ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧೀಂದ್ರ ಕುಲಕರ್ಣಿ ಲೇಖನ| ಬಲಾಢ್ಯ ಅಮೆರಿಕ ಆಫ್ಗನ್‌ನಲ್ಲಿ ಸೋತಿದ್ದೇಕೆ?

ಅಸಮರ್ಥನೀಯ, ವಿಫಲ ಯುದ್ಧಗಳ ಕಾರಣದಿಂದ ಅಮೆರಿಕದ ಶಕ್ತಿ, ಭವ್ಯತೆಗೆ ಪೆಟ್ಟುಬಿದ್ದಿದೆ
Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬಲಿಷ್ಠ ಸಾಮ್ರಾಜ್ಯಗಳು ಕುಸಿಯಲು ಆರಂಭವಾಗುವುದು ಏಕೆ, ಹೇಗೆ ಮತ್ತು ಯಾವಾಗ? ಇತಿಹಾಸ ಎರಡು ಪಾಠಗಳನ್ನು ಹೇಳುತ್ತದೆ. ಮೊದಲನೆಯದು, ಸಾಮ್ರಾಜ್ಯ ಗಳು ತಮ್ಮ ಶಕ್ತಿಯನ್ನು ಮೀರಿ ಬೆಳೆಯಲು ಯತ್ನಿಸಿದಾಗ, ದುರಾಸೆಯಿಂದ ತಮ್ಮ ಗಡಿಗಳನ್ನು ದಾಟಿ ಹೊರಟಾಗ ಈ ರೀತಿ ಆಗುತ್ತದೆ. ಎರಡನೆಯದು, ಮನುಷ್ಯನ ಜೀವಕ್ಕೆ, ನ್ಯಾಯಕ್ಕೆ ಗೌರವವಿಲ್ಲದೆ, ಸತ್ಯನಿಷ್ಠೆ ಇಲ್ಲದೆ ಕೊನೆಯಿಲ್ಲದ ಯುದ್ಧ ನಡೆಸಿದಾಗಲೂ ಹೀಗಾಗುತ್ತದೆ. ಒಂದು ಪುರಾತನ ನಿದರ್ಶನ, ಇನ್ನೊಂದು ಈಚೆಗಿನ ನಿದರ್ಶನ ಈ ಅಂಶವನ್ನು ಒತ್ತಿಹೇಳಲು ಸಾಕು. ಭಾರತವನ್ನು ಗೆಲ್ಲಬೇಕು ಎಂದು ಸಾಮ್ರಾಟ ಅಲೆಕ್ಸಾಂಡರ್‌ಗೆ ಕ್ರಿ.ಪೂ. 326ರಲ್ಲಿ ಇದ್ದ ಹಟ ಒಂದು ನಿದರ್ಶನ ವಾದರೆ, ಅಫ್ಗಾನಿಸ್ತಾನದ ಮೇಲೆ 1979ರಲ್ಲಿ ಸೋವಿಯತ್ ರಷ್ಯಾದ ಕಮ್ಯುನಿಸ್ಟ್‌ ಸಾಮ್ರಾಜ್ಯ ನಡೆಸಿದ ಆಕ್ರಮಣ ಇನ್ನೊಂದು ನಿದರ್ಶನ.

ಭಾರತದ ಜಾನಪದ ತತ್ವಜ್ಞರು ಅಲೆಕ್ಸಾಂಡರ್‌ಗೆ ಹೇಳಿದ ಮಾತುಗಳನ್ನು ಎರಡನೆಯ ಶತಮಾನದ ಗ್ರೀಕ್ ಇತಿಹಾಸಕಾರ ಎರ್‍ರಿಯನ್‌ ದಾಖಲಿಸಿದ್ದಾನೆ. ಅಲೆಕ್ಸಾಂಡರ್‌ನ ಸೇನೆಯು ತಕ್ಷಶಿಲಾ ನಗರದತ್ತ ಧಾವಿಸು ತ್ತಿದ್ದಾಗ, ಸಾಧುಗಳ ಗುಂಪೊಂದು ಎದುರಾಯಿತು. ಆ ಸಾಧುಗಳು ತಮ್ಮ ಕಾಲುಗಳನ್ನು ಅಲೆಕ್ಸಾಂಡರ್‌ನ ಎದುರಿನಲ್ಲಿ ನೆಲಕ್ಕೆ ಬಡಿಯುತ್ತಿದ್ದರು. ಈ ವಿಚಿತ್ರ ವರ್ತನೆ ಏಕೆಂದು ಅಲೆಕ್ಸಾಂಡರ್ ಕೇಳಿದಾಗ ಅವರು, ‘ಅಯ್ಯಾ ಸಾಮ್ರಾಟ, ಪ್ರತೀ ಮನುಷ್ಯ ತಾನು ನಿಲ್ಲಬಲ್ಲಷ್ಟು ನೆಲವನ್ನು ಮಾತ್ರ ತನ್ನದಾಗಿಸಿಕೊಳ್ಳಬಲ್ಲ. ನೀನು ನಮ್ಮಂತೆಯೇ ಮನುಷ್ಯ. ಆದರೆ, ನೀನು ತಾಯ್ನಾಡಿನಿಂದ ಸಹಸ್ರಾರು ಮೈಲಿ ದೂರ ಬಂದಿದ್ದೀಯ, ಬೇರೆಯವರನ್ನು ಪೀಡಿಸುತ್ತಿದ್ದೀಯಾ. ನೀನು ಶೀಘ್ರವೇ ಮರಣ ಹೊಂದುವೆ, ಆಗ ನಿನ್ನನ್ನು ಹೂತುಹಾಕಲು ಎಷ್ಟು ಬೇಕೋ ಅಷ್ಟು ನೆಲವನ್ನು ಮಾತ್ರ ಹೊಂದಿರುತ್ತೀಯ’ ಎಂದರು. ಅಲೆಕ್ಸಾಂಡರ್‌ನ ಸೈನಿಕರು ಬಸವಳಿದಿದ್ದರು. ಅಲೆಕ್ಸಾಂಡರ್‌ ಮರಳಿ ಹೊರಟಾಗ ಅವರಿಗೆ ತಾಯ್ನಾಡು ಗ್ರೀಸ್ ತಲುಪಲು ಆಗಲಿಲ್ಲ. 32ನೇ ವಯಸ್ಸಿನಲ್ಲಿ ಅಲೆಕ್ಸಾಂಡರ್‌ ಬ್ಯಾಬಿಲೋನ್‌ನಲ್ಲೇ ತೀರಿಕೊಂಡ.

ಸೋವಿಯತ್ ಒಕ್ಕೂಟ ಹಿಂದಡಿ ಇಟ್ಟಿದ್ದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ಆಗ ‘ದಿ ಸಂಡೇ ಅಬ್ಸರ್ವರ್’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನಾನು 1988ರಲ್ಲಿ ಮತ್ತು 1989ರಲ್ಲಿ ಅಫ್ಗಾನಿಸ್ತಾನಕ್ಕೆ ಹೋಗಿದ್ದೆ. ಯುದ್ಧಪೀಡಿತ ಆ ದೇಶದಿಂದ ಸೋವಿಯತ್ ಸೈನಿಕರು ಮರಳಿದ್ದನ್ನು ನಾನು 1989ರ ಫೆಬ್ರುವರಿಯಲ್ಲಿ ವರದಿ ಮಾಡಿದ್ದೇನೆ. ಸಹಸ್ರಾರು ಆಫ್ಗನ್ ಸೈನಿಕರನ್ನು ಸಮಾಧಿ ಮಾಡಿದ್ದ, ಕಾಬೂಲ್ ಬಳಿಯ ಸಮಾಧಿಸ್ಥಳಕ್ಕೆ ಭೇಟಿ ನೀಡಿದ್ದೆ. ನಂತರ ಒಮ್ಮೆ ರಷ್ಯಾಕ್ಕೆ ಭೇಟಿ ನೀಡಿದ್ದಾಗ, ಅಫ್ಗಾನಿಸ್ತಾನದಲ್ಲಿನ ಯುದ್ಧದಲ್ಲಿ ಕಾಲು ತುಂಡರಿಸಿ ಕೊಂಡಿದ್ದ ಸೈನಿಕನೊಬ್ಬನನ್ನು ಭೇಟಿ ಮಾಡಿದ್ದೆ. ಸೋವಿಯತ್ ನಾಯಕ ಲಿಯೋನಿಡ್ ಬ್ರೆಜ್ನೆವ್‌ಗೆ ಅಫ್ಗಾನಿಸ್ತಾನದಲ್ಲಿ ಅಮೆರಿಕವನ್ನು ಸೋಲಿಸಬೇಕಿತ್ತು. ಹಾಗಾಗಿ, 1978ರಲ್ಲಿ ಒಂದು ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸಿ ಅಲ್ಲಿ ಎಡಪಂಥೀಯ, ಸೋವಿಯತ್ ಪರ ಸರ್ಕಾರ ರಚನೆಯಾಗಲು ಸಹಾಯ ಮಾಡಿದ. ಆದರೆ, ನಂತರ ಪರಿಸ್ಥಿತಿ ಕೈಮೀರಿತು. ಅಶಿಸ್ತಿನ ಆಫ್ಗನ್ ಹೋರಾಟಗಾರರು ಅವರಿಗಿಂತ ಶಕ್ತಿಯುತವಾಗಿದ್ದ ಸೋವಿಯತ್ ಸೈನ್ಯವನ್ನು ಸೋಲಿಸಿದರು. ಅವರಿಗೆ ಅಮೆರಿಕ–ಸೌದಿ–ಪಾಕ್ ಸಹಾಯವಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಗೆಲ್ಲಲಾಗದ ಈ ಯುದ್ಧವನ್ನು ಸಂಭಾಳಿಸುವುದೂ ಆಗದು ಎಂಬುದು ಅರಿವಾದಾಗ ಸುಧಾರಣಾವಾದಿ ಸೋವಿಯತ್ ನಾಯಕ ಮಿಖಾಯಿಲ್ ಗೊರ್ಬಚೆವ್‌ ಅವರು ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡರು. ಆಫ್ಗನ್‌ನಲ್ಲಿ ಇರಿಸಿದ ತಪ್ಪು ನಡೆಯು ಸೋವಿಯತ್ ಒಕ್ಕೂಟದ ಪತನಕ್ಕೆ ವೇಗ ನೀಡಿತು. ಎರಡನೆಯ ಸೂಪರ್‌ ಪವರ್ ಆಗಿದ್ದ ಸೋವಿಯತ್ ಒಕ್ಕೂಟದ ಹೆಸರು ಈಗ ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ಕಾಣಿಸುತ್ತದೆ.

ಹಿಂದೆ ನಾನು ಕಾಬೂಲ್‌ನಲ್ಲಿ ಅಫ್ಗಾನಿಸ್ತಾನದ ಅಧ್ಯಕ್ಷ ಡಾ. ಮೊಹಮ್ಮದ್ ನಜೀಬುಲ್ಲಾ ಅವರನ್ನು ಸಂದರ್ಶಿಸಿದ್ದೆ. ಅವರು ಭಾರತದ ದೊಡ್ಡ ಸ್ನೇಹಿತರು. ದೇಶದಲ್ಲಿ ಶಾಂತಿ ಸ್ಥಾಪನೆ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿ ದ್ದರು ಅವರು. ಆದರೆ 1992ರಲ್ಲಿ ಮುಜಾಹಿದ್ದೀನ್‌ಗಳು ಅವರ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದರು. ನಾಲ್ಕು ವರ್ಷಗಳ ನಂತರ ನಜೀಬುಲ್ಲಾ ಅವರನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಯಿತು. ‘ಇತಿಹಾಸದಿಂದ ಪಾಠ ಕಲಿಯದವರು ಇತಿಹಾಸದಲ್ಲಿನ ತಪ್ಪುಗಳನ್ನು ಮತ್ತೆ ಮಾಡುತ್ತಾರೆ’ ಎಂಬ ಮಾತಿದೆ. ಸೋವಿಯತ್ ಒಕ್ಕೂಟ ಮಾಡಿದ ತಪ್ಪನ್ನೇ ತಾನೂ ಮಾಡಿದ ಅಮೆರಿಕ, ಅದರಂತೆ ಶೀಘ್ರವೇ ಕುಸಿದುಬೀಳಲಿಕ್ಕಿಲ್ಲ. ಆದರೆ, ಅಮೆರಿಕ ಪತನವು ಸ್ಪಷ್ಟವಾಗುತ್ತಿದೆ. ಅಫ್ಗಾನಿಸ್ತಾನ ಹಾಗೂ ಇರಾಕ್‌ನಲ್ಲಿನ ಅಸಮರ್ಥನೀಯ, ವಿಫಲ ಯುದ್ಧಗಳ ಕಾರಣದಿಂದಾಗಿ ಅಮೆರಿಕದ ಶಕ್ತಿ, ಭವ್ಯತೆ ಕೊನೆಗೊಳ್ಳುವುದಕ್ಕೆ ವೇಗ ದೊರಕಿತು ಎಂದು ಮುಂದಿನ ಇತಿಹಾಸಕಾರರು ದಾಖಲಿಸುತ್ತಾರೆ.

ಸೆಪ್ಟೆಂಬರ್‌ 11ಕ್ಕೆ ಮೊದಲು ಅಫ್ಗಾನಿಸ್ತಾನದಿಂದ ಅಮೆರಿಕದ ಸೈನಿಕರು ಮರಳಲಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಈಚೆಗೆ ಹೇಳಿದ್ದಾರೆ. ತಾಲಿಬಾನೀಯರು ಅಲ್‌ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದ ಕಾರಣ, 2001ರಲ್ಲಿ ಅಮೆರಿಕದ ಸೈನಿಕರು ಅಫ್ಗಾನಿಸ್ತಾನದ ಮೇಲೆ ದಾಳಿ ನಡೆಸಿದಾಗ ಇದ್ದ ಗುರಿ ಅಲ್ಲಿ ತಾಲಿಬಾನ್ ಆಡಳಿತ ಕೊನೆಗೊಳಿಸುವುದಾಗಿತ್ತು. ಹತ್ತು ವರ್ಷಗಳ ನಂತರ ಅಮೆರಿಕದ ಸೈನಿಕರು ಲಾಡೆನ್‌ನನ್ನು ಹತ್ಯೆ ಮಾಡಿದರು. ಆದರೆ, ತಾಲಿಬಾನೀಯರನ್ನು ಸೋಲಿಸಲು ಅಮೆರಿಕಕ್ಕೆ ಸಾಧ್ಯವಾಯಿತೇ? ಇಲ್ಲ. ಬದಲಿಗೆ, ‘ಆಫ್ಗನ್ ನೆಲದಿಂದ ವಿದೇಶಿ ಅಮೆರಿಕನ್ನರನ್ನು ಹೊರದಬ್ಬುತ್ತೇವೆ’ ಎಂದು ತಾಲಿಬಾನೀಯರು ಪಣತೊಟ್ಟರು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಮೆರಿಕವು ತಾಲಿಬಾನ್ ನಾಯಕರ ಜೊತೆ ಅಧಿಕಾರ ಹಂಚಿಕೆ ಕುರಿತು ಹಲವು ಬಾರಿ ಮಾತುಕತೆ ನಡೆಸಿದೆ. ಒಂದಂತೂ ಸತ್ಯ: ಅಮೆರಿಕದ ಕಟ್ಟಕಡೆಯ ಸೈನಿಕ ಅಫ್ಗಾನಿಸ್ತಾನದಿಂದ ಹೊರನಡೆದ ನಂತರ ಯಾವುದೇ ಸರ್ಕಾರದಲ್ಲಿ ತಾಲಿಬಾನೀಯರು ಮಹತ್ವದ, ಪ್ರಬಲ ಪಾತ್ರ ವಹಿಸಲಿದ್ದಾರೆ.

ಹಾಗಾದರೆ, 20 ವರ್ಷಗಳ ಯುದ್ಧದಿಂದ ಅಮೆರಿಕ ಗಳಿಸಿದ್ದೇನು? ಅಮೆರಿಕ ತನ್ನ 2,400 ಯೋಧರನ್ನು ಕಳೆದುಕೊಂಡಿತು. ಮೃತಪಟ್ಟ ಆಫ್ಗನ್ ಯೋಧರು, ಹೋರಾಟಗಾರರು, ನಾಗರಿಕರ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ. 2003ರಲ್ಲಿ ಇರಾಕ್ ಮೇಲಿನ ದಾಳಿಗೆ ಅಮೆರಿಕ ನೀಡಿದ್ದ ಕಾರಣ ಅಲ್ಲಿ ಸಮೂಹನಾಶಕ ಶಸ್ತ್ರಾಸ್ತ್ರಗಳು ಇವೆ ಎಂಬುದು. ಆದರೆ, ನಂತರದಲ್ಲಿ ಅದು ಸುಳ್ಳು ಎಂಬುದು ಗೊತ್ತಾಯಿತು.

ಇವೆಲ್ಲ ನಮಗೆ ಹೇಳುವುದೇನು? ಅಮೆರಿಕವು ಸಂಪದ್ಭರಿತ ದೇಶ, ಮುಕ್ತ ಹಾಗೂ ಸ್ವತಂತ್ರ ಸಮಾಜ ಅಲ್ಲಿದೆ. ಜಗತ್ತಿನ ಎಲ್ಲೆಡೆಗಳಿಂದ ವಲಸಿಗರು ಆ ನಾಡಿನತ್ತ ಆಕರ್ಷಿತರಾದರು. ಹೀಗಿದ್ದರೂ, ಎರಡನೆಯ ವಿಶ್ವಯುದ್ಧ ಕೊನೆಗೊಂಡ ನಂತರ ಅಮೆರಿಕದ ಮಿಲಿಟರಿ ಉದ್ದಿಮೆಯು ಜಗತ್ತಿನ ಒಂದಲ್ಲ ಒಂದು ಕಡೆ ಯುದ್ಧದಲ್ಲಿ ನಿರತವಾಗಿಯೇ ಇದೆ. ವಿಯೆಟ್ನಾಂ ಯುದ್ಧದಲ್ಲಿ (1964–75) ಕಂಡ ಸೋಲಿನಿಂದ ಅಮೆರಿಕ ಯಾವ ಪಾಠವನ್ನೂ ಕಲಿಯಲಿಲ್ಲ. ಮಿಲಿಟರಿ ಶಕ್ತಿಯೊಂದೇ ಯುದ್ಧದಲ್ಲಿ ಗೆಲುವು ತಂದುಕೊಡುತ್ತದೆ ಎನ್ನಲಾಗದು. ಭೂಮಂಡಲದಲ್ಲಿನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಅಮೆರಿಕದ ಬಳಿಯಿದೆ. ಹೀಗಿದ್ದರೂ ವಿಯೆಟ್ನಾಂ, ಅಫ್ಗಾನಿಸ್ತಾನ ಅಥವಾ ಇರಾಕ್‌ನಲ್ಲಿ ಯುದ್ಧ ಗೆಲ್ಲಲು ಅಮೆರಿಕಕ್ಕೆ ಆಗಲಿಲ್ಲ. ಮಿಲಿಟರಿ ಮೇಲಿನ ಅತಿಯಾದ ವೆಚ್ಚಗಳ ಕಾರಣದಿಂದಾಗಿ ಅಸಮಾನತೆ, ಬಡತನ ಹಾಗೂ ಸಾಮಾಜಿಕ ಸಂಘರ್ಷಗಳು ಅಮೆರಿಕದಲ್ಲಿ ತೀವ್ರವಾಗುತ್ತಿವೆ. ಇವೆಲ್ಲವೂ ಅಮೆರಿಕದ ಪ್ರಜಾತಂತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ – ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಕ್ಯಾಪಿಟಲ್‌ ಹಿಲ್‌ ಮೇಲೆ ದಂಗೆ ಎದ್ದ ರೀತಿಯಲ್ಲಿ ದಾಳಿ ನಡೆಸಿದ್ದನ್ನು ಕಂಡಿದ್ದೇವೆ. ಚೀನಾ ಮತ್ತು ಭಾರತ ಪ್ರವರ್ಧಮಾನಕ್ಕೆ ಬರಲು ಆರಂಭಿಸಿದ ನಂತರದಲ್ಲಿ ಅಮೆರಿಕವು ಜಾಗತಿಕ ಸೂಪರ್‌ ಪವರ್‌ ಆಗಿ ಉಳಿದಿಲ್ಲ.

ಅಫ್ಗಾನಿಸ್ತಾನದಲ್ಲಿ ಆದ ಎಲ್ಲ ವಿನಾಶಗಳಿಗೆ ಅಮೆರಿಕವೊಂದೇ ಕಾರಣವಲ್ಲ. ತಾಲಿಬಾನ್ ಹಾಗೂ ತಾಲಿಬಾನ್ ವಿರೋಧಿ ಗುಂಪುಗಳ ನಡುವಿನ ತಿಕ್ಕಾಟ ಕೂಡ ಅಲ್ಲಿನ ಜನರನ್ನು ಕಷ್ಟಕ್ಕೆ ದೂಡಿದೆ. ಹಾಗಾಗಿ, ಎಲ್ಲ ವಿರೋಧಿ ಗುಂಪುಗಳು ಅಲ್ಲಿ ಒಟ್ಟಾಗಿ, ಮಾತುಕತೆ, ರಾಜಿ ಹಾಗೂ ಒಗ್ಗಟ್ಟಿನ ಸೂತ್ರದಲ್ಲಿ ದೇಶವನ್ನು ಮತ್ತೆ ಕಟ್ಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT