ಶನಿವಾರ, ಮೇ 15, 2021
29 °C
ಪ್ರಜಾತಂತ್ರ, ಶಾಂತಿಗೆ ದೇಶ ತೋರಿದ ಬದ್ಧತೆಯನ್ನು ಮಂದಿರ ಸಾರಿ ಹೇಳಲಿದೆ

ಅಯೋಧ್ಯಾ ಪ್ರಕರಣ ಕಲಿಸಿದ ಪಾಠ

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ರಾಮ ಮಂದಿರ ನಿರ್ಮಾಣದ ಕೆಲಸಗಳ ಉಸ್ತುವಾರಿಗೆ, ಅಲ್ಲಿನ ವ್ಯವಹಾರಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಚಿಸುವುದರ ಮೂಲಕ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಕೆ ಸಿದ್ಧಪಡಿಸಿದೆ. ಟ್ರಸ್ಟ್‌ನ ರಚನೆಯು- ಅದೊಂದು ಐತಿಹಾಸಿಕ ಕ್ರಮ- ಸುಪ್ರೀಂ ಕೋರ್ಟ್‌ನ ತೀರ್ಮಾನಕ್ಕೆ ಅನುಗುಣವಾಗಿ
ಇದೆ ಎಂದು ಸಂಸತ್ತಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವಿವಾದಕ್ಕೆ ಒಳಗಾಗಿದ್ದ ಜಮೀನನ್ನು ಹಿಂದೂಗಳಿಗೆ ಹಸ್ತಾಂತರಿಸಿದ ಸುಪ್ರೀಂ ಕೋರ್ಟ್‌, ತೀರ್ಪು ನೀಡಿದ ಮೂರು ತಿಂಗಳುಗಳ ಒಳಗೆ ರೂಪುರೇಷೆ ಸಿದ್ಧಪಡಿಸಬೇಕು ಎಂದು ಸೂಚಿಸಿತ್ತು. ಟ್ರಸ್ಟ್‌ ಅಥವಾ ಇತರ ಯಾವುದಾದರೂ ಸೂಕ್ತ ವ್ಯವಸ್ಥೆಯ ಬಗ್ಗೆ ಆ ರೂಪುರೇಷೆಗಳಲ್ಲಿ ವಿವರ ಇರಬೇಕು ಎಂದು ಕೋರ್ಟ್ ಹೇಳಿತ್ತು.

ಇಷ್ಟಲ್ಲದೆ, 5 ಎಕರೆ ವಿಸ್ತೀರ್ಣದ ಸೂಕ್ತ ಜಮೀನನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಹಸ್ತಾಂತರಿಸಬೇಕು ಎಂದೂ ಕೋರ್ಟ್‌ ಸೂಚಿಸಿತ್ತು. ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ, 1994ರಲ್ಲಿ ಕೇಂದ್ರ ಸರ್ಕಾರ ನೀಡಿದ್ದ ವಾಗ್ದಾನವನ್ನು ಈ ಟ್ರಸ್ಟ್‌ನ ರಚನೆಯ ಮೂಲಕ ಒಂದು ಬಗೆಯಲ್ಲಿ ಈಡೇರಿಸಿದಂತೆ ಆಗಿದೆ. ಬಾಬರಿ ಮಸೀದಿಗೆ ಮೊದಲು ಹಿಂದೂ ದೇವಸ್ಥಾನ ಇತ್ತು ಎಂದಾದರೆ, ಸ್ವಾಧೀನ ಮಾಡಿಕೊಂಡ ಜಮೀನನ್ನು ಸರ್ಕಾರವು ಹಿಂದೂಗಳಿಗೆ ಹಿಂದಿರುಗಿಸುತ್ತದೆ ಎಂದು ಸರ್ಕಾರ ಆ ಮಾತು ಕೊಟ್ಟಿತ್ತು.

ಆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಕೇಂದ್ರ ನೀಡಿದ್ದ ಭರವಸೆ ಹೀಗಿತ್ತು: ‘ಇಲ್ಲಿರುವ ಪ್ರಶ್ನೆಗೆ ಪೂರಕ ವಾದ ಉತ್ತರ ದೊರೆತರೆ, ಅಂದರೆ ಹಿಂದೂ ದೇವಸ್ಥಾನ ಅಥವಾ ಕಟ್ಟಡವು ಅಲ್ಲಿ ಧ್ವಂಸಗೊಂಡಿರುವ ಕಟ್ಟಡದ ನಿರ್ಮಾಣಕ್ಕೂ ಮೊದಲು ಇತ್ತು ಎಂದಾದರೆ, ಹಿಂದೂ ಸಮುದಾಯದ ಆಕಾಂಕ್ಷೆಗಳಿಗೆ ಅನುಗುಣವಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ, ನಕಾರಾತ್ಮಕ ಉತ್ತರ ದೊರೆತರೆ, ಅಂದರೆ ಸಂಬಂಧಪಟ್ಟ ಕಾಲಾವಧಿಯಲ್ಲಿ ಅಲ್ಲಿ ಯಾವುದೇ ಹಿಂದೂ ದೇವಸ್ಥಾನ ಅಥವಾ ಕಟ್ಟಡ
ಇರಲಿಲ್ಲವಾಗಿತ್ತು ಎಂದಾದರೆ, ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯದ ಆಕಾಂಕ್ಷೆಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತದೆ’.

ಇದಾದ ಅಂದಾಜು ಒಂದು ದಶಕದ ನಂತರ, ವಾದ ಹಾಗೂ ಪ್ರತಿವಾದಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಉತ್ಖನನ ನಡೆಸುವ ಹೊಣೆ ಹೊತ್ತುಕೊಂಡಿದ್ದ ಕೇಂದ್ರ ಪುರಾತತ್ವ ಇಲಾಖೆಯು (ಎಎಸ್‌ಐ), ಧ್ವಂಸಗೊಂಡ ಮಸೀದಿಯ ಅಡಿಯಲ್ಲಿ ಹಿಂದೂ ದೇವಸ್ಥಾನಕ್ಕೆ ಸಂಬಂಧಿಸಿದ ಕಂಬಗಳು ಹಾಗೂ ಇತರ ಕಲಾಕೃತಿಗಳು ಇರುವ ಸಾಕ್ಷ್ಯಗಳನ್ನು ಹೊರತಂದಿತು.

ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡಿದ ಭರ ವಸೆಯು ಅತ್ಯಂತ ಸ್ಪಷ್ಟವಾಗಿತ್ತು. ಅಲ್ಲಿ ‘ಆದರೆ, ಬಹುಶಃ’ ಎಂಬಂತಹ ಪದಗಳಿಗೆ ಆಸ್ಪದ ಇರಲಿಲ್ಲ. ಈ ವಿಚಾರ ಅದೆಷ್ಟು ಸೂಕ್ಷ್ಮ ಎಂಬುದನ್ನು ಪರಿಗಣಿಸಿದರೆ ಹಾಗೂ ಅದು ಹಿಂದೂಗಳಿಗೆ ನಂಬಿಕೆಯ ಪ್ರಶ್ನೆಯಾಗಿತ್ತು ಎಂಬುದನ್ನು ಪರಿಗಣಿಸಿದರೆ, ಕೇಂದ್ರ ಸರ್ಕಾರ ಬಹುದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಂಡು ಈ ಪ್ರಮಾಣಪತ್ರ ಸಲ್ಲಿಸಿತ್ತು ಎಂಬುದು ಗೊತ್ತಾಗುತ್ತದೆ. ರಾಮನ ಜನ್ಮಸ್ಥಾನದ ವಿಚಾರದಲ್ಲಿ ಹಿಂದೂಗಳು ಪುರಾವೆಗಳನ್ನು ಹಾಜರುಪಡಿಸಬೇಕು ಅಥವಾ ಧ್ವಂಸ ಗೊಳಿಸಿದ ಕಟ್ಟಡದ ಅಡಿಯಲ್ಲಿ ಪುರಾವೆಗಳು ಇವೆ ಎಂಬ ಭರವಸೆ ಹೊಂದಿರಬೇಕು ಎಂಬುದು ಆ ಪ್ರಮಾಣಪತ್ರದ ಅರ್ಥವಾಗಿತ್ತು.

ಇದು ಮೇಲ್ನೋಟಕ್ಕೆ ಸರಿಯಾದ ಕ್ರಮವಾಗಿರಲಿಲ್ಲ. ಏಕೆಂದರೆ, ಹಿಂದೂಗಳ ನಂಬಿಕೆಯು ವೈಜ್ಞಾನಿಕ ಪುರಾವೆಗಳ ತಳಹದಿಯ ಆಧಾರದಲ್ಲಿ ಪರೀಕ್ಷೆಗೆ ಒಳ ಪಡುತ್ತಿತ್ತು. ಆ ಪರೀಕ್ಷೆಯಲ್ಲಿ ಉತ್ತೀರ್ಣವಾಗದಿದ್ದರೆ ರಾಮನ ಜನ್ಮಸ್ಥಳದ ಮೇಲಿನ ಹಕ್ಕನ್ನು ಅವರು ಕಳೆದು ಕೊಳ್ಳುತ್ತಿದ್ದರು. ಹಿಂದೂಗಳನ್ನು ಇಂಥದ್ದೊಂದು ಸ್ಥಿತಿ ಯಲ್ಲಿ ಕಟ್ಟಿಹಾಕಿದ ಕೇಂದ್ರದ ಕ್ರಮ ಸರಿಯಾಗಿತ್ತೇ? ಸರ್ಕಾರವು ಸರಿಸುಮಾರು ನೂರು ಕೋಟಿಯಷ್ಟು ಜನ ಇರುವ ಹಿಂದೂ ಸಮುದಾಯದ ಪರವಾಗಿ ವಚನ ನೀಡುತ್ತಿರುವಂತೆ ಕಂಡಿತ್ತು. ಹೀಗಿದ್ದರೂ ಹಿಂದೂಗಳು ಈ ಮಾತಿಗೆ ಬದ್ಧರಾಗಿ ಮುಂದಡಿ ಇಟ್ಟರು.

ಇಂಥದ್ದೊಂದು ನಡೆಗೆ ವಿಶ್ವದ ಯಾವುದೇ ಕಡೆ ಪರ್ಯಾಯವೊಂದನ್ನು ಹುಡುಕುವುದು ಕಷ್ಟ. ಈ ನಡೆಯ ಫಲಿತಾಂಶ ಹೀಗೇ ಇರುತ್ತದೆ ಎಂಬ ಭರವಸೆ ಇರದಿದ್ದರೂ, ಫಲಿತಾಂಶವು ರಾಮನ ಜನ್ಮಸ್ಥಳದ ವಿಚಾರದಲ್ಲಿ ಹಿಂದೂ ಸಮುದಾಯ ಶತಮಾನಗಳಿಂದ ಕಾಪಿಟ್ಟುಕೊಂಡು ಬಂದಿದ್ದ ನಂಬಿಕೆಯನ್ನು ಗಾಸಿಗೊಳಿಸ ಬಹುದಿತ್ತಾದರೂ, ಸಮುದಾಯವು ಇದನ್ನು ಸಂಯಮ ದಿಂದ ನಿಭಾಯಿಸಿತು. ರಾಮನ ಜನ್ಮಸ್ಥಳದ ವಿಚಾರದಲ್ಲಿ ತಾನು ಹೊಂದಿರುವ ನಂಬಿಕೆಯು ಸಮರ್ಥನೀಯವೇ ಎಂಬ ವಿಚಾರವಾಗಿ ದೇಶದ ಉನ್ನತ ನ್ಯಾಯಾಂಗ ತೀರ್ಪು ಪ್ರಕಟಿಸುವುದನ್ನು ಹಿಂದೂ ಸಮುದಾಯ ತಾಳ್ಮೆಯಿಂದ ಕಾಯಿತು. ಹಿಂದೂ ಸಮುದಾಯದ ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಯಾರಿಗಾದರೂ ಸಾಕ್ಷ್ಯ ಬೇಕಿದ್ದರೆ, ಈ ಇಡೀ ವಿದ್ಯಮಾನವನ್ನು ಉದಾ ಹರಣೆಯಾಗಿ ನೀಡಬಹುದು. ನರಸಿಂಹ ರಾವ್ ನೇತೃತ್ವದ ಸರ್ಕಾರ ಸಲ್ಲಿಸಿದ ಪ್ರಮಾಣಪತ್ರದ ವಿಚಾರದಲ್ಲಿ ತೋರಿದ ಮೌನ ಹಾಗೂ ನಂಬಿಕೆಯ ವಿಚಾರದಲ್ಲಿ ನ್ಯಾಯಾಂಗ ನೀಡುವ ತೀರ್ಪಿಗಾಗಿ ತಾಳ್ಮೆಯಿಂದ ಕಾದಿದ್ದು ‘ಬಹುಸಂಖ್ಯಾತರ ಪಾಲಿಗೆ ಸಂವಿಧಾನವೇ ಎಲ್ಲಕ್ಕಿಂತ ದೊಡ್ಡದು’ ಎಂಬುದನ್ನು ತೋರಿಸಿತು.

ತನ್ನ ಎರಡೂ ನಂಬಿಕೆಗಳು– ರಾಮನ ಜನ್ಮಭೂಮಿ ಹಾಗೂ ದೇಶದ ಸುಪ್ರೀಂ ಕೋರ್ಟ್‌ ಮೇಲಿನ ನಂಬಿಕೆ– ಸುಳ್ಳಾಗಲಿಲ್ಲ ಎಂಬುದನ್ನು ಹಿಂದೂ ಸಮುದಾಯ ಕಾಲಾನುಕ್ರಮದಲ್ಲಿ ಕಂಡುಕೊಂಡಿದೆ. ‘ಬಾಬರಿ ಮಸೀದಿ ನಿರ್ಮಿಸಿದ ಸ್ಥಳವೇ ರಾಮನ ಜನ್ಮಸ್ಥಾನ ಎಂದು ಹಿಂದೂಗಳು ಮಸೀದಿ ನಿರ್ಮಾಣಕ್ಕೆ ಮೊದಲು, ನಿರ್ಮಾಣದ ನಂತರವೂ ನಂಬಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ನಂಬಿಕೆ ಹಾಗೂ ವಿಶ್ವಾಸವನ್ನು ‘ದಾಖಲೆಗಳು ಮತ್ತು ಮೌಖಿಕ ಸಾಕ್ಷ್ಯಗಳು’ ಸಾಬೀತು ಮಾಡಿವೆ ಎಂದು ಕೋರ್ಟ್‌ ಹೇಳಿದೆ.

ಅದೇ ರೀತಿಯಲ್ಲಿ, ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಸ್ಲಿಂ ಸಮುದಾಯವು ಒಪ್ಪಿಕೊಂಡಿರುವ ಬಗೆ ಕೂಡ ದೇಶದ ಪ್ರಜಾತಂತ್ರ ವ್ಯವಸ್ಥೆಯ ಅದಮ್ಯ ಶಕ್ತಿಯನ್ನು ಸೂಚಿಸುತ್ತದೆ. ಸಂವಿಧಾನದ ವ್ಯಾಖ್ಯಾನದ ವಿಚಾರದಲ್ಲಿ, ಜಟಿಲ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಸಾರ್ವಭೌಮತ್ವಕ್ಕೆ ದೇಶದ ಎಲ್ಲ ಕಡೆ, ಎಲ್ಲ ಸಮುದಾಯಗಳು ನೀಡುವ ಗೌರವದ ದ್ಯೋತಕವಾಗಿಯೂ ಇದನ್ನು ಕಾಣಬಹುದು.

ಶತಮಾನಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಸಂವಿಧಾನದ ಚೌಕಟ್ಟಿನೊಳಗೆ ಶಾಂತಿಯುತವಾಗಿ ಬಗೆಹರಿಸಿಕೊಂಡ ರೀತಿಯು ನಮ್ಮ ಪ್ರಜಾತಾಂತ್ರಿಕ ಪರಂಪರೆಯು ಎಷ್ಟು ಮೌಲ್ಯಯುತವಾದುದು, ನಾವು ಪ್ರಜಾತಂತ್ರ ವ್ಯವಸ್ಥೆಯಾಗಿ ಎಷ್ಟು ವಿಕಾಸ ಹೊಂದಿದ್ದೇವೆ ಎಂಬುದಕ್ಕೆ ಉದಾಹರಣೆ. ಇದನ್ನು ನಾವು ಸಂಭ್ರಮ ದಿಂದ ಕಾಣಬೇಕು. ರಾಮ ಜನ್ಮಭೂಮಿ ತೀರ್ಪಿನ ನಂತರ ದೇಶದ ಜನ ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೇಲೆ ಗುರುತರ ವಿಶ್ವಾಸ ತೋರಿದರು ಎಂದು ಹೇಳುವ ಮೂಲಕ ಪ್ರಧಾನಿಯವರು ಇದನ್ನು ಸೂಚ್ಯವಾಗಿ ಹೇಳಿದರು. ಭವ್ಯ ಮಂದಿರವೊಂದು ಅಯೋಧ್ಯೆಯಲ್ಲಿ ನಿರ್ಮಾಣವಾದಾಗ, ಅದು ದೇಶದ ನಾಗರಿಕತೆಯ ಹಿರಿಮೆಯನ್ನು ಹೇಳುವುದು ಮಾತ್ರವಲ್ಲದೆ, ಪ್ರಜಾತಂತ್ರ ಹಾಗೂ ಶಾಂತಿಗೆ ದೇಶ ತೋರಿದ ಬದ್ಧತೆಯನ್ನೂ ಸಾರಿ ಹೇಳುತ್ತದೆ.

ಇಲ್ಲಿ ನಾವು ಗೊಂದಲ ಹೊಂದಿರಬೇಕಾಗಿಲ್ಲ. ಈ ರೀತಿಯ ಇನ್ನೊಂದು ಉದಾಹರಣೆ ಜಗತ್ತಿನಲ್ಲಿ ಎಲ್ಲೂ ಸಿಗ ಲಿಕ್ಕಿಲ್ಲ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದ ಹಾಗೂ ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳುಮಾಡುವ ಬಯಕೆ ಹೊಂದಿರುವ ಕೆಲವು ಸಣ್ಣ ಮನಸ್ಸಿನವರ ಮಾತುಗಳನ್ನು ಕೇಳಿಸಿಕೊಳ್ಳ ಬೇಕಾಗಿರುವುದು ಬೇಸರದ ಸಂಗತಿ. ಅದಕ್ಕಿಂತಲೂ ಹೆಚ್ಚು ಬೇಸರ ತರಿಸುವಂಥದ್ದು, 40ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಮಾತನಾಡುವ ಧೈರ್ಯ ತೋರಿಸದ ಪಾಶ್ಚಿಮಾತ್ಯ ಮಾಧ್ಯಮಗಳಿಂದ ಪ್ರಜಾತಂತ್ರದ ಬಗ್ಗೆ ಉಪದೇಶ ಕೇಳಿಸಿಕೊಳ್ಳಬೇಕಾಗಿ ಬಂದಿರುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು