ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ | ಈ ಹೆಜ್ಜೆಗುರುತು ಅಚ್ಚ, ದಟ್ಟ

ವಿಜ್ಞಾನದ ಪ್ರೆಶರ್‌ ಕುಕ್ಕರ್‌ನಲ್ಲಿ ಕೊರೊನಾ ಪೂರ್ತಿ ಕರಗಿತೇ?
Published 13 ಮಾರ್ಚ್ 2024, 23:52 IST
Last Updated 13 ಮಾರ್ಚ್ 2024, 23:52 IST
ಅಕ್ಷರ ಗಾತ್ರ

ನಿದ್ರಿತ ಜ್ವಾಲಾಮುಖಿ ತಾನು ಸಿಡಿಯುವ ಮುನ್ನ ನೆಲವನ್ನು ನಡುಗಿಸುತ್ತದೆ; ಆಳದಲ್ಲೆಲ್ಲೋ ಗುಡುಗಿನ ಸದ್ದನ್ನು ಹೊಮ್ಮಿಸುತ್ತದೆ. ತುಸುವೇ ಹೊಗೆಯನ್ನು ಫೂತ್ಕರಿಸುತ್ತದೆ. ನಾಲ್ಕು ವರ್ಷಗಳ ಹಿಂದೆ 2020ರಲ್ಲಿ ಇದೇ ವಾರ ಇಂಥದ್ದೇ ಗುಡುಗು, ಕಂಪನ ಆರಂಭವಾಗಿತ್ತು. ಕೋವಿಡ್‌ ಮಾರಿಯ ರಂಗಪ್ರವೇಶದ ಕ್ಷಣ ಅದಾಗಿತ್ತು. ಚೀನಾ, ಕೊರಿಯಾ, ತೈವಾನ್‌, ಅಮೆರಿಕ, ಯುರೋಪ್‌ ದೇಶಗಳಲ್ಲಿ ಅದರ ಸದ್ದು ಕೇಳಬರುತ್ತಿತ್ತು. ಆ ಎಲ್ಲ ದೇಶಗಳಿಂದ ದಿನವೂ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಸಾಫ್ಟ್‌ವೇರ್‌ ತಜ್ಞರ ಮೂಲಕ ಮಹಾಮಾರಿ ಇಲ್ಲೇ ಮೊದಲಿಗೆ ತನ್ನ ಕುಣಿತವನ್ನು ಆರಂಭಿಸಿತ್ತು.

ನಂತರದ ಕರಾಳ ಘಟನೆಗಳನ್ನು ನೆನಪಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ನಾವೆಲ್ಲ ಮುಖವಾಡಗಳನ್ನು ಬಿಸಾಕಿ, ಮರೆವಿನ ಮುಸುಕು ಹೊದೆದು ಎಂದಿನಂತಾಗಿದ್ದೇವೆ. ಆದರೂ ಮಗ್ಗುಲು ಬದಲಿಸಿದಾಗ ಅದರ ಚೂಪು ಚೂರುಗಳು ಆಗಾಗ ಚುಚ್ಚುತ್ತವೆ. ಮನುಕುಲದ ಎಲ್ಲ ಮಹೋನ್ನತ ಸಾಧನೆಗಳೂ ವೈಫಲ್ಯಗಳೂ ಆ ಚೂರುಗಳಲ್ಲಿ ಪ್ರತಿಫಲಿಸುತ್ತವೆ.

ಮಾರ್ಚ್‌ 8ರಂದು ಮೊದಲ ಕೋವಿಡ್‌ ಪ್ರಕರಣ ಕರ್ನಾಟಕದಲ್ಲಿ ದಾಖಲಾಯಿತು. ಡೆಲ್‌, ಮೈಂಡ್‌ಟ್ರೀ, ಟಿಐ, ಗೂಗಲ್‌ ಕಂಪನಿಗಳ ಸಿಬ್ಬಂದಿ ಆಸ್ಪತ್ರೆಗೆ ದಾಖಲಾದರು. ಎರಡು ದಿನಗಳ ನಂತರ, 1897ರ ಮಹಾಮಾರಿ ಕಾಯಿಲೆಯ ಅಧಿನಿಯಮಗಳನ್ನು ಕರ್ನಾಟಕ ಜಾರಿಗೆ ತಂದಿತು. ನಮ್ಮದು ಅಂಥ ಕ್ರಮ ಕೈಗೊಂಡ ಮೊದಲ ರಾಜ್ಯವೆನಿಸಿತು.

‘ಇದು ಮಹಾಮಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್‌ 11ರಂದು ಘೋಷಿಸಿತು. ಕಾಕತಾಳೀಯ ಎಂಬಂತೆ, ದಿಲ್ಲಿಯಲ್ಲಿ ತಬ್ಲಿಘಿ ಜಮಾತ್‌ನ ಅಂತರರಾಷ್ಟ್ರೀಯ ಸಮಾವೇಶ ನಡೆದು ಕೆಲವರು ತಂತಮ್ಮ ಊರಿಗೆ ಹೊರಡತೊಡಗಿದ್ದರು. ಕಾಯಿಲೆಯನ್ನು ದೇಶದಾದ್ಯಂತ ಹಬ್ಬಿಸಲೆಂದೇ ನಡೆದ ಪಿತೂರಿ ಇದು ಎಂದು (ಯಾರೋ ಕ್ಲೂ ಕೊಟ್ಟಂತೆ) ಏಕಾಏಕಿ ಗೋದಿ ಮಾಧ್ಯಮಗಳಲ್ಲಿ ಹುಯಿಲೆದ್ದಿತು. ಅವರನ್ನು ಕಂಡಲ್ಲಿ ಗುಂಡಿಕ್ಕಿ ಎಂದು ರಾಜಕಾರಣಿಯೊಬ್ಬ ಅಬ್ಬರಿಸಿದ್ದೂ ಆಯಿತು. ಆ ವಿಕಾರಗಳನ್ನೆಲ್ಲ ಬದಿಗಿಡೋಣ.
ವಿಜ್ಞಾನಿಗಳು ಕಲಿತ ಪಾಠ ಏನು ಅದನ್ನಷ್ಟೇ ಮೊದಲು ನೋಡೋಣ:

ಹಿಂದೆ 1918-20ರಲ್ಲಿ ಸಿಡಿದೆದ್ದ ಇನ್‌ಫ್ಲುಯೆಂಝಾ (ಫ್ಲೂ) ಜಗತ್ತಿನಾದ್ಯಂತ ಅಂದಾಜು ಎರಡು ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಅದೇ ಮತ್ತೊಮ್ಮೆ ದಾಳಿ ಮಾಡೀತೆಂದು ವಿಜ್ಞಾನಿಗಳು ಹೇಳುತ್ತಲಿದ್ದರು.
ಆದರೆ ಫ್ಲೂ ವೈರಸ್‌ ಬದಲು ಕೊರೊನಾ ವಕ್ಕರಿಸಿ ವೈದ್ಯರಂಗವನ್ನು ತಬ್ಬಿಬ್ಬುಗೊಳಿಸಿತು. (ಇವೆರಡರ
ನಡುವೆ ನಾಲ್ಕಾರು ಪ್ರಮುಖ ವ್ಯತ್ಯಾಸಗಳಿವೆ, ಅವು ಸದ್ಯಕ್ಕೆ ಬೇಡ). ನಾವು ನಿರೀಕ್ಷಿಸಿದ್ದೇ
ಒಂದು, ಆಗಿದ್ದೇ ಇನ್ನೊಂದು ಎಂಬಂತಾಯಿತು.

ಕೋವಿಡ್‌ ಅಧ್ಯಾಯ ಮುಗಿದಿದೆ ಎಂದು ಭಾವಿಸಿದ್ದರೆ ಅದು ತಪ್ಪು. ಕೋವಿಡ್‌ ಕಾಯಿಲೆಯನ್ನು ಗೆದ್ದು ಬಂದ ಅನೇಕರು ಈಗಲೂ ಅದರ ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಅದಕ್ಕೆ ದೀರ್ಘ ಕೋವಿಡ್‌ ಎನ್ನುತ್ತಾರೆ. ನಿರಂತರ ಸುಸ್ತು, ವಿವರಣೆಗೆ ಸಿಗದ ಅಸೌಖ್ಯ, ವ್ಯಾಯಾಮ ಮಾಡಲಾಗದ ಸ್ಥಿತಿ, ಹಿಂದೆಂದೋ ವಾಸಿಯಾಗಿದ್ದ ಆಸ್ತಮಾ ಈಗ ಉಲ್ಬಣ- ಹೀಗೆ ವೈದ್ಯರಿಗೂ ಅರ್ಥವಾಗದ ಲಕ್ಷಣಗಳು ಹೆಚ್ಚುತ್ತಿವೆ. ಹೃದ್ರೋಗ, ಲಕ್ವ ಪ್ರಕರಣಗಳೂ ಹೆಚ್ಚುತ್ತಿವೆ. ಅಮೆರಿಕದಲ್ಲಿ 115 ಕೋಟಿ ಡಾಲರ್‌ ವೆಚ್ಚದಲ್ಲಿ ಸುದೀರ್ಘ ಸಮೀಕ್ಷೆ ನಡೆಸಿ ಅಲ್ಲಿನ ಶೇಕಡಾ 7ರಷ್ಟು ಜನರಿಗೆ ಈ ಲಕ್ಷಣಗಳಿವೆ ಎಂದು ಹೇಳಲಾಗಿದೆ. ನಮ್ಮಲ್ಲಿ ಅದು ಜಾಸ್ತಿಯೇ ಇದ್ದೀತು ಎಂದು ಮುಂಬೈಯ ಹಿಂದುಜಾ ಆಸ್ಪತ್ರೆಯ ತಜ್ಞ ಡಾ. ಲಾನ್ಸೆಲಾಟ್‌ ಪಿಂಟೊ ಹೇಳುತ್ತಾರೆ. ಅಂಥ ರೋಗಿಗಳಿಗೆ ವಿಟಮಿನ್‌ ಮಾತ್ರೆಗಳನ್ನು ಬಿಟ್ಟರೆ ಬೇರೇನನ್ನೂ ಶಿಫಾರಸು ಮಾಡಲಾಗದ ಹತಾಶ ಸ್ಥಿತಿ ನಮ್ಮದು ಎಂತಲೂ ಅವರು ಹೇಳುತ್ತಾರೆ.

ಕೆಲವರಿಗೆ (ಶೇಕಡಾ 20ರಷ್ಟು ಜನರಿಗೆ) ಕೋವಿಡ್‌ನ ಯಾವ ಲಕ್ಷಣಗಳೂ ಇರಲಿಲ್ಲ. ಅದಕ್ಕೆ ಅವರ ತಳಿಗುಣದಲ್ಲಿರುವ ಎಚ್‌ಎಲ್‌ಎ ಎಂಬ ಪ್ರೋಟೀನಿನ ವಿಶಿಷ್ಟ ರೂಪವೇ ಕಾರಣ ಎಂದು ನೇಚರ್‌ ಪತ್ರಿಕೆಯಲ್ಲಿ 35 ವಿಜ್ಞಾನಿಗಳ ಜಂಟಿ ಸಂಶೋಧನಾ ಪ್ರಬಂಧದಲ್ಲಿ ಹೇಳಲಾಗಿದೆ. ಅವರು 29,947 ಜನರ ಮೂಳೆ ಮಜ್ಜೆಯ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷಿಸಿ ಈ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ಕಾಯಿಲೆಗೆ ತುತ್ತಾಗದವರು ಕೊರೊನಾ ವೈರಾಣುವನ್ನು ಸಲೀಸಾಗಿ ಒಬ್ಬರಿಂದ ಪಡೆದು ಇನ್ನೊಬ್ಬರಿಗೆ ದಾಟಿಸುತ್ತ ಹೋಗಿದ್ದಾರೆ.

ಎಲ್ಲ ದೇಶಗಳಲ್ಲಿ ಎಳೆಯರಲ್ಲಿ ಮಧುಮೇಹ (ಟೈಪ್‌1 ಡಯಾಬಿಟೀಸ್‌) ಹೆಚ್ಚಾಗಿದೆ. ಪ್ರತಿಷ್ಠಿತ ಜಾಮಾ (JAMA, ಅಮೆರಿಕದ ವೈದ್ಯಸಂಘದ ಪತ್ರಿಕೆ) ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ 2021-22ರಲ್ಲಿ ಸಕ್ಕರೆ ಕಾಯಿಲೆಯುಳ್ಳ ಮಕ್ಕಳ ಸಂಖ್ಯೆ ಶೇ 14ರಷ್ಟು ಹೆಚ್ಚಾಗಿತ್ತು; ನಂತರ ಶೇ 27ರಷ್ಟು ಹೆಚ್ಚಾಗಿದೆ. ಇದಕ್ಕೆ ಕೋವಿಡ್‌ ಕಾರಣವೊ ಅಥವಾ ಲಾಕ್‌ಡೌನ್‌ ಕಾರಣವೊ ಗೊತ್ತಾಗಿಲ್ಲ.

ಬ್ರಿಟಿಷ್‌ ವೈದ್ಯಕೀಯ ಸಂಘದ (ಬಿಎಮ್‌ಜೆ) ಸಮೀಕ್ಷೆಯ ಪ್ರಕಾರ ಶಾಖಾಹಾರಿಗಳು ಮತ್ತು (ಹಾಲು ಜೇನನ್ನೂ ಮುಟ್ಟದ) ವೀಗನ್‌ಗಳಲ್ಲಿ ಕೋವಿಡ್‌ ಕಾಯಿಲೆಯ ಸಂಭವನೀಯತೆ ಶೇ 37ರಷ್ಟು ಕಡಿಮೆ
ಇತ್ತು. ಏಕೆಂದರೆ ಸಸ್ಯಾಹಾರದಲ್ಲಿ ನಮ್ಮ ರೋಗನಿರೋಧಕ ವ್ಯವಸ್ಥೆಗೆ ಹೆಚ್ಚಿನ ಬಲ ಕೊಡಬಲ್ಲ ಆಂಟಿಆಕ್ಸಿಡಂಟ್‌, ಫೈಟೊಸ್ಟೆರಾಯಿಡ್‌ ಮತ್ತು ಪಾಲಿಫಿನಾಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ.

ಜಗತ್ತಿನ ಎಲ್ಲ ದೇವರುಗಳನ್ನು ದಿಗ್ಬಂಧನದಲ್ಲಿಟ್ಟು ಸಂಶೋಧನ ಲ್ಯಾಬ್‌ಗಳು ಎಲ್ಲೆಲ್ಲೂ ತೆರೆದುಕೊಂಡವು. ವೈರಾಣುವನ್ನು ಹಿಮ್ಮೆಟ್ಟಿಸಬಲ್ಲ ಲಸಿಕೆ ತಯಾರಿಸಲು ಹಿಂದೆಲ್ಲ ಐದಾರು ವರ್ಷಗಳೇ ಬೇಕಾಗಿದ್ದವು. ಒಂದೇ ವರ್ಷದಲ್ಲಿ ಹೊಸ ಲಸಿಕೆ ಬಂದು, ಅದರ ಅಡ್ಡ ಪರಿಣಾಮಗಳ ತ್ವರಿತ ಅಧ್ಯಯನವೂ ನಡೆದು, ಸಾಲುಸಾಲು ಸರ್ಕಾರಗಳಿಂದ ಅದಕ್ಕೆ ಮಾನ್ಯತೆಯೂ ಸಿಕ್ಕು, ವಿಮಾನಗಳ ಮೂಲಕ (ರೋಗ ಹರಡಿದಷ್ಟೇ ತ್ವರಿತವಾಗಿ) ಚುಚ್ಚುಮದ್ದಿನ ವಿತರಣೆಯೂ ನಡೆಯಿತು. ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿಸಿ ಒಂದೇ ವರ್ಷದಲ್ಲಿ 15 ಲಕ್ಷಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾದವು. ‘ವಿಜ್ಞಾನದ ಪ್ರೆಶರ್‌ ಕುಕ್ಕರ್‌ನಲ್ಲಿ ಹಿಂದೆಂದೂ ಕಂಡಿರದಷ್ಟು ಒತ್ತಡ ಏರ್ಪಟ್ಟಿತು’ ಎಂದು ಬಿಬಿಸಿಯ ‘ಸೈನ್ಸ್‌ ಫೋಕಸ್‌’ ಪತ್ರಿಕೆ ಈಚಿನ ಸಮೀಕ್ಷೆಯಲ್ಲಿ ಹೇಳಿದೆ.

ಲ್ಯಾಬ್‌ಗಳಲ್ಲಿ ವೈರಾಣುವಿನ ಮುಳ್ಳುಮುಖದ ಪರೀಕ್ಷೆ ನಡೆಯುತ್ತಿದ್ದಾಗ ಹೊರಗಿನ ಸಮಾಜದಲ್ಲಿ ಅವೈಜ್ಞಾನಿಕ ಆಚರಣೆಗಳ ಬಹುಮುಖೀ ಕುಣಿತ ನಡೆಯುತ್ತಿತ್ತು. ಗಂಟೆ, ಜಾಗಟೆ, ಆರತಿಗಳ ಭರಾಟೆಯ ಮಧ್ಯದಲ್ಲೇ ಔಷಧಗಳ ಕಾಳಸಂತೆ, ನಕಲಿ ಸಸ್ಯೌಷಧಗಳ ಮಹಾಪ್ರಚಾರ ನಡೆದವು. ಭಯದ ಪಿಡುಗನ್ನು ಎಲ್ಲೆಡೆ ಹಬ್ಬಿಸುವಲ್ಲಿ ದೃಶ್ಯಮಾಧ್ಯಮಗಳು ಅಹೋರಾತ್ರಿ ಡೋಲು ಬಜಾಯಿಸು
ತ್ತಿದ್ದಾಗ ಮಹಾಮಾರಿಯ ಕುಣಿತದ ಜೊತೆಗೇ ಮನುಷ್ಯನ ಎಲ್ಲ ವಿಕಾರಗಳ ರೋಚಕ ಕುಣಿತ ನಡೆದವು.

ಅಂತೂ ‘ಹೇಗಾದರೂ ಈ ಪಿಡುಗು ಮುಗಿದು ಮಾಮೂಲಿನ ದಿನಗಳು ಮತ್ತೆ ಬರಲಪ್ಪಾ’ ಎಂದು ಎಲ್ಲರೂ ಹಾರೈಸುತ್ತಿದ್ದಾಗ ಲಸಿಕೆ ಬಂತು. ನಮ್ಮ ಮಾಮೂಲಿನ ದಿನಗಳೇ ಮಹಾಮಾರಿಗೆ ಕಾರಣವಾಗಿದ್ದು ಎಂದು ಪುಲಿಟ್ಸರ್‌ ಪ್ರಶಸ್ತಿ ವಿಜೇತ ಪತ್ರಕರ್ತ ಎಡ್‌ ಯಂಗ್‌ ಹೇಳಿದ್ದೂ ದಾಖಲಾಯಿತು. ಅವಿರತ ಸುತ್ತಾಟ, ನಿಸರ್ಗದ ನಿರಂತರ ನಾಶ, ಎಗ್ಗಿಲ್ಲದ ಭೋಗಲಾಲಸೆ- ಇವೆಲ್ಲ ನಮ್ಮ ಮಾಮೂಲಿ ದಿನಗಳು ತಾನೆ?

ಮಾನವ ಸಮಾಜದ ಎಲ್ಲ ಅಸಮಾನತೆಗಳನ್ನೂ ಕೊರೊನಾ ಹಿಗ್ಗಿಸಿ ಬಿಚ್ಚಿಟ್ಟಿತು ಎಂದು ಮಿಲಿಂಡಾ ಗೇಟ್ಸ್‌ ಹೇಳಿದರು. ಮೊದಲಿನಿಂದಲೂ ಅಸಮಾನತೆ ಜಾಸ್ತಿ ಇದ್ದ ನಮ್ಮ ಸಮಾಜದಲ್ಲಂತೂ ನಾನಾ ಬಗೆಯ ಕಂದರಗಳ ಆಳ ಅಗಲ ಹೆಚ್ಚಾಯಿತು. ಹೊಸ 40 ಧನಿಕರು ಜಾಗತಿಕ ಶತಕೋಟ್ಯಧೀಶರ ಪಟ್ಟಿಗೆ ಸೇರ್ಪಡೆಯಾದರು. ಗೌತಮ್‌ ಅದಾನಿಯವರು 20 ಸ್ಥಾನಗಳಷ್ಟು ಮೇಲಕ್ಕೇರಿದರು. ಬಡವರು ಇನ್ನಷ್ಟು ತಳಕ್ಕಿಳಿದರು. ಸಣ್ಣ ಉದ್ಯಮಗಳು ನೆಲ ಕಚ್ಚಿದವು. ಡಿಜಿಟಲ್‌ ಡಿವೈಡ್‌ ಎಂಬ ಹೊಸ ಕಂದರ ತೆರೆದುಕೊಂಡಿತು. ನೆಟ್‌ವರ್ಕ್‌ ಅಥವಾ ಮೊಬೈಲ್‌ ಫೋನ್‌ ಇಲ್ಲದವರು ಹಿಂದೆಯೇ ಉಳಿದರು.

‘ಕಂಟಕ ಕಳೆದು ಕೊನೆಗೂ ಒಳ್ಳೆಯ ದಿನ ಬರಲೇಬೇಕು. ಬಂದಿಲ್ಲವೆಂದರೆ ಕಂಟಕ ಕಳೆದಿಲ್ಲ’ ಎಂದು ಹೇಳಿದ ಹಾಡುಗಾರ ಜಾನ್‌ ಲೆನ್ನನ್‌ನ ಮಾತು ಈಗ ನೆನಪಾಗುತ್ತದೆ. ಹೊಸ ಅರ್ಥ ಹೊಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT