ಬದಲಾವಣೆಯ ಎಷ್ಟೊಂದು ಬಗೆಯ ಗಾಳಿ ಒಟ್ಟೊಟ್ಟಿಗೇ ಬೀಸುತ್ತಿವೆ. ಅಮೆರಿಕದಲ್ಲಿ, ಚೀನಾದಲ್ಲಿ ರಾಜಕೀಯ ನಾಯಕತ್ವದ ಬದಲಾವಣೆಯ ಯತ್ನದ ಗಾಳಿ, ಅಟ್ಲಾಂಟಿಕ್ ಮಹಾಸಾಗರದಲ್ಲಿ ಸ್ಯಾಂಡಿಯ ಸುಂಟರಗಾಳಿ, ಬಂಗಾಳ ಉಪಸಾಗರದಲ್ಲಿ ನೀಲಂ ಬಿರುಗಾಳಿ, ಕೊಡಗಿನಲ್ಲಿ - ಶಿರಸಿಯಲ್ಲಿ ಜಡಿಮಳೆಯ ಕಿರುಗಾಳಿ, ಈಗ ಮತ್ತೆ ಈಶಾನ್ಯ ಅಮೆರಿಕದಲ್ಲಿ ನಾರ್ಥೀಸ್ಟ್ ಸುಂಟರಗಾಳಿ....

ಇವುಗಳಲ್ಲಿ ಎಲ್ಲಕ್ಕಿಂತ ದೊಡ್ಡದು ಅಮೆರಿಕದ ಪೂರ್ವ ಕರಾವಳಿಗೆ ಅಪ್ಪಳಿಸಿದ ಸ್ಯಾಂಡಿ. ಒಬಾಮಾ ಗೆಲುವಿನಲ್ಲಿ ಸ್ಯಾಂಡಿ ಚಂಡಮಾರುತದ ಪಾತ್ರ ಎಷ್ಟಿತ್ತೆಂದು ರಾಜಕೀಯ ಪಂಡಿತರು ತಿಂಗಳುಗಟ್ಟಲೆ ವಿಶ್ಲೇಷಣೆ ಮಾಡಬಹುದು. ನಿಜ, ಯಾವುದೇ ದೃಷ್ಟಿಯಿಂದ ನೋಡಿದರೂ ಸ್ಯಾಂಡಿ ಬರೀ ಚಂಡಮಾರುತವಾಗಿರಲಿಲ್ಲ, ಅದು ಪ್ರ-ಚಂಡಮಾರುತವಾಗಿತ್ತು. `ಸೂಪರ್ ಸ್ಟಾರ್ಮ್~ ಎನ್ನಿಸಿಕೊಂಡು ಅಕ್ಷರಶಃ ಸಮುದ್ರಮಥನವಾಗಿತ್ತು. ಅದರ ಭೀಕರತೆಯನ್ನು ಅಳೆಯಲೆಂದು ಕರಾವಳಿಯುದ್ದಕ್ಕೂ ನಿಲ್ಲಿಸಿದ್ದ 28 ರಡಾರ್ಗಳಲ್ಲಿ 17 ಕೈಕೊಟ್ಟಿದ್ದವು.

ಅವೇನೂ ಸಾಮಾನ್ಯ ಗಾಳಿಗೆ ಕಿತ್ತೆದ್ದು ಬೀಳುವ ರಡಾರ್ ಆಗಿರಲಿಲ್ಲ. ಸಮುದ್ರದಿಂದ ಬೀಸಿ ಬರುತ್ತಿರುವ ಅಲೆಗಳ ಮೇಲೆ ರೇಡಿಯೊ ತರಂಗಗಳನ್ನು ಹಾಯಿಸಿ, ಅವು ಮರಳಿ ಯಾವ ನಮೂನೆಯಲ್ಲಿ ರಡಾರ್ಗೆ ಬಂದು ಅಪ್ಪಳಿಸುತ್ತವೆ ಎಂಬುದನ್ನು ನೋಡಿ, ನೀರಿನ ಅಲೆಗಳ ವೇಗವನ್ನು ಅಳೆಯುತ್ತ ಕ್ಷಣಕ್ಷಣಕ್ಕೆ ವರದಿ ಮಾಡುವ ವ್ಯವಸ್ಥೆ ಅವುಗಳಲ್ಲಿದ್ದವು. ವರದಿ ಎಂದರೆ ಕೇವಲ ಹವಾಮಾನ ಇಲಾಖೆಯ ಕಚೇರಿಗೆ ರವಾನಿಸುವುದಲ್ಲ.

ಜನರ ಕೈಯಲ್ಲಿರುವ ಐಪ್ಯಾಡ್, ಐಫೋನ್ಗಳಿಗೆ, ಮೊಬೈಲ್ಗಳಿಗೆ ಬಣ್ಣದ ಚಿತ್ರನಕ್ಷೆಗಳ ಸಮೇತ ವರದಿ ಮಾಡುವ ವ್ಯವಸ್ಥೆಯಾಗಿತ್ತು. ಅದಕ್ಕೆಂದೇ ಹತ್ತಾರು ಬಗೆಯ ಆಪ್ಗಳು ಚಲಾವಣೆಗೆ ಬಂದಿದ್ದವು. ಕೇವಲ ಗಾಳಿಯ ವೇಗವನ್ನಷ್ಟೇ ಅಲ್ಲ, ಅವರಿರುವ ತಾಣಕ್ಕೆ ಎಷ್ಟು ಹೊತ್ತಿಗೆ ಬಿರುಗಾಳಿಯ ಜಡಿಮಳೆ ಅಪ್ಪಳಿಸಲಿದೆ ಎಂಬ ವಿವರಗಳೂ ಅಂಗೈ ಸಾಧನದಲ್ಲಿ ಮೂಡುತ್ತಿದ್ದವು. ಜನರು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಯ 38 ಬಗೆಯ ಕ್ರಮಗಳ ಬಗ್ಗೆ ಸೂಚನೆಗಳಿದ್ದವು.

ವಿಜ್ಞಾನ ರಂಗಕ್ಕೇನೊ ಇಂಥ ಒಂದೊಂದು ಪ್ರಕೋಪದಿಂದಲೂ ಹೊಸ ಹೊಸ ಪಾಠ ಸಿಗುತ್ತದೆ. ಆದರೆ ಮನುಷ್ಯ ಕಲಿಯಬೇಕಲ್ಲ? ಅಂಗೈಯಲ್ಲಿ ಅಷ್ಟೆಲ್ಲ ಮಾಹಿತಿ ಇದ್ದರೂ ಬಳಸುವಂತಿರಲಿಲ್ಲ. ಏಕೆಂದರೆ ಮೊಬೈಲ್ನಲ್ಲಿ ಶಕ್ತಿ ಇರಲಿಲ್ಲ. ಚಾರ್ಜ್ ಮಾಡೋಣವೆಂದರೆ ವಿದ್ಯುತ್ ಇರಲಿಲ್ಲ; ಹೆಚ್ಚುವರಿ ಬ್ಯಾಟರಿಗಳನ್ನೇ ಖರೀದಿ ಮಾಡೋಣವೆಂದರೆ ಹಣ ನೀಡುವ ಯಂತ್ರಗಳು ಕೆಲಸ ಮಾಡುತ್ತಿರಲಿಲ್ಲ. ಏಕೆಂದರೆ ವಿದ್ಯುತ್ ಇರಲಿಲ್ಲ. ಜನರೆಲ್ಲ ನಿಂತಲ್ಲೇ ಕೂತಲ್ಲೇ `ಟೈಮ್ ಮಶಿನ್~ನಲ್ಲಿ ಪ್ರಯಾಣ ಮಾಡುವವರಂತೆ ಶಿಲಾಯುಗಕ್ಕೇ ತಲುಪಿದ್ದರು.

ಹಸಿವೆಯಾದರೆ ಒಲೆ ಹೊತ್ತಿಸುವಂತಿರಲಿಲ್ಲ. ಏಕೆಂದರೆ ಅಡುಗೆ ಕೊಳವೆಯಲ್ಲಿ ಗ್ಯಾಸ್ ಇರಲಿಲ್ಲ; ಏಕೆಂದರೆ ಕೊಳವೆ ಎಲ್ಲಾದರೂ ಒಡೆದು ಬೆಂಕಿ ಹೊತ್ತೀತೆಂದು ಅನಿಲ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಮೈಕ್ರೊವೇವ್ ಅಥವಾ ಇಂಡಕ್ಷನ್ ಒಲೆ ಕೂಡ ತಣ್ಣಗಾಗಿತ್ತು -ಏಕೆಂದರೆ ವಿದ್ಯುತ್ ಇರಲಿಲ್ಲ. ತಣ್ಣನ್ನ ಏನಾದರೂ ತಿನ್ನೋಣವೆಂದರೆ ಫ್ರಿಜ್ನಲ್ಲಿಟ್ಟ ಆಹಾರವಸ್ತುಗಳೂ ಕೊಳೆಯುವ ಸ್ಥಿತಿಗೆ ಬಂದಿದ್ದವು. ಏಕೆಂದರೆ ವಿದ್ಯುತ್ ಇರಲಿಲ್ಲ. ಅಕ್ಕಪಕ್ಕದ ಬೀದಿಗಳಲ್ಲಿ, ಅಕ್ಕಪಕ್ಕದ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದೂ ಗೊತ್ತಾಗುತ್ತಿರಲಿಲ್ಲ. ರೇಡಿಯೊ, ಟಿವಿ, ಇಂಟರ್ನೆಟ್ ಎಲ್ಲವೂ ಸ್ಥಗಿತವಾಗಿದ್ದವು ಏಕೆಂದರೆ ವಿದ್ಯುತ್....

ಈ ಸಂಕಟಕ್ಕೆ ವಿದ್ಯುತ್ ಅಭಾವ ಕಾರಣವೊ ಅಥವಾ ವಿದ್ಯುತ್ ಮೇಲಿನ ಅತಿ ಅವಲಂಬನೆ ಕಾರಣವೊ? ಇಷ್ಟೊಂದು ಭೀಕರ ಚಂಡಮಾರುತಗಳು ಪದೇ ಪದೇ ಬರುವುದಕ್ಕೆ ನಮ್ಮ ಅತಿಭೋಗದ ಬದುಕೇ ಕಾರಣವೆಂದು ಹೇಳುವವರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ವಿದ್ಯುತ್ತಿಗಾಗಿ, ಸಂಚಾರ ಸಾಗಾಟಕ್ಕಾಗಿ ಈಪಾಟಿ ಪೆಟ್ರೋಲು, ಡೀಸೆಲ್, ಕಲ್ಲಿದ್ದಲನ್ನು ಸುಟ್ಟು ಹೊಗೆ ಹಾಯಿಸಿದ್ದರಿಂದಲೇ ವಾತಾವರಣ ಬಿಸಿಯಾಗಿ ಸುಂಟರಗಾಳಿಗೆ ಕಾರಣವಾಗುತ್ತಿದೆ ಎಂದು ಜನಸಾಮಾನ್ಯರಿಗೂ ಅನ್ನಿಸತೊಡಗಿದೆ.

ಸ್ಯಾಂಡಿಯ ಸುದರ್ಶನ ಚಕ್ರ (ಹರಿ-ಕೇನ್) ಅತ್ತ ಜೋರಾಗಿ ತಿರುಗುತ್ತಿದ್ದಾಗ, ಅದೇ ಅಟ್ಲಾಂಟಿಕ್ ಮಹಾಸಾಗರ ಈಚೆಗಿನ ದಡದಲ್ಲಿ, ಅಂದರೆ ಬ್ರಿಟನ್ನಿನ ನಾಟಿಂಗ್ಹ್ಯಾಮ್ಶೈರ್ ಎಂಬಲ್ಲಿ ಒಂದು ವಿಲಕ್ಷಣ ಪ್ರತಿಭಟನೆ ನಡೆದಿತ್ತು. ನಮ್ಮ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಮಾದರಿಯಲ್ಲಿ ಅಲ್ಲಿ ಹೊಸ ವಿದ್ಯುತ್ ಸ್ಥಾವರವೊಂದು ಸಜ್ಜಾಗಿ ನಿಂತಿತ್ತು. ಒಂದೊಂದೂ 300 ಅಡಿ ಎತ್ತರದ ಎರಡು ಕೂಲಿಂಗ್ ಟವರ್ಗಳ ಮೇಲೆ 17 ಪ್ರತಿಭಟನಕಾರರು ಹತ್ತಿ ಧರಣಿ ಸತ್ಯಾಗ್ರಹ ನಡೆಸಿದ್ದರು.

ಹಗ್ಗಗಳ ಮೂಲಕ ತಮ್ಮಂದಿಗೆ ಟೆಂಟ್, ಟಾಯ್ಲೆಟ್ ಪೆಟ್ಟಿಗೆ, ಸೌರಫಲಕಗಳನ್ನೂ ಬೃಹತ್ ಬ್ಯಾನರ್ಗಳನ್ನೂ ಅಷ್ಟೆತ್ತರಕ್ಕೆ ಹೊತ್ತೊಯ್ದ ಅವರು ಉಷ್ಣ ವಿದ್ಯುತ್ ಸ್ಥಾವರ ಬೇಡವೇ ಬೇಡವೆಂದು ಒತ್ತಾಯಿಸಲು, ಮಾಧ್ಯಮಗಳ ಗಮನ ಸೆಳೆಯಲು ಸರ್ಕಸ್ ಮಾಡುತ್ತಿದ್ದರು. ಅವರೇನೂ ಪರಿಸರ ಹೋರಾಟದ ದೀಕ್ಷೆ ಪಡೆದ ಗ್ರೀನ್ಪೀಸ್ ಯೋಧರಾಗಿರಲಿಲ್ಲ. ಇವಾ ಜೇಸಿವಿಚ್ ಹೆಸರಿನ ಯುವತಿಯ ನೇತೃತ್ವದಲ್ಲಿ ಸ್ಥಳೀಯವಾಗಿ ತತ್ಕಾಲಕ್ಕೆ ರೂಪುಗೊಂಡ ಸಂಘಟನೆಯಾಗಿತ್ತು. ಒಂದಿಡೀ ವಾರ ಜನರಿಗೆ ರಂಜನೆಯನ್ನೂ ಬಿಸಿಪ್ರಳಯದ ಬಗ್ಗೆ ಸಂದೇಶವನ್ನೂ ಬಿತ್ತರಿಸಿ, ಹೆಲಿಕಾಪ್ಟರ್ ಮೇಲೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಆತಂಕವನ್ನೂ ಮಾಧ್ಯಮಗಳಲ್ಲಿ ಚರ್ಚೆಯ ಸುಂಟರಗಾಳಿಯನ್ನೂ ಎಬ್ಬಿಸಿ, ಅಂತೂ ಮೊನ್ನೆ ಸೋಮವಾರ ಹಗ್ಗದ ಮೂಲಕ ಕೆಳಕ್ಕಿಳಿದು ಶರಣಾದರೆಂದು ಬಿಬಿಸಿ ವರದಿ ಮಾಡಿದೆ.

ಸುಶಿಕ್ಷಿತ ಜನಸಾಮಾನ್ಯರು ಅದೆಷ್ಟೇ ಕೂಗೆಬ್ಬಿಸಲಿ, ವಾಯುಮಂಡಲ ಕಾವೇರುತ್ತಿರುವುದೇ ಸ್ಯಾಂಡಿಯಂಥ ತೀವ್ರ ಸುಂಟರಗಾಳಿಗೆ ಕಾರಣವೆಂದು ನಿಖರವಾಗಿ ಹೇಳಲು ವಿಜ್ಞಾನಿಗಳು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಅವರ ಬಳಿ ಸಾಕಷ್ಟು ಪುರಾವೆ ಇಲ್ಲವಂತೆ. ಕಳೆದ 300 ವರ್ಷಗಳಲ್ಲಿ ಅಮೆರಿಕದ ಕಡಲತೀರದ ಮೇಲೆ ಯುದ್ಧ ಸಾರಿದ ಎಲ್ಲ ಚಂಡಮಾರುತಗಳ ಬಗೆಗೂ ಅಲ್ಲಿ ದಾಖಲೆಗಳಿವೆ ನಿಜ. ಅವನ್ನು ಈಗಿನವುಗಳ ಜತೆ ಹೋಲಿಸಿ ಹೇಳಬಹುದಿತ್ತು. ಆದರೆ ಹಿಂದಿನ ಸುಂಟರಗಾಳಿಗಳ ಉಗಮ ಎಲ್ಲಾಯಿತು, ಹೇಗಾಯಿತು, ಎಷ್ಟು ತೀವ್ರವಿತ್ತು, ಎಷ್ಟು ದೀರ್ಘವಿದ್ದಿತ್ತು, ಸಮುದ್ರದಲ್ಲೇ ಮುಕ್ತಾಯಗೊಂಡ ಸುಂಟರಗಾಳಿ ಸಂಖ್ಯೆ ಎಷ್ಟು ಎಂಬ ವಿವರಗಳು ಸಿಗುವುದಿಲ್ಲ. ಉಪಗ್ರಹ ಚಿತ್ರಗಳ ಮೂಲಕ ಮಾತ್ರವೇ ಇಂಥ ಮಾಹಿತಿ ಸಿಗಲು ಸಾಧ್ಯವಿದೆ.

ಉಪಗ್ರಹ ಚಿತ್ರಗಳು ಈಚಿನ 40 ವರ್ಷಗಳ ವಾಯುಚಕ್ರಗಳನ್ನು ಮಾತ್ರ ತೋರಿಸುತ್ತವೆ. ಹಾಗಾಗಿ ಹಿಂದಿನ ಶತಮಾನಗಳ ಸುಂಟರಗಾಳಿಗಿಂತ ಈಗಿನದು ಭಿನ್ನ ಎಂದು ತೋರಿಸಲು ತಮ್ಮಲ್ಲಿ ಸಾಕ್ಷ್ಯಗಳಿಲ್ಲ ಎಂದು ಅಲ್ಲಿನ ಪವನ ವಿಜ್ಞಾನಿಗಳು ಹೇಳುತ್ತಾರೆ.

ಅದು ಸತ್ಯನಿಷ್ಠುರ ವಿಜ್ಞಾನಿಗಳ ಮಾತೇ ಹೌದಾದರೂ ಅಮೆರಿಕದ ವಿಜ್ಞಾನಿಗಳು ಮಾತ್ರ ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಡಲಿಕ್ಕೆ ಅಲ್ಲಿನ ರಾಜಕೀಯ ಪರಿಸರವೇ ಮುಖ್ಯ ಕಾರಣವಾಗಿದೆ. ಏಕೆಂದರೆ ಭೂಮಿ ಬಿಸಿಯಾಗುತ್ತಿರುವುದನ್ನು ಅಮೆರಿಕ ಇಂದಿಗೂ ಅಧಿಕೃತವಾಗಿ ನಿರಾಕರಿಸುತ್ತಲೇ ಬಂದಿದೆ. ಬಿಸಿಯೇರಿಕೆ ಹೌದೆಂದು ಒಪ್ಪಿಕೊಂಡರೆ, ಅದಕ್ಕೆ ಪ್ರಮುಖವಾಗಿ ಅಲ್ಲಿನ ಜನರ ದುಂದುಗಾರಿಕೆಯೇ ಕಾರಣ ಎಂಬುದನ್ನು ಒಪ್ಪಬೇಕಾಗುತ್ತದೆ; ಅಂಥ ಜೀವನಶೈಲಿಗೆ ಕಡಿವಾಣ ಹಾಕಬೇಕಾಗುತ್ತದೆ; ಹಿಂದುಳಿದ, ಬಡದೇಶಗಳ ಕಷ್ಟನಷ್ಟಗಳಿಗೆಲ್ಲ ತಾನೇ ಪ್ರಮುಖ ಹೊಣೆಗಾರನೆಂದು ಒಪ್ಪಿಕೊಂಡು ದೇಣಿಗೆ ರೂಪದಲ್ಲಿ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ.

ಪರಿಸರಕ್ಕೆ ಧಕ್ಕೆ ತಾರದ ಬದಲೀ ತಂತ್ರಜ್ಞಾನವನ್ನು ತಾನೂ ಅಳವಡಿಸಿಕೊಂಡು ಇತರ ದೇಶಗಳಿಗೂ ನೀಡಬೇಕಾಗುತ್ತದೆ. ಇದನ್ನೆಲ್ಲ ಮಾಡಲು ಹೋದರೆ ಈಗಾಗಲೇ ಪ್ರಪಂಚದ ಅತಿ ದೊಡ್ಡ ಸಾಲಗಾರ ದೇಶವೆನಿಸಿದ ಅಮೆರಿಕ ನಾಳೆಯೇ ಪ್ರಪಾತದ ದಾರಿ ಹಿಡಿಯಬಹುದು. ಹಾಗಾಗಿ ಅದು ಹವಾಗುಣ ನಿಯಂತ್ರಣದ ಯಾವುದೇ ಅಂತರರಾಷ್ಟ್ರೀಯ ಒಡಂಬಡಿಕೆಗಳಿಗೆ ಸಹಿ ಹಾಕುತ್ತಿಲ್ಲ. ಅದೇ ಕಾರಣದಿಂದಾಗಿ ಈಚಿನ ಚುನಾವಣಾ ಪ್ರಚಾರದಲ್ಲಿ ಇಬ್ಬರು ಅಭ್ಯರ್ಥಿಗಳೂ ಈ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಗೆದ್ದ ಒಬಾಮಾ ತಮ್ಮ ಧೋರಣೆಯನ್ನೂ ಬದಲಿಸುವುದಿಲ್ಲ.

ಪವನ ವಿಜ್ಞಾನದ ಮೂಲ ಸೂತ್ರ ಏನೆಂದರೆ ಸಮುದ್ರದ ಮೇಲ್ಮೈ ಉಷ್ಣತೆ 26 ಡಿಗ್ರಿ ಸೆ. ತಲುಪಿದಾಗ ಸುಂಟರಗಾಳಿ ಏಳುತ್ತದೆ. ಆದರೆ ಈಚಿನ ವರ್ಷಗಳಲ್ಲಿ ಇಂಥ ಎಲ್ಲ ಸೂತ್ರಗಳೂ ತಲೆಕೆಳಗಾಗುತ್ತಿವೆ. ಸಮುದ್ರದ ತಾಪಮಾನ ಹೆಚ್ಚುತ್ತಿದ್ದರೂ ಧ್ರುವದ ಹಿಮಗಡ್ಡೆಗಳ ದೊಡ್ಡ ದೊಡ್ಡ ತುಣುಕುಗಳು ಸಮುದ್ರಕ್ಕೆ ಬಿದ್ದು ನೀರನ್ನು ತಂಪು ಮಾಡಿ ಉಷ್ಣಪ್ರವಾಹದ ಸ್ವರೂಪವನ್ನು ಬದಲಿಸುತ್ತಿವೆ. ಸಮುದ್ರ ಬಿಸಿಯಾದಷ್ಟೂ ಮೋಡದಲ್ಲಿ ತೇವಾಂಶ ಹೆಚ್ಚುವುದರಿಂದ ಚಂಡಮಾರುತದ ಜತೆ ಜಡಿಮಳೆಯ ತೀವ್ರತೆ ಹೆಚ್ಚುತ್ತದೆ.

ಆದರೆ ಗಾಳಿಯ ವೇಗವೂ ಹೆಚ್ಚಿಗೆ ಇರುವುದರಿಂದ ಮಳೆ ತುಂಬ ದೂರ ಚದುರಿ ಹೋಗುತ್ತದೆ. ಮಳೆಗಾಗಿ ಪ್ರಾರ್ಥಿಸುವವರಿಗೆ ವರದಾನವೂ ಆಗಬಹುದು. `ಮುಂಬರುವ ಚಂಡಮಾರುತಗಳ ತೀವ್ರತೆ ಹೆಚ್ಚುತ್ತದೆಯಾದರೂ ಅವುಗಳ ಸಂಖ್ಯೆ ಕಡಿಮೆಯಾಗಲಿದೆ~ ಎಂದು ವಿಶ್ವಸಂಸ್ಥೆಯ ಐಪಿಸಿಸಿ ತಜ್ಞರೇನೊ ಹೇಳುತ್ತಿದ್ದಾರೆ. ಇತ್ತ ಈ ಹೇಳಿಕೆಯನ್ನು ಒಪ್ಪುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಪಳೆಯುಳಿಕೆ ಇಂಧನಗಳ ಗಣಿಗಾರಿಕೆಯನ್ನು ವಿರೋಧಿಸುವವರ ಕೂಗಿನ ತೀವ್ರತೆ ಹೆಚ್ಚುತ್ತಿದೆ.

`ಚಂಡಮಾರುತಗಳ ತೀವ್ರತೆಗಿಂತ ಜನಸಂಖ್ಯೆ ಮತ್ತು ಶ್ರಿಮಂತಿಕೆಯೇ ಹೆಚ್ಚು ಅಪಾಯಕಾರಿ ಆಗುತ್ತಿದೆ~ ಎಂದು ಕೊಲರಾಡೊದ ಪ್ರಕೃತಿ ವಿಕೋಪಗಳ ತಜ್ಞ ರೋಜರ್ ಪೀಲ್ಕ್ ಹೇಳುತ್ತಾರೆ. ಸಂಪತ್ತು ಹೆಚ್ಚಾಗುತ್ತ ಬಂದಂತೆಲ್ಲ ಅನುಕೂಲಸ್ಥರು ಹೆಚ್ಚು ಹೆಚ್ಚಾಗಿ ಸಮುದ್ರತೀರ ಮತ್ತು ನದಿತೀರಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಅವರಿಗಾಗಿ ಹೆದ್ದಾರಿ, ಸೇತುವೆ, ಪೆಟ್ರೋಲ್ ಬಂಕ್, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಪೈಪ್ಲೈನ್, ಡಿಶ್ ಅಂಟೆನಾ ಮುಂತಾದ ಮೂಲ ಸೌಕರ್ಯಗಳ ಸಂತೆಯೇ ನೆರೆಯುತ್ತದೆ. ಅವುಗಳ ಸಂಖ್ಯೆ ಹೆಚ್ಚಾದಷ್ಟೂ ಸಂಕಟ ಬಂದಾಗ ನೆರವಿನ ಸಮಸ್ಯೆ ಮತ್ತು ವೆಚ್ಚ ಹೆಚ್ಚುತ್ತದೆ ಎಂದು ಅವರು ವಾದಿಸುತ್ತಾರೆ. ನಮ್ಮ ಆಂಧ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಜನಸಂಖ್ಯೆಯೇ ಸಮಸ್ಯೆಯ ತೀವ್ರತೆಗೆ ಕಾರಣವಾದರೆ ಧನಿಕ ದೇಶಗಳಲ್ಲಿ ಅತಿ ಸೌಕರ್ಯಗಳೇ ಸಮಸ್ಯೆ ಒಡ್ಡುತ್ತಿವೆ.

ಈ ವಿಪರ್ಯಾಸ ನೋಡಿ: ಬೆಂಗಳೂರಿನ ಕಸದ ರಾಶಿಯ ಬಗ್ಗೆ `ನ್ಯೂಯಾರ್ಕ್ ಟೈಮ್ಸ~ನಲ್ಲಿ ಟೀಕೆ ಪ್ರಕಟವಾದ ಒಂದೇ ವಾರದಲ್ಲಿ ನ್ಯೂಯಾರ್ಕ್ನ ಕಸದ ರಾಶಿ ಬೆಂಗಳೂರಿನ ರಾಶಿಗಿಂತ ಅದೆಷ್ಟೊ ನೂರು ಪಟ್ಟು ಹೆಚ್ಚಾಯಿತು. ಅದೂ ಹೈಟೆಕ್ ಕಸ! ಜೊತೆಗೆ ದಶಕಗಳಿಂದ ಭೂಗತ ರೈಲು ಸುರಂಗಗಳಲ್ಲಿ ಶೇಖರವಾಗಿದ್ದ ಕೊಳಕೆಲ್ಲ ನುಗ್ಗಿ ಮೇಲೆದ್ದು ಬಂದಾಗಿನ ನಂಜುಭರಿತ ಲೋಟೆಕ್ ಕಸ. ಅವೆಲ್ಲ ಈಗ ಎಲ್ಲಿಗೆ ಹೋಗಲಿವೆ ಗೊತ್ತೆ? ಹಿಂದೆ ವಿಶ್ವವಾಣಿಜ್ಯ ಕೇಂದ್ರದ ಕಟ್ಟಡ ಕುಸಿದಾಗಿನ ನಂಜು ಲೋಹದ್ರವ್ಯಗಳ ಕಸವೆಲ್ಲ ಭಾರತಕ್ಕೆ ಬಂದಿತ್ತು. ಬೆಂಗಳೂರಿನ ಗುಜರಿ ದಲ್ಲಾಳಿಗಳೇ ಅವನ್ನು ತರಿಸಿ ವಿಲೆವಾರಿ ಮಾಡಿದರೆಂದು `ಡೆಕ್ಕನ್ ಹೆರಾಲ್ಡ್~ ತನಿಖಾ ವರದಿಯನ್ನು ಪ್ರಕಟಿಸಿತ್ತು. ಈ ಬಾರಿಯೂ ಹಾಗಾಗಬಹುದು, ಅಥವಾ ಸೋಮಾಲಿಯಾದಂಥ ದಟ್ಟದರಿದ್ರ ದೇಶಗಳತ್ತ ಸಾಗಿ ಹೋಗಬಹುದು. ಆಧುನಿಕ ಜಗತ್ತಿನಲ್ಲಿ ಸುಂಟರಗಾಳಿಯ ಅಂತಿಮ ಪರಿಣಾಮ ಎತ್ತ ಬೀಸಲಿದೆ ಎಂದು ಹೇಳುವಂತಿಲ್ಲ.

ನಮ್ಮತ್ತ ಚೀನೀ ಸಾಮಗ್ರಿಗಳ ಸುಂಟರಗಾಳಿ ಬೀಸುತ್ತಿದೆ. ಅತ್ತ ಅಮೆರಿಕ-ಕೆನಡಾ ಮಾದರಿಯ ವೈಭೋಗದ ಬದುಕಿನ ಗಾಳಿಯೂ ಜೋರಾಗಿಯೇ ಬೀಸುತ್ತಿದೆ. ಇವೆರಡೂ ಆಮದು ಸಮಸ್ಯೆಗಳೊಂದಿಗೆ ನಾವು ಏಗಬೇಕಾಗಿದೆ. ಅಲ್ಲಿಂದ ಬರುವ ಭೋಗಸಾಮಗ್ರಿಗಳಿಗೆ ವಿದ್ಯುತ್ ಬೇಕೆಂದು ಕಲ್ಲಿದ್ದಲಿನ ಭಾರಿ ಭಾರೀ ನಿಕ್ಷೇಪಗಳನ್ನು ಖಾಸಗಿ ಕಂಪೆನಿಗಳಿಗೆ ವಿತರಿಸುವ ಧಾವಂತದ ಕೆಲಸ ನಡೆದಿದೆ. ನಮಗೆ ಅಮೆರಿಕ/ಚೀನೀ ಮಾದರಿಯ ಬೃಹತ್ ವಿದ್ಯುತ್ ಸ್ಥಾವರಗಳು ಬೇಡವೆಂದು ಹೇಳಿದರೆ, `ಹಾಗಿದ್ದರೆ ನಾವೇನು ಶಿಲಾಯುಗಕ್ಕೆ ಹೋಗಬೇಕಾ?~ ಎಂದು ಪ್ರಗತಿಯ ಹರಿಕಾರರು ಕೇಳುತ್ತಾರೆ. ಅವರಿಗೆ ನ್ಯೂಯಾರ್ಕಿನ ಇಂದಿನ ಶಿಲಾಯುಗವನ್ನು ನೆನಪಿಸೋಣವೆ?

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.