ಶನಿವಾರ, ಮಾರ್ಚ್ 25, 2023
27 °C
ಗಾಂಧೀಜಿಯವರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟರೆ ನಮ್ಮೆಲ್ಲರ ಕಾರ್ಬನ್ ಹೆಜ್ಜೆತೂಕ ಕಡಿಮೆ ಆದೀತು

ಹಿಂದಿರುಗುವುದೇ ಮುಂದಿನ ದಾರಿ!

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಬರುತ್ತಿರುವ ಉರಿಯುಗವನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ 25ನೇ ವಾರ್ಷಿಕ ಜಾಗತಿಕ ಕ್ಲೈಮೇಟ್ ಸಮಾವೇಶ ಸ್ಪೇನಿನ ರಾಜಧಾನಿ ಮಾಡ್ರಿಡ್‍ನಲ್ಲಿ ನಡೆಯುತ್ತಿದೆ. 177 ದೇಶಗಳ ವಿಜ್ಞಾನಿಗಳು, ರಾಜತಾಂತ್ರಿಕ ಪರಿಣತರು, ರಾಜಕೀಯ ಮುತ್ಸದ್ದಿಗಳ ಈ ಸಮಾವೇಶ ಡಿಸೆಂಬರ್ 2ರಂದು ಆರಂಭವಾಗಿದ್ದು ನಾಳೆಗೆ ಮುಕ್ತಾಯವಾಗಲಿದೆ. ಅಲ್ಲಿ ಸ್ಥಾಪಿಸಲಾದ ವಿವಿಧ ದೇಶಗಳ ಪ್ರದರ್ಶನ ಮಳಿಗೆಗಳಲ್ಲಿ ಭಾರತದ್ದೇ ಅತಿ ವಿಶಿಷ್ಟವಾಗಿದೆ. ಗಾಂಧೀಜಿಯವರ ಸಾಲು ಸಾಲು ಬಟ್ಟೆಚಿತ್ರಗಳನ್ನು ತೂಗುಹಾಕಿ, ನಡುವೆ ಗಾಂಧೀಜಿಯ ಸರಳ ಜೀವನದ ಸಂಕೇತಗಳನ್ನೂ ಕೂರಿಸಲಾಗಿದೆ. ವರ್ಧಾ ಆಶ್ರಮದ ದೃಶ್ಯವನ್ನೇ ಹೋಲುವ ಚರಕ, ಚಾಪೆ, ಚೊಂಬು, ದಿಂಬುಗಳನ್ನು ಇರಿಸಲಾಗಿದೆ. ಅದರ ಸಂದೇಶ ಸರಳವಾಗಿದೆ: ಬಿಸಿಪ್ರಳಯಕ್ಕೆ ಭಾರತೀಯರೇ ಅತಿದೊಡ್ಡ ಸಂಖ್ಯೆಯಲ್ಲಿ ಬಲಿಯಾಗಲಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಿದ್ದರೂ, ಈ ಪ್ರಳಯವನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆಂಬ ಅತಿ ಯಶಸ್ವೀ ಉದಾಹರಣೆಗಳೂ ಭಾರತದಲ್ಲೇ ಸಿಗಲಿವೆ ಎನ್ನುವವರೂ ಇದ್ದಾರೆ. ಗಾಂಧೀಜಿ ತೋರಿದ ಸರಳ ಬದುಕಿನ ಮಾದರಿಯೇ ಬಿಸಿಯುಗದ ಸಮಸ್ಯೆಗಳಿಗೆ ಪರಿಹಾರ ಎಂಬ ಸಂದೇಶ ಅದು.

ಸಮಾವೇಶದ ಹೊರಾಂಗಣದಲ್ಲಿ ಇನ್ನೊಂದು ವಿಶಿಷ್ಟ ಪ್ರದರ್ಶನವೂ ಇತ್ತು: ಗೋಲಾಕಾರದ ಎರಡಾಳೆತ್ತರದ ಐದು ಪಾರದರ್ಶಕ ಗೂಡುಗಳಲ್ಲಿ ಜಗತ್ತಿನ ಐದು ‘ಮಾದರಿ ನಗರ’ಗಳ ಗಾಳಿ ಹೇಗಿದೆ ಎಂಬುದರ ಪ್ರಾತ್ಯಕ್ಷಿಕೆ ಅಲ್ಲಿತ್ತು. ದಿಲ್ಲಿಯ ತೀರ ಕೊಳಕು ಗಾಳಿಯ ಗೂಡು; ಬೀಜಿಂಗ್, ಲಂಡನ್ ಮತ್ತು ಬ್ರಝಿಲ್ ರಾಜಧಾನಿ ಸಾವೊ ಪೌಲೊ ನಗರಗಳ ಕೊಳಕು ಗಾಳಿಯ ಮೂರು ಗೂಡು; ಮತ್ತು ನಾರ್ವೆಯ ಶೋನ್‍ಹೈಂ ಪಟ್ಟಣದ ಅತ್ಯಂತ ಪರಿಶುದ್ಧ ಗಾಳಿಯ ಗೂಡು. ‘ಹೊಂಜು ಮುಸುಕಿದ ಗೂಡುಗಳನ್ನು ಹೊಕ್ಕರೆ ಕೆಮ್ಮು, ಕಣ್ಣುರಿ ಮತ್ತು ಮೈಕೈ ಕೆರೆತ ಉಂಟಾದೀತು! ಹೊಕ್ಕು ಎರಡೇ ನಿಮಿಷಗಳಲ್ಲಿ ಆಚೆ ಬನ್ನಿ’ ಎಂಬ ಸಂದೇಶ ಇತ್ತು. ಗೂಡಿನಲ್ಲಿ ಇರುವುದು ನಿರಪಾಯಕಾರಿ ಹಬೆ ಎಂಬುದನ್ನು ಸಣ್ಣಕ್ಷರಗಳಲ್ಲಿ ತೋರಿಸಲಾಗಿತ್ತು.

ಹಾಗೆ ನೋಡಿದರೆ ಈ ವರ್ಷ ಅಂಥ ಯಾವ ಪ್ರಾತ್ಯಕ್ಷಿಕೆಗಳೂ ಮಾಡ್ರಿಡ್ ಸಮಾವೇಶಕ್ಕೆ ಅಗತ್ಯವೇ ಇರಲಿಲ್ಲ. ಭೂಮಿಯ ಎಲ್ಲೆಲ್ಲೂ ನಿಸರ್ಗ ಪ್ರಕೋಪಗಳ ಅಷ್ಟೊಂದು ಉದಾಹರಣೆಗಳೇ ಇದ್ದುವಲ್ಲ? ಉತ್ತರ ಧ್ರುವದಲ್ಲಿ ಬೆಂಕಿ, ಅಮೆಝಾನ್ ಕಾಡಿನ 65 ಸಾವಿರ ತಾಣಗಳಲ್ಲಿ ಬೆಂಕಿ, ಯುರೋಪ್‍ನಲ್ಲಿ, ಆಸ್ಟ್ರೇಲಿಯಾದಲ್ಲಿ ನೂರಕ್ಕೂ ಹೆಚ್ಚು ಜಾಗಗಳಲ್ಲಿ ಬೆಂಕಿ; ಚಂಡಮಾರುತಗಳ ಸಂಖ್ಯೆ ಮತ್ತು ತೀವ್ರತೆಯಲ್ಲಿ ಹೆಚ್ಚಳ, 36 ರಾಷ್ಟ್ರಗಳಲ್ಲಿ ದಾಖಲೆ ಉಷ್ಣಾಂಶ ಏರಿಕೆ, ನಮ್ಮಲ್ಲಿ ಡಿಸೆಂಬರ್‌ವರೆಗೂ ಮಳೆಗಾಲ. ಅದರಿಂದಾಗಿ ಈರುಳ್ಳಿ ಬೆಳೆನಾಶ, ರೈತರ ಹಾಗೂ ಬಳಕೆದಾರರ ಕಣ್ಣುರಿಯಿಂದ ಮೊದಲ್ಗೊಂಡು ಅನೇಕ ರೀತಿಯ ಸಂಕಟಗಳು.

ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ಇನ್ನೂ ಅನೇಕ ಲಕ್ಷಣಗಳನ್ನು ಮಾಡ್ರಿಡ್ ಸಮಾವೇಶದಲ್ಲಿ ವಿಜ್ಞಾನಿಗಳು ಮಂಡಿಸಿದ್ದಾರೆ. ಮಹಾಸಾಗರಗಳಲ್ಲಿ
ಆಮ್ಲಜನಕದ ಪ್ರಮಾಣ ಅತಿ ಶೀಘ್ರವಾಗಿ ಕಡಿಮೆ ಆಗುತ್ತಿದ್ದು, ಒಟ್ಟೂ 700ಕ್ಕೂ ಹೆಚ್ಚು ತಾಣಗಳಲ್ಲಿ ಮೃತ ತಾಣಗಳು ಸೃಷ್ಟಿಯಾಗಿವೆ. ಸಿಓ-2 ಪ್ರಮಾಣ ಜಾಸ್ತಿ ಆಗಿದ್ದರಿಂದ ಅನೇಕ ಕಡೆ ಹವಳದ ದಿಬ್ಬಗಳು ನಿರ್ನಾಮವಾಗುತ್ತಿವೆ. ಅತಿ ಮೀನುಗಾರಿಕೆಯ ಕೇಡು ಒಂದು ಕಡೆ, ಆಮ್ಲಜನಕದ ಕೊರತೆ ಎಲ್ಲೆಡೆ ಆಗುತ್ತಿದೆ. ಈ ವರ್ಷ ಇನ್ನೊಂದು ವಿಶೇಷ ಏನೆಂದರೆ, ಜಗತ್ತಿನ ಅತಿ ದೊಡ್ಡ ಜಲಪಾತ ಎಂಬ ಖ್ಯಾತಿಯುಳ್ಳ ವಿಕ್ಟೋರಿಯಾ ಫಾಲ್ಸ್ (ಆಫ್ರಿಕಾದ ಸ್ಥಳೀಯ ಭಾಷೆಯಲ್ಲಿ ‘ಗುಡುಗುವ ಹೊಗೆ’) ಕಳೆದ ವಾರ ಬತ್ತಿ ಹೋಗಿದೆ.

ಸಂಕಟಗ್ರಸ್ತ ಭೂಗ್ರಹದ ಉಸ್ತುವಾರಿ ಹೇಗೆ ಎಂಬುದರ ಬಗ್ಗೆ ಕಳೆದ 25 ವರ್ಷಗಳಿಂದ ಜಾಗತಿಕ ಸಮ್ಮೇಳನ, ಚರ್ಚೆ ನಡೆಯುತ್ತಲೇ ಇವೆ. ಮೂಲತಃ ಇದು ಬಡವ-ಶ್ರೀಮಂತರ ಮಧ್ಯೆಯ ಬಿಕ್ಕಟ್ಟು. ಅದನ್ನು ‘ಕಾರ್ಬನ್ ಹೆಜ್ಜೆತೂಕ’ (ಫೂಟ್‍ಪ್ರಿಂಟ್) ಎಂಬ ಮಾಪನದಲ್ಲಿ ಅಳೆಯುತ್ತಾರೆ. ನಾವು ಒಬ್ಬೊಬ್ಬರೂ ಪ್ರತಿವರ್ಷ ಎಷ್ಟು ಫಾಸಿಲ್ ಇಂಧನಗಳನ್ನು ಸುಟ್ಟು ಗಾಳಿಗೆ ತೂರುತ್ತಿದ್ದೇವೆ ಎಂಬುದರ ಅಳತೆಗೋಲು ಇದು. ಜಗತ್ತಿನ ಸರಾಸರಿ ವ್ಯಕ್ತಿಯ ಹೆಜ್ಜೆತೂಕ ವಾರ್ಷಿಕ 4.5 ಟನ್‍ಗಳಷ್ಟಿದೆ. ಅಮೆರಿಕದ ಜನರ ಹೆಜ್ಜೆತೂಕ 16 ಟನ್ ಇದೆ; ಭಾರತದ ಪ್ರಜೆಯ ಸರಾಸರಿ ಕೇವಲ 1.8 ಟನ್ ಇದೆ. ಗಾಂಧೀಜಿಯದ್ದು ಪ್ರಾಯಶಃ ಕೆಲವೇ ಕಿಲೊ ಇತ್ತೇನೊ. ಧನಿಕ ರಾಷ್ಟ್ರಗಳು ತಮ್ಮವರ ಹೆಜ್ಜೆತೂಕವನ್ನು ಕಮ್ಮಿ ಮಾಡಲು ಒಪ್ಪುತ್ತಿಲ್ಲ. ಹಾಗಿದ್ದರೆ ಏನು ಮಾಡುವುದು? ವಾತಾವರಣದಲ್ಲಿ ಮಡುಗಟ್ಟಿದ ಸಿಓ-2 ಅನಿಲವನ್ನು ಹೀರಿ ತೆಗೆಯಬೇಕು. ಇನ್ನು 30 ವರ್ಷಗಳಲ್ಲಿ ಎಲ್ಲರ ಸರಾಸರಿ ಹೆಜ್ಜೆತೂಕವನ್ನು ಎರಡು ಟನ್‍ಗೆ ಇಳಿಸಿದರೆ ಮಾತ್ರ ಜೀವರಾಶಿ ಉಳಿಯುತ್ತದೆ. ಆದರೆ ಹೇಗೆ ಇಳಿಸಬೇಕೆಂಬ ತಂತ್ರಜ್ಞಾನ ಗೊತ್ತಿಲ್ಲ. ಎರಡನೆಯ ಉಪಾಯವೆಂದರೆ ಪೆಟ್ರೋಲ್, ಡೀಸೆಲ್, ಕಲ್ಲಿದ್ದಲ ಬಳಕೆಯನ್ನು ಕೈಬಿಟ್ಟು ಸೌರಶಕ್ತಿ, ಗಾಳಿಶಕ್ತಿ, ಗೊಬ್ಬರ ಅನಿಲದಂಥ ಬದಲೀ ಇಂಧನಗಳನ್ನು ಬಳಸಬೇಕು. ಅದಕ್ಕೆ ತಂತ್ರಜ್ಞಾನ ವಿಕಾಸವಾಗುತ್ತಿದೆ.ಆದರೆ ರಾಜಕೀಯ ಮತ್ತು ವಾಣಿಜ್ಯ ವ್ಯವಸ್ಥೆಗಳು ಅದನ್ನು ವ್ಯಾಪಕವಾಗಿ ಜಾರಿಗೆ ತರಲು ಬಿಡುತ್ತಿಲ್ಲ. ಒಂದು ಉದಾಹರಣೆ ನಮ್ಮ ಸರಹದ್ದಿನಲ್ಲೇ ಇದೆ: ಕೊರಿಯಾದ ಕಿಯಾ ಹೆಸರಿನ ಕಂಪನಿ ತನ್ನ ಹೊಸ ಫ್ಯಾಕ್ಟರಿಯೊಂದನ್ನು ಕಳೆದ ವಾರ ಅನಂತಪುರದಲ್ಲಿ ಆರಂಭಿಸಿತು. ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಉದ್ಘಾಟಿಸಿದರು. ಅಲ್ಲಿ 450ಕ್ಕೂ ಹೆಚ್ಚು ರೋಬಾಟ್‍ಗಳ ನೆರವಿನಿಂದ ವರ್ಷಕ್ಕೆ ಮೂರು ಲಕ್ಷ ಕಾರುಗಳು ತಯಾರಾಗಲಿವೆ. ಎಲ್ಲವೂ ಕಾರ್ಬನ್ ಹೊಗೆಯನ್ನು ಹೊಮ್ಮಿಸುತ್ತ ಓಡುವ ಪೆಟ್ರೋಲ್, ಡೀಸೆಲ್ ಚಾಲಿತ ಕಾರುಗಳೇ. ಹೊಸ ಕಾರು ಎಂದ ಮೇಲೆ ಹೊಸ ಇಂಧನವನ್ನು ಬಳಸಬೇಕಿತ್ತಲ್ಲವೇ?

ಎಲ್ಲ ರಾಷ್ಟ್ರಗಳಲ್ಲೂ ಹೀಗೆ ಫಾಸಿಲ್ ಇಂಧನಗಳ ಜಗಕಂಟಕ ತಂತ್ರಜ್ಞಾನವೇ ಚಲಿಸುತ್ತಿದೆ. ಉತ್ತರ ಧ್ರುವದ ಬಳಿ ಹೊಸ ಪೆಟ್ರೋಲಿಯಂ ನಿಕ್ಷೇಪ ಪತ್ತೆ ಆಗಿದ್ದಕ್ಕೆ ರಷ್ಯಾ ಸಂಭ್ರಮಿಸುತ್ತಿದೆ. ಈ ಪ್ರವೃತ್ತಿಗೆ ಅಡೆತಡೆ ಒಡ್ಡುವ ಶಕ್ತಿ ಯಾರಲ್ಲಿದೆ? ತಡೆ ಒಡ್ಡಿರೆಂದು ಕೂಗುತ್ತ ಮಾಡ್ರಿಡ್‍ನಲ್ಲಿ ಮೊನ್ನೆ ಗ್ರೇತಾ ಥನ್‍ಬರ್ಗ್ ನೇತೃತ್ವದಲ್ಲಿ ಐದು ಲಕ್ಷ ಜನರು ರೋಡ್ ಶೋ ನಡೆಸಿದರು. ‘ನಾವು ನಮ್ಮ ಒಂದಿಷ್ಟು ಸೌಲಭ್ಯಗಳನ್ನು ತ್ಯಾಗ ಮಾಡೋಣ’ ಎಂದು ಕೂಗುತ್ತಿದ್ದರು. ಗ್ರೇತಾಳ ಮಾದರಿಯನ್ನೇ ಅನುಸರಿಸಿ ಕೆಲವರು ವಿಮಾನಯಾನದ ಬದಲಿಗೆ ರೈಲಿನಲ್ಲಿ ಓಡಾಡುವುದಾಗಿ ಪ್ರಮಾಣ ಮಾಡಿದ್ದಾರೆ. ಮಾಂಸಾಹಾರವನ್ನು ತ್ಯಜಿಸುತ್ತಿದ್ದಾರೆ. ಸರಳ ಜೀವನ ನಡೆಸಲು, ಝೀರೊ ಕಾರ್ಬನ್ ಬದುಕಿಗೆ ಹೊಂದಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಂಥ ಧನಿಕ ರಾಷ್ಟ್ರಗಳು ತಮ್ಮ ಪ್ರಜೆಗಳ ಸೌಲಭ್ಯಗಳನ್ನು ಕಡಿಮೆ ಮಾಡಲು ಒಪ್ಪುತ್ತಿಲ್ಲ. ಕಡಿಮೆ ಮಾಡಲು ಹೋದರೆ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ರಾಜಕೀಯ ಧುರೀಣರಿಗಿದೆ.

ನಮ್ಮಲ್ಲಿ ಅಂಥ ಭೀತಿ ಇದ್ದಂತಿಲ್ಲ. ಗಾಂಧೀಜಿಯವರ ಸರಳ ಬದುಕು ನಮಗೆಲ್ಲರಿಗೆ ಆದರ್ಶಪ್ರಾಯವಾಗಿದೆ. ಎತ್ತರದ ಸ್ಥಾನದಲ್ಲಿದ್ದವರು ಅಪರೂಪಕ್ಕೆ ಕಸ ಎತ್ತುವಂಥ ಸರಳ ಕೆಲಸ ಮಾಡಿಯೂ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ಎರಡೇ ವರ್ಷಗಳಲ್ಲಿ ದಿಲ್ಲಿಯಲ್ಲಿ ಸೈಕಲ್ ಸವಾರಿ ಮಾಡುತ್ತೇನೆಂದೋ ಅಥವಾ ಗಂಗೆಯ ನೀರನ್ನು ಕುಡಿದು ತೋರಿಸುತ್ತೇನೆ ಎಂದೋ ಕ್ಯಾಮೆರಾಗಳ ಎದುರು ಘೋಷಿಸಿದರೆ ನಮ್ಮ ನಾಯಕರು ಎಳೆಪೀಳಿಗೆಗೆ ಹೊಸ ಉತ್ಸಾಹವನ್ನು ತುಂಬಲು ಸಾಧ್ಯವಿದೆ. ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಲೂ ಸಾಧ್ಯವಿದೆ.

ದಿಲ್ಲಿಯ ಕೊಳೆಗಾಳಿಯ ಪ್ರತಿರೂಪವನ್ನು ಮಾಡ್ರಿಡ್ ಸಮಾವೇಶದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ನಿಜ. ಅಂಥ ಪ್ರತಿರೂಪದ ಬದಲು ಅಸಲೀ ಕೊಳೆಗಾಳಿಯನ್ನು ಪೂರ್ತಿಯಾಗಿ ಹೀರಿ ತೆಗೆಯುವ ತಂತ್ರಗಳನ್ನು ಯಾರಾದರೂ ಯುವ ವಿಜ್ಞಾನಿಗಳು ರೂಪಿಸಿದರೆ ಅದೆಷ್ಟು ಚೆನ್ನ! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು