ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಬೇಕಾದ ಒಣಕಟ್ಟಿಗೆ ಸಿಗುವುದೇ?

ಅಕ್ಷರ ಗಾತ್ರ

ಆಯ್ಕೆಯ `ಮೌಲ್ಯ~ ಮತ್ತು ಆಯ್ಕೆಯ `ಸ್ವಾತಂತ್ರ್ಯ~ದ ಪಾಠ ಕಲಿಸುವ ಈ ಕೆಳಕಂಡ, ಈಗ ನಾನು ಹೇಳಲು ಹೊರಟಿರುವ ಘಟನೆ ಸಾಕಷ್ಟು ಹಿಂದೆ ನಡೆದದ್ದು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸುಂಕದಕಟ್ಟೆ ಅರಣ್ಯ ಪ್ರದೇಶದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಉದ್ದೇಶಿಸಿತ್ತು. ಈ ಕಾರ್ಯದಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ ಆತಂಕಗೊಂಡಿದ್ದರು.

ಅತ್ಯಂತ ಸೂಕ್ಷ್ಮ ಮನಸ್ಸಿನ ಮತ್ತು ದಯಾರ್ದ್ರ ಹೃದಯದ ವ್ಯಕ್ತಿಯಾಗಿದ್ದ ಅವರು, ಅರಣ್ಯ ಇಲಾಖೆಯ ಮುಖ್ಯಸ್ಥರೊಡಗೂಡಿ ಅರಣ್ಯವಾಸಿಗಳನ್ನು ಭೇಟಿಯಾಗಲು ಉದ್ದೇಶಿಸಿದ್ದರು. ಅರಣ್ಯದಿಂದ ಅವರನ್ನು ಒಕ್ಕಲೆಬ್ಬಿಸುವುದರಿಂದ ಅಥವಾ ಒಕ್ಕಲೆಬ್ಬಿಸದೇ ಇರುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಎಲ್ಲರೊಟ್ಟಿಗೆ ಚರ್ಚಿಸಲು ಅವರು ನಿರ್ಧರಿಸಿದ್ದರು.

ಉದ್ವಿಗ್ನ ಸ್ಥಿತಿ ಸೃಷ್ಟಿಸಿದ್ದ ಈ ಮಾತುಕತೆಯ ಸಂದರ್ಭದಲ್ಲಿ ನಮ್ಮ ಸಂಘಟನೆಯ ಯಾರಾದರೊಬ್ಬರು ತಮ್ಮಡನಿರಲಿ ಎಂಬುದು ಅವರ ಬಯಕೆಯಾಗಿತ್ತು. ನಮ್ಮ ಎಸ್‌ವಿವೈಎಂ ಸಂಘಟನೆಯ ಸಮುದಾಯ ಅಭಿವೃದ್ಧಿಯ ನೇತೃತ್ವ ವಹಿಸಿದ್ದ ಸಹೋದ್ಯೋಗಿ ಪೋಷಿಣಿ ಈ ಕಾರ್ಯಕ್ಕೆ ಹೇಳಿ ಮಾಡಿಸಿದಂತಿದ್ದರು.
 
ಅವರು ಈ ವಿಷಯದಲ್ಲಿ ಸಾಕಷ್ಟು ಪರಿಣತರಾಗಿದ್ದುದು ಮಾತ್ರವಲ್ಲ, ಎಚ್.ಡಿ.ಕೋಟೆ (ಹೆಗ್ಗಡದೇವನಕೋಟೆ) ತಾಲ್ಲೂಕಿನ ಬಹುತೇಕ ಆದಿವಾಸಿಗಳೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದರು. ಅದಕ್ಕಿಂತಲೂ ಮಿಗಿಲಾಗಿ ಆದಿವಾಸಿಗಳ ಅಗತ್ಯ ಮತ್ತು ಅವರ ಆಶೋತ್ತರಗಳ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ಇದರಿಂದ ಈ ಸಂಧಾನ ಮಾತುಕತೆಯಲ್ಲಿ ಪೋಷಿಣಿ ಆದಿವಾಸಿಗಳ ಪರವಾದ ಒಂದು ಪ್ರಬಲ ದನಿಯಂತಿದ್ದರು.

ಕೊನೆಗೆ ಸರ್ಕಾರಿ ಅಧಿಕಾರಿಗಳಿಗೆ ಪ್ರಿಯವಾದ `ವ್ಯಾವಹಾರಿಕ~ ರೀತಿಯಲ್ಲೇ  ಮಾತುಕತೆ ಆರಂಭವಾಯಿತು. ದುರದೃಷ್ಟದ ಸಂಗತಿಯೆಂದರೆ, ಸಾಮಾನ್ಯ ಜನರನ್ನು `ಅಭಿವೃದ್ಧಿಯ ಪಾಲುದಾರರು~ ಎಂದು ಅಧಿಕಾರಿಗಳು ಎಂದಿಗೂ ಭಾವಿಸುವುದೇ ಇಲ್ಲ.
 
ಅವರೇನಿದ್ದರೂ ಕೇವಲ ಸರ್ಕಾರದ ಉಚಿತ ಯೋಜನೆಗಳು ಮತ್ತು ಸೇವೆಯ ಫಲಾನುಭವಿಗಳು ಮಾತ್ರ ಎಂದು ತಿಳಿದುಕೊಳ್ಳುವ ರೀತಿಯಲ್ಲೇ ಅಧಿಕಾರಿಗಳನ್ನು ತರಬೇತುಗೊಳಿಸಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅಧಿಕಾರಿಗಳು ಜನರ ಅಹವಾಲು ಕೇಳಲು ಇಲ್ಲಿಗೆ ಬಂದಿರುವುದೇ ಹೊರತು ತಮ್ಮ ಉದ್ದೇಶ ತಿಳಿಸಲು ಅಲ್ಲ ಎಂಬುದನ್ನು ಜನ ಅವರಿಗೆ ಪದೇ ಪದೇ ಮನವರಿಕೆ ಮಾಡಿಕೊಡಬೇಕಾಯಿತು.

ಚರ್ಚೆ ದಿಕ್ಕು ತಪ್ಪುತ್ತಿದೆ ಎನಿಸತೊಡಗಿದಾಗ, `ಬರೀ ಸರ್ಕಾರದ ಆಜ್ಞಾನುವರ್ತಿಗಳಂತಾಗದೆ ದಯಮಾಡಿ ನಮ್ಮ ಭಾವನೆಗಳು ಮತ್ತು ಆತಂಕವನ್ನು ಅರ್ಥ ಮಾಡಿಕೊಳ್ಳಿ~ ಎಂದು ಜನ ಅವರನ್ನು ಕೋರಿಕೊಂಡರು. ಇದರಿಂದ ಕ್ರಮೇಣ ಅಧಿಕಾರಿಗಳಿಗೆ ವಾಸ್ತವದ ಅರಿವಾಗಿ ಅಲ್ಲಿನ ಚಿತ್ರಣ ಬದಲಾಯಿತು.

ಜನ ಏನು ಹೇಳುತ್ತಿದ್ದಾರೆ ಎಂಬುದನ್ನು ಅರಿಯುವ ಪ್ರಯತ್ನಕ್ಕೆ ಅವರು ಮುಂದಾದರು. ತಾವು ತಿಳಿದುಕೊಂಡಿರುವುದಕ್ಕೂ, ತಳ ಮಟ್ಟದಲ್ಲಿರುವ ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಜ್ಞಾನೋದಯ ಅಧಿಕಾರಿಗಳಿಗೆ ಆಯಿತು.

ಜನರ ದೃಷ್ಟಿಯಲ್ಲಿ ಬಡತನ ಎಂದರೇನು, ಅವರ ನಿಜವಾದ ಸಮಸ್ಯೆಗಳೇನು, ಆದರೆ ಅವುಗಳ ಬಗ್ಗೆ ಸರ್ಕಾರ ತಿಳಿದುಕೊಂಡಿರುವುದೇನು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಾರಂಭಿಸಿದರು.

ದಿನಕ್ಕೆ 1 ಅಥವಾ 1.25 ಡಾಲರ್‌ಗಿಂತ ಕಡಿಮೆ ಆದಾಯ ಇದ್ದರೆ ಅದು ಬಡತನ ಎಂಬ ಮಾನದಂಡದಿಂದ ಬಡತನವನ್ನು ಆದಿವಾಸಿಗಳು ಅಳೆಯುವುದಿಲ್ಲ ಅಥವಾ ಸರ್ಕಾರದ ಮೂಲಕ ತಮ್ಮ ದಿನನಿತ್ಯದ ಆದಾಯ ವೃದ್ಧಿಯಿಂದಷ್ಟೇ ಅಭಿವೃದ್ಧಿ ಸಾಧ್ಯ ಎಂಬ ಭಾವನೆಯೂ ಅವರಲ್ಲಿಲ್ಲ.

ಕೊಂಚ ಸೂಕ್ಷ್ಮ ಮನಸ್ಸಿನ ಯಾರೇ ಆದರೂ ಈ ಸಂದರ್ಭದಿಂದ ಸಾಕಷ್ಟು ಪಾಠ ಕಲಿಯುವ ಅವಕಾಶ ಇತ್ತು. ಆದರೆ ಇದನ್ನೆಲ್ಲಾ ಗ್ರಹಿಸಬಲ್ಲ ಸೂಕ್ಷ್ಮಗ್ರಾಹಿಗಳ ಸಂಖ್ಯೆ ಎಂದಿಗೂ ಕಡಿಮೆಯೇ. ತಳಮಟ್ಟದ ಈ ಜನರ ದನಿಯನ್ನು ಸಹನೆ, ತಾಳ್ಮೆಯಿಂದ ಕೇಳಿಸಿಕೊಳ್ಳಬಲ್ಲ ಸಹೃದಯರ ಸಂಖ್ಯೆಯೂ ಅತ್ಯಲ್ಪ. ಅಂತಾದ್ದರಲ್ಲಿ ಅದನ್ನು ಕೇಳಿಸಿಕೊಂಡು ಜಾರಿ ಮಾಡಲು ಹೊರಡುವವರ ಸಂಖ್ಯೆಯಂತೂ ಕೇವಲ ಬೆರಳೆಣಿಕೆಯಷ್ಟು.

ಹೀಗಿರುವಾಗ ಈ ಸರಳವಾದ ಜನರಿಗೆ ನಿಜವಾಗಲೂ ಬೇಕಾಗಿರುವುದೇನು? ಅದನ್ನು ತಮ್ಮ ಇಲಾಖೆಯಿಂದ ಹೇಗೆ ಒದಗಿಸಿಕೊಡಬಹುದು ಎಂಬುದನ್ನು ಅರಿಯಲು ಅರಣ್ಯ ಇಲಾಖೆ ಅಧಿಕಾರಿ ಯತ್ನಿಸುತ್ತಿದ್ದರು. ಅವರು ನೆರೆದವರಲ್ಲಿ ಈ ಪ್ರಶ್ನೆಯನ್ನು ಕೇಳಲು ಮುಂದಾಗುತ್ತಿದ್ದಂತೆಯೇ, 70 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿದ್ದ ವೃದ್ಧೆಯೊಬ್ಬಳು ಕೇಳಿದ್ದೇನು ಗೊತ್ತೆ?

`ರಾಷ್ಟ್ರೀಯ ಉದ್ಯಾನದಿಂದ ನಮ್ಮನ್ನು ಹೊರಗೆ ಸ್ಥಳಾಂತರಿಸುವುದಾದರೆ ಈಗಿನಂತೆ ನನ್ನ ದಿನನಿತ್ಯಕ್ಕೆ ಬೇಕಾದ ಒಣ ಕಟ್ಟಿಗೆ ಆಗಲೂ ನನಗೆ ಸಿಗುವಂತಾಗಬೇಕು~- ಇದೇ ಅವಳ ಪ್ರಮುಖ ಬೇಡಿಕೆಯಾಗಿತ್ತು.

ಈ ಕನಿಷ್ಠ ಮತ್ತು ಅವರ ದೃಷ್ಟಿಯಲ್ಲಿ ಅನಗತ್ಯವಾದ ಈ ಪ್ರಶ್ನೆಯನ್ನು ಕೇಳಿ ಅಧಿಕಾರಿಗಳಿಗೆ ಅಚ್ಚರಿಯಾಯಿತು. ಆ ವೃದ್ಧೆ ಇಷ್ಟು ಸಣ್ಣ ಬೇಡಿಕೆ ಮುಂದಿಟ್ಟಿದ್ದು ಕಂಡು ಪೋಷಿಣಿ ಅವರಿಗೂ ಇರುಸುಮುರುಸಾಯಿತು. ಆದರೆ ಹಿಂದೆ ಕುಳಿತು ಇದನ್ನೆಲ್ಲಾ ಆಲಿಸುತ್ತಿದ್ದ ನನಗೆ ಮಾತ್ರ ಆಕೆಯ ಆ ಪ್ರಶ್ನೆಯಲ್ಲಿ ಸಾಕಷ್ಟು ಅರ್ಥವಿದೆ ಎನ್ನಿಸಿತು.

`ಡೆವಲಪ್‌ಮೆಂಟ್ ಆ್ಯಸ್ ಫ್ರೀಡಂ~ ಎಂಬ ತಮ್ಮ ಪುಸ್ತಕದಲ್ಲಿ ಅಮರ್ತ್ಯ ಸೆನ್ ಅವರು ತಮಗೆ ಯಾವುದು ಮೌಲ್ಯಯುತ ಎನಿಸುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳುವ ಜನರ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಆ ವೃದ್ಧೆ ಎತ್ತಿದ್ದ ಪ್ರಶ್ನೆಗೆ ಸಾಕಷ್ಟು ಅರ್ಥ ಇತ್ತು. ಅಲ್ಲದೆ ಅದಕ್ಕೆ ಉತ್ತರ ಕೊಡುವುದು ಸಹ ಸವಾಲಿನ ಕೆಲಸವೇ ಆಗಿತ್ತು.

ಅಭಿವೃದ್ಧಿಯನ್ನು ಬರೀ ಆರ್ಥಿಕತೆ ಮತ್ತು ಅಳತೆಯ ಮಾನದಂಡಗಳಿಂದ ಅರ್ಥೈಸುವ ಸರ್ಕಾರಕ್ಕೆ ಈ ದನಿಯಿಲ್ಲದ ನಾಗರಿಕರ ಮೌಲ್ಯಯುತ ಪ್ರಶ್ನೆ ಅರ್ಥವಾಗುವುದಾದರೂ ಹೇಗೆ? ಅಭಿವೃದ್ಧಿ ತಜ್ಞರು ಸಹ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯದಂತಹ ಮೂಲ ಹಕ್ಕುಗಳನ್ನು ಈ ಜನರ ಚೌಕಟ್ಟಿನೊಳಗೆ ಸೇರಿಸಲು ಹೇಗೆ ಸಾಧ್ಯ?

ಅಭಿವೃದ್ಧಿಯು `ಬಹುಜನ ಕಲ್ಯಾಣ~ ಮತ್ತು `ಸ್ವಾತಂತ್ರ್ಯವಾದ~ವನ್ನೂ ಮೀರಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇವರಿಗೆಲ್ಲ ಸಾಧ್ಯವೇ?
ಸರ್ಕಾರದ ನೀತಿ ನಿರೂಪಕರು ಜಾರಿಗೊಳಿಸುವ ಯೋಜನೆಗಳಲ್ಲಿ `ವೈಯಕ್ತಿಕ ಸ್ವಾತಂತ್ರ್ಯ~ ಮತ್ತು `ಆಯ್ಕೆ~ ಎಂಬ ಪದಗಳಿಗೆ ಸ್ಥಾನವಾದರೂ ಎಲ್ಲಿದೆ? ಸರ್ಕಾರದ ಅಭಿವೃದ್ಧಿ ಪಥ ಮತ್ತು ಒಕ್ಕಲೆಬ್ಬಿಸುವಿಕೆಯಲ್ಲಿ ಈ ಸಣ್ಣ ಆದಿವಾಸಿ ಹಾಡಿಯ ಜನರ ದನಿಗೆ ಸ್ಥಾನವಾದರೂ ಇರುವುದೇ?
 
ಅರಣ್ಯ ಮತ್ತು ಅದರ ಉತ್ಪನ್ನಗಳಿಂದಲೇ ಬದುಕು ಕಟ್ಟಿಕೊಂಡಿರುವ ಈ ಆದಿವಾಸಿ ಹೆಣ್ಣು ಮಗಳ ದೃಷ್ಟಿಯಲ್ಲಿ ದಿನನಿತ್ಯದ ಒಣ ಕಟ್ಟಿಗೆಗೆ ಇರುವ ಮಹತ್ವಕ್ಕೆ ಯಾರಾದರೂ ಬೆಲೆ ಕಟ್ಟಬಲ್ಲರೇ?

ಹಾಗಿದ್ದರೆ ಅಮರ್ತ್ಯ ಸೆನ್ ಅವರು ಪ್ರತಿಪಾದಿಸಿದ ಅಭಿವೃದ್ಧಿಯ ಪರಿಕಲ್ಪನೆಯನ್ನು ನಾವು ಸರ್ಕಾರ ಮತ್ತು ಕ್ರಿಯಾಶೀಲ ಸರ್ಕಾರೇತರ ಸಂಸ್ಥೆಗಳ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲವೇ? ಇಂತಹದ್ದೊಂದು ಪರಿಕಲ್ಪನೆ ಕಾರ್ಯರೂಪಕ್ಕೆ ಇಳಿದರೆ ಆಗ ಮಾತ್ರ ಅಭಿವೃದ್ಧಿ ಎಂಬುದು ಸಾಂದರ್ಭಿಕ ಪ್ರಸ್ತುತತೆ ಪಡೆದುಕೊಳ್ಳುತ್ತದೆ ಮತ್ತು ಸಾಂಸ್ಕೃತಿಕವಾಗಿಯೂ ಅರ್ಥಪೂರ್ಣ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT