ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುವಾ-ಭತೀಜಾ ಹಾಗೂ ಮೋದಿ – ಅಮಿತ್‌ ಶಾ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದೇಶದ ಬಹುದೊಡ್ಡ ರಾಜಕೀಯ ರಂಗಭೂಮಿಯಾದ ಉತ್ತರಪ್ರದೇಶದಲ್ಲಿ ಹಠಾತ್ತನೆ ಘಟಿಸತೊಡಗಿರುವ ವಿದ್ಯಮಾನಗಳು ರಾಜಕೀಯ ವಿಶ್ಲೇಷಕರನ್ನು ಚಕಿತಗೊಳಿಸಿವೆ. ದಶಕಗಳ ಹಿಂದೆ ನಡೆದಿದ್ದ ನಾಟಕ ಮತ್ತೆ ಸುರುಳಿ ಬಿಚ್ಚತೊಡಗಿದೆ. ಎರಡರ ನಡುವೆ ನಂಬಲು ಅಸಾಧ್ಯ ಎನಿಸುವಷ್ಟು ಸಾಮ್ಯತೆಯನ್ನು ಗುರುತಿಸಬಹುದು. ಅಂದಿನ ಪಕ್ಷಗಳೇ ಇಂದೂ ಪಾತ್ರಧಾರಿಗಳು. ಸಿದ್ಧಾಂತಗಳೂ ಅವೇ. ಮುಲಾಯಂ ಬದಲಿಗೆ ಅವರ ಮಗ ಅಖಿಲೇಶ್ ರಂಗ ಮಧ್ಯದಲ್ಲಿದ್ದಾರೆ. ಕಾನ್ಶಿರಾಂ ಮರೆಯಾಗಿದ್ದಾರೆ. ಅವರ ಜಾಗ ತುಂಬಿದ್ದಾರೆ ಮಾಗಿದ ಮಾಯಾವತಿ.

ವಾಜಪೇಯಿ-ಅಡ್ವಾಣಿ ಜಾಗದಲ್ಲಿ ಮೋದಿ-ಅಮಿತ್ ಶಾ ಅವರ ಉದ್ದಂಡ ದೋರ್ದಂಡ ಪ್ರಚಂಡ ಜೋಡಿ ಉತ್ತರಪ್ರದೇಶವೂ ಸೇರಿದಂತೆ ದೇಶದ ಉದ್ದಗಲಕ್ಕೆ ಭೋರ್ಗರೆದಿರುವುದೊಂದೇ ಒಡೆದು ತೋರುವ ವ್ಯತ್ಯಾಸ. ಆದರೆ ಅಸಾಮಾನ್ಯ ವ್ಯತ್ಯಾಸವಿದು. ಪರಂಪರಾಗತ ವೈರಿಗಳನ್ನು ಒಂದು ಮಾಡತೊಡಗಿರುವ ವ್ಯತ್ಯಾಸ.

ರಾಮಮಂದಿರ ರಥಯಾತ್ರೆಯನ್ನು ಬಿಹಾರದಲ್ಲಿ ತಡೆದು ನಿಲ್ಲಿಸುವ ಲಾಲು ಪ್ರಸಾದ್ ನೇತೃತ್ವದ ಸರ್ಕಾರ ಅಡ್ವಾಣಿ ಅವರನ್ನು ದಸ್ತಗಿರಿ ಮಾಡುತ್ತದೆ. 1988ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರ ಮತ್ತು ಉತ್ತರಪ್ರದೇಶದ ಮುಲಾಯಂ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬಾಹ್ಯ ಬೆಂಬಲವನ್ನು ಬಿಜೆಪಿ 1990ರ ಅಕ್ಟೋಬರ್‌ನಲ್ಲಿ ವಾಪಸು ಪಡೆಯುತ್ತದೆ.ಎರಡೂ ಸರ್ಕಾರಗಳು ಉರುಳುತ್ತವೆ.

ಮಂಡಲ-ಕಮಂಡಲ(ರಾಮಜನ್ಮಭೂಮಿ ಆಂದೋಲನ) ರಾಜಕಾರಣದಲ್ಲಿ ಕಮಂಡಲದ ಕೈ ಮೇಲಾಗಿ 1991ರಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸುತ್ತದೆ. ಮರುವರ್ಷ ಬಾಬರಿ ಮಸೀದಿಯನ್ನು ನೆಲಸಮ ಮಾಡಲಾಗುತ್ತದೆ. ಆಗ, ಉತ್ತರಪ್ರದೇಶದ ಜೊತೆಗೆ ಮಧ್ಯಪ್ರದೇಶ, ರಾಜಸ್ಥಾನ,ಹಿಮಾಚಲಪ್ರದೇಶದ ಬಿಜೆಪಿ ಸರ್ಕಾರಗಳನ್ನೂ ವಜಾ ಮಾಡಲಾಗುತ್ತದೆ. ಮರುವರ್ಷದ ಚುನಾವಣೆಗಳಲ್ಲಿ ರಾಜಸ್ಥಾನದ ವಿನಾ ಉಳಿದ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸೋಲುತ್ತದೆ. ಆಗ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸೀಟುಗಳು ದಕ್ಕುವುದಿಲ್ಲ ನಿಜ. ಆದರೆ ಹಿಂದಿನ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವೋಟುಗಳು ಹರಿದುಬರುತ್ತವೆ.

ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಒಟ್ಟಾಗುವ ಬೆಳವಣಿಗೆ ಬಿಜೆಪಿಯ ಸೋಲಿನ ನಿಜ ಕಾರಣ ಆಗುತ್ತದೆಯೇ ವಿನಾ ಬಾಬರಿ ಮಸೀದಿ ನೆಲಸಮ ಅಲ್ಲ. ತಮ್ಮ ಸಮಾನ ರಾಜಕೀಯ ಎದುರಾಳಿಯನ್ನು ಮಣಿಸಲು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಕಾನ್ಶಿರಾಂ- ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಐತಿಹಾಸಿಕ ಮೈತ್ರಿ ಮಾಡಿಕೊಂಡಿರುತ್ತವೆ. ಈ ಮೈತ್ರಿಯ ಮಾದರಿ ಪರೀಕ್ಷೆ 1991ರ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ನಡೆದಿರುತ್ತದೆ. ಕಾನ್ಶಿರಾಂ ಮತ್ತು ಮುಲಾಯಂ ಅವರು ಇಟಾವಾ ಮತ್ತು ಜಸ್ವಂತ್ ನಗರ ಎಂಬ ಎರಡು ನೆರೆಹೊರೆಯ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿರುತ್ತಾರೆ. ಬಿಜೆಪಿಯ ಅಲೆಯ ನಡುವೆಯೂ ಪರಸ್ಪರರ ನೆರವಿನಿಂದ ಇಬ್ಬರೂ ಗೆಲ್ಲುತ್ತಾರೆ. ಬಿಜೆಪಿಯನ್ನು ಹಣಿಯುವುದಷ್ಟೇ ಅಲ್ಲದೆ ಎರಡೂ ಪಕ್ಷಗಳು ಮಂಡಲ ರಾಜಕಾರಣ ಮತ್ತು ಜಾತಿ ಆಧಾರಿತ ಮೀಸಲಾತಿ ರಾಜಕಾರಣವನ್ನು ಬೆಂಬಲಿಸಿ ಸೈದ್ಧಾಂತಿಕ ಸಾಮ್ಯವನ್ನೂ ಹೊಂದಿರುತ್ತವೆ.

ದಲಿತ-ಹಿಂದುಳಿದ ಹಾಗೂ ಮುಸ್ಲಿಂ ಮತಗಳ ಸಮೀಕರಣವು ಏರಿ ಬಂದ ಹಿಂದುತ್ವದ ಅಲೆಯನ್ನು ಕೂಡ ತಡೆದು ನಿಲ್ಲಿಸುತ್ತದೆ. ಅತಿ ಹೆಚ್ಚು ಸ್ಥಾನಗಳನ್ನು (177) ಗಳಿಸಿದ್ದಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಬಿಜೆಪಿ.109 ಸೀಟು ಗೆಲ್ಲುವ ಸಮಾಜವಾದಿ ಪಕ್ಷ ಮತ್ತು 69 ಸೀಟು ಗೆಲ್ಲುವ ಬಹುಜನ ಸಮಾಜ ಪಕ್ಷ ಸರ್ಕಾರ ರಚಿಸುತ್ತವೆ. ಕಾಂಗ್ರೆಸ್ ಮತ್ತು ಪಕ್ಷೇತರರು, ಸಣ್ಣ ಪಕ್ಷಗಳು ಬೆಂಬಲ ನೀಡುತ್ತವೆ. ಮುಲಾಯಂ ಮುಖ್ಯಮಂತ್ರಿಯಾಗುತ್ತಾರೆ. ಮಾಯಾವತಿ ಸರ್ಕಾರವನ್ನು ಸೇರದೆ ಹೊರಗುಳಿದು ಮೈತ್ರಿಯ ಉಸ್ತುವಾರಿ ನಡೆಸುತ್ತಾರೆ.

1993ರ ಈ ಮೈತ್ರಿ ಕುರಿತು ಕಾನ್ಶಿರಾಂ ಬಹಳ ಉತ್ಸಾಹದಿಂದಿರುತ್ತಾರೆ. ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರು ಒಂದೇ ವೇದಿಕೆಗೆ ಬಂದ ಬೆಳವಣಿಗೆ ಅವರನ್ನು ಪ್ರಸನ್ನಗೊಳಿಸಿರುತ್ತದೆ. ಮುಲಾಯಂ ಮತ್ತು ಸಮಾಜವಾದಿ ಪಾರ್ಟಿಯ ಬಗೆಗೆ ಅವರಿಗೆ ಅಂತರಂಗದ ನಿರೀಕ್ಷೆಗಳೇನೂ ಇರುವುದಿಲ್ಲ. ಜಾಟ್ ಜನಾಂಗದ ಪಿತಾಮಹ ಚೌಧರಿ ಚರಣಸಿಂಗ್ ಪರಂಪರೆಯನ್ನು ನೊಸಲ ಮೇಲೆ ಧರಿಸಿದವರು ಮುಲಾಯಂ. ದಲಿತರನ್ನು, ವಿಶೇಷವಾಗಿ ಚಮ್ಮಾರರನ್ನು ಕರುಳ ಕಿಸುರೆಂದು ಬಗೆದು ದೂರ ಇರಿಸಿದ್ದವರು ಚರಣ್ ಸಿಂಗ್ ಎಂಬ ವಾಸ್ತವವನ್ನು ಬಲ್ಲವರಾಗಿರುತ್ತಾರೆ. ಉತ್ತರಪ್ರದೇಶದ ಈ ಪ್ರಯೋಗವನ್ನು ದೇಶದ ಇತರೆ ಸೀಮೆಗಳಿಗೂ ವಿಸ್ತರಿಸಬಹುದೆಂಬ ದೂರದ ಆಶಾಭಾವನೆ ಅವರಿಗಿರುತ್ತದೆ.

ಹಿಂದುಳಿದವರನ್ನು ಒಂದುಗೂಡಿಸಿ ಯಶಸ್ಸು ಕಂಡಿದ್ದ ಚತುರ ರಾಜಕಾರಣಿ ಮುಲಾಯಂ. ಅವಕಾಶವಾದವೇ ಅವರ ರಾಜಕೀಯ ಸಿದ್ಧಾಂತ. ‘ಕಮಂಡಲ’ದ ಏಟಿನಿಂದ ತತ್ತರಿಸಿದ್ದರು. ಕೈ ತಪ್ಪಿ ಹೋಯಿತು ಎಂದು ಭಾವಿಸಿದ್ದ ಅಧಿಕಾರ ಸೂತ್ರವನ್ನು ಮತ್ತೆ ಹೇಗಾದರೂ ಹಿಡಿಯಬೇಕಿತ್ತು. ಬಿ.ಎಸ್.ಪಿ. ಜೊತೆ ತಾತ್ಪೂರ್ತಿಕ ಗೆಳೆತನ ಬೆಳೆಸಿದ್ದರು. ಅದರ ಹಿಂದೆ ಯಾವ ಆದರ್ಶವಾದವೂ ಇರಲಿಲ್ಲ. ಕಾಲಾನುಕ್ರಮದಲ್ಲಿ ಬಿ.ಎಸ್.ಪಿ. ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಗುಪ್ತ ಹಂಚಿಕೆ ಅವರಿಗಿತ್ತು.

ಉತ್ತರಪ್ರದೇಶವನ್ನು ಮಾಯಾವತಿಯವರ ಉಸ್ತುವಾರಿಗೆ ಒಪ್ಪಿಸಿ ಸಂಘಟನೆ ಕಟ್ಟಲು ದೇಶಸಂಚಾರ ಹೊರಟರು ಕಾನ್ಶಿರಾಂ. ಮಾಯಾ ಅವರನ್ನು ಉತ್ತರಪ್ರದೇಶದ ‘ಸೂಪರ್ ಚೀಫ್ ಮಿನಿಸ್ಟರ್’ ಎಂದೇ ಕರೆಯತೊಡಗಿತ್ತು ಮೀಡಿಯಾ. ಆರಂಭದ ದಿನಗಳಲ್ಲಿ ಮೈತ್ರಿ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ದಲಿತರ ಮೇಲೆ
ಹೆಚ್ಚತೊಡಗಿದ್ದ ದೌರ್ಜನ್ಯ ಪ್ರಕರಣಗಳನ್ನು ಅವಗಣಿಸಿದರು ಕೂಡ. ಮೈತ್ರಿ ಸರ್ಕಾರ ಕುರಿತು ನಿಜ ಕಾಳಜಿ ಹೊಂದಿದ್ದರು. ಸರ್ಕಾರವನ್ನು ಕೆಡವಲು 50 ಲಕ್ಷ ರೂಪಾಯಿಗಳ ಲಂಚ ತಂದಿದ್ದ ಆಸಾಮಿಯನ್ನು ಪೊಲೀಸರಿಗೆ ಒಪ್ಪಿಸಿದ್ದುಂಟು.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಇನ್ನಷ್ಟು ಹೆಚ್ಚುತ್ತಲೇ ನಡೆದವು. ದಲಿತರಲ್ಲಿ ಮೂಡಿದ್ದ ಹೊಸ ಆತ್ಮವಿಶ್ವಾಸವೇ ಅವರಿಗೆ ಮುಳ್ಳಾಗಿತ್ತು. ಪ್ರಬಲ ಜಾತಿಗಳ ಅಸಹನೆ ಎದುರಿಸಬೇಕಾಯಿತು. ದಲಿತರು ಅಂಬೇಡ್ಕರ್ ಪ್ರತಿಮೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಇರಿಸತೊಡಗಿದ್ದರು. ಮೇರಠ್‌ನಲ್ಲಿ ಇಂತಹ ಪ್ರತಿಮೆಯೊಂದನ್ನು ಬಲವಂತದಿಂದ ಕಿತ್ತು ಹಾಕಿಸಿದ ಮೇಲ್ವರ್ಗಗಳ ಕೃತ್ಯ ದಲಿತರನ್ನು ಬೀದಿಗೆ ಇಳಿಸಿತ್ತು. ಪೊಲೀಸರು ಬಲ ಪ್ರಯೋಗ ನಡೆಸಿದರು. ಗೋಲಿಬಾರ್‌ನಲ್ಲಿ ಇಬ್ಬರು ದಲಿತರು ಹತರಾದರು. ತಮ್ಮ ನಿವೇಶನದಲ್ಲಿ ಅಂಬೇಡ್ಕರ್ ಪ್ರತಿಮೆ ಇರಿಸಲಾಗಿದೆ ಎಂದು ಯಾದವರು ಸಿಟ್ಟಿಗೆದ್ದು ಬಾರಾಬಂಕಿ ಜಿಲ್ಲೆಯಲ್ಲಿ ಜಾತಿ ದಂಗೆಗಳು ಭುಗಿಲೆದ್ದವು. ಮೈತ್ರಿ ಸರ್ಕಾರದ ಮೊದಲ ನಾಲ್ಕು ತಿಂಗಳಲ್ಲೇ ಅಂಬೇಡ್ಕರ್ಪ್ರತಿಮೆಗಳಿಗೆ ಸಂಬಂಧಿಸಿದ ಹಿಂಸಾಚಾರದ 60 ಪ್ರಕರಣಗಳು ಘಟಿಸಿದವು. ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವಿಗೆ ಈಡಾದವರು ದಲಿತರೇ. ಮಿತ್ರ ಪಕ್ಷಗಳ ನಡುವಣ ಭಿನ್ನಮತ ಹಿರಿದಾಗತೊಡಗಿತು. ಬೇಕೆಂದಾಗ ತಮ್ಮ ಶಿಬಿರದತ್ತ ನಡೆದು ಬರುವಂತೆ ಬಿ.ಎಸ್.ಪಿ., ಕಾಂಗ್ರೆಸ್ ಹಾಗೂ ಜನತಾದಳದ ಶಾಸಕರನ್ನು ಆ ವೇಳೆಗೆ ತಯಾರು ಮಾಡಿ ಇಟ್ಟಿದ್ದರು ಮುಲಾಯಂ.

1995ರ ಹೊತ್ತಿಗೆ ಮೈತ್ರಿ ಮುರಿಯುವ ಹಂತ ತಲುಪಿತ್ತು. ಈ ನಡುವೆ ವಾಜಪೇಯಿ-ಕಾನ್ಶಿರಾಂ ಹತ್ತಿರ ಬಂದಿದ್ದ ಬೆಳವಣಿಗೆಯನ್ನು ಮುಲಾಯಂ ಗ್ರಹಿಸಿರಲಿಲ್ಲ. ಬಿ.ಎಸ್.ಪಿ.ಗೆ ಬೆಂಬಲ ನೀಡಿ ಮುಲಾಯಂ ಅವರನ್ನು ಉರುಳಿಸುವ ಬಿಜೆಪಿ ಹಂಚಿಕೆ ಸಿದ್ಧವಾಗಿತ್ತು. ತಮ್ಮ ಶಾಸಕರನ್ನು ಅಪಹರಿಸುವ ಮುಲಾಯಂ ಸಂಚಿನ ಕುರಿತು ಅಸಮಾಧಾನ ಹೊಂದಿದ್ದ ಕಾಂಗ್ರೆಸ್ ಮತ್ತು ಜನತಾದಳ ಕೂಡ ಈ ಗೋಪ್ಯ ಕಾರ್ಯಾಚರಣೆಗೆ ಒಪ್ಪಿಗೆ ನೀಡಿದ್ದವು. ಕಾನ್ಶಿರಾಂ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದ್ದರು. ಮಾಯಾವತಿ ಅವರಿಗೆ ಯೋಜನೆ ವಿವರಿಸಿದ ಕಾನ್ಶಿರಾಂ, ಮುಖ್ಯಮಂತ್ರಿ ಆಗುವಂತೆ ಸೂಚಿಸಿದರು. 1995ರ ಜೂನ್ ಒಂದರಂದು ಮೈತ್ರಿ ಸರ್ಕಾರಕ್ಕೆ ತನ್ನ ಬೆಂಬಲವನ್ನು ಬಿ.ಎಸ್.ಪಿ. ಹಿಂತೆಗೆದುಕೊಂಡಿತ್ತು. ಕುದ್ದು ಹೋದರು ಮುಲಾಯಂ.

ಸರ್ಕಾರ ಉಳಿಸಿಕೊಳ್ಳಲು ಸಾಮ ದಾನ ಭೇದ ದಂಡ ಪ್ರಯೋಗಗಳಿಗೆ ಇಳಿದರು. ಮಾಯಾವತಿ ಅವರನ್ನು ಬೆದರಿಸಿ ಮಣಿಸಲು ಮುಂದಾದರು. ಜೂನ್ ಎರಡರ ಅಪರಾಹ್ನ ಲಖನೌದ ಸರ್ಕಾರಿ ಅತಿಥಿ ಗೃಹದಲ್ಲಿ ಮಾಯಾವತಿ ತಮ್ಮ ಶಾಸಕರು- ತಲೆಯಾಳುಗಳ ಜೊತೆ ಸಮಾಲೋಚನೆ ನಡೆಸಿ ಮುಗಿಸಿದ್ದ ನಾಲ್ಕು ಗಂಟೆ ವೇಳೆ. ‘ಚಮ್ಮಾರರಿಗೆ ಹುಚ್ಚು ಹಿಡಿದಿದೆ... ಅವರಿಗೆ ಬುದ್ಧಿ ಕಲಿಸಬೇಕಿದೆ’ ಮುಂತಾದ ಅವಾಚ್ಯ ಬೈಗುಳಗಳ ಕಿರುಚುತ್ತಿದ್ದ ಸಮಾಜವಾದಿ ಪಾರ್ಟಿಯ ಶಾಸಕರು- ಕಾರ್ಯಕರ್ತರ 200 ಮಂದಿ ಗುಂಪು ಅತಿಥಿಗೃಹಕ್ಕೆ ಲಗ್ಗೆ ಇಟ್ಟು ದಾಂದಲೆ ನಡೆಸಿತು. ಕೋಣೆಗಳ ಬಾಗಿಲು ಒಡೆದು ಬಿ.ಎಸ್.ಪಿ.ಶಾಸಕರ ಮೇಲೆ ಹಲ್ಲೆ ನಡೆಸಿತು. ಐವರನ್ನು ಎತ್ತಿ ಹಾಕಿಕೊಂಡು ಮುಖ್ಯಮಂತ್ರಿ ನಿವಾಸಕ್ಕೆ ಒಯ್ದು ಬಂಡಾಯ ಬಿ.ಎಸ್.ಪಿ. ಶಾಸಕರ ಗುಂಪನ್ನು ಸೇರುವಂತೆ ಒತ್ತಾಯದಿಂದ ಸಹಿ ಮಾಡಿಸಲಾಯಿತು. ಮಾಯಾವತಿ ಅವರ ಕೋಣೆಯ ಬಾಗಿಲು ಮುರಿಯಲು ಮುಂದಾದ ಮುಲಾಯಂ ಬೆಂಬಲಿಗರು ಆಕೆಯ ವಿರುದ್ಧ ಆಡಬಾರದ ಬೈಗುಳಗಳ ಮಳೆ ಸುರಿಸಿದರು. ಅವರ ಆಕ್ರೋಶ ಮುಗಿಲು ಮುಟ್ಟಿತ್ತು. ಕೋಣೆಯೊಳಗೆ ಥರಗುಟ್ಟಿದ್ದ ಮಾಯಾವತಿ ತಮ್ಮ ಬದುಕಿನಲ್ಲಿ ಮರೆಯಲಾಗದ ರಾತ್ರಿಯದು. ಮಹಿಳೆಯಾಗಿ ಅದರಲ್ಲೂ ದಲಿತ ಮಹಿಳೆಯಾಗಿ ಭರಿಸಿದ ಅವಮಾನ ಎಣೆಯಿಲ್ಲದ್ದು. ಮುಂಬರುವ ದಿನಗಳಲ್ಲಿ ಮಾಯಾ ಅವರ ಉಕ್ಕಿನ ಇಚ್ಛಾಶಕ್ತಿಯನ್ನು ರೂಪಿಸುವಲ್ಲಿ ಈ ಘಟನೆ ವಹಿಸಿದ ಪಾತ್ರ ಮಹತ್ತರ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಕೇಂದ್ರ ಸರ್ಕಾರ, ರಾಜ್ಯಪಾಲ ಹಾಗೂ ಬಿಜೆಪಿ ನಾಯಕರ ಮಧ್ಯಪ್ರವೇಶದ ಕಾರಣ ರಾತ್ರಿ ಹನ್ನೊಂದರ ವೇಳೆಗೆ ಪರಿಸ್ಥಿತಿ ತಹಬಂದಿಗೆ ಬಂದಿತ್ತು. ಮುಲಾಯಂ ತಮ್ಮ ರಾಜಕೀಯ ಬದುಕಿನಲ್ಲಿ ಎಸಗಿದ ಈ ಮಹಾಪಾತಕಕ್ಕೆ ಬೆಲೆ ತೆರಬೇಕಾಗುತ್ತದೆ. ರಾಜಕೀಯ ಒಂಟಿತನ ಎದುರಿಸಬೇಕಾಗುತ್ತದೆ. ಸಮೂಹ ಮಾಧ್ಯಮಗಳ ಸಹಾನುಭೂತಿ ಮಾಯಾವತಿ ಅವರತ್ತ ತಿರುಗುತ್ತದೆ. ‘ಅತಿಥಿಗೃಹ ಕಾಂಡ’ ಎಂದೇ ಕುಖ್ಯಾತವಾಗುವ ಈ ಕರಾಳ ಘಟನೆ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳ ಸಂಬಂಧವನ್ನು ‘ಎಲ್ಲ ಕಾಲಕ್ಕೂ’ ತುಂಡರಿಸಿಬಿಡುತ್ತದೆ.

ಅಂದಿನಿಂದ ಗಂಗೆ- ಯಮುನೆಯಲ್ಲಿ ಹರಿದ ನೀರನ್ನು ಲೆಕ್ಕ ಇಟ್ಟವರಿಲ್ಲ. 23 ವರ್ಷಗಳ ರಾಜಕೀಯ ಹಲ್ಲಾಹಲ್ಲಿಗಳು, ಏಳುಬೀಳುಗಳ ನಂತರ ಅಂದಿನ ಇವೇ ಶಕ್ತಿಗಳು ಇಂದು ಉತ್ತರಪ್ರದೇಶದ ರಾಜಕೀಯ ರಣಾಂಗಣದಲ್ಲಿ ಮುಖಾಮುಖಿಯಾಗಿ ನಿಲ್ಲತೊಡಗಿವೆ.

ಎದುರಾಳಿಗಳನ್ನು ನಿರ್ದಯೆಯಿಂದ ಹೊಸಕಿ ಹಾಕುವಲ್ಲಿ ಮೋದಿ-ಅಮಿತ್ ಶಾ ಜೋಡಿಗೆ ಎಣೆಯಿಲ್ಲ. ಅವರ ಇದೇ ರಾಜಕಾರಣ- ರಣತಂತ್ರ ಇದೀಗ ಹಳೆಯ ವೈರಿಗಳನ್ನು ಒಂದು ಮಾಡತೊಡಗಿದೆ. ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಅಗಾಧ ಮುಖಭಂಗ ಎದುರಿಸಿತು.
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಯೇ ಈ ಮುಖಭಂಗದ ಹಿಂದಿನ ಕಾರಣ. ಅಪಮಾನವನ್ನು ಚಕ್ರಬಡ್ಡಿ ಸಹಿತ ತೀರಿಸಿಕೊಳ್ಳುವ ಜಿದ್ದಿನವರು ಅಮಿತ್ ಶಾ. 2019ರ ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಹಾದಿಯ ಮುಳ್ಳಾಗಬಹುದಾದ ಈ ಪ್ರಬಲ ಮೈತ್ರಿಯನ್ನು ಮೊಳಕೆಯಲ್ಲೇ ಚಿವುಟುವ ಪ್ರಯತ್ನ ಮಾಡಿದರು. ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಗೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ತನ್ನ ಹತ್ತು ಹೆಚ್ಚುವರಿ ಮತಗಳನ್ನು ಬಿ.ಎಸ್.ಪಿ. ಅಭ್ಯರ್ಥಿಗೆ ನೀಡಿ ಗೆಲ್ಲಿಸಿ ರಾಜ್ಯಸಭೆಗೆ ಕಳಿಸುವ ವಚನ ನೀಡಿತ್ತು ಸಮಾಜವಾದಿ ಪಕ್ಷ. ಈ ಒಪ್ಪಂದಕ್ಕೆ ಯಶಸ್ವಿಯಾಗಿ ಕಲ್ಲು ಹಾಕಿದರು ಅಮಿತ್ ಶಾ.

ಒಪ್ಪಂದ ವಿಫಲವಾದರೆ ಅಪಾರ ಸಿಟ್ಟು ಸೆಡವಿನ ಮಾಯಾವತಿಯವರು ಮೈತ್ರಿ ಮುರಿಯುವರು ಎಂಬ ಶಾ ನಿರೀಕ್ಷೆ ಸುಳ್ಳಾಗಿದೆ. ಸಮಾಜವಾದಿ ಪಕ್ಷದ ವಿರುದ್ಧ ತಮಗಿದ್ದ ಕರುಳದ್ವೇಷವನ್ನು ಮರೆಯಲು ಮುಂದಾಗಿದ್ದಾರೆ ಮಾಯಾವತಿ. 2019ರ ಲೋಕಸಭಾ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.

ತಂದೆ ಮುಲಾಯಂ ಹಿಡಿತದಿಂದ ಪಕ್ಷವನ್ನು ಬಿಡಿಸಿಕೊಂಡಿರುವ ಅಖಿಲೇಶ್ ಯಾದವ್ ಹೊಸ ತಲೆಮಾರಿನ ಹೊಸಗಾಳಿಯ ರಾಜಕಾರಣಿ ಎಂದು ಈಗಾಗಲೇ ಸರ್ಕಾರ ನಡೆಸಿ ಸಾಬೀತು ಮಾಡಿದ್ದಾರೆ. ಮಾಯಾವತಿ ಅವರನ್ನು ‘ಬುವಾ’ ಎಂದೇ ಗೌರವಪೂರ್ವಕವಾಗಿ ಸಂಬೋಧಿಸುತ್ತಾರೆ. ತಂದೆಯ ಸೋದರಿ-ಅತ್ತೆ- ಎಂಬುದು ಬುವಾ ಎಂಬ ಹಿಂದಿ ಪದದ ಅರ್ಥ. ಹೊಸ ಶತ್ರುವನ್ನು ಹಿಮ್ಮೆಟ್ಟಿಸಲು ಹಳೆಯ ವೈರಿಯ ಜೊತೆ ಕೈಗೂಡಿಸಲು ಅಖಿಲೇಶ್ ಮತ್ತು ಮಾಯಾವತಿ ಇಬ್ಬರೂ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT