ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜು ಅಗ್ಗವಾಗಿಸಿದರು ಮೋದೀಜಿ

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಕನ್ನಡದ ಪ್ರಮುಖ ಪತ್ರಿಕೆಯೊಂದರ ವಾಣಿಜ್ಯ ಪುಟದಲ್ಲಿ ಇತ್ತೀಚೆಗೆ ಎರಡು ಸುದ್ದಿಗಳು ಪ್ರಕಟವಾದವು, ಒಂದರ ಪಕ್ಕ ಒಂದು ಪ್ರಕಟವಾದವು. ಎರಡೂ ಸುದ್ದಿಗಳು ಜಿ.ಎಸ್.ಟಿ. ಎಂಬ ಹೊಸ ತೆರಿಗೆಗೆ ಸಂಬಂಧಿಸಿದ್ದವು. ಮೊದಲ ಸುದ್ದಿ, ತೆರಿಗೆ ಜಾರಿಗೊಂಡ ನಂತರ ಅಗ್ಗವಾಗಿರುವ ಮೋಜಿನ ಕಾರು, ಮೋಜಿನ ಸಿಗರೇಟು ಇತ್ಯಾದಿಗಳ ಬಗ್ಗೆ ಇದ್ದರೆ, ಎರಡನೆಯ ಸುದ್ದಿಯು ತೆರಿಗೆಯಿಂದಾಗಿ ಜರ್ಜರಿತರಾಗಿರುವ ನೇಕಾರರ ಬಗ್ಗೆ ಇತ್ತು.

ಮೊದಲ ಸುದ್ದಿಯ ಜೊತೆಗೆ ಸ್ಟಾಕ್ ಮಾರ್ಕೆಟ್ಟಿನ ಮಿನುಗುವ ಚಿತ್ರವೂ ಇತ್ತು. ವಿಧವಿಧದ  ಕಾರುಗಳ ಜಾಹೀರಾತು ಸುದ್ದಿಯ ಪಕ್ಕದಲ್ಲಿತ್ತು. ಎರಡನೆಯ ಸುದ್ದಿಯಲ್ಲಿ, ಹೊಸ ತೆರಿಗೆಯಿಂದಾಗಿ ಜರ್ಜರಿತರಾಗಿರುವ ನೇಕಾರರ ಪೆಚ್ಚು ಮುಖಗಳಿದ್ದವು, ಹಳ್ಳಿಗಳ ಹೆಸರಿತ್ತು, ಮುರಿದ ಮಗ್ಗವೊಂದು ಹಿಂಭಾಗದಲ್ಲಿ ಗೋಡೆಗಾತುಕೊಂಡು ನಿಂತಿತ್ತು. ಇಂದಿನ ಆರ್ಥಿಕ ಪ್ರಗತಿಯ ಸಂಯಕ್ ಚಿತ್ರಣ – ಇವೆರಡೂ ಸುದ್ದಿಗಳು.

ಜಿ.ಎಸ್.ಟಿ.ಯಿಂದಾಗಿ, ಖಾದಿ ಹಾಗೂ ಕೈಮಗ್ಗವೂ ಸೇರಿದಂತೆ ಬಡವರ ಉತ್ಪನ್ನಗಳು ದುಬಾರಿಯಾಗಿವೆ. ಈ ಬೆಲೆ ಏರಿಕೆಯಿಂದಾಗಿ ಅವುಗಳ ಮಾರುಕಟ್ಟೆ ಈಗಾಗಲೇ ಕುಸಿತ ಕಂಡಿದೆ, ಇನ್ನೂ ಕುಸಿಯಲಿದೆ. ಇತ್ತ ಕೈಗಾರಿಕಾ ವಸ್ತುಗಳ ಉತ್ಪಾದನೆ ಹೆಚ್ಚಲಿದೆ. ಅದರಲ್ಲೂ ಮೋಜಿನ ವಸ್ತುಗಳ ಉತ್ಪಾದನೆ ಮತ್ತೂ ಹೆಚ್ಚಲಿದೆ. ಬೆಂಗಳೂರಿನ ಬೀದಿಗಳಲ್ಲಿ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಲಿದೆ. 

ಪತ್ರಿಕೆಯ ವರದಿ ಉತ್ಪ್ರೇಕ್ಷೆಯಿಂದ ಕೂಡಿರಬಹುದು ಎಂದನ್ನಿಸಿ ಒಬ್ಬ ವೃತ್ತಿಪರ ಲೆಕ್ಕಪರಿಶೋಧಕನ ಬಳಿಗೆ ಹೋಗಿ ಕೇಳಿದೆ. ಆತ ಹೇಳಿದ, ‘ಬೆಲೆಯ ಏರಿಳಿಕೆಗಳ ಬಗ್ಗೆ ನನಗೆ ಅಷ್ಟಾಗಿ ತಿಳಿಯದು. ಅದು ನನ್ನ ತಜ್ಞತೆಯಲ್ಲ. ಆದರೆ ಜಿ.ಎಸ್.ಟಿ.ಯಿಂದಾಗಿ ನನ್ನ ತಲೆನೋವು ಸಾಕಷ್ಟು ಕಡಿಮೆಯಾಗಲಿದೆ... ಹಲವು ರಾಜ್ಯಗಳ, ಹಲವು ಇಲಾಖೆಗಳ, ಹಲವು ಭ್ರಷ್ಟರ ಮುಂದೆ ನಿಂತು ಹಲ್ಲುಗಿಂಜಬೇಕಿಲ್ಲ ವರ್ತಕರು ಇನ್ನು ಮುಂದೆ... ಭ್ರಷ್ಟಾಚಾರ ಸಾಕಷ್ಟು ಕಡಿಮೆಯಾಗಲಿದೆ’ ಅಂದ. ಆತನ ಮಾತು, ಅವನ ಮಟ್ಟಿಗೆ ಸರಿ ಅನ್ನಿಸಿತು.

ಆದರೆ, ‘ಈ ದೇಶದಲ್ಲಿ ತೆರಿಗೆ ಕೊಡಲಾಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ವರ್ತಕರು, ಗ್ರಾಮೀಣ ಕುಶಲಕರ್ಮಿಗಳು ಹಾಗೂ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಗತಿ ಏನಾದೀತು’ ಎಂದು ಕೇಳಿದೆ. ‘ಅವರು, ತೆರಿಗೆ ರಿಜಿಸ್ಟರ್ ಮಾಡಿಸದೆಯೂ ವ್ಯಾಪಾರ ಮಾಡಬಹುದು, ಕಾನೂನು ಮಾನ್ಯ ಮಾಡಿದೆ ಅಂತಹ ವ್ಯಾಪಾರವನ್ನು’ ಅಂದ.

ಹಾಗಂದವನು, ಕುಹಕದ ನಗೆ ಬೀರಿ, ಮತ್ತೊಂದು ಮಾತು ಸೇರಿಸಿದ. ‘ವ್ಯಾಪಾರ ಮಾಡಬಹುದು ನಿಜ, ಆದರೆ ವ್ಯಾಪಾರ ಮಾಡುವಾಗ ಬೀದಿ ಬದಿಯಿಂದ ಚರಂಡಿ ಬದಿಗೆ ತಳ್ಳಲ್ಪಡುತ್ತಾರೆ ಅವರು’ ಅಂದ. ‘ಅದು ಹೇಗೆ’ ಅಂದೆ. ಮಾಲ್‌ಗಳತ್ತ ಬೆರಳು ತೋರಿಸಿದ, ‘ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗಲಿವೆ, ಸರ್ಕಾರಗಳು ಮಾಲ್‌ಗಳಿಗೆ ಪೂರಕವಾಗಿರಲಿವೆ’ ಅಂದ. ‘ಏಕೆ’ ಅಂದೆ. ‘ಇವರು ತೆರಿಗೆ ಕೊಡುತ್ತಾರೆ’ ಅಂದ.

ಛೆ! ಇರಲಾರದು ಅನ್ನಿಸಿತು. ತಿಳಿದುಕೊಳ್ಳೋಣ ಎಂದು ಸಿಟಿಮಾರ್ಕೆಟ್ಟಿಗೆ ಹೋದೆ.  ತರಕಾರಿ ರಾಶಿ, ಹೂವಿನ ರಾಶಿ, ಕೊಳೆತ ಕಸದ ರಾಶಿಗಳ ಜೊತೆಗೆ ಬೀದಿ ಬದಿ ವ್ಯಾಪಾರಿಗಳು ರಾಶಿ ರಾಶಿ ನೆರೆದಿದ್ದರು ಅಲ್ಲಿ. ಆ ರಾಶಿಯೊಳಗೆ ಚಾಪೆ ಮಾರುವ ಸಣ್ಣದೊಂದು ಅಂಗಡಿಯಿದೆ. ತುಂಬ ಉಪಯುಕ್ತ ಅಂಗಡಿ.

ಉದಾಹರಣೆಗೆ, ಸತ್ತವರನ್ನು ಸ್ವರ್ಗಕ್ಕೆ ಕಳುಹಿಸಬೇಕೆಂದರೆ ಸಾಬರಿಗೆ ಈಚಲ ಚಾಪೆ ಬೇಕೇ ಬೇಕು. ಖರ್ಜೂರದ ಮರದ ದಾಯಾದಿ ಈಚಲಿಗೆ ಅವರಲ್ಲಿ ಧಾರ್ಮಿಕ ವೈಶಿಷ್ಟ್ಯ ಇದೆ. ಹಾಗಾಗಿ ಬೇಕು. ಇತ್ತ ಹಿಂದೂಗಳಿಗೆ, ಚಟ್ಟ ಕಟ್ಟಲಿಕ್ಕೆ ಬೊಂಬು ಕೊಳ್ಳಲಿಕ್ಕೆ ಅದೇ ಅಂಗಡಿ ಬೇಕು. ನಾನು, ಜೊಂಡಿನಿಂದ ನೇಯ್ದ ಚಾಪೆಯೊಂದನ್ನು ಕೊಂಡೆ.

ಅಂಗಡಿಯ ಮಾಲೀಕ ಪರಿಚಯಸ್ಥ, ‘ಯಜಮಾನ್ರೆ! ಇನ್ನೂ ಎರಡು ಚಾಪೆ ಕೊಂಡುಬಿಡಿ. ಮುಂದಿನ ವಾರ ಚಾಪೆ ದುಬಾರಿಯಾಗಲಿದೆ’ ಅಂದ. ‘ಆಗಲಿ ಬಿಡಯ್ಯ ಏನೀಗ? ಹೆಚ್ಚಿನ ಲಾಭ ಬರುತ್ತದೆ ತಾನೆ ನಿನಗೆ?’ ಅಂದೆ ಛೇಡಿಸುವಂತೆ. ಅಂಗಡಿಯಾತ ಮುಖ ಸಪ್ಪಗೆ ಮಾಡಿಕೊಂಡ. ‘ಇಲ್ಲ ಯಾಜಮಾನ್ರೆ! ನನಗೂ ಲಾಭ ಇಲ್ಲ, ನೇಯ್ದವನಿಗೂ ಇಲ್ಲ, ನಿಮಗೂ ಇಲ್ಲ, ಈ ಹಾಳು ಹೊಸ ತೆರಿಗೆಯಿಂದ’ ಅಂದ. ವ್ಯಾಪಾರ ಕುಸಿತದ ಭೀತಿ ಕುಣಿಯುತ್ತಿತ್ತು ಅವನ ಕಣ್ಣಲ್ಲಿ.

ಆದರೂ ನಂಬಲಿಲ್ಲ ನಾನು. ಸಲ್ಲದ ಮಾತಿಗೆ ಕಿವಿಕೊಟ್ಟಿರಬಹುದು ಇವನು, ಸಂಕೀರ್ಣವಾದ ತೆರಿಗೆ ವ್ಯವಸ್ಥೆಯೊಂದರ ಕಲ್ಯಾಣ ಗುಣಗಳು ತಿಳಿಯದೆ ಇರಬಹುದು ಇವನಿಗೆ ಅನ್ನಿಸಿ, ಮಧ್ಯಮ ವರ್ಗದ ಮಿತ್ರನೊಬ್ಬನನ್ನು ಹುಡುಕಿಕೊಂಡು ಹೋದೆ. ಈತ ಮೋದೀಜಿಯವರ ಬೆಂಬಲಿಗ, ಕಾಲೇಜು ಪ್ರೊಫೆಸರ್. ಈತ ಹೇಳಿದ, ‘ಕಾರುಗಳ ಬೆಲೆ ಇಳಿದಿರುವುದು ನಿಜ, ಆದರೆ ನನ್ನಂತಹವನಿಗೆ ಹೆಚ್ಚು ಉಪಯೋಗವಿಲ್ಲ’.  ‘ಏಕೆ’ ಎಂದು ಕೇಳಿದೆ, ನಕ್ಕ. ‘ನಾನೊಬ್ಬ ಸಾಧಾರಣ ಮನುಷ್ಯ! ಸಾಧಾರಣವಾದೊಂದು ಕಾರು ಕೊಳ್ಳಬೇಕಿದೆ ನನಗೆ. ಸಾಧಾರಣ ಕಾರಿನ ಬೆಲೆ ಸಾಧಾರಣ ಇಳಿಕೆ ಕಂಡಿದೆ, ಮೋಜಿನ ಕಾರಿನ ಬೆಲೆ ಮೋಜಿನ ಇಳಿಕೆ ಕಂಡಿದೆ’ ಅಂದ. ವಿಚಿತ್ರ ಅನ್ನಿಸಿತು. ‘ಏಕೆ ಹೀಗೆ ಮಾಡಿದರು ಮೋದೀಜಿ’ ಎಂದು ಚಿಂತಿಸುತ್ತ ಗ್ರಾಮಕ್ಕೆ ಹಿಂದಿರುಗಿದೆ.

ಇಲ್ಲಿ, ಹೆಗ್ಗೋಡಿನಲ್ಲಿ, ಚರಕದ ಹೆಣ್ಣುಮಕ್ಕಳ ಮುಖ ಸಪ್ಪಗಾಗಿತ್ತು. ‘ಗಾಯದ ಮೇಲೆ ಬರೆ ಎಳೆದರು ಸಾರ್!’ ಅಂದರು. ‘ಯಾಕಮ್ಮ, ಏನಾಯಿತು!’ ಅಂದೆ. ‘ಕೈಮಗ್ಗದ ನೂಲಿಗೆ ನೀಡುತ್ತಿದ್ದ ಸಹಾಯಧನ ನಿಲ್ಲಿಸಿದರು ಸಾರ್, ಆರು ತಿಂಗಳ ಹಿಂದೆ! ಈಗ ನೂಲಿನ ಮೇಲೆ ಜಿ.ಎಸ್.ಟಿ. ತೆರಿಗೆ ಹಾಕಿದ್ದಾರೆ!’ ಅಂದರು. ‘ಛೆ... ಛೆ... ಸ್ವಾತಂತ್ರ್ಯಾನಂತರದಲ್ಲಿ ಯಾವ ಪಕ್ಷವೂ ಮಾಡದ ಪಾಪದ ಕೆಲಸವಿದು... ಬ್ರಿಟಿಷ್ ವಸಾಹತುಶಾಹಿ ಮಾಡಿದ್ದ ಕೆಲಸ...! ಮೋದೀಜಿ ಹೀಗೆ ಮಾಡಿರಲಾರರಮ್ಮ’ ಅಂದೆ. ಹೆಣ್ಣು ಮಕ್ಕಳು ಮುಖ ಹಿಂಡಿಕೊಂಡರು, ‘ಬರಿ ನೂಲಿಗಷ್ಟೇ ಅಲ್ಲ ಸಾರ್, ನೇಯ್ದ ವಸ್ತ್ರಕ್ಕೂ ಹಾಕಿದ್ದಾರೆ ತೆರಿಗೆ’ ಅಂದರು.

ಎಲಾ ಇವನಾ, ಅನ್ನಿಸಿ ಧಾರವಾಡಕ್ಕೆ ಹೋದೆ. ಅಲ್ಲಿ ಖಾದಿ ಸಂಘದ ಅಧ್ಯಕ್ಷರನ್ನು ಭೆಟ್ಟಿಯಾದೆ. ಅವರ ವೃದ್ಧ ಮುಖ ಮತ್ತೂ ಪೆಚ್ಚಾಗಿತ್ತು. ತಮ್ಮ ತಲೆಯ ಮೇಲಿನ ಟೊಪ್ಪಿಗೆ ತೆಗೆದು, ಬೋಳುತಲೆ ತೋರಿಸಿ, ‘ಟೊಪ್ಪಿಗಿ ಒಂದss ಬಿಟ್ಟು ಮತ್ತೆಲ್ಲಾ ವಸ್ತ್ರದ ಮ್ಯಾಲೂ ಜಡಿದಾರ್ರೀ, ತೆರಿಗಿ!’ ಅಂದರು. ಬೆಕ್ಕಸಬೆರಗಾದೆ. ‘ಖಾದಿ ಬಟ್ಟೆಯ ಮೇಲೆ ತೆರಿಗೆ!... ಶಿವ, ಶಿವ!... ಟೊಪ್ಪಿಗೆಯಾದರೂ ಉಳಿಯಿತಲ್ಲ ಸದ್ಯ, ಬಡವರ ಪಾಲಿಗೆ’ ಎಂದು ಏನೇನೋ ಅಸಂಬದ್ಧ ಗೊಣಗಿಕೊಳ್ಳುತ್ತ ಊರು ತಲುಪಿದೆ.

ಹೇಗೇ ಯೋಚಿಸಿದರೂ, ಏನೇ ತಿಪ್ಪರಲಾಗ ಹಾಕಿದರೂ, ಮೋದೀಜಿಯವರ ಜಿ.ಎಸ್.ಟಿ. ನಡೆ ಅರ್ಥವಾಗದು ನನಗೆ. ಕಾಂಗ್ರೆಸ್ಸಿನ ಲಾಂಛನವಾಗಿತ್ತು ಖಾದಿ... ಹಾಗಾಗಿ ಸೇಡು ತೀರಿಸಿಕೊಂಡಿದ್ದಾರೆ ಮೋದೀಜಿ ಎಂದನ್ನಬಹುದು... ಆದರೆ ಸಣ್ಣ ವ್ಯಾಪಾರಿಗಳನ್ನು ಏನನ್ನುತ್ತೀರಿ? ಅವರೇನು ಪಾಪ ಮಾಡಿದ್ದರು? ನನಗಿನ್ನೂ ನೆನಪಿದೆ. ನಾನಾಗ ಕಾಲೇಜು ವಿದ್ಯಾರ್ಥಿ. ಆಗಿನ್ನೂ ಬಿಜೆಪಿ ಹುಟ್ಟಿರಲಿಲ್ಲ. ಅದರ ಮಾತೃಪಕ್ಷ ಜನಸಂಘ ಇತ್ತು.

ಈ ಜನಸಂಘವನ್ನು ಸಾಕಿ ಸಲಹಿದವರೇ ಸಣ್ಣವ್ಯಾಪಾರಿಗಳು. ಸಣ್ಣ ವ್ಯಾಪಾರಿಗಳನ್ನು ಮರೆತರೇ ಮೋದೀಜಿ! ಅಥವಾ ಬಡವರನ್ನು ಕೆರಳಿಸಲೆಂದೇ, ಬೇಕೆಂದೇ, ಹೀಗೆ ಮಾಡುತ್ತಿದ್ದಾರೆಯೇ? ಮೋದೀಜಿ ದಡ್ಡರೆಂದು ನನಗನ್ನಿಸಲಿಲ್ಲ. ಅವರೂ ಸೇರಿದಂತೆ, ಈ ದೇಶದ ಎಲ್ಲ ರಾಜಕಾರಣಿಗಳಿಗೆ ಬಡವರನ್ನು ಓಲೈಸಬೇಕೆಂಬ ಕನಿಷ್ಠ ತಿಳಿವಳಿಕೆ ಇದೆ. ಓಲೈಸುತ್ತಿದ್ದಾರೆ ಕೂಡ. ಓಲೈಸುವ ಪರಿ ಬದಲಾಗಿದೆ ಅಷ್ಟೇ. ನನಗಾದ ಹೊಸ ಜ್ಞಾನೋದಯವಿದು, ಇಷ್ಟೆಲ್ಲ ತಿರುಗಾಟದ ನಂತರ.

ಒಟ್ಟು ಕತೆಯ ನೀತಿಯೆಂದರೆ, ಸರ್ಕಾರಗಳಿಗೆ ನಂಬಿಕೆ ಹೋಗಿದೆ. ಗ್ರಾಮೀಣ ಉತ್ಪಾದಕತೆಯನ್ನು ಎತ್ತಬಹುದು,  ಬಡತನವನ್ನು ಹೋಗಲಾಡಿಸಬಹುದು ಎಂಬ ನಂಬಿಕೆ ಹೊರಟುಹೋಗಿದೆ ಸರ್ಕಾರಗಳಿಗೆ. ಬಡತನವನ್ನು ಸಬ್ಸಿಡೈಸ್ ಮಾಡುವ ಹೊಸ ಚಾಳಿ ಶುರುವಾಗಿದೆ. ವಿವಿಧ ಬಗೆಯ ಸೌಲಭ್ಯಗಳನ್ನು ಮುಫತ್ತಾಗಿ ನೀಡುವುದು, ಕಾಲ ಕಾಲಕ್ಕೆ ಸಾಲ ಮನ್ನಾ ಮಾಡುವುದು... ಹೀಗೆ, ಒಟ್ಟಾರೆಯಾಗಿ ಬಡವರಿಗೆ ಭಿಕ್ಷೆ ಹಾಕುವ ಹೊಸ ನೀತಿ ಜಾರಿಗೆ ಬಂದಿದೆ. ಅತ್ತ ಶ್ರೀಮಂತರನ್ನು ಓಲೈಸಿ, ಇತ್ತ ಬಡತನವನ್ನು ಸಬ್ಸಿಡೈಸ್ ಮಾಡುವುದು ಕಡಿಮೆ ಖರ್ಚಿನ ಕೆಲಸ ಎಂದು ಅನ್ನಿಸಿದೆ ಅವರಿಗೆ. ಇನ್ನೂ ಸರಳವಾಗಿ ಹೇಳುವುದಾದರೆ, ಬಡವರನ್ನು ಕೊಂಡುಬಿಡುವುದೇ ಸುಲಭ ಎಂದು ಅನ್ನಿಸಿದೆ ಅವರಿಗೆ.

ಗ್ರಾಮೀಣ ಉತ್ಪಾದಕತೆ ಸಣ್ಣ ಉತ್ಪಾದಕತೆ. ಕಡಿಮೆ ಲಾಭದ ಉತ್ಪಾದಕತೆಯದು. ಮಳೆಯಾಧಾರಿತವಾದದ್ದು. ಮನುಷ್ಯರನ್ನು ಆಧರಿಸಿದ್ದು. ಇದನ್ನೇ ಸಾಂಸ್ಕೃತಿಕ ಉತ್ಪಾದಕತೆ ಎಂದು ಸಹ ಕರೆಯಲಾಗುತ್ತದೆ. ಇದು ರೂಪಿಸುತ್ತದೆ, ಬಿಜೆಪಿ ಪ್ರತಿಪಾದಿಸುವ ಸಾಂಸ್ಕೃತಿಕ ಸಭ್ಯತೆಯನ್ನು ಅಥವಾ ಭಾರತೀಯರ ಭಾರತೀಯತೆಯನ್ನು, ಪಾಕಿಸ್ತಾನೀಯರ ಪಾಕಿಸ್ತಾನೀಯತೆಯನ್ನು. ಸಾಂಸ್ಕೃತಿಕ ಸಭ್ಯತೆ ಶ್ರಮದ ಮೂಲದೆಂದು ಆರೆಸ್ಸೆಸ್ಸಿನಲ್ಲಿ ಕೆಲವರಿಗೆ ತಿಳಿದಿದೆ. ಆದರೆ, ಹೆಚ್ಚಿನವರಿಗೆ, ಅಧಿಕಾರ ರಾಜಕಾರಣದ ದಿಂಡುರುಳಿಕೆ ಮಿಗಿಲಾಗಿದೆ.

ಅದೇನೇ ಇರಲಿ, ಸುಸ್ಥಿರ ಅಭಿವೃದ್ಧಿಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ನಂಬಿಕೆ ಉಳಿದಿಲ್ಲ ಇಂದು. ಕಾಂಗ್ರೆಸ್ಸಿಗೂ ಉಳಿದಿಲ್ಲ, ಬಿಜೆಪಿಗೂ ಉಳಿದಿಲ್ಲ. ಗಾಂಧೀಜಿ ಹೆಸರಿನಲ್ಲಿ ಕಾಂಗ್ರೆಸ್ಸಿಗರೂ ಸಾಂಸ್ಕೃತಿಕ ಸಭ್ಯತೆಯ ಹೆಸರಿನಲ್ಲಿ ಬಿಜೆಪಿಯೂ ಸುಳ್ಳು ಹೇಳುತ್ತಿವೆ. ನಿಜದಲ್ಲಿ ಯಂತ್ರನಾಗರಿಕತೆಯ ಗುಲಾಮರು ಇವರು. ‘ಬಡವರು ಉತ್ಪಾದಿಸದಿದ್ದರೆ ಏನೀಗ! ಶ್ರಮಪಟ್ಟು ದುಡಿಯದಿದ್ದರೆ ಏನೀಗ! ಕಿರಿಕಿರಿ ಮಾಡದಿದ್ದರೆ ಸಾಕು... ಹೇಗೂ ಯಂತ್ರಗಳಿವೆ, ಒದ್ದು ಉತ್ಪಾದನೆ ಮಾಡಿಸಲಿಕ್ಕೆ!’ ಎಂಬ ಕುಹಕ ಆವರಿಸಿದೆ ಎಲ್ಲರಲ್ಲಿ.

ಆದರೆ, ಮೋದೀಜಿ ಆಕರ್ಷಕ ಮಾತುಗಾರರು. ಅವರು ದಿನವಹಿ ನುಡಿಯುವ ಸಾಂಸ್ಕೃತಿಕ ಸಭ್ಯತೆಯ ಮಾತುಗಳು ವೃತ್ತಿಪರ ಪುರೋಹಿತನೊಬ್ಬನ ನಿರ್ಭಾವ ಮಂತ್ರಗಳಂತೆ, ಆಕರ್ಷಕ ಮಾತುಗಳಷ್ಟೇ. ಅದು ಅವರಿಗೂ ಗೊತ್ತಿದೆ, ಆರೆಸ್ಸೆಸ್ಸಿನವರಿಗೂ ಗೊತ್ತಿದೆ. ಪಿ.ವಿ. ನರಸಿಂಹರಾಯರ ಕಾಂಗ್ರೆಸ್ ಸರ್ಕಾರದ ಕಾಲದಿಂದಲೂ ಈ ದೇಶದಲ್ಲಿ ಜಾರಿಯಲ್ಲಿರುವುದು ‘ಪರಿಶುದ್ಧ’ ಯಂತ್ರನಾಗರಿಕತೆ ಮಾತ್ರ.

ಮೋದೀಜಿ ಯಂತ್ರನಾಗರಿಕತೆಗೇ ಜನಿವಾರ ತೊಡಿಸಿದ್ದಾರೆ. ಜನಿವಾರ ಎಂಬ ಪದವನ್ನು ಇಲ್ಲಿ ಅನಗತ್ಯವಾಗಿ ಬಳಸಿದೆನೆಂದು ಬ್ರಾಹ್ಮಣರು ಬೇಸರಿಸಬೇಡಿ. ತುಂಬ ಯೋಚಿಸಿ ಬಳಸುತ್ತಿದ್ದೇನೆ, ಈ ಪದವನ್ನು. ಶ್ರಮರಹಿತವಾದ ಪರಂಪರೆ, ಅದು ಶೂದ್ರ ಜಾತಿಯವರಿಂದ ಜಾರಿಗೆ ಬಂದರೇನಂತೆ, ಜನಿವಾರದ ಪರಂಪರೆಯೇ ತಾನೆ? ಮಂಡಲ್ ವರದಿಯ ನಂತರ ಜಾರಿಗೆ ಬಂದ ರಾಜಕಾರಣವನ್ನು, ಈ ಕಾರಣಕ್ಕಾಗಿ ನವ ಬ್ರಾಹ್ಮಣಿಕೆಯ ರಾಜಕಾರಣ ಎಂದು ಕರೆಯಬಯಸುತ್ತೇನೆ ನಾನು. ಆರೆಸ್ಸೆಸ್ಸಿನ ಅನೇಕರಿಗೆ ‘ಮೋದಿವಾದ’ ಸ್ವದೇಶೀ ಚಿಂತನೆಯ ಪರಿಹಾಸ ಎಂದು ತಿಳಿದಿದೆ. ಇರಲಿ.

ವಿಶ್ವ ಮಾರುಕಟ್ಟೆ, ಪ್ಲಾಸ್ಟಿಕ್ಕಿನ ಹಣ, ಅವ್ಯಾಹತ ಬ್ಯಾಂಕಿಂಗ್, ಜಿ.ಎಸ್.ಟಿ., ಇವೆಲ್ಲವೂ ದಕ್ಷ ವ್ಯವಸ್ಥೆಗಳು ನಿಜ. ಆದರೆ ದಕ್ಷ ವ್ಯವಸ್ಥೆಗಳನ್ನು ಸಂಭ್ರಮಿಸಲಾರೆ ನಾನು. ಶ್ರಮಜೀವಿಗಳು ಕೊಂಚ ಅದಕ್ಷರಾದರೇನಂತೆ, ಶ್ರಮಸಂಸ್ಕೃತಿ ಮಾತ್ರವೇ  ರೂಪಿಸಬಲ್ಲದು ಸಾಂಸ್ಕೃತಿಕ ಸಭ್ಯತೆಯೊಂದನ್ನು. ಕಾದಿದ್ದೇನೆ ನಾನು– ಜಿ.ಎಸ್.ಟಿ.ಗಳು ಕೊನೆಗೊಳ್ಳುವ ಕಾಲಕ್ಕಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT