ಮಹಾದಾಯಿಯ ನೀರಿಗಾಗಿ ಹುಬ್ಬಳ್ಳಿ- ಧಾರವಾಡದ ಜೋಡಿ ನಗರದಲ್ಲಿ ಹಳೇ ಟಯರ್ಗಳು ಹೊತ್ತಿ ಉರಿಯುತ್ತಿದ್ದಾಗ ಅಲ್ಲೇ ಹೊರವಲಯದಲ್ಲಿ ಕಂಟ್ರಿ ಕ್ಲಬ್ನ ಜಲರಂಜನ ಉದ್ಯಾನದಲ್ಲಿ ನೀರು ಜಲಪಾತದಂತೆ ಭೋರ್ಗರೆದು ಚಿಮ್ಮಿ ಚೆಲ್ಲಾಡುತ್ತಿತ್ತು. ಪೆಪ್ಸಿ ಫ್ಯಾಕ್ಟರಿಯಲ್ಲಿ ಅಂತರ್ಜಲವನ್ನು ಮೇಲಕ್ಕೆತ್ತಿ ಸಿಹಿಪೇಯದ ಬಾಟಲಿಗಳನ್ನು ತುಂಬಿಸುವ ಕೆಲಸ ನಿರಂತರ ನಡೆಯುತ್ತಿತ್ತು. ತುಸುದೂರದ ಸಕ್ಕರೆ ಕಾರ್ಖಾನೆಗಳಲ್ಲಿ ಪಂಪ್ಗಳು ತೆರಪಿಲ್ಲದೆ ದುಡಿಯುತ್ತಿದ್ದವು. ಅವೆಲ್ಲಕ್ಕಿಂತ ಮುಖ್ಯ ಸಂಗತಿ ಏನೆಂದರೆ, ಇತ್ತ ಟಿವಿ ಚಾನೆಲ್ಗಳಲ್ಲಿ ನೀರಿನ ವಿಷಯವಾಗಿ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದಾಗ ಕನಿಷ್ಠ ಆರು ಕೋಟಿ ಲೀಟರ್ ಕೊಳಚೆ ನೀರು ಆ ಜೋಡಿ ನಗರದ ಸುತ್ತಲಿನ ಹಳ್ಳಕೊಳ್ಳಗಳ ಚಾನೆಲ್ಗಳಲ್ಲಿ ದುರ್ನಾತ ಧಾರೆಯಾಗಿ ದಿನವೂ ಹರಿಯುತ್ತಿತ್ತು. ಅದರಲ್ಲಿ ಕೆಲಪಾಲು ಉಣಕಲ್ ಕೆರೆಗೂ ಹೋಗಿ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಕೆರೆಯಲ್ಲಿ ಜಲಕಳೆ ತುಂಬಿತ್ತು.

ಆಧುನಿಕ ನಾಗರಿಕತೆ ಎಂದರೆ ಜಲಕ್ರೀಡೆ ಬೇಕು, ತಂಪುಪೇಯ ಬೇಕು, ಸಕ್ಕರೆ- ಮದ್ಯಸಾರ ಎಲ್ಲ ಬೇಕೇಬೇಕು. ಜೊತೆಗೆ ನಲ್ಲಿಯಲ್ಲಿ ನೀರು ಬೇಕು. ಅದನ್ನು ಎಲ್ಲಿಂದಾದರೂ ಹೇಗಾದರೂ ತರಿಸಿ ಕೊಡುವಂತೆ ಪ್ರಖ್ಯಾತ ವಕೀಲರನ್ನು ಮುಂದಿಟ್ಟುಕೊಂಡು ಹೋರಾಡಬೇಕು. ಹೋರಾಡುವಂತೆ ಜನತೆಗೆ ಕುಮ್ಮಕ್ಕು ನೀಡಬೇಕು. ಮತ್ತೆ ಅವರನ್ನು ನಿಯಂತ್ರಿಸಲು ಪೊಲೀಸರನ್ನು ಕಳಿಸಬೇಕು.

ನಮೀಬಿಯಾದ ರಾಜಧಾನಿ ವಿಂಢೋಕ್ ನಗರಕ್ಕೆ ಬನ್ನಿ. ಆಫ್ರಿಕಾದ ಕ್ರೂರ ಮರುಭೂಮಿ ಇರುವ ದೇಶ ನಮೀಬಿಯಾ. ಕುರುಚಲು ಗಿಡಗಂಟಿಗಳ ನಡುವೆ ಹೇರಳ ವನ್ಯಜೀವಿಗಳು, ಅವನ್ನು ನೋಡಲು ಬರುವ ಪ್ರವಾಸಿಗರೇ ಅಲ್ಲಿನ ಪ್ರಮುಖ ಆದಾಯ ಮೂಲ. ವಿಂಢೋಕ್ ಸುತ್ತಮುತ್ತ ಮಳೆ ತೀರಾ ಕಮ್ಮಿ. ನಮ್ಮ ಹುಬ್ಬಳ್ಳಿ-ಧಾರವಾಡ ಅಥವಾ ಕೋಲಾರಕ್ಕೆ ಹೋಲಿಸಿದರೆ ಅರ್ಧದಷ್ಟು ಮಳೆ ಅಷ್ಟೆ; ನದಿ ಗಿದಿ ಏನೂ ಇಲ್ಲ. ಅಲ್ಲಿನ ನೀರಿನ ನೇರ ಮರುಬಳಕೆ ವ್ಯವಸ್ಥೆ ಇಡೀ ಜಗತ್ತಿಗೇ ಮಾದರಿಯಾಗಿದೆ. ಎಷ್ಟೆಂದರೆ, ಕಳೆದ ಮಾರ್ಚ್ 22ರಂದು ‘ವಿಶ್ವ ಜಲದಿನ’ದ ಸಂದರ್ಭದಲ್ಲಿ ಅಲ್ಲಿ ಜಾಗತಿಕ ಸಮ್ಮೇಳನ ಏರ್ಪಡಿಸಲಾಗಿತ್ತು.

ಬಳಸಿ ಚೆಲ್ಲಿದ ಕೊಳಚೆ ನೀರನ್ನು ಶುದ್ಧೀಕರಿಸಿ ಮತ್ತೆ ಕುಡಿಯುವ ನೀರಿಗೇ ಸೇರಿಸುವ ವ್ಯವಸ್ಥೆ ಅಲ್ಲಿದೆ. ಚರಂಡಿಯಲ್ಲಿ ಹರಿಯುವ ಕಕ್ಕಸು ನೀರನ್ನು ಮರುಬಳಕೆ ಮಾಡಲು ಅನೇಕ ವಿಧಾನಗಳಿವೆ. ಸಾಕಷ್ಟು ಶುದ್ಧಗೊಳಿಸಿ, ವಾಹನ ತೊಳೆಯಲು ಅಥವಾ ಉದ್ಯಾನ ಬೆಳೆಸಲು ಬಳಸಬಹುದು. ಅಥವಾ ನದಿಯಂತೆ ಹರಿಸಿ, ಕೆರೆಗೆ ತುಂಬಿಸಿ ಕೃಷಿಗೆ, ಕೊಳವೆ ಬಾವಿಗಳಿಗೆ ಮರುಪೂರಣಕ್ಕೆ ನೀಡಬಹುದು. ‘ನೇರ ಮರುಬಳಕೆ’ ಎಂದರೆ ಅದು ಆದರ್ಶದ ಪರಮೋಚ್ಚ ವಿಧಾನ. ಈ ವಿಧಾನದಲ್ಲಿ ವಿಂಢೋಕ್ ನಗರ ಜಗತ್ತಿನ ನಂಬರ್ 1 ಸ್ಥಾನಕ್ಕೇರಿದರೆ, ಎರಡನೆಯ ಸ್ಥಾನವೂ ಅಲ್ಲೇ ಪಕ್ಕದ ದಕ್ಷಿಣ ಆಫ್ರಿಕಾದ ಬ್ಯೂಫೋರ್ಟ್ ಪಟ್ಟಣದಲ್ಲಿದೆ. ನಂತರದ ಸ್ಥಾನ ಸಿಂಗಪೂರ್ಗೆ. ಅಲ್ಲಿ ನೀರಿನ ಬೇಡಿಕೆಯ ಮೂರರಲ್ಲೊಂದು ಪಾಲು ಕಕ್ಕಸು ಚರಂಡಿಯಿಂದಲೇ ಬರುತ್ತದೆ. ಅದು ನಿಜವಾದ ಮಲ-ಪ್ರಭಾ! ನಂತರದ ಸ್ಥಾನಗಳಲ್ಲಿ ಇಸ್ರೇಲಿನ ಹೈಫಾ, ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿ ಇತ್ಯಾದಿ ನೂರಾರಿವೆ.

ಮಹಾದಾಯಿಯ ನೀರು ನಮಗೆ ಏಕೆ ಬೇಕೆಂದರೆ ನಮ್ಮ ಮಲಪ್ರಭಾದ ನೀರು ನಮಗೆ ಸಾಲುತ್ತಿಲ್ಲವಂತೆ. ಯಾಕೆ ಸಾಲುತ್ತಿಲ್ಲ ಎಂದರೆ, ಸಕ್ಕರೆ ಕಾರ್ಖಾನೆಗಳಿಗಾಗಿ ಕಬ್ಬು ಬೆಳೆಯಲೆಂದು ಭಾರೀ ಪ್ರಮಾಣದ ನೀರು ಬಳಕೆಯಾಗುತ್ತಿದೆ. ಬೈಲಹೊಂಗಲದ ಸುತ್ತಮುತ್ತ ಕಬ್ಬಿನ ಹೊಲಗಳೇ ಕಾಣುತ್ತವೆ. ಅಲ್ಲಿನ ರೈತರಿಗೆ ನೀರಿನ ಯುಕ್ತ ಬಳಕೆಯ ವಿಧಾನ ಕಲಿಸಿದ್ದೇವೆಯೆ? ಒಂದು ಕಿಲೊ ಸಕ್ಕರೆ ತಯಾರಿಸಲು ನಮ್ಮಲ್ಲಿ 2,450 ಲೀಟರ್ ನೀರು ವೆಚ್ಚವಾಗುತ್ತಿದೆ. ವಿಶ್ವ ಜಲಸಂಸ್ಥೆ ಪ್ರಕಾರ 1,500 ಲೀಟರ್ ನೀರು ಧಾರಾಳ ಸಾಕು. ಪ್ರತಿ ಕಿಲೊ ಸಕ್ಕರೆಗೆ ನಾವು ಸಾವಿರ ಲೀಟರ್ ಹೆಚ್ಚುವರಿ ನೀರನ್ನು ಬಳಸಿ ಆಕಾಶಕ್ಕೆ ತೂರುತ್ತಿದ್ದೇವೆ.

ಲಖ್ನೋದಲ್ಲಿರುವ ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನೀರಿನ ಉಳಿತಾಯದ ಎಷ್ಟೊಂದು ಕ್ರಮಗಳನ್ನು ಸೂಚಿಸಿದ್ದಾರೆ. ಲೇಸರ್ ಮೀಟರ್ ಬಳಸಿ ನೆಲ ಸಪಾಟು ಮಾಡಿ, ಆಮೇಲೆ ಕಬ್ಬಿನ ಪಾತಿ ಮಾಡಿ. ಎಲ್ಲ ಪಾತಿಗಳಿಗೂ ಒಮ್ಮೆಗೇ ನೀರು ಹರಿಸುವ ಬದಲು ಪಾತಿ ಬಿಟ್ಟು ಪಾತಿಗೆ ಪಾಳಿಯಲ್ಲಿ ನೀರುಣಿಸಿ. ನೀರು ಆವಿಯಾಗದಂತೆ ದಟ್ಟ ಮುಚ್ಚಿಗೆ ಮಾಡಿ; ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಿ; ನೆನಪಿಡಿ- ಕಮ್ಮಿ ನೀರಿನಲ್ಲಿ ಬೆಳೆದ ಕಬ್ಬಿನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಶೇ 30ರಷ್ಟು ಹೆಚ್ಚಿನ ಆದಾಯ ಸಿಗುತ್ತದೆ. ನಮ್ಮ ರೈತರಿಗೆ ಇದನ್ನು ಮನದಟ್ಟು ಮಾಡಿದ್ದೇವೆಯೆ? ಕಬ್ಬಿನಲ್ಲಿ ಸಕ್ಕರೆ ಅಂಶ ಎಷ್ಟಿದೆಯೆಂದು ನೋಡಿ ಬೆಲೆ ನಿಗದಿ ಮಾಡುವ ವ್ಯವಸ್ಥೆ ನಮ್ಮ ಕಾರ್ಖಾನೆಗಳಲ್ಲಿ ಇದೆಯೆ? ರೈತರ ನೀರಿನ ಬಳಕೆ ವೈಖರಿ ನೋಡಿ ಸಾಲ ನೀಡುವ ವ್ಯವಸ್ಥೆ ಬ್ಯಾಂಕುಗಳಲ್ಲಿದೆಯೆ?

ಮಲಪ್ರಭಾ ಜಲಾಶಯ ತುಂಬುತ್ತಲೇ ಇಲ್ಲ ಎಂದು ಮಳೆರಾಯನನ್ನು ಶಪಿಸಿದ್ದೇವೆ. ಆದರೆ ನೈಜ ಸಂಗತಿ ಬೇರೆಯದೇ ಇದೆ. ಜಲಾಶಯದ ಕಡೆ ನೀರನ್ನು ಸಾಗಿಸಿ ತರಬೇಕಾದ ಎಲ್ಲ ಹಳ್ಳಕೊಳ್ಳಗಳ ಸುತ್ತ ಕಳೆದ 30 ವರ್ಷಗಳಲ್ಲಿ ಪಂಪ್ಸೆಟ್ ಮತ್ತು ಕೊಳವೆ ಬಾವಿಗಳ ಸಂಖ್ಯೆ ಅಪಾರವಾಗಿ ಹೆಚ್ಚಾಗಿದೆ. ಅಲ್ಲೆಲ್ಲ ನೀರಿನ ಮಿತ ಬಳಕೆ ಸಾಧ್ಯವಿತ್ತು. ಕಡಿಮೆ ನೀರನ್ನು ಬಳಸಿ ಜಾಸ್ತಿ ಫಸಲು ತೆಗೆಯುವ ಎಷ್ಟೊಂದು ಸುಧಾರಿತ ವಿಧಾನಗಳ ಬಗ್ಗೆ, ಬದಲೀ ಬೆಳೆಗಳ ಬಗ್ಗೆ ಹೈದರಾಬಾದಿನಲ್ಲಿರುವ ಇಕ್ರಿಸ್ಯಾಟ್ ಎಂಬ ಅಮೆರಿಕನ್ ಸಂಸ್ಥೆ ರೈತರಿಗಾಗಿ ಜ್ಞಾನವನ್ನು ಇಂಗ್ಲಿಷಿನಲ್ಲಿ ಸೃಷ್ಟಿಸಿದೆ.

ಅವೆಲ್ಲ ರೈತ ಮಕ್ಕಳನ್ನು ತಲುಪಬೇಕಿತ್ತು. ಶಾಲಾ ಪಠ್ಯಗಳಲ್ಲಂತೂ ಅದರ ಬಗ್ಗೆ ಚಕಾರ ಇಲ್ಲ. ಬೀಜ, ಗೊಬ್ಬರ ಕಂಪನಿಗಳು ಹಳ್ಳಿಗಳಲ್ಲಿ ಬಾನೆತ್ತರ ಜಾಹೀರಾತಿಗೆ ಸುರಿಯುವ ಹಣದ ಒಂದು ಪಾಲನ್ನು ರೈತ ಮಕ್ಕಳ ಮೇಲೆ ಸುರಿಸಬಹುದಿತ್ತು. ನೀರಿನ ಉಳಿತಾಯದ ಚಂದದ ಪುಸ್ತಕಗಳನ್ನು ನೀಡಿ ಎಪಿಎಮ್ಸಿಗಳು ಮಕ್ಕಳಿಗೆ ರಸಪ್ರಶ್ನೆ ಹಬ್ಬ ಮಾಡಬಹುದಿತ್ತು. ನೀರಿನ ತುಟಾಗ್ರತೆಯಲ್ಲೂ ಸಮೃದ್ಧ ಬೆಳೆ ಬೆಳೆದ ರೈತನನ್ನು ಗುರುತಿಸಿ ಮೆರೆಸಬಹುದಿತ್ತು.

ಸಮುದ್ರಕ್ಕೂ ಮಹಾದಾಯಿ ನೀರು ಬೇಕು ಎಂದಾಗ ನಾವೆಲ್ಲ ನಕ್ಕಿದ್ದೇವೆ. ಅರಲ್ ಸಮುದ್ರಕ್ಕೆ ಸೇರುತ್ತಿದ್ದ ಎರಡು ನದಿಗಳನ್ನು ತಿರುಗಿಸಿ ಸೋವಿಯತ್ ಸಂಘದವರು ಹತ್ತಿ ಬೆಳೆದರು. 68 ಸಾವಿರ ಚದರ ಕಿ.ಮೀ ವಿಸ್ತಾರವಾಗಿದ್ದ ಆ ಸಮುದ್ರಗಾತ್ರದ ಜಲಾಶಯ ಒಣಗಿ 3,300 ಚ.ಕಿ.ಮೀಗೆ ಇಳಿದಿದೆ. ನಾಲ್ಕು ರಾಷ್ಟ್ರಗಳ 7 ಕೋಟಿ ಜನರಿಗೆ ನೀರುಣಿಸುತ್ತಿದ್ದ ಆಫ್ರಿಕಾದ ಚಾಡ್ ಸರೋವರ ಈಗ ಶೇ 97ರಷ್ಟು ಒಣಗಿದೆ. ಜಗತ್ತಿನ ಪ್ರಮುಖ ಎಂಟು ನದಿಗಳು ಸಮುದ್ರಕ್ಕೆ ಸೇರುವ ಮೊದಲೇ ಬತ್ತುತ್ತಿವೆ. ವೇದಗಳಲ್ಲಿ, ಚರಿತ್ರೆಯಲ್ಲಿ ಅಷ್ಟೆಲ್ಲ ಮಹತ್ವದ ಸ್ಥಾನ ಪಡೆದಿದ್ದ ಸಿಂಧೂ ನದಿ ಹಿಮಾಲಯದಿಂದ ನಿರಂತರ ನೀರನ್ನು ಸಾಗಿಸಿ ತರುತ್ತಿದ್ದರೂ ಸಾಗರ ಸೇರುವ 600 ಕಿ.ಮೀ ಮೊದಲೇ ಇಲ್ಲದಂತಾಗುತ್ತಿದೆ.

ಅಲ್ಲಿ ಸಾಗರದಂಚಿನ ಶೇ 80ರಷ್ಟು ಕಾಂಡ್ಲ ವನಗಳು ನಾಶವಾಗಿವೆ. ಡಾಲ್ಫಿನ್ಗಳು ನಿರ್ವಂಶವಾಗುವ ಹಂತಕ್ಕೆ ಬಂದಿವೆ. ಕೃಷಿಗಾಗಿ, ಉದ್ಯಮಕ್ಕಾಗಿ ನೀರನ್ನು ಕೊಳಚೆ ಮಾಡಿ ಆವಿಯಾಗಿಸಿದ್ದು ಸಾಲದೆಂದು ಈಗ ಕಾಲಾಬಾಗ್ ಎಂಬಲ್ಲಿ ವಿದ್ಯುತ್ತಿಗಾಗಿ ಹೊಸದೊಂದು ಬೃಹತ್ ಅಣೆಕಟ್ಟು ನಿರ್ಮಿತವಾಗುತ್ತಿದೆ. ಅತ್ತ ಬೈಬಲ್ಲಿನ ಉಗಮದೊಂದಿಗೆ ತಳಕು ಹಾಕಿಕೊಂಡಿರುವ ಜೋರ್ಡನ್ ನದಿಯೂ ಸಮುದ್ರ ಸೇರುತ್ತಿಲ್ಲ. ಜಿಗಿದು ಆಚೆ ದಂಡೆ ಸೇರಬಹುದು. ಏನಾಯಿತು ನೀರೆಲ್ಲ? ‘ಅದೆಲ್ಲ ಹಣ್ಣು ತರಕಾರಿ, ಧಾನ್ಯ, ಮೊಟ್ಟೆ, ಮಾಂಸದ ರೂಪದಲ್ಲಿ ರಫ್ತಾಗಿ ಹೋಗಿದೆ’ ಎಂದು ‘ಹೋಮ್’ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ.

‘16 ಸಾವಿರ ಮನೆಗಳಿಗೆ ಸಾಲುವಷ್ಟು ನೀರನ್ನು ನಿತ್ಯವೂ (ಧಾರವಾಡದ) ಪೆಪ್ಸಿ ಫ್ಯಾಕ್ಟರಿ ಬಳಸಿಕೊಳ್ಳುತ್ತಿದೆ’ ಎಂದು ಗೋವಾದವರು ವಾದಿಸಿದ್ದರು. ಪೆಪ್ಸಿ, ಕೋಕಾಕೋಲಾ ಕಂಪನಿಗಳು ಭೂಗತ ಬರಗಾಲ ಸೃಷ್ಟಿಸಿ, ಅಂತರ್ಜಲಕ್ಕೆ ಕೊಳಕು ತುಂಬುತ್ತಿವೆ ಎಂಬ ಆರೋಪದ ಮೇಲೆ ಇತರ ರಾಜ್ಯಗಳಲ್ಲಿ ಅದೆಷ್ಟೊ ಪ್ರತಿಭಟನೆ, ಮೊಕದ್ದಮೆ ಎದುರಿಸಿ ಅವು ಕೆಲವೆಡೆ ಕಾಲು ಕಿತ್ತ ಉದಾಹರಣೆಗಳಿವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ಲಾಚಿಮಾಡಾ ಎಂಬಲ್ಲಿ ಕೋಕಾಕೋಲಾ ಕಂಪನಿ ವಿರುದ್ಧ ಜನರು ಸಾವಿರ ದಿನಗಳ ಸತ್ಯಾಗ್ರಹ ನಡೆಸಿ 2005ರಲ್ಲಿ ಫ್ಯಾಕ್ಟರಿ ಸ್ಥಗಿತಗೊಂಡಿತ್ತು. ಅದೇ ಜಿಲ್ಲೆಯಲ್ಲಿ ಪೆಪ್ಸಿ ವಿರುದ್ಧ ಜನಾಂದೋಲನ ನಡೆದ ಮೇಲೆ ಕಂಪನಿಗೆ ಏಳು ಲಕ್ಷ ಲೀಟರಿನ ಬದಲು 2.34 ಲಕ್ಷ ಲೀಟರ್ ಮಾತ್ರ ನೀಡಬೇಕೆಂದು ವಿಧಾನಸಭೆಯ ಸದನ ಸಮಿತಿ ನಿಗದಿಪಡಿಸಿತ್ತು.

ಮೊನ್ನೆ ಮೇ ತಿಂಗಳಲ್ಲಿ ಪೇಯದ ಉತ್ಪಾದನೆಯನ್ನು (ಮಳೆ ಬರುವವರೆಗೆ) ಪೂರ್ತಿ ನಿಲ್ಲಿಸುವಂತೆ ಪುದುಸ್ಸೆರಿ ಪಂಚಾಯ್ತಿ ಒಮ್ಮತದ ನಿರ್ಣಯ ಕೈಗೊಂಡಿತ್ತು. ಕೋಕಾಕೋಲಾ ಕಂಪನಿ ವಿರುದ್ಧದ ಸಮರ ಈಗಲೂ ಅಲ್ಲಿ ಮುಗಿದಿಲ್ಲ. ದಲಿತರ ಬದುಕನ್ನು ಸಂಕಷ್ಟಕ್ಕೆ ತಳ್ಳಿದ್ದಕ್ಕೆ ಈ ಕಂಪನಿಯ ವಿರುದ್ಧ ಪೊಲೀಸರು ಈಚೆಗೆ ಮತ್ತೆ ಮೊಕದ್ದಮೆ ಹೂಡಿದ್ದಾರೆ. ಇತ್ತ ಧಾರವಾಡದ ಪೆಪ್ಸಿ ಫ್ಯಾಕ್ಟರಿ ಪರವಾಗಿ ನಮ್ಮ ವಕೀಲರು ಏನೇನು ವಾದಿಸಿದರೊ ಗೊತ್ತಿಲ್ಲ. ಮಹಾದಾಯಿಯ ಅಂತಿಮ ತೀರ್ಪು ಇಂದಲ್ಲ ನಾಳೆ ನಮ್ಮದೇ ಆಗಲಿದೆ ಎಂದು ಹೇಳುತ್ತಿದ್ದಾರೆ.

ಭವಿಷ್ಯವಂತೂ ನಮ್ಮ ಕೈಯಲ್ಲಿಲ್ಲ. ಆದರೆ ಭೂತಕಾಲ ಇದೆಯಲ್ಲ? ನಮ್ಮ ಹಿಂದಿನವರು ಗೋರಕ್ಷಣೆಗಿಂತ ಮೊದಲು ಜಲರಕ್ಷಣೆಗೆ ಆದ್ಯತೆ ನೀಡಿದ್ದರು, ಮಳೆಗಾಲದಲ್ಲಿ ಪೋಲಾಗುವ ನೀರನ್ನು ಬೇಸಿಗೆಗಾಗಿ ಹೇಗೆ ರಕ್ಷಿಸಿಕೊಳ್ಳುತ್ತಿದ್ದರು ಎಂಬುದಕ್ಕೆ ಎಷ್ಟೊಂದು ಸಾಕ್ಷ್ಯಗಳಿವೆ: ಗುಜರಾತಿನ ಧೋಲಾವೀರ ಎಂಬ ಬರಗಾಲ ಪೀಡಿತ ಹಳ್ಳಿಯಲ್ಲಿ ಉತ್ಖನನ ನಡೆಸಿದಾಗ, ಅಲ್ಲಿನ ಪುರಾತನರು ಮಳೆನೀರಿನ ಸಂಗ್ರಹಕ್ಕೆ ಚಮತ್ಕಾರಿಕ ಬಾಂದಾರಗಳನ್ನು, ಒಳಗಾಲುವೆಗಳನ್ನು ಕಟ್ಟಿದ್ದು ಬೆಳಕಿಗೆ ಬಂದಿತ್ತು.

ಗಂಗಾ ನದಿಯಲ್ಲಿ ಮಳೆಗಾಲದಲ್ಲಿ ಕೆನ್ನೀರ ಧಾರೆ ಹರಿಯುತ್ತಿದ್ದಾಗ ಅದರಲ್ಲಿನ ಹೂಳನ್ನೆಲ್ಲ ಸೋಸಿ ಶುದ್ಧ ಕುಡಿಯುವ ನೀರನ್ನಾಗಿ ಹೇಗೆ ಪರಿವರ್ತಿಸುತ್ತಿದ್ದರು ಎಂಬುದಕ್ಕೆ ಅಲಹಾಬಾದಿನ ಬಳಿಯ ಶೃಂಗವೀರಪುರ ಎಂಬಲ್ಲಿ ಕ್ರಿಸ್ತಪೂರ್ವ ಉದಾಹರಣೆಗಳಿವೆ. ಬಂಗಾಳಕ್ಕೆ ಆಗಾಗ ಬಂದೆರಗುತ್ತಿದ್ದ ಬರಗಾಲವನ್ನು ಹೇಗೆ ನಿಯಂತ್ರಿಸಬೇಕು ಎಂಬುದು ತಿಳಿಯದೆ ಬ್ರಿಟಿಷರು ಲಂಡನ್ನಿನಿಂದ ವಿಲಿಯಂ ವಿಲ್ಕಾಕ್ಸ್ ಎಂಬಾತನನ್ನು 1920ರಲ್ಲಿ ಕರೆಸಿದಾಗ ಆತ ಬಂದು ಎಲ್ಲವನ್ನೂ ನೋಡಿ, ‘ನೆರೆ ನಿಯಂತ್ರಣದ ಅತ್ಯುತ್ತಮ ವಿಧಾನಗಳೆಲ್ಲ ಬಂಗಾಳದ ಹಳ್ಳಿಗಳಲ್ಲೇ ಸಿಗುತ್ತವೆ ನೋಡಿ’ ಎಂದು ಹೇಳಿ ಮರಳಿ ಹೋಗಿದ್ದ. ಜಲಸಾಕ್ಷರತೆಯ ಅಂಥ ಕಥನಗಳೆಲ್ಲ ಚರಿತ್ರೆಯ ಪುಟಗಳಲ್ಲಿ ಕಳೆದು ಹೋಗಿವೆ; ಹೊಸ ಕಥನಗಳು ವಿಜ್ಞಾನಿಗಳ ಪ್ರಬಂಧಗಳಲ್ಲಿ ಕಾಣೆಯಾಗಿವೆ.

ನೀರಿನ ವಿಷಯ ಬಂದಾಗ ದಿನಗಳೆದಂತೆ ನಾವು ಕೊಳಕರಾಗುತ್ತಿದ್ದೇವೆ, ಜಗಳಗಂಟಿಗಳಾಗುತ್ತಿದ್ದೇವೆ, ಕುಲಕಂಟಕರಾಗುತ್ತಿದ್ದೇವೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೂ ‘ಕಾನೂನಿನ ಚೌಕಟ್ಟಿನಲ್ಲಿ’ ಹೋರಾಡುತ್ತೇವೆ ಎನ್ನುತ್ತ ವಕೀಲರತ್ತ ಧಾವಿಸುತ್ತಾರೆಯೇ ವಿನಾ, ವೈಜ್ಞಾನಿಕ ವಿಧಾನದಲ್ಲಿ ನೀರನ್ನು ನಿಭಾಯಿಸುತ್ತೇವೆ ಎನ್ನುತ್ತ ವಿಜ್ಞಾನಿಗಳತ್ತ ಬರುವವರು ಮಾತ್ರ ಯಾರೂ ಇಲ್ಲ. ಹೂಳು ತುಂಬಿದ ಕೆರೆಗಳಿಗೇ ನದಿಯನ್ನು ತಿರುಗಿಸುವ ಯೋಜನೆ ಹಾಕುತ್ತೇವೆ ವಿನಾ, ಮಳೆನೀರನ್ನು ಯುಕ್ತವಾಗಿ ಬಳಸುವ ಯೋಜನೆ ಹಾಕುತ್ತಿಲ್ಲ.

ನಮ್ಮ ವಿಜ್ಞಾನಿಗಳೂ ಅಷ್ಟೆ: ನೀರಿನ ಬಗ್ಗೆ ಪ್ರಬಂಧ ಮಂಡನೆಗೆಂದು ವಿದೇಶಗಳಿಗೆ ಧಾವಿಸುತ್ತಾರೆ (ಸೆ. 1ರಿಂದ ಹತ್ತು ದಿನ ಹೊನುಲುಲುವಿನಲ್ಲಿ ಜಾಗತಿಕ ಜಲ ಸಮ್ಮೇಳನ ಇದೆ) ವಿನಾ ನಾಯಕಮಣಿಗಳು ‘ಶಾಶ್ವತ ನೀರಾವರಿ’ ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾಗ ವಿವೇಕದ ನಾಲ್ಕು ಮಾತುಗಳನ್ನು ಹೇಳುವುದಿಲ್ಲ. ಶಾಶ್ವತ ನೀರಾವರಿ ಎಂದರೆ ಮಳೆ ನೀರು ಸಂಗ್ರಹ, ಮಿತಬಳಕೆ, ಮರುಬಳಕೆಯೇ ವಿನಾ ನದಿಗಳನ್ನು ತಿರುಗಿಸುವುದಲ್ಲ- ಜಲಸಾಕ್ಷರತೆಯ ಮೂಲಕ ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸಬಹುದೆಂದು ವಿಶ್ವಸಂಸ್ಥೆ ಅಷ್ಟೊಂದು ಉದಾಹರಣೆಗಳ ಮೂಲಕ ಹೇಳುತ್ತಿದೆಯಾದರೂ ಬಲಾಢ್ಯರ ಯಂತ್ರಗಳಿಗೇ ಆದ್ಯತೆ ನೀಡುವುದು ತಪ್ಪುತ್ತಿಲ್ಲ.

ಜಗತ್ತೇ ಹೀಗಿದೆಯೊ ಏನೊ. ಮುಂದಿನ ಪೀಳಿಗೆಯ ಕ್ಷೇಮಚಿಂತನೆಗಿಂತ ತನ್ನ ಸ್ವಾರ್ಥವೇ ಮುಖ್ಯವೆಂದು ತೋರಿಸಲು ಅಕಬರನ ಆಸ್ಥಾನದಲ್ಲಿ ಬೀರಬಲ್ಲ ಒಂದು ಪ್ರಾತ್ಯಕ್ಷಿಕೆ ನಡೆಸಿದನಂತೆ: ಖಾಲಿ ತೊಟ್ಟಿಯಲ್ಲಿ ಕೋತಿಯ ತಾಯಿ-ಮರಿಯನ್ನು ನಿಲ್ಲಿಸಿ ನೀರು ತುಂಬುತ್ತ ಹೋದನಂತೆ. ಕತ್ತಿನವರೆಗೆ ನೀರು ಬಂದಾಗ ಮರಿಯನ್ನು ತಾಯಿ ತಲೆಯ ಮೇಲೆ ಕೂರಿಸಿತಂತೆ. ನೀರು ಮೂಗಿನವರೆಗೂ ಬಂದಾಗ ಮರಿಯನ್ನು ಕೆಳಕ್ಕೆ ಹಾಕಿ ಅದರ ಮೇಲೆ ನಿಂತಿತಂತೆ. ಆ ಕತೆ ನಿಜವೊ ಸುಳ್ಳೊ ಗೊತ್ತಿಲ್ಲ. ನಾವಂತೂ ಹಾಗೇ ಮಾಡುತ್ತಿದ್ದೇವೆ. ನಾಳಿನ ಪೀಳಿಗೆಯ ಹಿತಾಸಕ್ತಿಗಳನ್ನೆಲ್ಲ ಕಾಲ್ಕೆಳಗೆ ಅದುಮಿ ಟಿವಿ ಕ್ಯಾಮರಾಗಳ ಎದುರು ವಿಜೃಂಭಿಸುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.