ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಭಾಷಾ ಸೂತ್ರ ಮತ್ತು ಸಂವಿಧಾನ

ಹಿಂದಿ ಹೇರಿಕೆಯು ರಾಜಕೀಯ ಪಕ್ಷಗಳು ಹುಟ್ಟುಹಾಕಿದ ಸಮಸ್ಯೆಯಲ್ಲ!
Last Updated 8 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರ 1952ರಲ್ಲಿ ಮೊದಲಿಯಾರ್‌ ಶಿಕ್ಷಣ ಆಯೋಗವು ಪ್ರಥಮ ಬಾರಿಗೆ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತ್ತು. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸಿದ್ದವು. 1968ರ ಕೊಠಾರಿ ಆಯೋಗ ಮತ್ತು 1986ರ ಶಿಕ್ಷಣ ನೀತಿಯೂ ಅದೇ ಸೂತ್ರವನ್ನು ಮುಂದುವರಿಸಿದಾಗ ದಕ್ಷಿಣ ಭಾರತದಲ್ಲಿ ಅಸಮಾಧಾನ ಭುಗಿಲೆದ್ದಿತು. ಅದರ ಪರಿಣಾಮವಾಗಿ, ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರದೆ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಈಗ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಅದೇ ತ್ರಿಭಾಷಾ ಸೂತ್ರ ಇರುವುದರಿಂದ ಮತ್ತೊಮ್ಮೆ ವಿರೋಧ ವ್ಯಕ್ತವಾಗುತ್ತಿದೆ.

ಎಸ್.ಎಂ.ಜಾಮದಾರ

ಭಾರತದ ಸಂವಿಧಾನ ಜಾರಿಗೆ ಬಂದ 72 ವರ್ಷಗಳ ನಂತರವೂ ತ್ರಿಭಾಷಾ ಸೂತ್ರದಿಂದಾಗಿರುವ ತೊಡಕಿಗೆ ಪರಿಹಾರ ದೊರೆತಿಲ್ಲ. ಈವರೆಗೆ ಐದು ಸಲ ಶಿಕ್ಷಣ ನೀತಿ ಬದಲಾಗಿದೆ. ಅದು ಬದಲಾದಾಗಲೆಲ್ಲ ಈ ಸಮಸ್ಯೆ ಮುನ್ನೆಲೆಗೆ ಬರುತ್ತದೆ. ಆಯಾ ಕಾಲದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ದಕ್ಷಿಣ ಭಾರತದಲ್ಲಿ ಸಹಜವಾಗಿಯೇ ನಡೆಯುತ್ತಿವೆ.

ಇದು, ರಾಜಕೀಯ ಪಕ್ಷಗಳು ಹುಟ್ಟುಹಾಕಿದ ಸಮಸ್ಯೆಯೇ? 1952, 1968 ಮತ್ತು 1986ರಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾದಾಗ ಕಾಂಗ್ರೆಸ್‌ ಪಕ್ಷವು ಅಧಿಕಾರ
ದಲ್ಲಿತ್ತು. ಈಗ ಬಿಜೆಪಿ ಅಧಿಕಾರದಲ್ಲಿದೆ. ವಿ.ಪಿ.ಸಿಂಗ್‌ ಅವರ ಪ್ರಯತ್ನ ಈಡೇರಿದ್ದರೆ ರಾಮಮೂರ್ತಿ ಸಮಿತಿಯ ಶಿಫಾರಸುಗಳು 1990-91ರಲ್ಲಿ ಜಾರಿಯಾಗಬಹುದಿತ್ತು. ಆಗ ಜನತಾ ಪಕ್ಷ ಅಧಿಕಾರದಲ್ಲಿತ್ತು. ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ತ್ರಿಭಾಷಾ ಸೂತ್ರ ಮಾತ್ರ ಒಂದೇ ಆಗಿದೆ. ಎಲ್ಲ ರಾಜಕೀಯ ಪಕ್ಷಗಳೂ ಅದೇ ಭಾಷಾಸೂತ್ರವನ್ನು ಪಾಲಿಸಲು ಪ್ರಯತ್ನಿಸುತ್ತಿವೆ ಎಂದಾದರೆ, ಈ ಸಮಸ್ಯೆಯ ಮೂಲ ಎಲ್ಲಿದೆ? ಅದಕ್ಕೆ ಪರಿಹಾರವೇನು ಎನ್ನುವ ಪ್ರಶ್ನೆಗಳು ಮಹತ್ವ ಪಡೆಯುತ್ತವೆ.

ಸ್ಪಷ್ಟವಾಗಿ ಹೇಳಬೇಕೆಂದರೆ, ತ್ರಿಭಾಷಾ ಸೂತ್ರದ ಮತ್ತು ಅದರ ಸಮಸ್ಯೆಯ ಮೂಲವು ಸಂವಿಧಾನದ ಹದಿನೇಳನೆಯ ಭಾಗದಲ್ಲಿದೆ. ಆ ಭಾಗದ 343ನೇ ವಿಧಿಯ ಸೆಕ್ಷನ್‌ ಒಂದರಲ್ಲಿ, ‘ಹಿಂದಿಯು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿರತಕ್ಕದ್ದು. ಸಂವಿಧಾನವು ಜಾರಿಗೆ ಬಂದ ದಿನದಿಂದ 15 ವರ್ಷಗಳವರೆಗೆ ಈ ಮೊದಲು ಇದ್ದಂತೆ ಇಂಗ್ಲಿಷ್‌ ಭಾಷೆಯೂ ಆಡಳಿತ ಭಾಷೆಯಾಗಿ ಮುಂದುವರಿಯಬೇಕು’ ಎಂದು ಹೇಳಿದ್ದರೂ ಭಾರತದ ಯಾವ ಭಾಷೆಗೂ ಸಿಗದಿರುವ ಪ್ರಾಧಾನ್ಯವು ಸಂವಿಧಾನದಲ್ಲಿ ಹಿಂದಿಗೆ ಸಿಕ್ಕಿದೆ.

ಆಡಳಿತ ಭಾಷೆಯಾಗಿ ಹಿಂದಿಯನ್ನು ನೆಲೆಗೊಳಿಸುವ ಆಶಯವನ್ನು ಕಾರ್ಯರೂಪಕ್ಕೆ ತರಲು ವಿಧಿ 344ರಲ್ಲಿ ಎರಡು ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮೊದಲನೆಯದು, ಆಡಳಿತ ಭಾಷಾ ಆಯೋಗ ಮತ್ತು ಎರಡನೆಯದು ಲೋಕಸಭೆಯ 20 ಮತ್ತು ರಾಜ್ಯಸಭೆಯ 10 ಸದಸ್ಯರುಳ್ಳ 30 ಮಂದಿಯ ಸಂಸತ್ತಿನ ಜಂಟಿ ಸದನ ಸಮಿತಿ. ಹಿಂದಿ ಭಾಷೆಯ ಅಳವಡಿಕೆಯಲ್ಲಿ ಸಾಧಿಸಿದ ಪ್ರಗತಿಯನ್ನು ಇವೆರಡೂ ವ್ಯವಸ್ಥೆಗಳು ಕಾಲಕಾಲಕ್ಕೆ ಪರಿಶೀಲಿಸಿ, ಅದನ್ನು ಎಲ್ಲ ರಂಗಗಳಲ್ಲಿಯೂ ಬಳಸಲು ಅನುಕೂಲವಾಗುವಂಥ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಅಧಿಕಾರ ಪಡೆದಿವೆ. ಹಿಂದಿ ಭಾಷೆಯ ಪೋಷಣೆ ಮತ್ತು ಬಳಕೆಯ ಸಾಧ್ಯತೆ ಹೆಚ್ಚಿಸಲು ಹೀಗೆ
ವ್ಯವಸ್ಥೆಗಳಿವೆ. ಆದ್ದರಿಂದ ಹಿಂದಿ ಹೇರಿಕೆಯು ರಾಜಕೀಯ ಪಕ್ಷಗಳು ಹುಟ್ಟುಹಾಕಿದ ಸಮಸ್ಯೆಯಲ್ಲ. ಅದು ಸಂವಿಧಾನವೇ ಹುಟ್ಟುಹಾಕಿದ ಸಮಸ್ಯೆ!

ದೇಶದ ಶೇಕಡ 34ರಷ್ಟು ಜನರಿಗೆ ಮಾತ್ರ ಹಿಂದಿಯು ಮಾತೃಭಾಷೆಯಾಗಿದೆ. ಹಾಗಿದ್ದಾಗ, ಅದನ್ನು ಇನ್ನುಳಿದ ಶೇ 66ರಷ್ಟು ಜನರ ಮೇಲೆ ಹೇರುವುದು ಪ್ರಜಾಸತ್ತಾತ್ಮಕ ನಿರ್ಣಯವೇ? ದೇಶದ 29 ರಾಜ್ಯಗಳ ಪೈಕಿ 21ರಲ್ಲಿ ಮತ್ತು ಕೇಂದ್ರಾಡಳಿತಕ್ಕೊಳಪಟ್ಟ ಪ್ರದೇಶಗಳಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚಾಗಿಲ್ಲ. ಪ್ರಾದೇಶಿಕವಾಗಿ ನೋಡಿದರೆ, ಪೂರ್ವೋತ್ತರ ಭಾರತದ ಏಳು ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ, ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ, ಪಶ್ಚಿಮ ಭಾರತದ ಮಹಾರಾಷ್ಟ್ರ, ಗೋವಾ, ಗುಜರಾತ್‌ನಲ್ಲಿ, ಉತ್ತರ ಭಾರತದ ಸಿಕ್ಕಿಂ, ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಹಿಂದಿಯು ರಾಜ್ಯಭಾಷೆಯಾಗಿಲ್ಲ. ಜಾರ್ಖಂಡ್‌ ರಾಜ್ಯವಂತೂ ಅನೇಕ ಬುಡಕಟ್ಟುಗಳ ರಾಜ್ಯವಾದ್ದರಿಂದ ಬಹುತೇಕರು ಆಯಾ ಬುಡಕಟ್ಟು ಭಾಷೆಯನ್ನು ಬಳಸುತ್ತಾರೆ. ಹಿಂದಿ ಭಾಷೆಯನ್ನಾಡುವ ರಾಜ್ಯಗಳಲ್ಲೂ ಪ್ರಾದೇಶಿಕವಾಗಿ ಭಿನ್ನ ಭಿನ್ನ ರೂಪಗಳು ಬಳಕೆಯಲ್ಲಿವೆ.

ವಾಸ್ತವ ಹೀಗಿರುವಾಗ, ಹಿಂದಿಯನ್ನು ಇಷ್ಟೊಂದು ಕಡ್ಡಾಯವಾಗಿ ಬಹುಸಂಖ್ಯಾತರ ಮೇಲೆ ಹೇರಿದ್ದು ಏಕೆ? ಇದು ಸರಿಯೇ? ಇದು ಮುಂದುವರಿಯಬೇಕೇ? ಇವು ಮಹತ್ವದ ಪ್ರಶ್ನೆಗಳು. ಈ ಬಗ್ಗೆ ಚರ್ಚೆಯಾಗ ಬೇಕಾದದ್ದು ಬೀದಿ ಬೀದಿಗಳಲ್ಲಲ್ಲ, ಹೊಸ ಶಿಕ್ಷಣ ನೀತಿ ಹೊರಬಂದಾಗ ಮಾತ್ರವಲ್ಲ. ಆ ಚರ್ಚೆ ನಡೆಯಬೇಕಾದದ್ದು ಸಂಸತ್ತಿನ ಅಧಿವೇಶನಗಳಲ್ಲಿ, ನೀತಿ ನಿರೂಪಣೆಯ ಅಂಗಸಂಸ್ಥೆಗಳಲ್ಲಿ. ಅದೇಕೆ ಈವರೆಗೆ ಆ ರೀತಿಯ ಚರ್ಚೆಯಾಗಿಲ್ಲ? ಯಾವುದೇ ರಾಜಕೀಯ ಪಕ್ಷವು ಈ ಮಹತ್ತರವಾದ ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಪರಿಹಾರ ಕಂಡುಹಿಡಿಯುವ ಪ್ರಯತ್ನ ಏಕೆ ಮಾಡುತ್ತಿಲ್ಲ?

ಹಾಗಾದರೆ, ಈ ಸಮಸ್ಯೆಯನ್ನು ನಮ್ಮ ಸಂವಿಧಾನವನ್ನು ರೂಪಿಸಿದ ಪ್ರಥಮ ಪೀಳಿಗೆಯ ಮಹಾನ್ ರಾಜಕೀಯ ನಾಯಕರು ಸೃಷ್ಟಿಸಿದರೇ? ವಿಷಾದಕರವಾದರೂ ಅನಿವಾರ್ಯವಾಗಿ ‘ಹೌದು’ ಎಂದೇ ಉತ್ತರಿಸಬೇಕಾಗಿದೆ. ಅದಕ್ಕೆ ಆಧಾರವೆಂದರೆ, ಸಂವಿಧಾನ ರಚನಾ ಪರಿಷತ್ತಿನಲ್ಲಿ ನಡೆದ ಸುದೀರ್ಘ ಚರ್ಚೆಗಳು! ಆ ಚರ್ಚೆಗಳನ್ನು ಶಬ್ದಶಃ ಐದಾರು ಸಾವಿರ ಪುಟಗಳಲ್ಲಿ ಭಾರತ ಸರ್ಕಾರವೇ ಮುದ್ರಿಸಿದೆ. ಅದರ ಐದನೆಯ ಸಂಪುಟದಲ್ಲಿ ಈ ಕುರಿತು ಬಹಳಷ್ಟು ವಿವರಗಳಿವೆ.

ಭಾಷೆ ಮತ್ತು ಧಾರ್ಮಿಕ ಹಕ್ಕುಗಳ ವಿಷಯದಲ್ಲಿ ನಮ್ಮ ಅಂದಿನ ಹಲವು ರಾಷ್ಟ್ರ ನಾಯಕರು ತಮ್ಮ ಕನಸುಗಳನ್ನು ಸಂವಿಧಾನದಲ್ಲಿ ಹೆಣೆದರು. ‘ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ’ ಎಂಬುದೇ ಬಹುತೇಕರ ಕನಸಾಗಿತ್ತು. ಆದರೆ ಆ ಮೂರೂ ಕನಸುಗಳು ಐತಿಹಾಸಿಕವಾಗಿ ಎಂದೂ ವಾಸ್ತವ ಸತ್ಯವಾಗಿರಲಿಲ್ಲ. ರಾಜಕೀಯವಾಗಿ, ಈಗಿನಂತೆ ಸಮಸ್ತ ಭಾರತವೆಂದೂ ಒಂದೇ ರಾಜ್ಯ–ರಾಷ್ಟ್ರವಾಗಿರಲಿಲ್ಲ. ಮೌರ್ಯರಾಗಲೀ, ಗುಪ್ತರಾಗಲೀ, ಮುಸ್ಲಿಮರಾಗಲೀ ಬ್ರಿಟಿಷರಂತೆ ಸಮಸ್ತ ಭಾರತವನ್ನು ಒಂದು ರಾಷ್ಟ್ರವಾಗಿಸಿರಲಿಲ್ಲ. ಧಾರ್ಮಿಕ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಯನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಆ ಕನಸುಗಳ ಸಂಚಿತ ಪರಿಣಾಮವೆಂದರೆ ‘ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂತು, ಆದರೆ ಬಹುಸಂಖ್ಯಾತರ ಭಾಷಿಕ ಹಕ್ಕು ಮೊಟಕುಗೊಂಡಿತು’. ಇಂತಹ ಪರಿಸ್ಥಿತಿಯು ದೇಶದ 5,000 ವರ್ಷಗಳ ಇತಿಹಾಸದಲ್ಲಿ ಎಂದೂ ಇರಲಿಲ್ಲ. ಅವುಗಳನ್ನು ಹೊಸದಾಗಿ ಸೇರಿಸುವ ಮೂಲಕ ಅವರು ಹೊಸ ಇತಿಹಾಸವನ್ನು ನಿರ್ಮಿಸಬಯಸಿದರು! ಆದರೆ ಆ ಕನಸುಗಳು ಇಂದಿಗೂ ನನಸಾಗಿಲ್ಲ! ಆಗಲು ಸಾಧ್ಯವೂ ಇಲ್ಲ. ಅದಕ್ಕೆ ಇತ್ತೀಚೆಗೆ ಸೇರ್ಪಡೆಯಾಗಲು ಹಂಬಲಿಸುತ್ತಿರುವುದು ‘ಒಂದೇ ಪಕ್ಷ’ ಎಂಬ ಇನ್ನೊಂದು ಭ್ರಮೆ!

ಈ ಭ್ರಮೆಗಳನ್ನು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಡೊರೋತಿ ಫಿಗುಏರಾ ಎನ್ನುವವರು ತಮ್ಮ ‘ಆರ್ಯನ್ಸ್‌, ಜ್ಯೂಸ್‌, ಬ್ರ್ಯಾಹ್ಮಿನ್ಸ್‌: ಥಿಯೊರೈಸಿಂಗ್‌ ಅಥಾರಿಟಿ ಥ್ರೂ ಐಡೆಂಟಿಟಿ’, ಅಂದರೆ ‘ಕಟ್ಟು ಕತೆಗಳಿಂದ ಏಕತೆ ಸಾಧಿಸುವುದು’ ಎಂಬರ್ಥದ ಪುಸ್ತಕದಲ್ಲಿ ಅತ್ಯಂತ ಮಾರ್ಮಿಕವಾಗಿ, ವೈಜ್ಞಾನಿಕವಾಗಿ ವಿವರಿಸಿದ್ದಾರೆ.

ನಮ್ಮ ಅಂದಿನ ರಾಷ್ಟ್ರನಾಯಕರ ಆ ಕನಸುಗಳು ಕನಸುಗಳಷ್ಟೆ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಯಾವ ಯುಗದಲ್ಲಿ ಭಾರತದಲ್ಲಿ ಒಂದೇ ಭಾಷೆಯಿತ್ತು? ಒಂದೇ ಧರ್ಮವಿತ್ತು? ಕೇವಲ ರಾಜಕೀಯ ಉದ್ದೇಶಕ್ಕಾಗಿ ಒಂದು ದೇಶದ ಸಾವಿರಾರು ವರ್ಷಗಳ ಸಂಕೀರ್ಣ ಮತ್ತು ಬಹುಭಾಷಿಕ, ಬಹುಧಾರ್ಮಿಕ ಇತಿಹಾಸವನ್ನು ಹೊಡೆದುಹಾಕಲು ಸಾಧ್ಯವೇ? ಅವನ್ನು ರಾಜಕೀಯ ಬಲದಿಂದ ಹೇರಹೊರಟರೆ ಏನಾಗಬಹುದು ಎಂಬುದು ನಮ್ಮ ಕಣ್ಮುಂದೆ ಇದೆ, ಬಿಡಿಸಿ ಹೇಳಬೇಕಾಗಿಲ್ಲ.

ಭಾಷೆಗೆ ಸಂಬಂಧಿಸಿದ 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತರಬಹುದೇ ಎಂಬುದರ ಕುರಿತು ಕೇಂದ್ರ ಸರ್ಕಾರ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ. ತ್ರಿಭಾಷಾ ಸೂತ್ರದ ಸಮಸ್ಯೆ ನಿವಾರಣೆಗೆ ಸಾಂವಿಧಾನಿಕ ತಿದ್ದುಪಡಿಯಲ್ಲದೆ ಬೇರೆ ಉಪಾಯವೇ ಇಲ್ಲ. ಈವರೆಗೆ ನಡೆಯುತ್ತಿರುವುದು
ಕಾಲಕಾಲಕ್ಕೆ ‘ಅಡ್ಹಾಕ್’ ರೀತಿಯಲ್ಲಿ ಕಣ್ಣೊರೆಸುವ ರಾಜಕೀಯ ತಂತ್ರ ಅಷ್ಟೆ.

ಲೇಖಕ: ನಿವೃತ್ತ ಐಎಎಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT