ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗು-ಮಿಂಚುಗಳಲ್ಲಿ ‘ಪ್ಲಾಸ್ಮಾ ಜಲ’

ಎಲೆಲ್ಲೂ ಹಸುರುಕ್ಕಿಸಬಲ್ಲ ಗುಡುಗು, ಮಿಂಚನ್ನು ಫ್ಯಾಕ್ಟರಿಗಳಲ್ಲೂ ಸೃಷ್ಟಿಸಿ ಕೃಷಿಗೆ ಹೊಸ ದಿಶೆ ಕೊಡಬಹುದೆ?
Last Updated 13 ಜೂನ್ 2019, 2:44 IST
ಅಕ್ಷರ ಗಾತ್ರ

‘ಕಾಲೇ ಮೇಘಾ, ಕಾಲೇ ಮೇಘಾ ಮಳೆ ಸುರಿಸೋ ಬೇಗ! ಮಿಂಚಿನ ಖಡ್ಗವ ಬೀಸಿದ್ದು ಸಾಕು, ಮಳೆಹನಿಯ ಬಾಣದ ಸುರಿಮಳೆ ಬೇಕು’ ಎಂಬ ‘ಲಗಾನ್’ ಚಿತ್ರದ ಹಾಡನ್ನು ಈ ದಿನಗಳಲ್ಲಿ ಕೇಳುವುದೇ ಸೊಗಸು. ಗುಡುಗು, ಮಿಂಚು, ಸಿಡಿಲು ಇವೆಲ್ಲ ಸಂಭ್ರಮವಾಗಿ, ಮಿಗಿಲಾಗಿ ದಿಗಿಲಾಗಿ ಅನಾದಿ ಕಾಲದಿಂದ ನಮ್ಮ ಚಿತ್ತಸೆತ್ತೆಯಲ್ಲಿ ಅಚ್ಚೊತ್ತಿ ಕೂತಿವೆ.

ಮಿಂಚು ಛಕ್ಕೆಂದರೆ ಸಾಕು, ಮಳೆಯ ಒಂದೇ ಒಂದು ಹನಿ ಬೀಳದಿದ್ದರೂ ಗಿಡಮರಗಳೆಲ್ಲ ಹಸಿರಾಗುವ ಸೋಜಿಗವನ್ನು ನಾವು ನೋಡಿದ್ದೇವೆ. ಉತ್ತರ ಕರ್ನಾಟಕದ ಅನೇಕ ಕಡೆ ಈಗಲೂ ಹನಿ ಮಳೆ ಬಿದ್ದಿಲ್ಲ. ಆದರೆ ಎಲ್ಲೆಲ್ಲೂ ಹಸಿರು ಉಕ್ಕುತ್ತಿದೆ. ಇದು ಹೀಗೇಕೆಂದು ಯಾರೂ ಪ್ರಶ್ನಿಸುತ್ತಿಲ್ಲ; ಏಕೆಂದರೆ ಎಲ್ಲೋ ರಾತ್ರಿವೇಳೆ ತುಂತುರು ಮಳೆ ಬಿದ್ದಿತ್ತೆಂದು ಅಂದುಕೊಳ್ಳುತ್ತಾರೆ. ಆದರೆ ನಿಜಕ್ಕೂ ಮಳೆಹನಿಯ ಸೋಂಕಿಲ್ಲದೇ ಗಿಡಗಳು ಚಿಗುರುತ್ತವೆ. ಸಿಡಿಲು ಗರ್ಜಿಸಿದರೆ ಸಾಕು, ಅಣಬೆಗಳು ಪುತಪುತನೆ ನೆಲದಿಂದ ಮೇಲಕ್ಕೆ ಏಳುತ್ತವೆ. ಈ ವೈಚಿತ್ರ್ಯಕ್ಕೆ ಕಾರಣ ಏನೆಂದರೆ, ಮೋಡಗಳಲ್ಲಿ ಕರೆಂಟ್ ಹೊಮ್ಮಿ ಕಿಡಿ ಸಿಡಿಯುವಾಗ ಅಪಾರ ಪ್ರಮಾಣದ ಶಾಖ ಉಂಟಾಗುತ್ತದೆ. ಅನಿಲದ ಕಣಗಳು ತೀರಾತೀರಾ ಬಿಸಿಯಾಗಿ ಪ್ಲಾಸ್ಮಾ ರೂಪಕ್ಕೆ ಬರುತ್ತವೆ. ಅಲ್ಲಿ ಆಮ್ಲಜನಕವೂ ಒಡೆದು, ಸಾರಜನಕವೂ ಒಡೆದು, ಅರಳು ಹುರಿದಂತಾಗಿ ಮಿಸಳಭಾಜಿಯಾಗುತ್ತದೆ. ಆಮ್ಲಜನಕಕ್ಕೆ ಆಮ್ಲಜನಕದ್ದೇ ಮತ್ತೊಂದು ಅಣು ಸೇರಿಕೊಂಡು ಓಝೋನ್ ಆಗುತ್ತದೆ. ಸಾರಜನಕಕ್ಕೆ ಆಮ್ಲಜನಕ ಸೇರಿಕೊಂಡು ಹೊಸರೂಪ ತಾಳಿ ನೈಟ್ರಸ್ ಮತ್ತು ನೈಟ್ರಿಕ್ ಆಕ್ಸೈಡ್ ಆಗುತ್ತವೆ (ಹೃದಯಾಘಾತ ಆದಾಗ ರೋಗಿಯ ರಕ್ತನಾಳವನ್ನು ಹಿಗ್ಗಿಸಲು ನೈಟ್ರಿಕ್ ಆಕ್ಸೈಡ್ ರಾಮಬಾಣ). ಸಾರಜನಕದ ಈ ಹೊಸ ರೂಪಗಳು ನೆಲಕ್ಕೂ ತಲುಪಿ ನೇರವಾಗಿ ಗಿಡಗಳ ಅಂಗಾಂಶಕ್ಕೆ, ಮಣ್ಣಿನೊಳಕ್ಕೆ ತೂರಿಕೊಳ್ಳುತ್ತವೆ. ಮಣ್ಣಿನಲ್ಲಿ ಅವಿತಿದ್ದ ಶಿಲೀಂಧ್ರದ ಕಣಬೀಜಗಳಿಗೆ ಆಗ ಹೊಸ ಉಸಿರು. ಸಸ್ಯಗಳಿಗೆ ಎಲ್ಲೆಲ್ಲೂ ಹೊಸ ಚಿಗುರು, ಹೊಸ ಹಸುರು!

ಮಳೆಹನಿಯ ಸ್ಪರ್ಶವೂ ಇಲ್ಲದೆ ಹಸುರುಕ್ಕಿಸುವ ಈ ತಂತ್ರವನ್ನು ಬೇಸಾಯಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲವೆ? ಫ್ಯಾಕ್ಟರಿಗಳಲ್ಲಿ ವಿದ್ಯುತ್ತಿನಿಂದ ಕೋಲ್ಮಿಂಚನ್ನು, ಪ್ಲಾಸ್ಮಾ ಮೇಘವನ್ನು ಸೃಷ್ಟಿ ಮಾಡಬಹುದಲ್ಲವೆ? ರಸಗೊಬ್ಬರದ ಗೊಡವೆಯೇ ಇಲ್ಲದೆ ಗಿಡಗಳನ್ನು ಬೆಳೆಸಬಹುದಲ್ಲವೆ? ಹೌದು, ಅಂಥ ಯಶಸ್ವೀ ಪ್ರಯತ್ನಗಳು ನಡೆದಿವೆ; ಅದನ್ನು ಆಮೇಲೆ ನೋಡೋಣ. ಮೋಡ, ಮಿಂಚು, ಹೊಸ ತುಂತುರುಗಳಲ್ಲಿ ಇನ್ನಷ್ಟು ಕೌತುಕಗಳಿವೆ, ಅವನ್ನು ಮೊದಲು ನೋಡೋಣ.

ಮಳೆಯ ಮೊದಲ ಸಿಂಚನದ ಜೊತೆ ಒಂದು ಬಗೆಯ ಘಮಲು ಸೂಸುವುದು ನಮಗೆಲ್ಲ ಗೊತ್ತಿದೆ. ಎಲ್ಲರಿಗೂ ಇಷ್ಟವಾಗುವ ಹೊಸಮಳೆಯ ಆ ಪರಿಮಳಕ್ಕೆ ವಿಜ್ಞಾನಿಗಳು ‘ಪೆಟ್ರಿಕೋರ್’ ಎನ್ನುತ್ತಾರೆ. ಪೆಟ್ರಿ ಅಂದರೆ ಕಲ್ಲು, ಕೋರ್ ಅಂದರೆ ದೇವರ ಜೀವರಸ. (ಗ್ರೀಕ್ ಪುರಾಣಗಳ ಪ್ರಕಾರ ದೇವತೆಗಳ ನರನಾಡಿಗಳಲ್ಲಿ ರಕ್ತದ ಬದಲು ಪರಿಮಳದ ರಸವೊಂದು ಹರಿಯುತ್ತಿರುತ್ತದೆ; ಅದು ಕೋರ್.) ಮೊದಲ ಮಳೆಬಿದ್ದಾಗ ಪೆಟ್ರಿಕೋರ್ ಪರಿಮಳ ಹೊಮ್ಮಲು ಕಾರಣ ಏನೆಂದು 1964ರಲ್ಲಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಪತ್ತೆ ಹಚ್ಚಿದರು. ಬೇಸಿಗೆ ಬರುತ್ತಲೇ ಸಸ್ಯಗಳು ಒಂದುಬಗೆಯ ತೈಲವನ್ನು ಗಾಳಿಗೆ ಸೂಸುತ್ತವೆ. ಅಂಥ ತೈಲದ ಕಣಗಳೆಲ್ಲ ನಿಧಾನವಾಗಿ ಕಲ್ಲು, ಮಣ್ಣು, ಮರಳಿನ ಮೇಲೆ ತೀರ ತೆಳುವಾಗಿ ಹಾಸಿರುತ್ತವೆ. ಮಳೆಹನಿಯ ಸ್ಪರ್ಶವಾಗುತ್ತಲೇ ಅವು ನೆಲದಿಂದ ಮೇಲೆದ್ದು ಗಾಳಿಗೆ ಸೇರುತ್ತವೆ. ಪರಿಮಳದ ಕಣಗಳು ನೆಲದಿಂದೆದ್ದು ಗಾಳಿಗೆ ಸೇರುವ ದೃಶ್ಯವನ್ನು ಅಮೆರಿಕದ ಎಮ್‍ಐಟಿಯ ವಿಜ್ಞಾನಿಗಳು ನಾಲ್ಕು ವರ್ಷಗಳ ಹಿಂದೆ ಹೈಸ್ಪೀಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಆಸಕ್ತರು ಯೂಟ್ಯೂಬ್‍ನಲ್ಲಿ (petrichor m.i.t.) ನೋಡಬಹುದು. ನೆನಪಿಡಿ, ಮೊದಲ ತೆಳುಮಳೆ ಮುಗಿದ ನಂತರ ಈ ಪರಿಮಳ ಇರುವುದಿಲ್ಲ.

ಸಸ್ಯಗಳು ಯಾಕೆ ಈ ತೈಲವನ್ನು ಬಿಡುಗಡೆ ಮಾಡುತ್ತವೆ ಎಂಬುದಕ್ಕೂ ಸ್ವಾರಸ್ಯದ ಕಾರಣವಿದೆ. ಮೊದಲ ಮಳೆಗೇ ಬೀಜ ಮೊಳಕೆ ಆಗಬಾರದು ಎಂಬ ಸಂದೇಶ ಅದರಲ್ಲಿದೆ. ಸಂದೇಶ ಅನ್ನಿ, ರಕ್ಷಾಕವಚ ಅನ್ನಿ, ಅಂತೂ ಬೀಜ ಈ ಮಳೆಯಿಂದಾಗಿ ಅವಸರದಲ್ಲಿ ಮೊಳಕೆ ಬರಿಸಿ ಮೋಸ ಹೋಗುವುದಿಲ್ಲ. ನಿಜವಾದ ಮಳೆಗಾಲ ಆರಂಭವಾದ ನಂತರವೇ ಮೊಳಕೆ ಹೊಮ್ಮುತ್ತದೆ. ನಮಗಷ್ಟೇ ಅಲ್ಲ, ಸಸ್ಯ, ಪ್ರಾಣಿ-ಪಕ್ಷಿಗಳ ನರನಾಡಿಗಳಲ್ಲೂ ಪೆಟ್ರೊಕೋರ್ ಪರಿಮಳ ಹೊಸ ಸಂಭ್ರಮವನ್ನು ಮೂಡಿಸುತ್ತದೆ; ನಮ್ಮ ಮಿದುಳಿನಲ್ಲಿ ಆ ನೆನಪು ಎಷ್ಟು ಆಳವಾಗಿ ರೆಕಾರ್ಡ್ ಆಗಿದೆ ಎಂದರೆ ಗಾಳಿಯಲ್ಲಿ ಪೆಟ್ರೊಕೋರ್ ಅಂಶ 0.7 ಪಿಪಿಬಿಯಷ್ಟು (ಪಿಪಿಬಿ ಎಂದರೆ ಶತಕೋಟಿಯಲ್ಲಿ ಒಂದು ಪಾಲು) ಅನಂತಾಲ್ಪ ಪ್ರಮಾಣದಲ್ಲಿದ್ದರೂ ಅದು ನಮಗೆ ಗೊತ್ತಾಗುತ್ತದೆ. ಆದರೆ ನಿಲ್ಲಿ, ಪೆಟ್ರಿಕೋರ್ ಒಂದೇ ಅಲ್ಲ, ಅದರಲ್ಲಿ ಮಣ್ಣಿನ ವಾಸನೆಯೂ ಸೇರಿರುತ್ತದೆ. ಅದಕ್ಕೂ ಕೌತುಕದ ಕಾರಣವಿದೆ: ಭೂಮಿಯ ಯಾವುದೇ ಭಾಗದಲ್ಲಿ ಅಗೆದರೂ ಮಣ್ಣಿನಲ್ಲಿ ಆಕ್ಟಿನೊ ಮೈಕ್ರೋಬ್ ವರ್ಗದ ಸೂಕ್ಷ್ಮಾಣು ಜೀವಿಗಳಿವೆ. ಹೊಸ ಹೂಜಿಯ ನೀರಿನಲ್ಲಿ, ಬೀಟ್‍ರೂಟ್‍ನಲ್ಲಿ ಈ ವಾಸನೆ ಬರಲು ಅವೇ ಸೂಕ್ಷ್ಮಾಣುಗಳು ಕಾರಣ. ಮಣ್ಣಿನ ಈ ವಾಸನೆಗೆ ‘ಜಿಯೊಸ್ಮಿನ್’ ಎನ್ನುತ್ತಾರೆ. ನೀರಿನ ಸ್ಪರ್ಶಕ್ಕೆ ಬಂದಾಗ ಈ ವಾಸನೆ ಗಾಳಿಗೆ ಸೇರಿ ನಮ್ಮ ಮೂಗಿಗೆ ಬಡಿಯುತ್ತದೆ. ಒಂಟೆಗಳು ಹದಿನೈದು ಕಿಲೊಮೀಟರ್ ದೂರದಿಂದಲೇ ಒಯಸಿಸ್ ಇರುವ ದಿಕ್ಕನ್ನು ಗುರುತಿಸಲು ಈ ಸೂಕ್ಷ್ಮಾಣು ಸಂದೇಶವೇ ಕಾರಣ. ನಮ್ಮ ಮೂಗಿಗೆ ಅಡರುವ ಪೆಟ್ರೊಕೋರ್ ಪರಿಮಳದಲ್ಲಿ ಈ ಸೂಕ್ಷ್ಮಾಣುಗಳ ಮೈವಾಸನೆ ಮತ್ತು ಕೆಲವೊಂದು ಬಾರಿ ಮಿಂಚಿನಿಂದ ಹೊಮ್ಮಿದ ಓಝೋನ್ ವಾಸನೆಯೂ ಸೇರಿರುತ್ತದೆ.

ಸರಿ, ಮಿಂಚಿನಿಂದ ಹಸುರುಕ್ಕಿಸುವ ತಂತ್ರಜ್ಞಾನಕ್ಕೆ ಈಗ ಬರೋಣ: ಗಾಜಿನ ಬುರುಡೆಯಲ್ಲಿ ವಿದ್ಯುತ್ ದಂಡಗಳ ಮೂಲಕ ಮಿಂಚನ್ನು ಸೃಷ್ಟಿಸುವುದು ಸುಲಭ. ಬುರುಡೆಯೊಳಗಿನ ಗಾಳಿಯಲ್ಲಿ ಹೇಗೂ ಶೇ 78ರಷ್ಟು ಸಾರಜನಕ ಇರುತ್ತದಲ್ಲ? ವಿದ್ಯುತ್ ಕಿಡಿ ಹೊಮ್ಮಿದಾಗ ಅಲ್ಲಿ ಅರಳು ಹುರಿದಂತೆ ಸಾರಜನಕ + ಆಮ್ಲಜನಕದ ಹೊಸ ಸಂಯುಕ್ತಗಳು ಸಿದ್ಧವಾಗುತ್ತವೆ. ಬುರುಡೆಯೊಳಕ್ಕೆ ನೀರಿನ ಹಬೆ ಹಾಯಿಸಿ ‘ಪ್ಲಾಸ್ಮಾ ಜಲ’ವನ್ನು ಪಡೆಯಬಹುದು. ಅದಕ್ಕೆ ‘ಪ್ಲಾಸ್ಮಾ ಆಕ್ಟಿವೇಟೆಡ್ ವಾಟರ್’ ಎನ್ನುತ್ತಾರೆ. ಕೃಷಿ ವಿಜ್ಞಾನಿಗಳಾದ ರೋಹಿತ್ ತಿರುಮದಾಸ್, ಉದಯ್ ಅಣ್ಣಾಪುರೆ ತಂಡದ ಸಂಶೋಧನೆಯ ಪ್ರಕಾರ ಈ ನೀರಿನಲ್ಲಿ ಅದ್ದಿದ ಬೀಜ ಚೆನ್ನಾಗಿ ಮೊಳಕೆ ಬರುತ್ತದೆ. ರೋಗಾಣು ಇರುವುದಿಲ್ಲ. ಸಸ್ಯದ ಬರನಿರೋಧಕ ಗುಣ ಹೆಚ್ಚುತ್ತದೆ, ಫಸಲಿನ ಇಳುವರಿ ಜಾಸ್ತಿಯಾಗುತ್ತದೆ; ರಸಗೊಬ್ಬರ, ಕೀಟನಾಶಕಗಳಿಲ್ಲದ ಸಹಜ ಸಮೃದ್ಧ ಕೃಷಿ ಸಾಧ್ಯವಿದೆ ಇತ್ಯಾದಿ ಇತ್ಯಾದಿ. ಈ ಪ್ಲಾಸ್ಮಾಜಲದ ಇನ್ನೂ ನೂರಾರು ಸದ್ಗುಣಗಳ ಬಗ್ಗೆ ಇದೀಗ ಚುರುಕಿನ ಸಂಶೋಧನೆ, ಉತ್ಸಾಹದ ಚರ್ಚೆ ಆರಂಭವಾಗಿದೆ. ಅದನ್ನು ಮಾಯಾಜಲ ಎಂಬಂತೆ ಬಿಂಬಿಸಲಾಗುತ್ತಿದೆ. ಈ ನೀರನ್ನೇ ಗಾಯವನ್ನು ತೊಳೆಯಲು, ಮೊಡವೆಯನ್ನು ತೆಗೆಯಲು, ಮಗುವಿಗೆ ಕುಡಿಸಲು, ಕ್ಯಾನ್ಸರ್ ಗುಣಪಡಿಸಲು, ಕೂದಲು ಬೆಳೆಸಲು... ಬಳಸಲು ಸಾಧ್ಯವೆಂದು ಹೇಳುತ್ತ ಇನ್ನೇನು ಹತ್ತಾರು ಕಂಪನಿಗಳು ಮನೆಮನೆಗೂ ನುಗ್ಗಬಹುದು. ಪ್ಲಾಸ್ಮಾ ನೀರನ್ನೂ ಅಷ್ಟೇಕೆ, ಪ್ಲಾಸ್ಮಾ ಯಂತ್ರವನ್ನೂ ಮಾರಲೆಂದು ಕ್ರಿಕೆಟ್ ಆಟಗಾರರೂ ಸಿನೆಮಾ ನಟನಟಿಯರೂ ಟಿವಿಯಲ್ಲಿ ಬರಬಹುದು. ನಾವು ಎಚ್ಚರದಲ್ಲಿರಬೇಕು.

ಜಾವೇದ್ ಅಖ್ತರ್‌ಗೆ ರಾಷ್ಟ್ರಪ್ರಶಸ್ತಿಯನ್ನು ಗಳಿಸಿಕೊಟ್ಟ ‘ಕಾಲೇ ಮೇಘಾ ಕಾಲೇ ಮೇಘಾ’ ಹಾಡಿನ ಚಿತ್ರಣದ ಕೊನೆಯಲ್ಲಿ ಏನಾಗುತ್ತದೆ ಗೊತ್ತಲ್ಲ? ಸಂಭ್ರಮದ ನೃತ್ಯ ಮುಗಿಯುವ ಹೊತ್ತಿಗೆ ಇದ್ದಕ್ಕಿದ್ದಂತೆ ಮೋಡಗಳು ದಿಕ್ಕು ಬದಲಿಸಿ, ನಿರಾಶೆಯ ಕಾರ್ಮೋಡ ಕವಿಯುತ್ತದೆ. ಪ್ಲಾಸ್ಮಾಜಲದ ಬಗ್ಗೆ ಭ್ರಾಮಕ ಸಂಭ್ರಮವನ್ನು ಸೃಷ್ಟಿಸಿ ಕಂಪನಿಗಳು ಹಣವನ್ನು ಬಾಚಿಕೊಂಡು ಸರಿದು ಹೋಗಬಾರದು ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT