ಸುಳ್ಳುಸೃಷ್ಟಿಯ ಮಡುವಿನಲ್ಲಿ ಸತ್ಯಕ್ಕೆಲ್ಲಿ ದಿಕ್ಕು?

7

ಸುಳ್ಳುಸೃಷ್ಟಿಯ ಮಡುವಿನಲ್ಲಿ ಸತ್ಯಕ್ಕೆಲ್ಲಿ ದಿಕ್ಕು?

ನಾಗೇಶ ಹೆಗಡೆ
Published:
Updated:
Deccan Herald

ಸುಮಾರು ಹತ್ತು ವರ್ಷಗಳ ಹಿಂದೆ ಶಿರಾಡಿ ಘಾಟ್ ರಸ್ತೆ ಪಕ್ಕದಲ್ಲಿ ಹೆಡೆಯೆತ್ತಿ ಎದ್ದ ಒಂದು ಕಾಳಿಂಗ ಸರ್ಪದ ಫೋಟೊ ಅಲ್ಲಿ ಇಲ್ಲಿ ಹರಿದಾಡಿತು. ಅದಕ್ಕೆ ಒಂದಲ್ಲ, ಎರಡಲ್ಲ, ಐದು ಹೆಡೆಗಳಿದ್ದವು. ಕಾಳಿಂಗ ಸರ್ಪಕ್ಕೆ ಕಿರಿದಾದ ಹೆಡೆ ಇರುವುದರಿಂದ ಆ ಐದೂ ಹೆಡೆಗಳು ಸೇರಿ ಹೆಚ್ಚೆಂದರೆ ಒಂದಡಿ ಅಗಲಕ್ಕೆ ಬಿಚ್ಚಿಕೊಂಡಿದ್ದವು. ಹಾವಿನ ಗಾತ್ರಕ್ಕೆ ಅದು ಸಹಜವೆಂಬಂತೆ ಇತ್ತು. ಆ ಫೋಟೊವನ್ನು ನೋಡಿ ಎಷ್ಟು ಜನ ಕೈಮುಗಿದರೊ, ನಾಗಪಂಚಮಿಯಂದು ಅಡ್ಡಬಿದ್ದರೊ ಗೊತ್ತಾಗಿಲ್ಲ; ಆದರೆ ಹೀಗಿರಲು ಸಾಧ್ಯವೆ ಎಂದು ಕೆಲವರು ಉರಗತಜ್ಞರನ್ನು ಕೇಳತೊಡಗಿದರು. ಫೋಟೊಶಾಪ್ ಪರಿಣತರು ಆ ಹಾವಿಗೆ ಅದೆಷ್ಟು ಚೆನ್ನಾಗಿ ನಾಲ್ಕು ಎಕ್ಸ್‌ಟ್ರಾ ಹೆಡೆಗಳನ್ನು ಜೋಡಿಸಿದ್ದರೆಂದರೆ ಭೂತಗನ್ನಡಿಯಲ್ಲಿ ಚಿತ್ರವನ್ನು ಹಿಗ್ಗಿಸಿ ನೋಡಿದರೂ ಗೊತ್ತಾಗುತ್ತಿರಲಿಲ್ಲ, ಒಂದೊಂದು ಹೆಡೆಯ ಚುಕ್ಕಿ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಮಾತ್ರ ಅವೆಲ್ಲ ಒಂದೇ ಹೆಡೆಯ ಪ್ರತಿಕೃತಿ ಎಂಬುದು ಗೊತ್ತಾಗುತ್ತಿತ್ತು.

ಫೋಟೊಗಳನ್ನೇನು, ವಿಡಿಯೊಗಳನ್ನೂ ತಿದ್ದುವ ತಂತ್ರಜ್ಞಾನ ಈಗ ಅದೆಷ್ಟೊ ಮೆಟ್ಟಿಲುಗಳನ್ನೇರಿ ಸತ್ಯದ ನೆತ್ತಿಯನ್ನು ಕುಟ್ಟುವಷ್ಟು ವಿಸ್ತಾರಕ್ಕೆ ಬೆಳೆದಿದೆ. ನಂಬಲಸಾಧ್ಯ ದೃಶ್ಯಗಳನ್ನು ನಾವು ದಿನವೂ ನಮ್ಮ ಅಂಗೈಯಲ್ಲೇ ನೋಡುತ್ತಿದ್ದೇವೆ. ತೋಳುದ್ದದ ಡ್ರೋನ್ ಮೇಲೆ ಸವಾರಿ ಮಾಡುತ್ತ ಊರೆಲ್ಲ ಸುತ್ತಿ ಬರುವವರು, ನೂರಿನ್ನೂರು ಮೀಟರ್ ಕೆಳಗಿರುವ ಕಂದರಕ್ಕೆ ಜಿಗಿಯುವವರು; ನೀರಿನ ಧಾರೆಯ ವಿರುದ್ಧ ಚಲಿಸುವ ‘ಸಂಜೀವಿನಿ’ ಕಡ್ಡಿ... ಒಂದಲ್ಲ ಎರಡಲ್ಲ.

ಮನಸ್ಸನ್ನು ಸೆರೆಹಿಡಿಯಬಲ್ಲ ಇಂಥ ತಂತ್ರಗಳು ತ್ವರಿತವಾಗಿ ಮನರಂಜನೆಯ ವಲಯವನ್ನು ದಾಟಿ ಜಾಹೀರಾತು ರಂಗಕ್ಕೂ ಬಂದು ಅಲ್ಲಿಂದ ಮುಂದೆ ಎಲ್ಲ ಬಗೆಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಓಲೈಕೆಗಳಿಗೆ, ಮಿಲಿಟರಿ ಉದ್ದೇಶಗಳಿಗೆ ಬಳಕೆಯಾಗುತ್ತವೆ. ಮೊರೊಕ್ಕೊ ಮತ್ತು ಸ್ಪೇನ್ ದೇಶಗಳ ಗಡಿಯುದ್ದಕ್ಕೂ ರಾತ್ರಿ ವೇಳೆ ವಿದ್ಯುತ್ ದೀಪ ಬೆಳಗಿಸುತ್ತಿರುವ ಚಿತ್ರವನ್ನು ಭಾರತ ಸರ್ಕಾರ ತನ್ನದೆಂದು ಮುದ್ರಿಸಿದ ಕತೆ ಗೊತ್ತಲ್ಲ? ಅಕ್ರಮ ವಲಸೆಗಾರರನ್ನು ಗುರುತಿಸಲೆಂದು ತಾನು 647 ಕಿಲೊಮೀಟರ್ ಉದ್ದದ ಗಡಿಯಲ್ಲಿ ವಿದ್ಯುತ್ ಹೊನಲು ಬೆಳಕಿನ ವ್ಯವಸ್ಥೆ ಮಾಡಿದ್ದೇನೆಂದು ಹೇಳಿಕೊಳ್ಳುತ್ತ ಭಾರತದ ಗೃಹ ಖಾತೆ ಕಳೆದ ವಾರ್ಷಿಕ ವರದಿಯಲ್ಲಿ ಈ ಚಿತ್ರವನ್ನು ಮುದ್ರಿಸಿತ್ತು.

ಮೋದಿಯವರು ಅಧಿಕಾರಕ್ಕೆ ಬಂದ ನಂತರದ ಬಹುದೊಡ್ಡ ಸಾಧನೆ ಇದೆಂದು ಅಲ್ಲಲ್ಲಿ ಟಾಂ ಟಾಂ ಆದಾಗ ಸರ್ಕಾರ ತೀವ್ರ ಮುಜುಗರ ಅನುಭವಿಸಬೇಕಾಗಿ ಬಂತು. ಇದು ನೇರಾನೇರ ಕೃತಿಚೌರ್ಯದ ಕೆಲಸವಾಗಿತ್ತೇ ವಿನಾ ತಾಂತ್ರಿಕ ಕರಾಮತ್ತೇನೂ ಇರಲಿಲ್ಲ ಅನ್ನಿ. ಅದಾಗಿ ಕೆಲವೇ ದಿನಗಳ ನಂತರ ಭಾರತ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಿ ಮಿಲಿಟರಿ ತಾನೂ ಪ್ರತಿದಾಳಿ ನಡೆಸಿ ಭಾರತದ ನೆಲೆಯನ್ನು ಉಡಾಯಿಸಿದೆನೆಂದು ಒಂದು ವಿಡಿಯೊ ದೃಶ್ಯವನ್ನು ಬಿಡುಗಡೆ ಮಾಡಿತ್ತು. ಅದು ಮಾತ್ರ ಅಪ್ಪಟ ಮೋಸದ ವಿಡಿಯೊ ಎಂದು ಚಾನೆಲ್‌ಗಳಲ್ಲಿ ತಜ್ಞರು ಬಿಂಬಿಸಿದರು. ವಿಡಿಯೊ ತಿದ್ದಾಟ ತೀರ ಬಾಲಿಶವಾಗಿತ್ತೆಂದು ಪಾಕಿಸ್ತಾನದ ಕೃತ್ಯವನ್ನು ಟೀಕಿಸಲಾಯಿತು.

ಗಡಿ ವಿಚಾರದಲ್ಲಿ ಹೀಗೇ ಬರೀ ವಿಡಿಯೊ ಯುದ್ಧ, ಮಾತಿನ ಯುದ್ಧ ನಡೆಯುತ್ತಿದ್ದರೆ ನಿಜವಾದ ಚಕಮಕಿಗಿಂತ ಅದೇ ಉತ್ತಮವೇನೊ ಹೌದು. ಆದರೆ ಯುದ್ಧದ ಮಾತೇ ಇಲ್ಲದೇ ಸಮಾಜದಲ್ಲಿ ತ್ವೇಷ ಬಿತ್ತಲು, ಮುಗ್ಧರನ್ನು ಬಲಿ ಹಾಕಲು ವಿಡಿಯೊಗಳ ಬಳಕೆ ಹೆಚ್ಚುತ್ತಿದೆ. ಮಕ್ಕಳ ಸುರಕ್ಷತೆ ಬಗ್ಗೆ ಪಾಕಿಸ್ತಾನದ ಜಾಹೀರಾತು ಕಂಪನಿಯೊಂದು ಹರಿಬಿಟ್ಟ ಜನಜಾಗೃತಿ ವಿಡಿಯೊದ ತಲೆ-ಬಾಲ ಕತ್ತರಿಸಿ ಭಾರತದಲ್ಲಿ ಯಾರೋ ಕಿಡಿಗೇಡಿಗಳು ‘ಮಕ್ಕಳ ಕಳ್ಳರು ಬರುತ್ತಿದ್ದಾರೆ’ ಎಂದು ಬಣ್ಣಿಸಿ ಹಂಚಿದ್ದರಿಂದ ಇಲ್ಲಿನ 30ಕ್ಕೂ ಹೆಚ್ಚು ಅಮಾಯಕರು ಜೀವ ತೆತ್ತರು. ಹೀಗೆ ವಿಡಿಯೊವನ್ನು ಕತ್ತರಿಸಿ ತೇಪೆ ಹಚ್ಚುವ ಕೆಲಸವನ್ನು ಸಾಮಾನ್ಯ ಲ್ಯಾಪ್‌ಟಾಪ್‌ನಲ್ಲೂ ಸಲೀಸಾಗಿ ಮಾಡಬಹುದಾದ್ದರಿಂದ ನಾನಾ ಬಗೆಯ ಅಪರಾಧಗಳು, ತಲ್ಲಣಗಳು ಹಬ್ಬುತ್ತಿವೆ. ಇಂಥ ತಿದ್ದಾಟಕ್ಕೆ ತೀರ ಕ್ಲಿಷ್ಟ ಅಲ್ಗೊರಿದಮ್ ಕೂಡ ಬೇಕಾಗುವುದಿಲ್ಲ.

ಎಂಥ ವಿಪರ‍್ಯಾಸ ನೋಡಿ. ಆರೋಪಿಗಳ ಬಾಯಿ ಬಿಡಿಸಲೆಂದು ಎಷ್ಟೆಲ್ಲ ಬಗೆಯ ಲೈ ಡಿಟೆಕ್ಟರ್ ತಂತ್ರಗಳು ಬಳಕೆಯಾಗುತ್ತಿವೆ. ರಕ್ತನಾಳಗಳಿಗೆ ರಸಾಯನದ ದ್ರವ್ಯಗಳನ್ನು ತೂರಿಸುವುದು, ವಿದ್ಯುತ್ ದಂಡಗಳ ಮೂಲಕ ಮಿದುಳಿನಲ್ಲಿ ತರಂಗ ಎಬ್ಬಿಸಿ ಸ್ಕ್ಯಾನ್ ಮಾಡುವುದು, ವಶೀಕರಣ ತಂತ್ರವನ್ನು ಪ್ರಯೋಗಿಸುವುದು, ಮನೋವೈಜ್ಞಾನಿಕ ಪರೀಕ್ಷೆಗಳನ್ನು ಒಡ್ಡುವುದು, ಹಿಂಸೆ ಕೊಡುವುದು ಹೀಗೆ ಹೆಚ್ಚು ಹೆಚ್ಚು ವಿಧಾನಗಳು ಪೊಲೀಸರ ಬತ್ತಳಿಕೆ ಸೇರುತ್ತಿರುವಷ್ಟೇ ವೇಗದಲ್ಲಿ ಟೆರರಿಸ್ಟ್ ಶಿಬಿರಗಳಲ್ಲಿ ಕೂಡ ಜಿಹಾದಿಗಳ ಮನಸ್ಸನ್ನು ಗಟ್ಟಿಗೊಳಿಸಲು ಅದೇ ತಂತ್ರಗಳ ತಾಲೀಮು ನಡೆಯುತ್ತದೆ. ಇತ್ತ ಸುಳ್ಳುಪತ್ತೆಯ ವಿದ್ಯೆಗಿಂತ ಸುಳ್ಳನ್ನು ಸೃಷ್ಟಿಸುವ ತಂತ್ರಜ್ಞಾನವೇ ವೇಗವಾಗಿ ಬೆಳೆಯುತ್ತಿದೆ.

ದೃಶ್ಯ ಮತ್ತು ಧ್ವನಿ ಎರಡನ್ನೂ ತಿದ್ದುವ ಸಾಫ್ಟ್‌ವೇರ್ ತಂತ್ರಜ್ಞಾನ ಈ ಎರಡು ವರ್ಷಗಳಲ್ಲಿ ತುಂಬ ಸುಧಾರಿಸಿದೆ. ಉದಾ: ಮೋದಿಯವರ ಹಳೇ ಒಂದು ವಿಡಿಯೊ ದೃಶ್ಯಾವಳಿಗೆ ಈಚಿನ ಅವರ ಭಾಷಣದ ಧ್ವನಿಮುದ್ರಿಕೆಯನ್ನು ಅವರ ಹಾವಭಾವ, ಮುಖಭಂಗಿಗೆ ಸರಿಯಾಗಿ ಮ್ಯಾಚ್ ಆಗುವಂತೆ ಜೋಡಿಸಬಹುದು; ಅಥವಾ ಈಚಿನ ದೃಶ್ಯಕ್ಕೆ ಹಳೆಯ ಧ್ವನಿಯನ್ನು ಸೇರಿಸಬಹುದು. ಈ ಬಗೆಯ ತಿದ್ದುತಂತ್ರವನ್ನು ಮೋಜಿಗೆಂದೇ ಬಳಸುವರ ಸಂಖ್ಯೆಯೂ ವ್ಯಾಪಕವಾಗಿ ಹೆಚ್ಚುತ್ತಿದೆ. ಆದರೆ ಈ ತಂತ್ರಜ್ಞಾನ ಇಡೀ ಜಗತ್ತನ್ನು ಅಪಾಯದ ಅಂಚಿಗೆ ಕೊಂಡೊಯ್ಯುವ ಸಾಧ್ಯತೆ ಇದೆ. ಒಂದು ದೃಶ್ಯವನ್ನು ಊಹಿಸಿಕೊಳ್ಳಿ: ಟ್ರಂಪ್ ಮಹಾಶಯನ ಯಾವುದೋ ವಿಡಿಯೊವನ್ನು ತಿರುಚಿ ‘ನಾನು ಉತ್ತರ ಕೊರಿಯಾದ ಮೇಲೆ ಪರಮಾಣು ಬಾಂಬ್ ಹಾಕಲು ಈಗಷ್ಟೇ ಕ್ಷಿಪಣಿ ಹಾರಿಸಿದ್ದೇನೆ’ ಎಂಬಂಥ ನಕಲಿ ವಿಡಿಯೊವನ್ನು ಯಾವನೋ ಕಿಡಿಗೇಡಿಯೊಬ್ಬ ಸೃಷ್ಟಿಸಿ ಟ್ವೀಟ್ ಮಾಡಿದ ಎಂದಿಟ್ಟುಕೊಳ್ಳಿ.

ಕ್ಷಿಪಣಿಯೊಂದು ತನ್ನ ಗೂಡನ್ನು ಛೇದಿಸಿಕೊಂಡು ಮೇಲಕ್ಕೆ ಚಿಮ್ಮುವ ದೃಶ್ಯವೂ ಜೊತೆಗಿದ್ದರೆ ಮುಗಿಯಿತು ಕತೆ. ಅದು ನಕಲಿ ಎಂದು ಗೊತ್ತಾಗುವ ವೇಳೆಗೆ ಮಿಂಚಿನಂತೆ ಆ ಸಂದೇಶ ಜಗತ್ತಿಗೆಲ್ಲ ವ್ಯಾಪಿಸಿ, ಅಷ್ಟೇ ತ್ವರಿತವಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ನಿಜವಾಗಿಯೂ ಮರುದಾಳಿಯ ಮೂಲಕ ಉತ್ತರ ಕೊಟ್ಟರೆ? ಅಸಲೀ ಕ್ಷಿಪಣಿ ಅಲ್ಲಿ ಪ್ಯೊಂಗ್ಯಾಂಗ್‌ನಿಂದ ಮೇಲಕ್ಕೆ ಏಳುತ್ತಲೇ ಟ್ರಂಪ್ ಈಗ ನಿಜಕ್ಕೂ ನ್ಯೂಕ್ಲಿಯರ್ ಬಟನ್ ಒತ್ತಲೇಬೇಕಾಗುತ್ತದೆ. ಬಾಂಬ್ ಸಮುದ್ರದಲ್ಲೇ ಬಿದ್ದರೂ ಜಗತ್ತಿನೆಲ್ಲ ಕಡೆ ವಿಧ್ವಂಸಕ ಅಲೆಗಳೆದ್ದು ವಾಣಿಜ್ಯ ವ್ಯವಸ್ಥೆಗಳೆಲ್ಲ ಕುಸಿದು ಬೀಳುತ್ತವೆ. ನೆಲದ ಮೇಲೆ ಬಿದ್ದರಂತೂ ಕೇಳುವುದೇ ಬೇಡ.

ಸಿನಿಮಾಗಳಲ್ಲಿ ತೋರಿಸುವ ಅದ್ಭುತ ರಮ್ಯ ಗ್ರಾಫಿಕ್ ದೃಶ್ಯಗಳು ಕಾಲ್ಪನಿಕ ಎಂಬುದು ನಮಗೆ ಗೊತ್ತಿರುತ್ತದೆ. ವೀಕ್ಷಿಸಿ ಮುಗಿದ ಮೇಲೆ ವಾಸ್ತವಕ್ಕೆ ಬರುತ್ತೇವೆ. ಆದರೆ ವಾಸ್ತವಕ್ಕೆ ತೀರ ಹತ್ತಿರವಾಗಿ ಸತ್ಯವನ್ನು ತಿರುಚಿದರೆ ನಾವದನ್ನು ನಂಬುತ್ತೇವೆ. ಅಮೆರಿಕದ ಪ್ರತಿಷ್ಠಿತ ಎಮ್‌ಐಟಿಯ ಕಂಪ್ಯೂಟರ್ ತಜ್ಞರು ಕೃತಕ ಬುದ್ಧಿಮತ್ತೆಯನ್ನು ಬಳಸಿ, ಅಪ್ಪಟ ಸತ್ಯವೆನಿಸಬಲ್ಲ ‘ಡೀಪ್‌ಫೇಕ್’ ಹೆಸರಿನ ತಂತ್ರಾಂಶವನ್ನು ಇತ್ತೀಚೆಗೆ ಉಚಿತ ಬಳಕೆಗೆ ಬಿಡುಗಡೆ ಮಾಡಿದ್ದಾರೆ. ಕಟ್ಟಡ ವಿನ್ಯಾಸ, ನಗರ ನಿರ್ಮಾಣದಂಥ ಶೈಕ್ಷಣಿಕ ಸದುದ್ದೇಶಗಳಿಗೆ ಅದನ್ನು ಬಳಸಬಹುದು. ಜಾಹೀರಾತುಗಳ ಶೂಟಿಂಗ್‌ಗೆ ಬರಲಾಗದಷ್ಟು ಕೆಲಸವಿರುವ ಖ್ಯಾತ ನಟಿ-ನಟರ ಫೊಟೊವನ್ನಷ್ಟೇ ಆಧರಿಸಿ ಅವರೇ ನಟಿಸಿದಂತೆ ಜಾಹೀರಾತು ಸೃಷ್ಟಿ ಮಾಡಬಹುದು.

ಆದರೆ ಅಂಥ ಸಾಫ್ಟ್‌ವೇರ್ ಬಳಸಿ ಖ್ಯಾತ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವ, ನೀಲಿಚಿತ್ರಗಳಲ್ಲಿ ಇವರ ಬಿಂಬವನ್ನೇ ಸೇರಿಸಿ ಮಾನಹಾನಿ ಮಾಡುವ ಕೃತ್ಯಗಳೇ ಹೆಚ್ಚುತ್ತವೆ. ‘ಇಮ್ರಾನ್ ಖಾನ್ ಗುಂಡಿಗೆ ಬಲಿ’ ಎಂಬ ಕಳಪೆ ವಿಡಿಯೊವನ್ನು ತುಸು ಪರೀಕ್ಷೆ ಮಾಡಿದರೆ ಅದು ನಕಲಿ ಎಂಬುದು ಗೊತ್ತಾಗುತ್ತದೆ. ಆದರೆ ಡೀಪ್‌ಫೇಕ್ ವಿಡಿಯೊದಲ್ಲಿ ಗೊತ್ತಾಗುವುದಿಲ್ಲ. ಅಂಥ ನಕಲಿ ವಿಡಿಯೊಗಳನ್ನು ಪತ್ತೆ ಹಚ್ಚುವುದು ಹೇಗೆಂಬ ಬಗ್ಗೆ ತೀವ್ರ ಸಂಶೋಧನೆಗಳು ನಡೆಯುತ್ತಿವೆ. ಒಂದು ವಿಧಾನ ಏನೆಂದರೆ ರೋಬಾಟ್‌ಗಳು ತಯಾರಿಸುವ ಸುಳ್ಳು ವಿಡಿಯೊದಲ್ಲಿ ವ್ಯಕ್ತಿಗಳು ಕಣ್ಣೆವೆ ಮಿಟುಕಿಸುವುದಿಲ್ಲ. ಏಕೆಂದರೆ ಮೂಲ ಫೊಟೊದಲ್ಲಿ ಕಣ್ಣು ತೆರೆದೇ ಇರುತ್ತದೆ. ಆದರೆ ಜನಸಾಮಾನ್ಯರಿಗೆ ಅವೆಲ್ಲ ಗೊತ್ತಾಗುವುದಿಲ್ಲ.

ಚಾರಿತ್ರ್ಯವಧೆಗಿಂತ ಸತ್ಯದ ವಧೆ ಇನ್ನೂ ಕ್ರೂರವಾಗಿರುತ್ತದೆ. ಬ್ರಿಟನ್ನಿನ ಹೆಸರಾಂತ ‘ಗಾರ್ಡಿಯನ್’ ಪತ್ರಿಕೆ ತನ್ನ ‘ಸೈನ್ಸ್ ಬ್ಲಾಗ್’ ವಿಭಾಗವನ್ನು ಕಳೆದ ವಾರ ಮುಚ್ಚಬೇಕಾಗಿ ಬಂತು. ವಿಜ್ಞಾನದ ಬಗ್ಗೆ, ಅದರ ರಾಜಕೀಯ ಪರಿಣಾಮಗಳ ಬಗ್ಗೆ ಮುಕ್ತವಾಗಿ ಎಂಟು ವರ್ಷಗಳಿಂದ ಚರ್ಚಿಸುತ್ತಿದ್ದ ಈ ಬ್ಲಾಗ್‌ಗೆ ನುಗ್ಗಿದ ಫೇಕ್ ನ್ಯೂಸಿಗರ ಹಾವಳಿಯಿಂದಾಗಿ ಪತ್ರಿಕೆ ಬೇಸತ್ತಿತ್ತು. ‘ಸುಳ್ಳು ಸುದ್ದಿಗರ ದಾಳಿಯಲ್ಲಿ ವಿಜ್ಞಾನದ ಬರವಣಿಗೆ ಬದುಕುವುದೇ ಕಷ್ಟ’ ಎಂಬರ್ಥದಲ್ಲಿ ವಿಜ್ಞಾನ ಲೇಖಕಿ ಜೆನ್ನಿ ರಾನ್ ಈ ಬ್ಲಾಗಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಯನ್ನು ಬಿತ್ತರಿಸುವುದು ಒಂದು ಕಡೆಯಾದರೆ ಪ್ರಭುತ್ವದ ಲಾಭ ಪಡೆಯಲೆಂದು ಸತ್ಯಸಂಗತಿಯನ್ನು ಬಚ್ಚಿಡುವುದು ಇನ್ನೊಂದು ಸೂತ್ರ. ಮೊನ್ನೆ ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ್ ಅವರು ಬೆಂಗಳೂರಿನಲ್ಲಿ ಅನಂತಮೂರ್ತಿ ಸ್ಮಾರಕ ಉಪನ್ಯಾಸದ ಸಂದರ್ಭದಲ್ಲಿ ಇದನ್ನು ಚರ್ಚಿಸಿದರು: ಈಚಿನ ವರ್ಷಗಳಲ್ಲಿ ಬಹುಕೋಟಿ ಉದ್ಯಮಪತಿಗಳು ಮಾಧ್ಯಮರಂಗವನ್ನು ಆಕ್ರಮಿಸುತ್ತಿದ್ದಾರೆ. ಅವರ ಊಳಿಗದಲ್ಲಿರುವ ಚಾನೆಲ್‌ಗಳು, ಪತ್ರಿಕೆಗಳು ಉದ್ಯಮಕ್ಕೆ ಹಣ ತರಬಹುದಾದ ಸಂಗತಿಗಳನ್ನೇ ಸುದ್ದಿಯನ್ನಾಗಿ ಬಿತ್ತರಿಸುತ್ತವೆ. ತಂತಮ್ಮ ಉದ್ಯಮಗಳ ಹಿತಾಸಕ್ತಿಯೇ ಪ್ರಮುಖವಾದಾಗ ಗಣಿಗಾರಿಕೆ, ಕೃಷಿ, ಬ್ಯಾಂಕಿಂಗ್, ವಿಮಾನಯಾನ, ರಫ್ತು ವ್ಯವಹಾರ, ಲೋಹ ತಯಾರಿಕೆ, ಹೆದ್ದಾರಿ/ ಬಂದರು ನಿರ್ಮಾಣ ಮುಂತಾದ 220 ರಂಗಗಳಲ್ಲಿ ನಡೆಯುವ ಯಾವ ಅನೈತಿಕ, ಅಕ್ರಮ, ದೌರ್ಜನ್ಯದ ವ್ಯವಹಾರಗಳೂ ಜನರಿಗೆ ಗೊತ್ತಾಗುವುದಿಲ್ಲ. ಅವಕ್ಕೆಲ್ಲ ಪರದೆ ಹಾಕಿಟ್ಟು ನಮಗೆ ಕಿರು ತೆರೆಯ ಮೇಲೆ ರಫೇಲ್ ಯುದ್ಧ ವಿಮಾನದ ಅಮೋಘ ತಾಂತ್ರಿಕ ಕೌಶಲಗಳನ್ನು ತೋರಿಸಲಾಗುತ್ತದೆ.

ದೇಶದ ಸ್ವಂತ ಸಾಮರ್ಥ್ಯದ ಅಸ್ತಿವಾರವಾಗಬೇಕಿದ್ದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ನಂಥ ಸಂಸ್ಥೆಗಳನ್ನು ಹಂತಹಂತವಾಗಿ ದುರ್ಬಲಗೊಳಿಸಿ, ಅದರ ದೌರ್ಬಲ್ಯವನ್ನೇ ಎತ್ತಿ ಹೇಳುತ್ತ, ವಿದೇಶೀ ದಲ್ಲಾಳಿಗಳಿಗೆ ಮಣೆ ಹಾಕುತ್ತ ಅಲ್ಲಿಂದ ಬಂದ ಥಳಕು ಯಂತ್ರಗಳನ್ನೇ ಗಣತಂತ್ರ ಪರೇಡ್‌ನಲ್ಲಿ ತೋರಿಸುತ್ತ ಮಕ್ಕಳೆಲ್ಲ ಹೆಮ್ಮೆಯಿಂದ ಬಾವುಟ ಬೀಸುವಂತೆ ಮಾಡಲಾಗುತ್ತಿದೆ. ಹಿಂದಿನ ಸರ್ಕಾರಗಳು ಮಾಡುತ್ತ ಬಂದಿರುವುದನ್ನೇ ಇಂದಿನ ಸರ್ಕಾರ ತನ್ನ ಹೊಗಳು-ಭಟ್ಟರ ಪಡೆಯೊಂದಿಗೆ ಇನ್ನೂ ಜೋರಾಗಿ ಮಾಡುವುದನ್ನು ನೋಡುತ್ತೇವೆ. ಹೀಗೆ ರಾಜಕೀಯ ವಕ್ತಾರರಿಂದ ಪದೇ ಪದೇ ಅವಮಾನಿತಗೊಂಡ ಎಚ್‌ಎಎಲ್‌ನಂಥ ಸಂಸ್ಥೆಯ ಬೆಂಬಲಕ್ಕೆ ಯಾವ ಸುದ್ದಿ ಮಾಧ್ಯಮಗಳು ಬರುತ್ತವೆ? ಆದರೂ ಕಾಕತಾಳೀಯ ಘಟನೆ ನಡೆಯುತ್ತದೆ. ಎಚ್‌ಎಎಲ್ ನಿರ್ಮಿತ ತೇಜಸ್ ಯುದ್ಧವಿಮಾನಗಳು ಆಕಾಶದಲ್ಲೇ ಇಂಧನ ತುಂಬಿಸಿಕೊಳ್ಳುವ ಸಾಹಸವನ್ನು ಇದೇ ಮೊದಲ ಬಾರಿಗೆ ನಿನ್ನೆಯಷ್ಟೇ ಪ್ರದರ್ಶಿಸಿವೆ. ತಾನಿನ್ನೂ ಸತ್ತಿಲ್ಲ ಎಂದು ಎಚ್‌ಎಎಲ್ ಕೂಗಿ ಹೇಳಿದಂತಾಗಿದೆ. ಎಚ್‌ಎಂಟಿ, ಎನ್‌ಜಿಇಎಫ್‌ಗಳಿಗೆ ಆ ಅವಕಾಶವೂ ಇರಲಿಲ್ಲ.

ನಾಗಪಂಚಮಿ ಸಂದರ್ಭದ ಐದು ಹೆಡೆಗಳ ಸರ್ಪದಿಂದ ಆರಂಭಿಸಿದ ಅಂಕಣವನ್ನು ಗಣೇಶ ಚತುರ್ಥಿಯ ಅಟೊಮ್ಯಾಟಿಕ್ ಆರತಿಯೊಂದಿಗೆ ಮುಗಿಸೋಣ. ಮೊನ್ನೆಯಿಂದ ಹೊಸದೊಂದು ವಿಡಿಯೊ ಹರಿದಾಡತೊಡಗಿದೆ. ಆಳೆತ್ತರದ ಗಣಪನ ದೊಡ್ಡ ಮಂಟಪದ ಬಲಭಾಗದಲ್ಲಿ ಒಂದು ರೋಬಾಟ್ ಪೆಟ್ಟಿಗೆ ಇದೆ. ಅದರಿಂದ ಹೊರಟ ಎರಡಾಳೆತ್ತರದ ಯಾಂತ್ರಿಕ ತೋಳು ತನ್ನ ಹಸ್ತದಲ್ಲಿ ದೀಪದ ಬಟ್ಟಲನ್ನು ಹಿಡಿದು ಗಣೇಶ ಮೂರ್ತಿಗೆ ಆರತಿ ಎತ್ತುತ್ತಿದೆ. ಹಿನ್ನೆಲೆಯಲ್ಲಿ ಮಂತ್ರಪಠಣ, ಘಂಟಾನಾದ ಹೊಮ್ಮುತ್ತಿದೆ.

ನಿರ್ಭಾವುಕ ಕೃತಕ ಬುದ್ಧಿಮತ್ತೆ ಈಗ ಭಕ್ತಿ ಪ್ರದರ್ಶನಕ್ಕೆ ನಿಂತಿದೆ. ಅಸಲೀ ಭಜಕನ ಕೈಯಲ್ಲಿ ವಾಟ್ಸಾಪ್.

ಬರಹ ಇಷ್ಟವಾಯಿತೆ?

 • 51

  Happy
 • 4

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !