ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿರಲಾರೆ; ಅಲ್ಲಿಗೆ ಹೋಗಲಾರೆ!

ಕೇಂದ್ರೀಯ ವಿವಿಗೆ ದಿಢೀರ್ ರಜೆ: ಗೊಂದಲದಲ್ಲಿ ವಿದ್ಯಾರ್ಥಿಗಳು
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಆಳಂದ ತಾಲ್ಲೂಕಿನ ಕಡ­ಗಂಚಿ­­ಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವ­ವಿದ್ಯಾಲಯಕ್ಕೆ (ಸಿಯುಕೆ) ನವೆಂಬರ್ 9ರ ವರೆಗೆ ದಿಢೀರ್ ರಜೆ ಘೋಷಿ­ಸಿರುವುದರಿಂದ ಉತ್ತರ ಭಾರ­ತದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕಾಶ್ಮೀರ, ಹರಿಯಾಣ, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ, ನಾಗಾ­ಲ್ಯಾಂಡ್‌, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ವಿದ್ಯಾರ್ಥಿಗಳು ‘ದಿಢೀರ್ ರಜೆ’ಯಿಂದಾಗಿ ದಿಕ್ಕು ತೋಚ­ದಂತಾ­ಗಿದ್ದಾರೆ.

‘ವೈರಾಣು ಸೋಂಕಿನಿಂದ ಬಿ.ಟೆಕ್‌ ವಿದ್ಯಾರ್ಥಿ ಮೊಹ್ಮದ್‌ ಚಾಂದ್‌ ಆಲಂ ಎಂಬಾತ ಮೃತಪಟ್ಟ ಹಿನ್ನೆಲೆಯಲ್ಲಿ ಏಕಾಏಕಿ 10 ದಿನ ರಜೆ ಘೋಷಿಸಿದ್ದಾರೆ. ನಮ್ಮ ಊರುಗಳಿಗೆ ಹೋಗಲು ಕನಿಷ್ಠ ಮೂರು ದಿನ, ವಾಪಸು ಬರಲು ಮೂರು ದಿನ ಬೇಕು. ಅಲ್ಲದೇ, ಕಾಯ್ದಿ­ರಿಸಿದ ರೈಲ್ವೆ ಟಿಕೆಟ್‌ಗಳೂ ಲಭ್ಯವಿಲ್ಲ. ಪರಿ­ಸ್ಥಿತಿ ಹೀಗಿರುವಾಗ ಊರಿಗೆ ಹೋಗು­ವು­ದಾದರೂ ಹೇಗೆ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.
‘ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿನ ಅಭಾ­­ವವಿದೆ. ಇರುವ ನೀರಿನಲ್ಲಿ ವೈರಾಣು­ಗಳಿವೆ ಎಂದು ವೈದ್ಯರು ದೃಢ­ಪಡಿ­ಸಿದ್ದಾರೆ. ಒಬ್ಬ ವಿದ್ಯಾರ್ಥಿ ಈಗಾ­ಗಲೇ ಮೃತಪಟ್ಟಿದ್ದು, ಇಬ್ಬರು ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದಾರೆ. ಇತ್ತ ಹಾಸ್ಟೆಲ್‌­ನಲ್ಲೂ ಇರುವ ಹಾಗಿಲ್ಲ, ಊರಿಗೆ ಹೋಗಲು ಆಗದಂತಹ ಸ್ಥಿತಿ ನಿರ್ಮಾ­ಣ­ವಾಗಿದೆ. ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ವಿದ್ಯಾರ್ಥಿಗಳು ಊರಿಗೆ ಹೋಗುತ್ತಿದ್ದಾರೆ. ಆದರೆ, ನಾವೇನು ಮಾಡಬೇಕು ಎನ್ನುವುದೇ ತೋಚು­ತ್ತಿಲ್ಲ’ ಎಂದು ಬಿಹಾರದ ವಿದ್ಯಾರ್ಥಿಗಳು ಆತಂಕದಿಂದಲೇ ಹೇಳಿದರು.

ಪ್ರತ್ಯೇಕ ಚರ್ಚೆ ಸೃಷ್ಟಿಸಿದ ಗೊಂದಲ: ಮೃತ ವಿದ್ಯಾರ್ಥಿ ಗೌರವಾರ್ಥ ಶ್ರದ್ಧಾಂ­ಜಲಿ ಸಭೆ ನಡೆಸಲು ವಿದ್ಯಾರ್ಥಿಗಳು ಹಾಗೂ ವಿ.ವಿ ಆಡಳಿತ ಮಂಡಳಿ­ಯ­ವರು ಮುಂದಾಗಿದ್ದರು. ಆದರೆ, ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಶಾರದಾ ಕೂಡ ಅಸ್ವಸ್ಥ­ರಾ­ಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖ­ಲಾಗಿದ್ದಾರೆ. ಅವರಿಗೆ ಹಣ ಸಂಗ್ರಹಿಸುವ ಸಲು­ವಾಗಿ ಕೇರಳ ಮತ್ತು ಆಂಧ್ರದ ವಿದ್ಯಾರ್ಥಿ­ಗಳು ಒಂದೆಡೆ ಸೇರಿ ಚರ್ಚಿಸು­ತ್ತಿ­ದ್ದರು. ಆಗ ಅಲ್ಲಿಗೆ ಬಂದ ಪ್ರಭಾರ ಕುಲಸಚಿವೆ ಪ್ರೊ.ಶಿವಗಂಗಾ  ರುಮ್ಮಾ ಅವರು, ‘ಪ್ರತ್ಯೇಕವಾಗಿ ಏನು ಚರ್ಚೆ ನಡೆಸು­ತ್ತಿದ್ದೀರಿ’ ಎಂದು ಪ್ರಶ್ನಿಸಿದಾಗ ‘ನಮಗೆ ಕನ್ನಡ ಬರುವುದಿಲ್ಲ. ಇಂಗ್ಲಿಷ್‌­ನಲ್ಲಿ ಮಾತನಾಡಿ’ ಎಂದು ವಿದ್ಯಾರ್ಥಿ­ಗಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರುಮ್ಮಾ, ‘ನಾನು ಕನ್ನಡ ಪ್ರಾಧ್ಯಾಪಕಿ, ನನಗೆ ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ’ ಎಂದಿದ್ದಾರೆ. ಆಗ ಅಲ್ಲಿದ್ದ ವಿದ್ಯಾರ್ಥಿ­ಗಳು ಚಪ್ಪಾಳೆ ತಟ್ಟಿ ನಕ್ಕು ಅವ­ಮಾ­ನಿ­ಸಿದರು ಎಂದು ಸ್ಥಳೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ವಿದ್ಯಾರ್ಥಿಗಳಿಂದ ಬೆದರಿಕೆ?
‘ಪ್ರಭಾರ ಕುಲಸಚಿವೆ ಪ್ರೊ.­ಶಿವ­ಗಂಗಾ ರುಮ್ಮಾ ಅವರನ್ನು ಅವ­ಮಾನಿ­ಸಲಾಗಿದೆ  ಎಂದು ದೂರಿ ಸ್ಥಳೀಯ ವಿದ್ಯಾರ್ಥಿಗಳು ನಮಗೆ ಬೆದ­ರಿಕೆ ಒಡ್ಡುತ್ತಿದ್ದಾರೆ’ ಎಂದು ಕೇರಳ, ಆಂಧ್ರಪ್ರದೇಶದ ವಿದ್ಯಾರ್ಥಿ­ಗಳು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT