ್ ಅನ್ನು 75 ನೇ ಸ್ಥಾನದಲ್ಲಿಟ್ಟಿದೆ. ಇದರ ಸಂವಿಧಾನವು ಕೊಮೊರಿಯನ್ ಜನರು ‘ಇಸ್ಲಾಂ ಧರ್ಮ, ರಾಷ್ಟ್ರ ಧರ್ಮ, ಒಕ್ಕೂಟವನ್ನು ನಿಯಂತ್ರಿಸುವ ತತ್ವಗಳು ಮತ್ತು ನಿಯಮಗಳ ಶಾಶ್ವತ ಸ್ಫೂರ್ತಿಯಿಂದ ಸೆಳೆಯುವ ಇಚ್ಛೆಯನ್ನು ಪ್ರಮಾಣೀಕರಿಸುತ್ತಾರೆ’ ಎಂದು ಹೇಳುತ್ತದೆ.

ಈಗ, ಕ್ರಿಶ್ಚಿಯನ್ ಧರ್ಮದೊಂದಿಗೆ ಬೆಸೆದುಕೊಂಡಿರುವ ಕೆಲವು ರಾಷ್ಟ್ರಗಳನ್ನು ನೋಡೋಣ. ಅರ್ಜೆಂಟೀನಾ 64ನೇ ಸ್ಥಾನದಲ್ಲಿದೆ. ಇದರ ಸಂವಿಧಾನವು ಫೆಡರಲ್ ಸರ್ಕಾರವು ರೋಮನ್ ಕ್ಯಾಥೊಲಿಕ್ ಅಪೋಸ್ಟೋಲಿಕ್ ಧರ್ಮವನ್ನು ಬೆಂಬಲಿಸುತ್ತದೆ ಎಂದು ಘೋಷಿಸುತ್ತದೆ.

ಆರ್‌ಎಸ್‌ಎಫ್‌ ಸೂಚ್ಯಂಕದಲ್ಲಿ 81ನೇ ಸ್ಥಾನದಲ್ಲಿರುವ ಮಾಲ್ಟಾದ ಸಂವಿಧಾನವು ‘ಮಾಲ್ಟಾದ ಧರ್ಮವು ರೋಮನ್ ಕ್ಯಾಥೊಲಿಕ್ ಅಪೋಸ್ಟೋಲಿಕ್ ಧರ್ಮ’ ಎಂದು ಘೋಷಿಸುತ್ತದೆ. ರೋಮನ್ ಕ್ಯಾಥೊಲಿಕ್ ಅಪೋಸ್ಟೋಲಿಕ್ ಚರ್ಚ್‌ನ ಅಧಿಕಾರಿಗಳು ‘ಯಾವ ತತ್ವಗಳು ಸರಿ ಮತ್ತು ತಪ್ಪು ಎಂದು ಕಲಿಸುವ ಕರ್ತವ್ಯ ಮತ್ತು ಹಕ್ಕನ್ನು ಹೊಂದಿದ್ದಾರೆ. ರೋಮನ್ ಕ್ಯಾಥೊಲಿಕ್ ಅಪೋಸ್ಟೋಲಿಕ್ ನಂಬಿಕೆಯ ಧಾರ್ಮಿಕ ಬೋಧನೆಯನ್ನು ಕಡ್ಡಾಯ ಶಿಕ್ಷಣದ ಭಾಗವಾಗಿ ದೇಶದ ಎಲ್ಲಾ ಶಾಲೆಗಳಲ್ಲಿ ಒದಗಿಸಬೇಕು’ ಎಂದು ಅದು ಹೇಳಿದೆ.

ನಾರ್ವೆ ಸಾಮ್ರಾಜ್ಯವು ಆರ್‌ಎಸ್‌ಎಫ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಗರಿಷ್ಠ ಪತ್ರಿಕಾ ಸ್ವಾತಂತ್ರ್ಯವನ್ನು ಹೊಂದಿರುವ ರಾಷ್ಟ್ರವೆಂದು ಘೋಷಿಸಲ್ಪಟ್ಟಿದೆ. ಅದರ ಸಂವಿಧಾನವು ಅದರ ಸರ್ಕಾರದ ಸ್ವರೂಪವನ್ನು ಸೀಮಿತ ಮತ್ತು ವಂಶಪಾರಂಪರ್ಯದ ರಾಜಪ್ರಭುತ್ವ ಎಂದು ವಿವರಿಸುತ್ತದೆ. ‘ನಮ್ಮ ಮೌಲ್ಯಗಳು ನಮ್ಮ ಕ್ರಿಶ್ಚಿಯನ್ ಮತ್ತು ಮಾನವಿಕ ಪರಂಪರೆಯಾಗಿ ಉಳಿಯುತ್ತವೆ’ ಎಂದು ಹೇಳುತ್ತದೆ. ನಾರ್ವೆಯ ಮುಖ್ಯಸ್ಥರಾಗಲು ಇರುವ ಅರ್ಹತಾ ಮಾನದಂಡಗಳಲ್ಲಿ, ‘ರಾಜನು ಯಾವಾಗಲೂ ಇವಾಂಜೆಲಿಕಲ್-ಲುಥೆರನ್ ಧರ್ಮವನ್ನು ಒಪ್ಪಿಕೊಳ್ಳಬೇಕು’ ಎಂದು ಹೇಳುತ್ತದೆ. ಇದು ರಾಷ್ಟ್ರದ ಮುಖ್ಯಸ್ಥರಿಗೆ ವಿನಾಯಿತಿಯನ್ನೂ ನೀಡುತ್ತದೆ. ‘ರಾಜನು ಪವಿತ್ರ ವ್ಯಕ್ತಿ; ಅವನನ್ನು ಖಂಡಿಸಲು ಅಥವಾ ಆರೋಪಿಸಲು ಸಾಧ್ಯವಿಲ್ಲ’ ಎನ್ನುವ ಮಾತುಗಳು ಅಲ್ಲಿವೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಜಾತ್ಯತೀತ ರಾಷ್ಟ್ರವಲ್ಲ; ಗಣರಾಜ್ಯವಲ್ಲ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಲ್ಲಿ ಒಂದಾದ - ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನುಗಳ ಸಮಾನ ಅನ್ವಯಿಕೆಗೆ (ಭಾರತೀಯ ಸಂವಿಧಾನದಲ್ಲಿ ಕಲಂ 14) - ನಾರ್ವೆಯಲ್ಲಿ ಯಾವುದೇ ಸ್ಥಾನವಿಲ್ಲ.

ಆರ್‌ಎಸ್‌ಎಫ್‌ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ಸಂವಿಧಾನವು ‘ಇವಾಂಜೆಲಿಕಲ್ ಲುಥೆರನ್ ಚರ್ಚ್ ಡೆನ್ಮಾರ್ಕ್‌ನ ಸ್ಥಾಪಿತ ಚರ್ಚ್ ಆಗಿರುತ್ತದೆ ಎಂದು ಘೋಷಿಸುತ್ತದೆ ಮತ್ತು ರಾಜ್ಯವು ಇದನ್ನು ಬೆಂಬಲಿಸುತ್ತದೆ’ ಹೇಳುತ್ತದೆ.

‘ಇದು ಪವಿತ್ರ ಬೈಬಲ್, ವಿವಿಧ ಕ್ರೈಸ್ತ ಧರ್ಮೀಯ ಸಾಂಕೇತಿಕ ಪುಸ್ತಕಗಳು ಮತ್ತು ಜರ್ಮನ್ ಧರ್ಮಶಾಸ್ತ್ರಜ್ಞ ಮಾರ್ಟಿನ್ ಲೂಥರ್ ಅವರ ಬೋಧನೆಗಳನ್ನು ಆಧರಿಸಿದೆ’ ಎಂಬುದು ಇದರರ್ಥ. ಇಂದು ಡೆನ್ಮಾರ್ಕ್ ಚರ್ಚ್ ಅನ್ನು ಆರ್ಥಿಕವಾಗಿ ಮತ್ತು ಇತರ ರೀತಿಯಲ್ಲಿ ಬೆಂಬಲಿಸುವ ಕರ್ತವ್ಯ ರಾಷ್ಟ್ರಕ್ಕೆ ಇದೆ.

ಈ ಸೂಚ್ಯಂಕದಲ್ಲಿ ಗ್ರೀಸ್ 65ನೇ ಸ್ಥಾನದಲ್ಲಿದೆ. ‘ಗ್ರೀಸ್ನಲ್ಲಿ ಚಾಲ್ತಿಯಲ್ಲಿರುವ ಧರ್ಮವು ಕ್ರಿಸ್ತನ ಪೂರ್ವ ಆರ್ಥೊಡಾಕ್ಸ್ ಚರ್ಚ್ ಆಗಿದೆ. ಗ್ರೀಸ್‌ನ ಆರ್ಥೊಡಾಕ್ಸ್ ಚರ್ಚ್, ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅದರ ಮುಖ್ಯಸ್ಥರೆಂದು ಒಪ್ಪಿಕೊಂಡಿದೆ, ಕಾನ್ಸ್ಟಾಂಟಿನೋಪಲ್‌ನಲ್ಲಿರುವ ಗ್ರೇಟ್ ಚರ್ಚ್ ಆಫ್ ಕ್ರಿಸ್ತನೊಂದಿಗೆ ಮತ್ತು ಅದೇ ಸಿದ್ಧಾಂತದ ಕ್ರಿಸ್ತನ ಎಲ್ಲ ಚರ್ಚ್‌ಗಳೊಂದಿಗೆ ಬೇರ್ಪಡಿಸಲಾಗದಂತೆ ಐಕ್ಯವಾಗಿದೆ’ ಎಂದು ಅದರ ಸಂವಿಧಾನದ 3 ನೇ ವಿಧಿ ಹೇಳುತ್ತದೆ.

ಚರ್ಚ್ ಮತ್ತು ದೇಶ, ಧರ್ಮ ಮತ್ತು ದೇಶಗಳು ಪ್ರತ್ಯೇಕವಾಗಿರಬೇಕಾದ್ದು ಪ್ರಜಾಪ್ರಭುತ್ವದ ಕೇಂದ್ರವಲ್ಲವೇ? ಇದು ಆರ್‌ಎಸ್‌ಎಫ್‌ ಸೂಚ್ಯಂಕದಲ್ಲಿರುವ ಸಮಸ್ಯಾತ್ಮಕ ವಿಷಯಗಳಲ್ಲೊಂದಾಗಿದೆ, ಇಂತಹುದು ಇನ್ನೂ ಹಲವು ಇವೆ.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಭಾರತವೇಕೆ ಸಾರಾಸಗಟಾಗಿ ತಿರಸ್ಕರಿಸಬೇಕು?

ಜಾತ್ಯತೀತತೆಯನ್ನು ತನ್ನ ಸಂವಿಧಾನದ ಮುನ್ನುಡಿಯಲ್ಲಿಯೇ ಹುದುಗಿಸಿಕೊಂಡಿರುವ ಮತ್ತು ಯಾವುದೇ ರಾಷ್ಟ್ರಧರ್ಮವನ್ನು ಹೊಂದಿರದ ಮತ್ತು ಸಮತಾವಾದದ ಅತ್ಯುತ್ತಮ ಪರಂಪರೆಗಳಲ್ಲಿ ತನ್ನ ರಾಷ್ಟ್ರದ ಮುಖ್ಯಸ್ಥನನ್ನು ಆಯ್ಕೆ ಮಾಡುವ ಭಾರತವು ಚರ್ಚುಗಳು ಮತ್ತು ಲಿಂಗ ಅಸಮಾನತೆಯೊಂದಿಗೆ ಇರುವ ವಂಶಪಾರಂಪರ್ಯದ ರಾಜಪ್ರಭುತ್ವಗಳಿಗಿಂತ ಹೇಗೆ ಹಿಂದುಳಿಯುತ್ತದೆ? ಇದಲ್ಲದೆ, ಪ್ರಜಾಪ್ರಭುತ್ವಗಳೇ ಅಲ್ಲದ ದೇವಪ್ರಭುತ್ವಗಳು ಮತ್ತು ಧರ್ಮ ಆಧಾರಿತ ರಾಷ್ಟ್ರಗಳಲ್ಲಿ ಭಾರತದಂತಹ ಜಾತ್ಯತೀತ ಪ್ರಜಾಪ್ರಭುತ್ವಕ್ಕಿಂತ ಉತ್ತಮವಾದ ಪತ್ರಿಕಾ ಸ್ವಾತಂತ್ರ್ಯ ಹೇಗಿರುತ್ತದೆ? ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ತಯಾರಿಸುವ ಆರ್‌ಎಸ್‌ಎಫ್ನ ರೀತಿಯನ್ನು  ನೋಡಿದಾಗ ಈ ಪ್ರಶ್ನೆಗಳು ಎದುರಾಗುತ್ತವೆ.

ಪತ್ರಿಕಾ ಸ್ವಾತಂತ್ರ್ಯವನ್ನು ಬಹುತ್ವದ ಆರು ವಿಭಾಗಗಳ ಅಡಿಯಲ್ಲಿ ನಿರ್ಣಯಿಸಲಾಗುತ್ತದೆ ಎಂದು ಆರ್‌ಎಸ್‌ಎಫ್‌ ವೆಬ್‌ಸೈಟ್ ಹೇಳಿಕೊಂಡಿದೆ. ಮಾಧ್ಯಮಗಳಲ್ಲಿ ಯಾವ ಮಟ್ಟದಲ್ಲಿ ಅಭಿಪ್ರಾಯಗಳನ್ನು ಪ್ರತಿನಿಧಿಸಲಾಗುತ್ತದೆ ಎಂಬುದನ್ನು ಇದು ಅಳೆಯುತ್ತದೆ. ಮುಸ್ಲಿಮೇತರರಿಗೆ ಪೌರತ್ವವನ್ನೂ ನಿರಾಕರಿಸಲಾಗುವ ಇಸ್ಲಾಮಿಕ್ ರಾಷ್ಟ್ರಗಳು ಮತ್ತು ದೇವಪ್ರಭುತ್ವಗಳ ದೇಶಗಳ ಮಾಧ್ಯಮಗಳಲ್ಲಿ ವಿಶ್ವದ ಅತ್ಯಂತ ಬಹುತ್ವ ಸಮಾಜವನ್ನು ಹೊಂದಿರುವ ಭಾರತಕ್ಕಿಂತ ಹೆಚ್ಚಿನ ಬಹುತ್ವವಿದೆ ಎಂದು ನಾವು ನಂಬಬೇಕೆಂದು ಆರ್‌ಎಸ್‌ಎಫ್‌ ಬಯಸುತ್ತಿದೆ.

ಎರಡನೆಯದು ಮಾಧ್ಯಮ ಸ್ವಾತಂತ್ರ್ಯವು ರಾಜಕೀಯ, ಸರ್ಕಾರ, ಧಾರ್ಮಿಕ ಶಕ್ತಿ ಮತ್ತು ಪ್ರಭಾವದಿಂದ ಹೊರತಾಗಿ ಎಷ್ಟರಮಟ್ಟಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಅಳೆಯುವುದು. ನಾವು ಆರ್‌ಎಸ್‌ಎಫ್‌ ಸೂಚ್ಯಂಕದ ಪ್ರಕಾರವೇ ಹೋದರೆ, ಚರ್ಚ್‌ಗಳೊಂದಿಗೆ ಸಹಯೋಗವಿರುವ ಅರ್ಜೆಂಟೀನಾ, ಮಾಲ್ಟಾ, ಡೆನ್ಮಾರ್ಕ್ ಮತ್ತು ಇಸ್ಲಾಂ ರಾಷ್ಟ್ರ ಧರ್ಮವಾಗಿರುವ ಮಾಲ್ಡೀವ್ಸ್, ಓಮನ್ ಸುಲ್ತಾನೇಟ್, ಕೊಮೊರೊಸ್ ಇತ್ಯಾದಿಗಳಲ್ಲಿನ ಮಾಧ್ಯಮಗಳ ಮೇಲಿನ ‘ಧಾರ್ಮಿಕ ಶಕ್ತಿ ಮತ್ತು ಪ್ರಭಾವ’ವು ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕಿಂತ ತೀರಾ ಕಡಿಮೆ!

ಮೂರನೆಯ ಮಾನದಂಡವೆಂದರೆ ‘ಮಾಧ್ಯಮ ಪರಿಸರ ಮತ್ತು ಸ್ವಯಂ ಸೆನ್ಸಾರ್‌ಶಿಪ್’. ಸ್ವತಂತ್ರ ಭಾರತವು ಕಳೆದ ಕೆಲವು ದಶಕಗಳಿಂದ ಮಾಧ್ಯಮಗಳ ಉತ್ತಮ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ. ಎಷ್ಟರಮಟ್ಟಿಗೆ ಎಂದರೆ, ದೇಶದಲ್ಲಿ ಡಜನ್‌ಗಟ್ಟಲೆ ಭಾಷೆಗಳ ಪ್ರಕಟಣೆಗಳ ಒಟ್ಟು ಮುದ್ರಣವು 43 ಕೋಟಿ ಪ್ರತಿಗಳನ್ನು ದಾಟಿದೆ. ಸುದ್ದಿ ಮತ್ತು ಪ್ರಸ್ತುತ ವಿದ್ಯಮಾನಗಳ ವಾಹಿನಿಗಳೂ ಸೇರಿ 800ಕ್ಕೂ ಹೆಚ್ಚು ಟೆಲಿವಿಷನ್ ಚಾನೆಲ್‌ಗಳನ್ನು ಹೊಂದಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರು ಪತ್ರಕರ್ತರು ಕೆಲಸ ಮಾಡುವ ವಾತಾವರಣವನ್ನು ವಿಶ್ಲೇಷಿಸುವರು ಎಂಬ ನಿರೀಕ್ಷೆಯಿದೆ. ಇಷ್ಟೊಂದು ಮಾಧ್ಯಮ ವೈವಿಧ್ಯತೆಯನ್ನು ಹೊಂದಿರುವ ಮತ್ತೊಂದು ರಾಷ್ಟ್ರ ಇರಬಹುದೇ? ಇನ್ನು ಸ್ವಯಂ-ಸೆನ್ಸಾರ್‌ಶಿಪ್ ವಿಷಯಕ್ಕೆ ಬಂದರೆ, ಇಸ್ಲಾಮಿಕ್ ಸ್ಟೇಟ್ಸ್ ಮತ್ತು ದೇವಪ್ರಭುತ್ವಗಳಲ್ಲಿ ಸ್ವಯಂ-ಸೆನ್ಸಾರ್‌ಶಿಪ್ ಅನುಸರಿಸದ ಪರಿಣಾಮಗಳ ಬಗ್ಗೆ ಆರ್‌ಎಸ್‌ಎಫ್‌ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್‌ನಲ್ಲಿ ರಾಣಿ ಮತ್ತು ಬೆಲ್ಜಿಯಂ, ನೆದರ್ಲ್ಯಾಂಡ್ಸ್, ನಾರ್ವೆ, ಡೆನ್ಮಾರ್ಕ್ ಮುಂತಾದ ರಾಷ್ಟ್ರಗಳಲ್ಲಿ ತಮ್ಮ ರಾಜಮನೆತನಕ್ಕೆ ಸಂಬಂಧಿಸಿದಂತೆ ಇರುವ ಸ್ವಯಂ ಸೆನ್ಸಾರ್‌ಶಿಪ್ ಬಗ್ಗೆ ಅದು ಸ್ವಲ್ಪ ಯೋಚನೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತದಂತಹ ವೈವಿಧ್ಯಮಯ ಪ್ರಜಾಪ್ರಭುತ್ವಕ್ಕೆ ಸ್ವಯಂ ಸೆನ್ಸಾರ್‌ಶಿಪ್ ಅಸಹನೀಯವಾದುದು.

ಭಾರತೀಯ ಸಂವಿಧಾನದಿಂದ ಪ್ರಾರಂಭವಾಗಿ ಮತ್ತು ಸಂಸತ್ತು ರಚಿಸಿದ ಹೇರಳ ಕಾನೂನುಗಳಿಂದಾಗಿ ಮಾಧ್ಯಮಗಳು ಮುಕ್ತವಾಗಿ ಮತ್ತು ನಿರ್ಭೀತಿಯಿಂದ ಕೆಲಸ ಮಾಡಲು ಅನುವು ಮಾಡಿಕೊಡಲು ಸಾಕಷ್ಟು ರಕ್ಷಣೆಯನ್ನು ಒದಗಿಸಲಾಗಿದೆ.

‘ಪಾರದರ್ಶಕತೆ’ ಭಾರತವು ಹೆಚ್ಚಿನ ಅಂಕಗಳನ್ನು ಗಳಿಸಲು ಇರುವ ಮತ್ತೊಂದು ಮಾನದಂಡವಾಗಿದೆ. ಅಮೆರಿಕಾ ಮತ್ತು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಂತೆಯೇ ಭಾರತೀಯ ಮಾಧ್ಯಮ ಸಂಸ್ಥೆಗಳು ಸಂಪಾದಕೀಯ ಸ್ಥಾನಗಳಿಂದ ತೆಗೆದುಕೊಂಡ ರಾಜಕೀಯ ಅಭಿಪ್ರಾಯದಲ್ಲಿ ಭಿನ್ನತೆ ಇದೆ ಮತ್ತು ಯಾವುದೇ ಮಾಧ್ಯಮ ಸಂಸ್ಥೆಯೂ ತನ್ನ ಪಟ್ಟೆಗಳನ್ನು ಮರೆಮಾಚುವುದಿಲ್ಲ. ಕಮ್ಯುನಿಸಂ, ಸಮಾಜವಾದ, ನಡುಪಂಥ, ಬಲಪಂಥೀಯತೆ ಇತ್ಯಾದಿಗಳಿಗೆ ಬದ್ಧವಾಗಿರುವ ಮಾಧ್ಯಮಗಳ ಗುಚ್ಛದಲ್ಲಿ ಮಳೆಬಿಲ್ಲಿನ ಎಲ್ಲಾ ಬಣ್ಣಗಳನ್ನು ನೋಡಬಹುದು.

ಮಾಧ್ಯಮವು ಈ ಹಿಂದೆ ವಿಪರೀತ ಎಡಪಂಥೀಯ ಮೋಹದಿಂದಾಗಿ ಪಾರದರ್ಶಕವಾಗಿರಲಿಲ್ಲ. ಈಗ ಇದು ಸರಿಯಾಗಿದೆ. ಎಲ್ಲಾ ಅಭಿಪ್ರಾಯಗಳಿಗೂ ಸ್ಥಾನ ದೊರೆತಿದೆ. ವಾಸ್ತವವಾಗಿ, ಈ ಬಹುತ್ವವು ಮಾಹಿತಿ ಮತ್ತು ಅಭಿಪ್ರಾಯದ ಮುಕ್ತ ಹರಿವನ್ನು ಖಾತ್ರಿಗೊಳಿಸುತ್ತದೆ. ಈ ರೀತಿಯ ಬಹುತ್ವವು ಬೇರೆಲ್ಲೆಯೂ ಇಲ್ಲ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಹುದು.

ಪ್ರಧಾನ ಮಂತ್ರಿ ಸೇರಿದಂತೆ ರಾಜಕೀಯ ಮುಖಂಡರ ಮೇಲೆ ಕೆಟ್ಟ ನಿಂದನೆಗಳು ಹರಿದಾಡುವ ಸಾಮಾಜಿಕ ಮಾಧ್ಯಮದಲ್ಲೂ ಕಾಣಬಹುದು. ನೀವು ‘ಪಾರದರ್ಶಕತೆ’ಯನ್ನು ಹುಡುಕುತ್ತಿದ್ದರೆ, ನೀವು ಅದನ್ನು ಈ ವೇದಿಕೆಗಳಲ್ಲಿ ಹೇರಳವಾಗಿ ಪಡೆಯುತ್ತೀರಿ. ಆದರೆ ನೀವು ಸಭ್ಯತೆಯನ್ನು ಹುಡುಕುತ್ತಿದ್ದರೆ, ಇದು ಹೋಗಬೇಕಾದ ಸ್ಥಳವಲ್ಲ!

ಕೊನೆಯದಾಗಿ, ಸೂಚ್ಯಂಕವು ಸುದ್ದಿ ಮತ್ತು ಮಾಹಿತಿ ಸಿದ್ಧವಾಗುವ ಮೂಲಸೌಕರ್ಯಗಳ ಗುಣಮಟ್ಟವನ್ನು ಪರಿಶೀಲಿಸಿದೆ. ಭಾರತ ತಾಂತ್ರಿಕವಾಗಿ ಮುಂದುವರಿದಿದೆ ಮತ್ತು ಅದನ್ನು ಬಯಸುವವರಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ನೀಡುತ್ತಿದೆ. ಅಲ್ಲದೆ, ದೇಶವು ಮಾಹಿತಿ ತಂತ್ರಜ್ಞಾನದಲ್ಲಿ ನಾಯಕತ್ವ ಸ್ಥಾನದಲ್ಲಿರುವುದರಿಂದ ಭಾರತೀಯ ಮಾಧ್ಯಮ ಕಂಪನಿಗಳು ತಮ್ಮ ವ್ಯವಹಾರಗಳನ್ನು ಹೊಸ ವೇದಿಕೆಗಳಿಗೆ ಕೊಂಡೊಯ್ಯಲು ಸುಭದ್ರವಾದ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ಮಿಸುತ್ತಿವೆ.

ಇವೆಲ್ಲದರ ಹೊರತಾಗಿಯೂ, ಆರ್‌ಎಸ್‌ಎಫ್‌ ಅಳವಡಿಸಿಕೊಂಡ ವಿಧಾನವೇ ಪ್ರಶ್ನಾರ್ಹವಾಗಿದೆ. ಅದು ಪ್ರತಿ ರಾಷ್ಟ್ರದಲ್ಲೂ ತನ್ನ ವರದಿಗಾರರನ್ನು ಹೆಸರಿಸಬೇಕು; ಪ್ರತಿಕ್ರಿಯಿಸಿದವರ ಪಟ್ಟಿಯನ್ನು ಅವರ ಸಾಮಾಜಿಕ, ರಾಜಕೀಯ, ಆರ್ಥಿಕ ಹಿನ್ನೆಲೆ, ವಾಸಸ್ಥಳ ಇತ್ಯಾದಿಗಳೊಂದಿಗೆ ಒದಗಿಸಬೇಕು. ಮಾದರಿಗಳು ವಿಶ್ವಾಸಾರ್ಹವಲ್ಲದಿದ್ದರೆ, ಅನುಮಾನಗಳು ವ್ಯಕ್ತವಾಗುತ್ತವೆ. ಇನ್ನೂ ಕೆಲವು ನ್ಯೂನತೆಗಳಿವೆ. 

ಪ್ಯಾರಿಸ್ ಮೂಲದ ಮುಖ್ಯ ತಂಡವು ಪ್ರಶ್ನೆಗಳು ಮತ್ತು ಪ್ರತಿ ಉತ್ತರಕ್ಕೆ ನೀಡಲಾಗುವ ಮಾನ್ಯತೆಯನ್ನು ನಿರ್ಧರಿಸುತ್ತದೆ. ಇದು ತೃಪ್ತಿದಾಯಕವಾದುದಲ್ಲ. ಪತ್ರಿಕಾ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಆರ್‌ಎಸ್‌ಎಫ್‌ ವಿವರಿಸುವುದಿಲ್ಲ. ಬದಲಾಗಿ ಪತ್ರಿಕಾ ಸ್ವಾತಂತ್ರ್ಯ, ಮಾಹಿತಿ ಸ್ವಾತಂತ್ರ್ಯ ಇತ್ಯಾದಿ ಪದಗಳನ್ನು ತುಂಬಾ ಸಡಿಲವಾಗಿ ಬಳಸುತ್ತದೆ. ಅಂತಿಮವಾಗಿ, ಪ್ರಶ್ನಾವಳಿ ತುಂಬಾ ದೀರ್ಘವಾಗಿದೆ. ಅದು ಪ್ರಕ್ರಿಯೆಯು ಮುಗಿಯುವ ಮೊದಲೇ ಹೆಚ್ಚಿನ ಪ್ರತಿಸ್ಪಂದಕರು ದಣಿಯುವಂತೆ ಮಾಡುತ್ತದೆ.

ಈ ಸೂಚ್ಯಂಕ ಮತ್ತು ಅದನ್ನು ರೂಪಿಸಿದ ವಿಧಾನವನ್ನು ನೋಡಿದಾಗ, ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಆರ್‌ಎಸ್‌ಎಫ್‌ ಸಂಪೂರ್ಣ ಅಗೌರವ ನೀಡಿರುವುದೇ ದೊಡ್ಡ ನ್ಯೂನತೆಯೆಂದು ಹೇಳಬೇಕು. ಪತ್ರಿಕಾ ಸ್ವಾತಂತ್ರ್ಯವು ಸಂಪೂರ್ಣವಾಗಿ ಪ್ರಜಾಪ್ರಭುತ್ವೇತರ ಪರಿಸರದಲ್ಲಿ ಅಸ್ತಿತ್ವದಲ್ಲಿದೆ ಎಂದು ನಂಬುವ ಮೂಲಕ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುತ್ತಿದೆ. ಇದೊಂದು ಕಾರಣಕ್ಕಾಗಿಯೇ, ಅದರ ತೀರ್ಮಾನಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು.

ಅಂತಿಮವಾಗಿ, ಆರ್‌ಎಸ್‌ಎಫ್‌ ಕೆಲಸವು ವ್ಯಕ್ತಿನಿಷ್ಠ, ಪಕ್ಷಪಾತ ಮತ್ತು ಅಪಾರದರ್ಶಕವಾದುದು ಎಂದು ಹೇಳಬೇಕು. ಆದರೆ ಅದರ ದೊಡ್ಡ ನ್ಯೂನತೆಯೆಂದರೆ ಅದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಸಂಪೂರ್ಣ ಅಗೌರವ ತೋರಿರುವುದು. ಪತ್ರಿಕಾ ಸ್ವಾತಂತ್ರ್ಯವು ಸಂಪೂರ್ಣವಾಗಿ ಪ್ರಜಾಪ್ರಭುತ್ವೇತರ ಪರಿಸರದಲ್ಲಿ ಅಸ್ತಿತ್ವದಲ್ಲಿದೆ ಎಂದು ನಂಬುವ ಮೂಲಕ ಅದು ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುತ್ತಿದೆ. ಅದಕ್ಕಾಗಿಯೇ ಅದರ ತೀರ್ಮಾನಗಳನ್ನು ಪ್ರಶ್ನಿಸಬೇಕು. ಆರ್‌ಎಸ್‌ಎಫ್‌ ಭಾರತದ ಸಂವಿಧಾನವನ್ನು ಓದಬೇಕು ಮತ್ತು ಅದನ್ನು ಇತರ ಸಂವಿಧಾನಗಳೊಂದಿಗೆ ಹೋಲಿಸಬೇಕು. ಜಾಗತಿಕ ಸೂಚ್ಯಂಕವನ್ನು ಸಿದ್ಧಪಡಿಸುವ ಮೊದಲು ಭಾರತದಲ್ಲಿ ಪ್ರಜಾಪ್ರಭುತ್ವ ತತ್ವಗಳನ್ನು ಹುರಿದುಂಬಿಸುತ್ತಿರುವ ಸಂಸ್ಥೆಗಳತ್ತ ನೋಡಬೇಕು ಮತ್ತು ಅದು ಪ್ರಜಾಪ್ರಭುತ್ವವನ್ನು ಮೊದಲು ಸ್ವತಃ ವ್ಯಾಖ್ಯಾನಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದು ತನ್ನ ಡ್ರಾಯಿಂಗ್ ಬೋರ್ಡ್‌ಗೆ ಹಿಂತಿರುಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು