ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ: ಊರುಕೇರಿಗೆ ಕಲ್ನಾರಿನ ಹೆಮ್ಮಾರಿ

ಸರ್ಕಾರಕ್ಕೆ ಧಾರಾಳ ದೇಣಿಗೆ ಕೊಟ್ಟು ವಿಜ್ಞಾನವನ್ನೂ ಮೂಲೆಗೊತ್ತಬಹುದು
Published 11 ಅಕ್ಟೋಬರ್ 2023, 23:06 IST
Last Updated 11 ಅಕ್ಟೋಬರ್ 2023, 23:06 IST
ಅಕ್ಷರ ಗಾತ್ರ

ಸಿಡಿಮದ್ದಿನ ಶೋಧದಿಂದಾಗಿ ‘ಲಕ್ಷಾಂತರ ಜನರ ದಾರುಣ ಸಾವಿಗೆ ಕಾರಣನಾದ ಆಲ್‌ಫ್ರೆಡ್‌ ನೊಬೆಲ್‌ ನಿಧನ’ ಎಂದು 1888ರಂದು ಫ್ರೆಂಚ್‌ ಪತ್ರಿಕೆಯೊಂದು ವರದಿ ಮಾಡಿತು. ಆದರೆ ಸತ್ತ ವ್ಯಕ್ತಿ ಆಲ್‌ಫ್ರೆಡ್‌ ಆಗಿರಲಿಲ್ಲ. ಆತನ ಅಣ್ಣ ಲೂಡ್ವಿಗ್‌ ನೊಬೆಲ್‌ ಅಂದು ಗತಿಸಿದ್ದ. ತನಗೆ ‘ಸಾವಿನ ವ್ಯಾಪಾರಿ’ ಎಂಬ ಕಳಂಕ ಬಂತೆಂದು ಆಲ್‌ಫ್ರೆಡ್‌ ವ್ಯಥಿಸಿ, ಅಂದೇ ತನ್ನೆಲ್ಲ ಸಂಪತ್ತನ್ನೂ ಮನುಕುಲದ ಒಳಿತಿಗೆ ಮೀಸಲಿಡಲು ನಿರ್ಧರಿಸಿ ‘ನೊಬೆಲ್‌ ಪ್ರಶಸ್ತಿ’ಗಳನ್ನು ಹುಟ್ಟುಹಾಕಿದ.

ಈ ಘಟನೆಯನ್ನೇ ತುಸು ಹಿಂದುಮುಂದಾಗಿ ನೆನಪಿಸುವಂಥ ಇನ್ನೊಂದು ಸಂಗತಿ ಇಲ್ಲಿದೆ:
ಸ್ವಿಟ್ಜರ್ಲೆಂಡಿನ ಶತಕೋಟ್ಯಧೀಶ ಉದ್ಯಮಿ ಸ್ಟೀಫನ್‌ ಶ್ಮಿಧೇನಿ ಎಂಬಾತನಿಗೆ ಇತ್ತೀಚೆಗೆ (7 ಜೂನ್‌) ಇಟಲಿಯ ನ್ಯಾಯಾಲಯ 12 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಆತ ಹಿಂದೆ ಅಲ್ಲಿ 40 ವರ್ಷ ಕಲ್ನಾರಿನ (ಆಸ್‌ಬೆಸ್ಟಾಸ್‌) ಉದ್ಯಮವನ್ನು ನಡೆಸಿದ್ದ. ಜನರನ್ನು ಸಾವಿನ ಮನೆಗೆ ದೂಡಬಲ್ಲ ಉದ್ಯಮ ಅದು. ಅದರ ಲಾಭದಲ್ಲಿ ಶ್ಮಿಧೇನಿ ಕುಟುಂಬ ಲೋಕಕಲ್ಯಾಣಕ್ಕೆಂದು ಭಾರೀ ಹಣವನ್ನೂ ಪ್ರಶಸ್ತಿಗಳನ್ನೂ ವಿತರಿಸುತ್ತಿತ್ತು (ಅಂಥ ಪ್ರಶಸ್ತಿಯನ್ನು ಪಡೆದವರಲ್ಲಿ ಕನ್ನಡದ ಹೆಮ್ಮೆಯ ಸಾಫ್ಟ್‌ವೇರ್‌ ಉದ್ಯಮಿ ಯೊಬ್ಬರ ಹೆಸರೂ ಇದೆ). ಅದನ್ನೆಲ್ಲ ಕಡೆಗಣಿಸಿ, ಇಟಲಿಯ 392 ಜನರ ಸಾವಿಗೆ ಕಾರಣನೆಂದು ಈತನಿಗೆ ಶಿಕ್ಷೆ ಘೋಷಿಸಲಾಯಿತು.

ಕಲ್ನಾರಿಗೆ ಕರಾಳ ಇತಿಹಾಸ ಇದೆ. ಕೆರೆಸಿದಷ್ಟೂ ನಾರುನಾರು ಎಳೆಗಳನ್ನು ಬಿಡುವ ಬಂಡೆಯಂಥ ಅದುರನ್ನು ಭೂಮಿಯಿಂದ ತೆಗೆದು ಅದರ ದಾರದಿಂದ ದೊರಗು ಬಟ್ಟೆಯನ್ನು ತಯಾರಿಸಿದರೆ ಅದನ್ನು ತೊಟ್ಟು ಬೆಂಕಿಯ ನಡುವೆ ಕೂಡ ಹೋಗಬಹುದು. ಅಂಥ ನಾರನ್ನು ಜಜ್ಜಿ, ಸುಣ್ಣ, ಸಿಮೆಂಟ್‌ ಸೇರಿಸಿ ಚಾವಣಿಗೆ ಹೊದೆಸಬಹುದು. ಶಾಖನಿರೋಧಕ ಪೈಪ್‌ಗಳನ್ನೂ ತಯಾರಿಸಬಹುದು. ಹಡಗುಗಳ ನಿರ್ಮಾಣಕ್ಕಂತೂ ಅತ್ಯುತ್ತಮ ಕಚ್ಚಾವಸ್ತು ಆಗಿತ್ತದು.

ಆದರೆ ಅದಕ್ಕೊಂದು ದುರ್ಗುಣ ಇದೆ. ಅಗೆಯುವಾಗ, ಕುಟ್ಟುವಾಗ, ಕತ್ತರಿಸುವಾಗ ಏಳುವ ದೂಳಿನಲ್ಲಿ ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಸೂಜಿಯಂಥ ಕಣಗಳು ಹೊಮ್ಮುತ್ತವೆ. ಅವು ನಮ್ಮ ಶ್ವಾಸಕೋಶದ ಆಳಕ್ಕೆ, ತೀರ ಆಳಕ್ಕೆ ಹೋಗಿ ಕೂತಾಗ ಅಲ್ಲಿ ಹುಣ್ಣುಗಳಾಗುತ್ತವೆ. ಕೀವಾಗಿ ಅಲ್ಲೇ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತದೆ. ಅದಕ್ಕೆ ‘ಶ್ವಾಸಕೋಶದ ಮೆಸೊಥೀಲಿಯೊಮಾ’ ಎಂತಲೇ ಹೆಸರಿದೆ. ಈ ಕಾಯಿಲೆಗೆ ಔಷಧಿ, ಚಿಕಿತ್ಸೆ ಇಲ್ಲ (ಇದೆ ಎಂದು ಹೇಳಿ ಆಸ್ಪತ್ರೆಗಳಲ್ಲಿ ತಿಂಗಳುಗಟ್ಟಲೆ ಮಲಗಿಸಿ ತರಾವರಿ ಚಿಕಿತ್ಸೆ ಮಾಡುವುದು ಬೇರೆ ಮಾತು). ಸಮಸ್ಯೆ ಏನೆಂದರೆ ಇಂಥ ಕಣಗಳನ್ನು ಸೇವಿಸುತ್ತಿದ್ದರೆ 10-15 ವರ್ಷಗಳ ನಂತರವೇ ಕಾಯಿಲೆ ಆರಂಭವಾಗುತ್ತದೆ. ಅಹ್ಮದಾಬಾದ್‌ನಲ್ಲಿ ನಡುವಯಸ್ಕ ರಾಜೇಶ್‌ ವ್ಯಾಸ್‌ (41) ಎಂಬಾತ ನರಳಿ ನರಳಿ ತೀರಿಕೊಂಡ. ಏಕೆಂದರೆ ಅವನ ಅಪ್ಪ ಆಸ್‌ಬೆಸ್ಟಾಸ್‌ ಶೀಟ್‌ ತಯಾರಿಸುವ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ. ಕಲ್ನಾರಿನ ದೂಳು ಮೆತ್ತಿದ ಬಟ್ಟೆಯಲ್ಲೇ ಮನೆಗೂ ಬರುತ್ತಿದ್ದ.

ಈ ಬಗೆಯ ಕ್ಯಾನ್ಸರ್‌ ಕಲ್ನಾರಿನ ಕಣಗಳಿಂದ ಮಾತ್ರವೇ ಬರುತ್ತದೆಂದು ವೈದ್ಯತಜ್ಞರು ಖಾತರಿ ಪತ್ತೆಹಚ್ಚಿ ಎಚ್ಚರಿಕೆ ನೀಡತೊಡಗಿದ ಮೇಲೆ ಐರೋಪ್ಯ ದೇಶಗಳಲ್ಲಿ ಇದಕ್ಕೆ ನಿಷೇಧ ಹಾಕಲಾಯಿತು (ಈಗ ಭಾರತವೇ ಜಗತ್ತಿನ ಅತಿ ದೊಡ್ಡ ಬಳಕೆದಾರ- ಅದರ ಕತೆ ಮುಂದೆ ಬರುತ್ತದೆ). 1990ರ ನಂತರ 70ಕ್ಕೂ ಹೆಚ್ಚು
ರಾಷ್ಟ್ರಗಳಲ್ಲಿ ಹಳೇ ಕಟ್ಟಡಗಳಲ್ಲಿದ್ದ ಕಲ್ನಾರಿನ ಪೈಪ್‌ಗಳನ್ನು ಚಾವಣಿಗಳನ್ನು, ಒಲೆಗಳನ್ನು ಹುಷಾರಾಗಿ (ನಖಶಿಖಾಂತ ರಕ್ಷಾಕವಚ ತೊಟ್ಟು) ಕಳಚಿ ಹೂಳಲಾಯಿತು. ಪ್ಯಾರಿಸ್‌ನ ಸೋರ್ಬೊನ್‌ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಕಲ್ನಾರಿನ ಹಾವಳಿಯಿಂದಾಗಿಯೇ 12 ಜನರು ಸತ್ತು 130ಕ್ಕೂ ಹೆಚ್ಚು ಜನರು ವ್ಯಾಧಿಗ್ರಸ್ತರಾಗಿದ್ದರಿಂದ 1997ರಲ್ಲಿ ಇಡೀ ಕಟ್ಟಡದ ಬಹುಭಾಗವನ್ನು ಕಿತ್ತು ಮತ್ತೆ ನಿರ್ಮಿಸಲಾಯಿತು. ಅದೇ ನಗರದ ಇತರ ವಿಶ್ವವಿದ್ಯಾ
ಲಯಗಳಲ್ಲೂ ಸಾವಿರಾರು ಜನರ ಬಲಿಯಾಗಿದ್ದು, ಅಂಥ ಕಟ್ಟಡಗಳನ್ನು ಕೆಡವಬೇಕೆಂದು ಪ್ಯಾರಿಸ್‌ನಲ್ಲಿ 2013ರಲ್ಲಿ ಯುವಜನರ ‘ಮರಣ ಸತ್ಯಾಗ್ರಹ’ ನಡೆದ ಮೇಲೆ ಕೆಲವು ಕಟ್ಟಡಗಳ ಭಾಗಗಳನ್ನು ಕಳಚಿ ಹೂಳಲಾಯಿತು.

ಈ ಕತೆ ಮುಗಿಯದಷ್ಟಿದೆ. ಕೆನಡಾದ ರಾಜಧಾನಿ ಒಟ್ಟಾವಾದಲ್ಲಿ ಸಂಸತ್‌ ಭವನದಲ್ಲಿದ್ದ ಕಲ್ನಾರಿನ ಭಾಗಗಳನ್ನೆಲ್ಲ ತೆಗೆದು ಹೂಳಲಾಯಿತು. ಮುಂದೆ ಎಲ್ಲೂ ಬಳಸಬಾರದೆಂದೂ ಆದರೆ ಬೇರೆ ದೇಶಗಳಿಗೆ ಮಾರಬಹುದೆಂದೂ ಹೊಸ ನೀತಿಯನ್ನು ಹೊಸ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಫ್ರೆಂಚರು 1961ರಲ್ಲಿ ನಿರ್ಮಿಸಿದ್ದ ‘ಕ್ಲೆಮೆಂಸು’ ಹೆಸರಿನ
ಯುದ್ಧ ಹಡಗನ್ನು ಕಳಚಿ ಗುಜರಿಗೆ ಹಾಕಲೆಂದು ಗುಜರಾತ್‌ನ ಅಲಂಗ್‌ ಬಂದರಿಗೆ 2006ರಲ್ಲಿ ತಳ್ಳುವ ಯತ್ನ ನಡೆಯಿತು. ಅದರಲ್ಲಿ ಸುಮಾರು 700 ಟನ್‌ ಕಲ್ನಾರಿನ ಹಲಗೆ, ಗೋಡೆಗಳಿದ್ದವು. ‘ಹಡಗುಗಳ ಕಸಾಯಿಖಾನೆ’ ಎಂದೇ ಕುಖ್ಯಾತಿ ಪಡೆದು, ಶ್ರಮಿಕರ ಸಾಲುಸಾಲು ಸಾವಿಗೆ ಕಾರಣವಾಗುತ್ತಿರುವ ಕೊಳಕು ಅಲಂಗ್‌ ಬಂದರಿನ ಬಗ್ಗೆ ಕೆನಡಾದ ರಾಷ್ಟ್ರೀಯ ಚಲನಚಿತ್ರ ಮಂಡಳಿ ನಿರ್ಮಿಸಿದ ‘ಶಿಪ್‌ಬ್ರೆಕರ್ಸ್‌’ ಹೆಸರಿನ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಯೂಟ್ಯೂಬ್‌ನಲ್ಲಿ ನೋಡಬಹುದು. ‘ಕ್ಲೆಮೆಂಸು’ ಹಡಗನ್ನು ಅಲ್ಲಿ ಒಡೆಯಕೂಡದೆಂದು ಪರಿಸರವಾದಿಗಳು ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದ ಮೇಲೆ ಹಡಗನ್ನು ವಾಪಸ್‌ ಕಳಿಸಲಾಯಿತು.

ಭಾರತದಲ್ಲಿ ಕಲ್ನಾರಿನ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೆ ನಮ್ಮ ದೇಶವೇ ಅತಿ ದೊಡ್ಡ ಪ್ರಮಾಣದಲ್ಲಿ ರಷ್ಯಾ, ಬ್ರೆಜಿಲ್‌, ಹಂಗೆರಿ, ಪೋಲಂಡ್‌ ಮತ್ತು ದಕ್ಷಿಣ ಆಫ್ರಿಕಾಗಳಿಂದ (ಪ್ರತಿವರ್ಷ ಮೂರೂವರೆ ಲಕ್ಷ ಟನ್‌ಗಳಷ್ಟು) ಕಲ್ನಾರನ್ನು ತರಿಸಿ, ಶೀಟ್‌ಗಳನ್ನು ತಯಾರಿಸಿ ಬಡವರಿಗೆ ಮನೆಗಳನ್ನು ಕಟ್ಟಿಸುತ್ತಿದೆ. ಶೀಟ್‌ ತಯಾರಿಸುವ ಉದ್ಯಮಿಗಳು ಅದೆಷ್ಟು ಶಕ್ತಿಶಾಲಿ ಎಂಬುದು ಅವರ ಒಕ್ಕೂಟದ (ಫೈಬರ್‌ ಸಿಮೆಂಟ್‌ ಉತ್ಪಾದಕರ ಸಂಘಟನೆಯ fcpma.in) ಜಾಲತಾಣದಲ್ಲಿ ಗೊತ್ತಾಗುತ್ತದೆ. ಅದರಲ್ಲಿ ‘ಕಲ್ನಾರಿನಿಂದ ಕ್ಯಾನ್ಸರ್‌ ಬರುತ್ತದೆಂಬುದು ಮಿಥ್ಯೆ’ಯೆಂದೂ ಅದನ್ನು ವಿರೋಧಿ ಸುವವರೆಲ್ಲ ವಿದೇಶಿ ಏಜೆಂಟರೆಂದೂ ಬಣ್ಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಚಿತ್ರದ ಎದುರು ಪರಿಸರ ಸಚಿವರು, ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನ ಸಚಿವರುಗಳಿಂದ ಸನ್ಮಾನ ಮಾಡಿಸಿಕೊಂಡ ಉದ್ಯಮಿಗಳ ಚಿತ್ರಗಳನ್ನು ಅಲ್ಲಿ ನೋಡಬಹುದು. ತಮ್ಮ ಉದ್ಯಮದಲ್ಲಿ 50 ಕಂಪನಿಗಳಿಂದ ಎಂಟು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಿದೆಯೆಂದೂ ಮೂರು ಲಕ್ಷ ಜನರಿಗೆ ಉದ್ಯೋಗ ಲಭಿಸಿದೆ ಎಂದೂ ವರ್ಣಿಸಲಾಗಿದೆ.

ಬರೀ ಮೂರು ಲಕ್ಷ ಜನರಾ? ಕಲ್ನಾರಿನ ಸಿಮೆಂಟ್‌ ಶೀಟ್‌ಗಳನ್ನು ಕತ್ತರಿಸಿ ಸೂರಿಗೆ ಹೊದೆಸುವ ಕಾರ್ಮಿಕರು ಊರೂರಲ್ಲಿ ಸಿಗುತ್ತಾರೆ. ಅವರು ಮುಖವಾಡ ಕೂಡ ಹಾಕಿರುವುದಿಲ್ಲ. ಅಂಥ ಕೆಲಸಗಾರರ 40 ವರ್ಷಗಳ ಆರೋಗ್ಯ ದಾಖಲೆಗಳನ್ನು ಇಟ್ಟಿರಬೇಕೆಂದು ಸುಪ್ರೀಂ ಕೋರ್ಟ್‌ ಹಿಂದೆಯೇ ಹೇಳಿದೆ. ದಾಖಲೆ ಇಟ್ಟವರಾರು? ‘ನಗರಕ್ಕೆ ಬರುವ ಶ್ರಮಿಕರಲ್ಲಿ ಶೇ 79ರಷ್ಟು ಮಂದಿ ಶೀಟ್‌ ಮನೆಗಳಲ್ಲೇ ವಾಸಿಸುತ್ತಾರೆ. ಅಂಥವರ ಸಂಖ್ಯೆ 20 ಕೋಟಿಯಷ್ಟಿದೆ’ ಎನ್ನುತ್ತಾರೆ, ಕಲ್ನಾರಿನ ಬಳಕೆಯನ್ನು ನಿಷೇಧಿಸಬೇಕೆನ್ನುವವರ ಸಂಘಟನೆಯ ವಕ್ತಾರ ಗೋಪಾಲಕೃಷ್ಣ.

‘ಕಲ್ನಾರಿನ ವಿಷಯದಲ್ಲಿ ಸುರಕ್ಷಿತ ಬಳಕೆ ಎಂಬುದೇ ಇಲ್ಲ’ ಎಂದು ವಿಶ್ವ ಸ್ವಾಸ್ಥ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹಿಂದೆಯೇ ಘೋಷಿಸಿದೆ. ಅಂದಾಜು 20 ಟನ್‌ ಕಲ್ನಾರಿನಿಂದ ಒಂದು ಸಾವು ಸಂಭವಿಸುತ್ತದೆಂದೂ ಹೇಳಲಾಗಿದೆ. ಸ್ವಾರಸ್ಯ ಏನೆಂದರೆ ಭಾರತೀಯ ರೈಲ್ವೆ ಇಲಾಖೆ ಏಳು ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ‘ಕಲ್ನಾರುಮುಕ್ತ’ ಮಾಡಿದೆ. ರಷ್ಯಾದಿಂದ ‘ಐಎನ್‌ಎಸ್‌ ವಿಕ್ರಮಾದಿತ್ಯ’ ಯುದ್ಧ ಹಡಗನ್ನು ಖರೀದಿಸುವ ಮುನ್ನ ಅದನ್ನು ಕಲ್ನಾರುಮುಕ್ತ ಮಾಡಬೇಕೆಂದು ನೌಕಾಪಡೆ ನಿಬಂಧನೆ ಹಾಕಿತ್ತು. ಈಗಂತೂ ಕಲ್ನಾರಿಗೆ ಬದಲೀ ಸಾಮಗ್ರಿಗಳು ಬೇಕಷ್ಟಿವೆ. ಆದರೂ ಇದರ ಬಳಕೆ ಯಾಕೊ? ಅಂದಹಾಗೆ, ಅತಿ ದೊಡ್ಡ ಪ್ರಮಾಣದಲ್ಲಿ ಕಲ್ನಾರಿನ ಶೀಟ್‌ಗಳನ್ನು ಉತ್ಪಾದಿಸುವ ‘ಎವರೆಸ್ಟ್‌’ ಕಂಪನಿಯ ಹೆಚ್ಚುಗಾರಿಕೆ ಏನು ಗೊತ್ತೆ? ತಂಬಾಕು ಸೇವಿ ಸುವವರ ಕ್ಯಾನ್ಸರ್‌ ಚಿಕಿತ್ಸೆಗೆ ಅದು ದೇಣಿಗೆ ನೀಡುತ್ತಿದೆ!

ಧಾರಾಳ ದೇಣಿಗೆ ಕೊಟ್ಟರೆ ನಮ್ಮ ದೇಶದಲ್ಲಿ ಯಾರನ್ನೂ ಓಲೈಸಬಹುದು. ಯಾರನ್ನೂ ಮಸಣಕ್ಕಟ್ಟ ಬಹುದು. ಇಟಲಿಯ ಆದರ್ಶ ಯಾರಿಗೆ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT