ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕಳ್ಳ... ಕೊಳೆ ತೊಳೆವ ವ್ಯರ್ಥ ಪ್ರಯತ್ನ

Last Updated 14 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಪರಿಸರ ಹೋರಾಟ ಹಾಗೂ ಬಡತನ ನಿವಾರಣೆಯ ಹೋರಾಟ ಒಂದಾಗಬೇಕು

*

ಬರುವ ರೈಲು ಬರುವುದಕ್ಕೆ ಸಮಯವಿತ್ತು, ಹೋಗುವುದು ಹೋಗಿಯಾಗಿತ್ತು. ರೈಲು ನಿಲ್ದಾಣ ಭಣಗುಡುತ್ತಿತ್ತು. ನನ್ನೆದುರಿಗೆ ರೈಲು ನಿಲ್ಲುವ ಗುಂಡಿ ತೆರೆದುಕೊಂಡಿತ್ತು. ಗುಂಡಿಯೊಳಗೆ, ಹಳಿಗಳಾಚೆಗೆ, ಬೋಗಿ ತೊಳೆಯಲಿಕ್ಕೆ, ಬೋಗಿಗಳಿಗೆ ನೀರು ತುಂಬಲಿಕ್ಕೆ ಹಾಗೂ ರೈಲುಗಳು ಉದುರಿಸಿ ಹೋಗುವ ಗಲೀಜು ತೊಳೆಯಲಿಕ್ಕೆ ನೀರಿನ ಕೊಳವೆಗಳ ಒಂದು ಜಾಲವಿತ್ತು.

ಪ್ರಯಾಣಿಕನೊಬ್ಬ, ಗುಂಡಿಗಿಳಿದು ಜಾಲದ ಕೆಳಗೆ ನುಸುಳಿ ಕುಳಿತುಕೊಂಡು, ಬೃಹತ್ ಗಾತ್ರದ ನಲ್ಲಿ ತಿರುಗಿಸಿಕೊಂಡು, ಭೋರ್ಗರೆಯುವಂತೆ ನೀರು ಹರಿಸಿಕೊಂಡು ಧುಮುಕುವ ನೀರಿಗೆ ತಲೆಕೊಟ್ಟುಕೊಂಡು ಸ್ನಾನ ಮಾಡುತ್ತಿದ್ದ.  ನೀರು ಅವನ ಮೇಲಷ್ಟು ಸಿಡಿದು ಸುತ್ತ ಹೆಚ್ಚಾಗಿ ಸಿಡಿದು ಗಲೀಜಿನಲ್ಲಿ ಲೀನವಾಗಿ ಹೋಗುತ್ತಿತ್ತು. ಇದಾವುದರ ಪರಿವೆಯೂ ಅವನಿಗಿರಲಿಲ್ಲ.  ಆನಂದದಲ್ಲಿ ಮುಳುಗಿದ್ದ ಆತ.

ಜೋಗದ ಜಲಪಾತ ನೆನಪಾಯಿತು, ಜಲಪಾತದೋಪಾದಿಯಲ್ಲಿ ಧುಮ್ಮಿಕ್ಕುತ್ತ ಗಟಾರ ಸೇರುತ್ತಿರುವ ನೀರು ಕಾವೇರಿ ಎಂದು ನೆನಪಾಯಿತು.  ಬಹಳ ಹಿಂದೆ, ಕಾವೇರಿ ಗೋದಾವರಿ ತುಂಗೆ ಭದ್ರೆ ಎಲ್ಲರೂ ಹೀಗೆಯೇ ಧುಮ್ಮಿಕ್ಕುತ್ತ ಹೀಗೆಯೇ ಚೆಲ್ಲಾಟವಾಡುತ್ತ ಸಮುದ್ರ ಸೇರುತ್ತಿದ್ದರಂತೆ. ಮಾನವನು ಆಗ ಸಹಜ ಪ್ರಾಣಿಯಷ್ಟೇ ಆಗಿದ್ದನಂತೆ. ಆಗಲೂ ಹೀಗೆಯೇ, ನೀರಿಗೆ ತಲೆಕೊಟ್ಟು ಮುಳುಗಿ ತೇಲಿ ಈಜಿ ಆನಂದಪಡುತ್ತಿದ್ದನಂತೆ ಅವನು.

ವಿಚಿತ್ರಪ್ರಾಣಿ! ಯಂತ್ರನಾಗರಿಕನಾದ ಮೇಲೂ ಮನುಷ್ಯ ಪ್ರಾಣಿಯಿಂದ ಪ್ರಾಣಿ ಮಾತ್ರದ ಪ್ರವೃತ್ತಿಗಳು ಮರೆಯಾಗಲಿಲ್ಲ. ಹಾಗಾಗಿ ಎರಡೂ ಆಗಿದ್ದಾನೆ ಅವನು. ಉದಾಹರಣೆಗೆ, ನನ್ನೆದುರು ಕಳ್ಳತನದಲ್ಲಿ ಕುಳಿತು ಸ್ನಾನದ ಆನಂದ ಅನುಭವಿಸುತ್ತಿರುವ ಈ ಯಂತ್ರಮಾನವನ ಆನಂದವು ಪ್ರಾಣಿ ಸಹಜವಾದದ್ದೇ ಸರಿ. ಆದರೆ ಈತ ಬಡವ. ಪ್ರಾಣಿ ಸಹಜ ಆನಂದವು ಈತನಿಗೆ ಕಳ್ಳತನದಲ್ಲಿ ಮಾತ್ರ ಲಭ್ಯವಾಗಲು ಸಾಧ್ಯ. 

ಕಳ್ಳತನ ಮಾಡದೆ, ಪ್ರಾಣಿ ಸಹಜ ಆನಂದಗಳಾದ ಸ್ವೇಚ್ಛೆ ಭೋಗ ರತಿ ಇತ್ಯಾದಿಗಳನ್ನು ಪ್ರಾಣಿ ಸಹಜವಾಗಿಯೇ ಅನುಭವಿಸುತ್ತಿರುವವರು ಶ್ರೀಮಂತರು ಮಾತ್ರ. ಈತ ಯಂತ್ರನಾಗರಿಕತೆಯ ಎಲ್ಲ ಅಸಹಜತೆ ಅನ್ಯಾಯ ಹಾಗೂ ಕಸಗಳನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿದ್ದಾನೆ.  ಈಗ ಅದನ್ನೆಲ್ಲ ತೊಳೆದುಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದಾನೆ.

ಹಳೆಯ ಫ್ಲೆಕ್ಸ್‌ಗಳನ್ನು ಹೊದಿಸಿ ತಯಾರಿಸಿದ ತಾತ್ಕಾಲಿಕ ಗುಡಿಸಲು ಈತನದ್ದು.  ಕೊಡ ನೀರಿಗಾಗಿ ಬಡಿದಾಡಬೇಕಿರುವ ಗಯ್ಯಾಳಿ ಹೆಂಡತಿ, ಕಾಯಿಲೆ ಮಗು, ತತ್ವಾರದ ಊಟ ಹಾಗೂ ಅಪಾಯಕಾರಿ ಕಾರ್ಯಕ್ಷೇತ್ರಗಳು ಇವನಿಗೆ ದಕ್ಕಿವೆ. ಆದರೆ ಕಾವೇರಿ ಬತ್ತಿರುವುದು, ಗಂಗೆ ಯಮುನೆಯರು ಕೊಚ್ಚೆಯ ಗುಂಡಿಗಳಾಗಿರುವುದು, ಕುಡಿಯುವ ನೀರಿಗಾಗಿ ಯುದ್ಧಗಳು ನಡೆದಿರುವುದು, ಎಲ್ಲವೂ ಈತನಿಂದಾಗಿ ಎಂದು ಜಗತ್ತು ತಿಳಿದಿದೆ.  ಆದರದು ನಿಜವಲ್ಲ. ಅಂಕಿ ಅಂಶಗಳು ಹಾಗೆ ಹೇಳುವುದಿಲ್ಲ.

ಕೋಟಿ ಕೋಟಿ ಕಮೋಡುಗಳಲ್ಲಿ, ಲಕ್ಷ ಲಕ್ಷ ಖಾಸಗಿ ಗಾರ್ಡನ್ನುಗಳಲ್ಲಿ, ಸಾವಿರಾರು ಗಾಲ್ಫ್ ಕೋರ್ಸುಗಳಲ್ಲಿ, ಈಜು ಕೊಳಗಳಲ್ಲಿ, ಕುಡಿಯುವ ನೀರಿನ ಹೆಸರಿನಲ್ಲಿ ಬಳಕೆಯಾಗುತ್ತಿರುವ ನೀರು ಈತನ ಹೆಂಡತಿಯ ಬಿಂದಿಗೆ ತುಂಬುವ ನೀರಿಗಿಂತ ಹಲವು ಪಾಲು ದೊಡ್ಡದು.  ಅಥವಾ ಕಳ್ಳತನದಲ್ಲಿ ಈತ ಈಗ ಸ್ನಾನಕ್ಕೆ ಬಳಸುತ್ತಿರುವ ನೀರು, ಕಾರ್ಖಾನೆ ಕೀಲೆಣ್ಣೆ ರಾಸಾಯನಿಕ ತ್ಯಾಜ್ಯ, ಕಾರು ಬಸ್ಸು ರೈಲು ವಿಮಾನ ತೊಳೆದು ಗಲೀಜಾಗುತ್ತಿರುವ ನೀರಿಗಿಂತ ತುಂಬ ತುಂಬ ಕಡಿಮೆ ಪ್ರಮಾಣದ್ದು.

ಅಥವಾ ಪೆಪ್ಸಿ ಬಿಸಲೇರಿ ಕೋಕಾ ಇತ್ಯಾದಿ ಕೋಲಾಹಲಗಳನ್ನು ಬಾಟಲಿಗಳಲ್ಲಿ ತುಂಬುವ ಅಂತರ್ಜಲದಲ್ಲಿ ಈತನಿಗೆ ಸಿಕ್ಕುವ ಪಾಲು, ಎಸೆದ ಬಾಟಲಿಗಳು ಮಾತ್ರ. ಈತನ ಹಿರೀಕರು ಅನಾದಿ ಕಾಲದಿಂದಲೂ ಬಳಸುತ್ತಿದ್ದ ತೆರೆದ ಬಾವಿಗಳು ಕೆರೆಕುಂಟೆಗಳು ಹಳ್ಳಕೊಳ್ಳಗಳು ಇಂದು ನೀರಿಲ್ಲದೆ ಬಾಯಾರಿ ಸತ್ತವರಂತೆ ಮಲಗಿವೆ.

ಅಥವಾ ಕೃಷಿಯನ್ನೇ ತೆಗೆದುಕೊಳ್ಳಿ. ಅಲ್ಲಿಯೂ ನೀರಿನ ಹಂಚಿಕೆಯದ್ದು ಇದೇ ಕತೆ! ವಿಶ್ವದ ಅರ್ಧಕ್ಕೂ ಹೆಚ್ಚಿನ ಕೃಷಿ ಉತ್ಪಾದಿಸುತ್ತಿರುವುದು ಬಡವರು ತಿನ್ನುವ ಆಹಾರವನ್ನಲ್ಲ. ಶ್ರೀಮಂತರ ತಾಟಿಗೆ ಮಾಂಸವಾಗಲಿರುವ ಪ್ರಾಣಿಗಳನ್ನು ಕೊಬ್ಬಿಸಲಿಕ್ಕೆಂದು ಬಳಕೆಯಾಗುವ ಕಾಳುಕಡ್ಡಿಗಳನ್ನು ಬೆಳೆಯಲಾಗುತ್ತಿದೆ. ಅಥವಾ ವೈನು ವಿಸ್ಕಿ ಸಕ್ಕರೆ ಹೊಗೆಸೊಪ್ಪು ಗಾಂಜಾ ಅಡಕೆ ಅಲಂಕಾರದ ಹೂವು ಪಾಲಿಷ್‌ ಅಕ್ಕಿ ಇತ್ಯಾದಿ ಮೋಜಿನ ಪದಾರ್ಥಗಳನ್ನು ಬೆಳೆಯಲಿಕ್ಕೆ ಕೃಷಿ ಭೂಮಿ ಬಳಕೆಯಾಗುತ್ತಿದೆ.  ಈ ಯಾವ ಹೂವೂ ಬಡವನ ಮಡದಿಯ ಮುಡಿಗೇರುತ್ತಿಲ್ಲ. ಅಥವಾ ಮಾಂಸ ಹಾಲು ಹೈನು ಬಡ ಮಗುವಿನ ತುಟಿಗಿಳಿಯುತ್ತಿಲ್ಲ.

ಬಡವರು ಈಗಲೂ ತಿನ್ನುತ್ತಿರುವುದು ಒಣ ಬೇಸಾಯದಲ್ಲಿ ಬಂಜರು ನೆಲದಲ್ಲಿ ಬೆಳೆದ ರಾಗಿ ಜೋಳ ನವಣೆ ಹುರುಳಿ ಸೊಪ್ಪು ಸದೆಗಳನ್ನು. ಇಲ್ಲವೇ ಶ್ರೀಮಂತರು ತಿಂದುಳಿದು ಎಸೆದದ್ದನ್ನು. ಇಲ್ಲವೇ ವಿಶ್ವದ ಎಲ್ಲ ಜಲಾಶಯಗಳಲ್ಲಿ ಶೇಖರಣೆಯಾಗುತ್ತಿರುವ ನೀರು ಹೆಚ್ಚಾಗಿ ಶ್ರೀಮಂತರ ಮೋಜಿಗಾಗಿ ಶೇಖರಣೆಯಾಗುತ್ತಿದೆ,
ವಿದ್ಯುಚ್ಛಕ್ತಿಯೂ ಸೇರಿದಂತೆ.

ಆದರೆ, ನದಿನೀರಿಗಾಗಿ ನಾಡುನುಡಿಗಾಗಿ ಅಥವಾ ವಿವಿಧ ಬಗೆಯ ದೇಶಭಕ್ತಿಯ ಕಾರಣಗಳಿಗಾಗಿ ಸಾಯುವವರು ಮಾತ್ರ ಇದೇ ಈ ಕಳ್ಳ ಬಡವರು. ಯಂತ್ರನಾಗರಿಕತೆ ಬಡವನಿಗೆ ಒಳಿತು ಮಾಡುತ್ತಿದೆ ಎಂಬುದು ಆಧುನಿಕ ಜಗತ್ತು ಹರಡಿರುವ ಅತಿದೊಡ್ಡ ಸುಳ್ಳಾಗಿದೆ. ಅಥವಾ ಪ್ರಾಣಿಪಕ್ಷಿಗಳಿಗೆ ಪ್ರಕೃತಿಗೆ ಅದು ಒಳಿತು ಮಾಡಬಲ್ಲದು ಎಂಬುದು ಕೂಡ ಹಸಿಹಸಿ ಸುಳ್ಳಾಗಿದೆ.

ಬಡವರಿಗೆ ಒಳಿತು ಮಾಡುತ್ತೇನೆ ಎಂದು ಸುಳ್ಳೇ ನಂಬಿಸಿ ಶ್ರೀಮಂತರ ಶ್ರೀಮಂತಿಕೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ ಯಂತ್ರನಾಗರಿಕತೆ. ಜೊತೆಗೆ ಬಡವರ ಬಡತನವನ್ನೂ ಸಹ. ಪರಿಸರ ಹೋರಾಟಗಾರರು ಅರಿಯಬೇಕಿರುವ ಸರಳ ಸತ್ಯವಿದು. ನೀರಿನ ಕಳ್ಳತನ ಮಾಡುತ್ತಿರುವ ಈ ಬಡವ ಪರಿಸರ ಶತ್ರುವಲ್ಲ, ಪರಿಸರ ಪ್ರಕೃತಿಗಳಷ್ಟೇ ಸಂತ್ರಸ್ತ ಈತ.  ಹಾಗಾಗಿ ಪರಿಸರ ಹೋರಾಟಗಳು ಬಡತನ ನಿವಾರಣೆಯ ಹೋರಾಟಗಳೂ ಆಗದೆ, ನಮ್ಮಂತಹ ಮೂರನೆಯ ಜಗತ್ತಿನ ದೇಶಗಳಲ್ಲಿ ಬೇರೆ ದಾರಿಯಿಲ್ಲ.

ಪರಿಸರ ಹೋರಾಟವೆಂಬುದು, ಮೂಲತಃ ಉಳ್ಳವರ ಜೀವನಶೈಲಿ ಬದಲಿಸುವ ಹೋರಾಟವಾಗಿದೆ. ಉಳ್ಳವರ ಪಟ್ಟಿಯಲ್ಲಿ ನಾವು ಮಧ್ಯಮ ವರ್ಗವೂ ಬರುತ್ತೇವಾದ್ದರಿಂದ, ಪರಿಸರ ಹೋರಾಟವೆಂಬುದು ನಮ್ಮದೇ ಜೀವನಶೈಲಿಯನ್ನು ಸರಳಗೊಳಿಸಿಕೊಳ್ಳುವ ಹೋರಾಟವೂ ಆಗಬೇಕು. ಈಚಿನ ದಿನಮಾನಗಳಲ್ಲಿ ಮೂರ್ಖನಂತೆ ಕಾಣುವ ಗಾಂಧೀಜಿ, ಹೇಳಿದ್ದು ಮಾಡಿದ್ದು ಇದನ್ನೇ ಸರಿ.

ಆದರೆ ನಾವು ಹಾಗೆ ಮಾಡುತ್ತಿಲ್ಲ. ಕಾರಿನಲ್ಲಿ ಕುಳಿತು ಪಂಚತಾರಾ ಹೋಟೆಲುಗಳನ್ನು ತಲುಪಿ, ಆಂಗ್ಲಭಾಷೆಯಲ್ಲಿ ಅಂಕಿಅಂಶಗಳನ್ನು ಉದುರಿಸುತ್ತಿದ್ದೇವೆ ನಾವು.  ನನ್ನೆದುರಿಗೆ ಕಳ್ಳತನದಲ್ಲಿ ಕುಳಿತು ಶುದ್ಧನೀರಿನ ಆನಂದ ಅನುಭವಿಸುತ್ತಿರುವ ಈ ಬಡವನ ಜೀವನಶೈಲಿಯೇ ನಮಗೆ ಮಾದರಿಯಾಗಬೇಕು.  ಈ ಜೀವನಶೈಲಿಯಲ್ಲಿ ಬದಲಿಸಬೇಕಾದದ್ದು ಏನಾದರೂ ಇದ್ದರೆ ಅದು ಕಳ್ಳತನ ಹಾಗೂ ಕೀಳರಿಮೆಗಳ ಅಗತ್ಯ ಮಾತ್ರ.

ಬಡವರನ್ನೆಲ್ಲ ಶ್ರೀಮಂತರನ್ನಾಗಿಸುತ್ತೇವೆ ಎಂದು ಬೊಗಳೆ ಬಿಡುತ್ತಿದ್ದೇವೆ ನಾವು. ಆದರೆ ಶುದ್ಧಗಾಳಿ ಶುದ್ಧನೀರು ಶುದ್ಧನೆಲ.... ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳು ಸೀಮಿತವಾದವು.  ಈತ, ಕಳ್ಳತನ ಮಾಡದೆ ಶುದ್ಧನೀರು ಶುದ್ಧಗಾಳಿ ಶುದ್ಧನೆಲ ಪಡೆಯಬೇಕೆಂದರೆ ನಾವುಗಳೂ ಸಹ ಇವನಷ್ಟೇ ಸೀಮಿತ ಬದುಕನ್ನು ಸ್ವೀಕರಿಸಬೇಕಾದ್ದು ಅನಿವಾರ್ಯ.  ಸೀಮಿತ ನಿಸರ್ಗದ ಅಸೀಮ ದುರುಪಯೋಗ ನಡೆದಿದೆ ಇಂದು.

ಯಂತ್ರನಾಗರಿಕತೆ ಶುದ್ಧತೆಯನ್ನು ಉತ್ಪಾದಿಸುತ್ತಿದೆ. ಮಾರುಕಟ್ಟೆಯ ಸಲುವಾಗಿ  ಉತ್ಪಾದಿಸುತ್ತಿದೆ ಅದು.  ಕಾರ್ಖಾನೆಗಳಲ್ಲಿ ಉತ್ಪಾದಿಸುತ್ತಿರುವ ಶುದ್ಧತೆಯು ಶುದ್ಧವಾದದ್ದೂ ಅಲ್ಲ, ಅಪರಿಮಿತವಾದದ್ದೂ ಅಲ್ಲ. ಅಥವಾ ಸಮಾನವಾದದ್ದೂ ಅಲ್ಲ.  ಯಂತ್ರನಾಗರಿಕತೆ ಮೂಲತಃ ಅಶುದ್ಧವಾದದ್ದು, ಪರಿಮಿತವಾದದ್ದು ಹಾಗೂ ಅಸಮಾನವಾದದ್ದು.  ಈತ, ಯಂತ್ರನಾಗರಿಕತೆಯಲ್ಲಿ ಇಂದಿಗೂ ಮುಂದಿಗೂ ಎಂದೆಂದಿಗೂ ವಂಚಿತನೇ ಸರಿ.

ಪರಿಸರ ಹೋರಾಟಕ್ಕೂ ಸಮಾಜವಾದಕ್ಕೂ ಇರುವ ಸಂಬಂಧ ಗಾಢವಾದದ್ದು. ಈ ಸಂಬಂಧವನ್ನು ಪರಿಸರವಾದಿಗಳೂ ಪೂರ್ತಿಯಾಗಿ ಅರಿತುಕೊಂಡಿಲ್ಲ, ಸಮಾಜವಾದಿಗಳೂ ಪೂರ್ತಿಯಾಗಿ ಅರಿತುಕೊಂಡಿಲ್ಲ.  ನಾವು ಅರಿಯಬೇಕಾದ ಸರಳ ಸತ್ಯವೆಂದರೆ, ನಾಳೆಗಳನ್ನು ಕಟ್ಟಲಿಕ್ಕೆ ಬರುವುದಿಲ್ಲ, ಕಳಚಲಿಕ್ಕೆ ಬರುತ್ತದೆ. ಕಟ್ಟಿ ಕಟ್ಟಿ ಕುಲಗೆಡಿಸಿಟ್ಟಿರುವ ಅಸಭ್ಯತೆಯನ್ನು ಕಳಚುವುದೇ ಸಮಾಜವಾದ. 

ಪರಿಸರ ಹೋರಾಟ ಹಾಗೂ ಬಡತನ ನಿವಾರಣೆಯ ಹೋರಾಟ ಒಗ್ಗಟ್ಟಾಗಬೇಕು ಎಂಬುದು ಹೆಚ್ಚಿನ ಕನ್ನಡಿಗರಿಗೆ ಇನ್ನೂ ಮನವರಿಕೆಯಾಗದಿರುವ ಸತ್ಯವಾಗಿದೆ.  ಅದಕ್ಕೆ ಕಾರಣವೂ ಇದೆ.  ಪರಿಸರ ಹೋರಾಟವೂ ವಿಶ್ವದಾದ್ಯಂತ ಶುರುವಾದದ್ದು ಉಳ್ಳವರ ಹೋರಾಟವಾಗಿ. ಹಾಗಾಗಿ ಪರಿಸರ ಹೋರಾಟವೆಂದರೆ ಉಳ್ಳವರ ಫ್ಯಾಷನಬಲ್ ಹೋರಾಟವೆಂಬ ತಪ್ಪು ಕಲ್ಪನೆ ಕನ್ನಡಿಗರ ಮನಸ್ಸಿನಲ್ಲಿದೆ.  ಆದರೆ ಸಮಾಜವಾದವೂ ಕೂಡ ಮೊದಲು ಬೇರೂರಿದ್ದು ತಿಳಿವಳಿಕೆಯುಳ್ಳ ಉಳ್ಳವರ ಮನದಲ್ಲಿಯೇ ಎಂಬುದನ್ನು ನಾವು ಮರೆಯಬಾರದು.

ಮತ್ತೊಂದು ತಪ್ಪು ಕಲ್ಪನೆಯಿದೆ. ಸಮಾಜವಾದಿ ಹೋರಾಟವೆಂದರೆ ಅಭಿವೃದ್ಧಿಯ ಹೋರಾಟ ಎಂದು ತಿಳಿಯಲಾಗುತ್ತದೆ.  ಅಭಿವೃದ್ಧಿಯೆಂದರೆ ಯಂತ್ರಗಳ ಅಳವಡಿಕೆ ಎಂದು ತಿಳಿಯಲಾಗುತ್ತದೆ,  ಯಂತ್ರಗಳ ಅಳವಡಿಕೆಯೇ ವೈಚಾರಿಕತೆ ಎಂದು ತಿಳಿಯಲಾಗುತ್ತದೆ.  ನಮ್ಮ ಉದ್ದಿಮೆಪತಿಗಳು, ಮಂತ್ರಿಮಾನ್ಯರು, ಐಎಎಸ್ ಅಧಿಕಾರಿಗಳು, ತಮಗೆ ತುಂಬ ಲಾಭದಾಯಕವಾದ ಈ ತಪ್ಪು ಕಲ್ಪನೆಯಿಂದ ಸುಖವಾಗಿ ಬಳಲುತ್ತಿದ್ದಾರೆ.  

ಅರ್ಥಾತ್ ಬೇಕೆಂದೇ ಬಳಲುತ್ತಿದ್ದಾರೆ.  ಅವರ ಸುಖವೇ ಮಾರುಕಟ್ಟೆ, ಸಮಾಜವಾದಿ ಆಶಯದ ಭ್ರಷ್ಟತೆಯೇ ಮಾರುಕಟ್ಟೆ.  ಮಾರುಕಟ್ಟೆಗಳ ಸ್ಥಾನಮಾನಗಳು ಸಮಾಜದಲ್ಲಿ ಎಷ್ಟು ಚಿಕ್ಕದಿದ್ದರೆ ಅಷ್ಟು ಒಳ್ಳೆಯದು.

ಸ್ನಾನ ಮಾಡುತ್ತಿದ್ದ ಕಳ್ಳ ಸ್ನಾನ ಮುಗಿಸಿ, ಬಿಸಿಲಿಗೆ ಮೈ ಒಡ್ಡಿ ನಿಂತು, ಮೈ ಒಣಗಿಸಿಕೊಳ್ಳತೊಡಗಿದ್ದ. ಧುಮ್ಮಿಕ್ಕುತ್ತ ಹರಿದಿದ್ದ ಕಾವೇರಿಯು, ಶಿವನ ಜಡೆಯಲ್ಲಿ ಬಂಧಿತಳಾದ ಗಂಗೆಯಂತೆ ರೈಲ್ವೆ ಇಲಾಖೆಯ ಕೊಳವೆಯಲ್ಲಿ ಪುನಃ ಬಂಧಿತಳಾಗಿ ಶಾಂತಳಾಗಿದ್ದಳು.  ಗಡಿಯಾರ ನೋಡಿಕೊಂಡೆ. ಇನ್ನೂ ಕಾಯುವುದು ಬಾಕಿಯಿತ್ತು. ಯೋಚಿಸಿದ್ದು ಜಾಸ್ತಿಯಾಗಿ ತಲೆ ಸಿಡಿಯತೊಡಗಿತ್ತು.  ಕುಳಿತವನು ಮೇಲೆದ್ದು, ಪ್ಲಾಟ್‌ಫಾರಮ್ಮಿನಿಂದಿಳಿದು ಹಳಿಗಳ ಗುಂಟ ನಡೆಯತೊಡಗಿದೆ.  ಅಲ್ಲಿ, ಕಲ್ಲಿದ್ದಲ ದೂಳು ಬೂದಿ ಕಸ ಎಲ್ಲವೂ ಮಣ್ಣಾಗಿ ಹಳಿಗಳ ಪಕ್ಕದಲ್ಲಿ ರಾಶಿ ಬಿದ್ದಿದ್ದವು.

ರಾಶಿಯ ಮೇಲೆ ಕಳೆಗಿಡಗಳು ಹುಚ್ಚೆದ್ದಂತೆ ಬೆಳೆದಿದ್ದವು.  ಹಲವು ಬಗೆಯ ಹಸಿರುಗಳು ಅವು! ಹಲವು ಬಗೆಯ ಹೂವುಗಳು! ಒಂದೆರಡು ಕಾಯಿ ನಳನಳಿಸುತ್ತಿತ್ತು. ನಿಬ್ಬೆರಗಾಗಿ ನೋಡುತ್ತ ನಿಂತೆ. ಇದನ್ನೇ ನೈಸರ್ಗಿಕ ಕೃಷಿ ಅನ್ನಬಹುದೇ? ತಿನ್ನಬಹುದಾದ ಸಸ್ಯ ಪ್ರಭೇದವೂ ಇರಬಹುದಲ್ಲವೇ ಈ ಗಿಡಗಳ ನಡುವೆ.  ಈ ಹೂವು ಈ ಹಸಿರು ಈ ಎಲೆ ಒಂದಕ್ಕೂ ನೀರಾವರಿಯಿಲ್ಲ, ಒಂದಕ್ಕೂ ರಾಸಾಯನಿಕ ಗೊಬ್ಬರ ಹಾಕಿಲ್ಲ, ವಿಪರೀತ ಮಳೆಯೂ ಬಂದಿಲ್ಲ ಈ ಬಾರಿ! ಆದರೂ ಹುಳ ಹಿಡಿದಿಲ್ಲ! ಆಶ್ಚರ್ಯವಾಯಿತು.

ಯಾರೋ ಗದರಿದಂತಾಗಿ ಕತ್ತೆತ್ತಿ ನೋಡಿದೆ. ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬ ದುರುಗುಟ್ಟಿಕೊಂಡು ನೋಡುತ್ತಿದ್ದ, ರೈಲ್ವೆ ಆಸ್ತಿ ಕಾಯುವ ಜವಾಬ್ದಾರಿ ಹೊತ್ತಿದ್ದ ಮತ್ತೊಬ್ಬ ಬಡವ! ಕಳ್ಳತನ ಮಾಡಲಿಕ್ಕೆ ಬಂದಿಲ್ಲ ಮಾರಾಯ ಅಂತ ನಗಾಡಿದೆ. ನನ್ನ ಬಿಳಿಯ ಗಡ್ಡ ನೋಡಿ ಅವನಿಗೂ ಹಾಗೆಯೇ ಅನ್ನಿಸಿರಬೇಕು, ಲಾಠಿ ಕೆಳಗಿಳಿಯಿತು. ಆದರವನ ಚಿಂತೆ ಬೇರೆಯದೇ ಇತ್ತು, ಹೇಳಿದ.

ಕಾವೇರಿ ನದಿ ನೀರಿನ ಹಂಚಿಕೆ ಗಲಭೆ ಆರಂಭವಾಗಿದೆ! ಮಂಡ್ಯ ಮದ್ದೂರು ಚನ್ನಪಟ್ಟಣ ರಾಮನಗರ ಕೆಂಗೇರಿ ಎಲ್ಲ ಕಡೆ ಗಲಭೆ ಆರಂಭವಾಗಿದೆ,  ಬೆಂಗಳೂರಂತೂ ಪೂರ್ತಿ ರೌಡಿಗಳ ವಶಕ್ಕೆ ಬಂದಿದೆ ಅಂತ ಸುದ್ದಿ ಕೊಟ್ಟ.  ‘ಎಲ್ಲಿಗೆ ಹೋಗಬೇಕಿತ್ತು’ ಎಂದು ವಿಚಾರಿಸಿದ.  ‘ಬೆಂಗಳೂರು’ ಅಂದೆ.  ‘ಬೇಡ ನೀವು ಮನೆಗೆ ನಡೆಯಿರಿ’ ಎಂದು ಬುದ್ಧಿವಾದ ಹೇಳಿದ! ಅವನಿಂದಲೇ ಗಲಭೆಯಲ್ಲಿ ಸತ್ತವರ ವಿವರಗಳನ್ನು ಪಡೆದುಕೊಂಡು, ಪ್ರಯಾಣ ಬೆಳೆಸದಲೆ, ಯಂತ್ರನಾಗರಿಕತೆಗೆ ಬೆನ್ನು ತಿರುಗಿಸಿ, ಹಿಂದಕ್ಕೆ ಬಂದೆ ನಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT