ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿನಲ್ಲೇನಿದೆ ಎನ್ನಬೇಡಿ

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಲನಚಿತ್ರಗಳ ಅಳಿವು ಉಳಿವಿನ ಪ್ರಶ್ನೆ ಬಂದಾಗಲೆಲ್ಲ ನಡೆದ ಹೋರಾಟಕ್ಕೆ ಹಲವು ಮಜಲುಗಳಿವೆ. ಅರವತ್ತರ ದಶಕದಲ್ಲಾದರೆ ಅನಕೃ, ಮ.ರಾಮಮೂರ್ತಿ ಮೊದಲಾದವರು ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳನ್ನು ದೊರಕಿಸಿಕೊಡಲು ಚಳವಳಿ ನಡೆಸಿದ್ದರು. ಎಪ್ಪತ್ತರ ದಶಕದಲ್ಲಿ ವಾಟಾಳ್‌ ನಾಗರಾಜ್ ಆಂಗ್ಲ ನಾಮಫಲಕಗಳಿಗೆ ಟಾರುಬಳಿಯುವ ಚಳವಳಿ ನಡೆಸುತ್ತಿದ್ದರು. ನವೆಂಬರ್‌ ಮಾಸದಲ್ಲಿ ಸಾಮಾನ್ಯವಾಗಿ ಈ ರೀತಿಯ ಚಳವಳಿಗಳು ಉದ್ರೇಕಗೊಳ್ಳುತ್ತಿದ್ದವು. ಇದರ ಫಲವಾಗಿ ನವೆಂಬರ್ ಪೂರಾ ಬಹುತೇಕ ಚಿತ್ರಮಂದಿರಗಳು ಕನ್ನಡ ಚಲನಚಿತ್ರಗಳನ್ನೇ ಪ್ರದರ್ಶಿಸುತ್ತಿದ್ದವು.

ವರ್ಷದಲ್ಲಿ ೧೨ ವಾರ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕೆಂದು ಸರ್ಕಾರವೂ ಆದೇಶಿಸಿತ್ತು. ಚಂದ್ರಶೇಖರ ಪಾಟೀಲರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಬ್ರಿಗೇಡ್ ರಸ್ತೆಯಲ್ಲಿನ ಇಂಗ್ಲಿಷ್ ಬೋರ್ಡ್‌ಗಳಿಗೆ ಟಾರು ಬಳಿಯಲು ಹೊರಟಿದ್ದರು. ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಮೆಜೆಸ್ಟಿಕ್ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆದದ್ದು ಕೂಡ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರ ಬೇಕು ಎನ್ನುವ ಕಾರಣದಿಂದಲೇ. ಕನ್ನಡ ರಕ್ಷಣಾ ವೇದಿಕೆಯ ಬಣಗಳು ಕನ್ನಡ ಚಲನಚಿತ್ರಗಳ ಸುಧಾರಣೆಗೆ ಏಕೋ ಮನಸ್ಸು ಮಾಡಿದಂತಿಲ್ಲ. ನವೆಂಬರ್ ತಿಂಗಳು ಹಾಗೂ ಕನ್ನಡ ಚಲನಚಿತ್ರಗಳ ಸುಧಾರಣೆ ಈ ಎರಡೂ ಅಂಶಗಳನ್ನಿಟ್ಟುಕೊಂಡು ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಚಳವಳಿಗಳು ಕನ್ನಡದ ಕಾವನ್ನು ಏರಿಸುತ್ತಾ ಬಂದಿವೆ. ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಕನ್ನಡ ಚಲನಚಿತ್ರಗಳು ಆಂಗ್ಲ ಶೀರ್ಷಿಕೆಯಡಿ ತಯಾರಾಗುತ್ತಿರುವುದರ ಬಗ್ಗೆ ದನಿ ಎತ್ತಿದ್ದಾರೆ.

‘ಕರ್ನಾಟಕದಲ್ಲಿ ಆಂಗ್ಲಭಾಷೆಯ ಶೀರ್ಷಿಕೆಯಡಿ ಚಲನಚಿತ್ರಗಳು ನಿರ್ಮಾಣವಾಗುತ್ತಿರುವುದು ಕನ್ನಡ ಭಾಷಾ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದುದರಿಂದ ಆಂಗ್ಲ ಶೀರ್ಷಿಕೆಯಡಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುವವರನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಅಲ್ಲದೆ ಇಂತಹ ಚಲನಚಿತ್ರಗಳಿಗೆ ಸರ್ಕಾರದ ಯಾವುದೇ ರೀತಿಯ ಸೌಲಭ್ಯ, ಸಹಕಾರ, ಆರ್ಥಿಕ ನೆರವು, ಪ್ರೋತ್ಸಾಹ ನೀಡಬಾರದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಲುವು ತೆಗೆದುಕೊಂಡು ಸರ್ಕಾರಕ್ಕೂ ಮನವಿ ಸಲ್ಲಿಸಿತು. ಕಳೆದ ಮೇ ತಿಂಗಳಿಂದಲೇ ಈ ನಿಟ್ಟಿನಲ್ಲಿ ಚಳವಳಿ ಆರಂಭಿಸಿರುವ ಮುಖ್ಯಮಂತ್ರಿ ಚಂದ್ರು, ‘ಕನ್ನಡ ಚಿತ್ರಗಳಲ್ಲಿ ಅನ್ಯಭಾಷಿಕ ಕಲಾವಿದರನ್ನು ಬಳಸಿಕೊಳ್ಳದೇ ಕನ್ನಡ ಕಲಾವಿದರಿಗೆ ಆದ್ಯತೆ ನೀಡಲು ಕಠಿಣಕ್ರಮ ಕೈಗೊಳ್ಳಬೇಕೆಂದು’ ಸಲಹೆ ಮಾಡಿದ್ದರು.

ಶೀರ್ಷಿಕೆಗೆ ಸಂಬಂಧಪಟ್ಟಂತೆ ತಮಿಳುನಾಡಿನಲ್ಲಿ ಈ ರೀತಿಯ ನಿಬಂಧನೆಯೊಂದಿದೆ. ಅದನ್ನು ಚಿತ್ರರಂಗ ತಾನಾಗಿಯೇ ಅಳವಡಿಸಿಕೊಂಡು ಪಾಲಿಸುತ್ತಿದೆ. ‘ಎಂದಿರನ್’ ಎನ್ನುವ ಚಿತ್ರದ ಹೆಸರನ್ನೇ ಗಮನಿಸಿ. ಇದಕ್ಕೆ ಹಿಂದಿಯಲ್ಲಿ ‘ರೋಬೋ’ ಎಂದು ಕರೆದರು. ಸಾರ್ವತ್ರಿಕವಾಗಿ ಎಲ್ಲ ಭಾಷೆಯಲ್ಲೂ ರೋಬೋ ಎನ್ನುವ ಶೀರ್ಷಿಕೆಯೇ ಅರ್ಥವಾಗುತ್ತದೆ. ಆದರೂ ತಮಿಳಿನಲ್ಲಿ ಪ್ರಾದೇಶಿಕತೆಗೆ, ಅವರ ಭಾಷೆಗೆ ಮಾನ್ಯತೆ ದೊರಕಿತ್ತು. ಅಲ್ಲಿ ಇಂತಹದಕ್ಕೆ ಒತ್ತಡವೇ ಬೇಕಿರಲಿಲ್ಲ. ಆದರೆ ಚಂದ್ರು ಅವರ ಈ ಸಲಹೆಯನ್ನು ಸರ್ಕಾರವೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಉದ್ಯಮದವರೂ ಲಕ್ಷಿಸಲಿಲ್ಲ. ಕಲಾವಿದರೂ ಆಗಿರುವ ಮುಖ್ಯಮಂತ್ರಿ ಚಂದ್ರು ಅವರಿಗೆ ಸಿನಿಮಾವೊಂದರಲ್ಲಿ ನಿರ್ದೇಶಕರು ಅರ್ಧಪುಟದ ಇಂಗ್ಲಿಷ್ ಸಂಭಾಷಣೆ ನೀಡಿದರೆ ಅವರು ಏನು ಮಾಡುತ್ತಾರೆ?
ಕನ್ನಡದ ನಾಯಕನಟರು ಪವರ್‌ಸ್ಟಾರ್, ಡೈನಾಮಿಕ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ರೈಸಿಂಗ್‌ಸ್ಟಾರ್, ಗೋಲ್ಡನ್‌ಸ್ಟಾರ್, ಕ್ರೇಜಿಸ್ಟಾರ್ ಹೀಗೆ ಆಂಗ್ಲಬಿರುದುಗಳನ್ನೇ ಇಟ್ಟುಕೊಂಡು ಮೆರೆಯುತ್ತಿದ್ದಾರೆ. ಇಂತಹ ಇಂಗ್ಲಿಷ್ ಬಿರುದುಗಳನ್ನು ತೆಗೆದುಹಾಕುವುದು ಹೇಗೆ? ಗಮನಿಸಿ,ರಾಜಕುಮಾರ್ ಅವರಿಗೆ ಆಂಗ್ಲ ಬಿರುದುಗಳಿರಲಿಲ್ಲ.

ಮುಖ್ಯಮಂತ್ರಿ ಚಂದ್ರು ಅವರ ವಾದದಲ್ಲಿ ಹಲವು ಗೊಂದಲಗಳಿದ್ದವು. ಗೊಂದಲ ಅನ್ನುವುದಕ್ಕಿಂತ ಅದು ಚರ್ಚಾಸ್ಪದವಾಗಿತ್ತು. ಅದರೆ, ಆಗಸ್ಟ್‌ನಲ್ಲಿ ಈ ವಿಷಯದ ಚರ್ಚೆಗೆಂದೇ ವಾರ್ತಾಇಲಾಖೆ ನಿರ್ದೇಶಕರ ನೇತೃತ್ವದಲ್ಲಿ ಸಭೆಯೊಂದು ನಡೆಯಿತು. ಚಲನಚಿತ್ರ ವಾಣಿಜ್ಯಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಫರ್ಮಾನನ್ನು ಸಾರಾಸಗಟಾಗಿ ತಳ್ಳಿಹಾಕಲಾಯಿತು. ‘ಕರ್ನಾಟಕದಲ್ಲಿ ಆಂಗ್ಲಭಾಷೆಯ ಶೀರ್ಷಿಕೆಯಡಿ ಕನ್ನಡ ಚಲನಚಿತ್ರಗಳು ನಿರ್ಮಾಣವಾಗುತ್ತಿರುವುದನ್ನು ನಿಯಂತ್ರಿಸಲಾಗುತ್ತಿದ್ದು, ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಆಂಗ್ಲಶೀರ್ಷಿಕೆಗಳನ್ನು ನೀಡಲಾಗುತ್ತಿದೆ’ ಎಂಬ ವಿವರಣೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹೇಳುವ ಮೂಲಕ ಉದ್ಭವಿಸಿರುವ ಪ್ರಶ್ನೆಗೆ ತಿಪ್ಪೆಸಾರಿಸುವ ಯತ್ನ ನಡೆಸಿದರು. ೨೦೦೯ರಿಂದ ೨೦೧೩ರವರೆಗೆ ೨೫ರಿಂದ ೩೦ ಚಿತ್ರಗಳಿಗೆ ಮಾತ್ರ ಆಂಗ್ಲಶೀರ್ಷಿಕೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಚಲನಚಿತ್ರ ವಾಣಿಜ್ಯಮಂಡಳಿಯ ಪದಾಧಿಕಾರಿಗಳು ತಿಳಿಸುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಅಲ್ಲಿಗೆ ಮುಖ್ಯಮಂತ್ರಿ ಚಂದ್ರು ಏಕಾಂಗಿಯಾದರು.

ಚಲನಚಿತ್ರದ ಯಶಸ್ಸಿಗೂ, ಚಿತ್ರದ ಹೆಸರಿಗೂ ಸಂಬಂಧವಿದೆಯೇ? ಆಕರ್ಷಕ ಹೆಸರುಗಳು ಸದಭಿರುಚಿಯ ಸಂಕೇತ. ಅರ್ಥಪೂರ್ಣವೂ ಹೌದು. ‘ದೂರದಬೆಟ್ಟ’, ‘ದೇವರಗುಡಿ’, ‘ಎರಡು ಕನಸು’, ‘ಚಂದವಳ್ಳಿಯ ತೋಟ’, ‘ಮುಂಗಾರುಮಳೆ’ ಮೊದಲಾದ ಶೀರ್ಷಿಕೆಗಳೆಲ್ಲಾ ಸಾಹಿತ್ಯಾಸಕ್ತವಾಗಿಯೂ ಸೆಳೆಯುವ ಗುಣವುಳ್ಳವುಗಳಾಗಿಯೂ ಕಾಣುತ್ತವೆ. ಲಕ್ಕಿ, ಗೂಗ್ಲಿ, ಜೋಶ್, ಸಿಲ್ಕ್, ಲವ್ ಈಸ್ ಪಾಯಿಸನ್, ಜಂಗಲ್ ಜಾಕಿ, ದಿಲ್ದಾರ್, ಜಾನಿ ಮೇರಾ ನಾಮ್ ಇಂತಹುವುಗಳೆಲ್ಲಾ ಅರ್ಥಹೀನವಾಗಿ ಕಾಣುತ್ತವೆ. ಇಂತಹ ಚಿತ್ರಗಳಿಗೂ ಸುಂದರವಾದ ಕನ್ನಡ ಶೀರ್ಷಿಕೆಯೊಂದು ಸಿಗದೆ ಇದ್ದಿರಲಾರದು. ಆದರೂ ಆಂಗ್ಲ, ಹಿಂದಿ ಶೀರ್ಷಿಕೆಗಳನ್ನಿಡುವುದು ‘ಚಟ’ವಾಗಿದೆ. ಈ ರೀತಿಯ ಟೈಟಲ್‌ಗಳೇ ಕನ್ನಡ ಭಾಷೆಯನ್ನು ಕೊಲ್ಲುತ್ತಿದೆ ಎನ್ನುವುದು ಎಷ್ಟು ತಪ್ಪಾಗುತ್ತದೋ, ಕನ್ನಡ ಶೀರ್ಷಿಕೆಗಳಿಂದಲೇ ಕನ್ನಡ ಭಾಷೆ ಉಳಿಯುತ್ತದೆ ಎನ್ನುವುದೂ ಅಷ್ಟೇ ಭ್ರಮೆಯಾಗುತ್ತದೆ.

ಇಂದಿನ ಯುವಪೀಳಿಗೆಯಲ್ಲಿ ಕಂಗ್ಲಿಷ್‌ನ ಪ್ರಭಾವ ತೀವ್ರವಾಗಿರುವುದನ್ನು ಗಮನಿಸಿ, ಜಾಗತಿಕ ಜಾಗೃತಿಯಾಗಿ ಇಂಗ್ಲಿಷ್ ಈಗ ವ್ಯಾಪಕ ಪ್ರಭಾವ ಬೀರುತ್ತಿದೆ. ಇಂಗ್ಲಿಷ್ ಎನ್ನುವುದೇ ಜೀವನ ಶೈಲಿಯ ಭಾಗವಾಗಿಬಿಟ್ಟಿರುವುದರಿಂದ ಅರವತ್ತರ ದಶಕದ ಆಕ್ರೋಶ ಇಂದು ಅದೇ ಕಾವನ್ನು ಉಳಿಸಿಕೊಂಡಿಲ್ಲ. ಅದರೆ ನಮ್ಮ ಭಾಷೆಯ ಸೊಗಡು, ಜಾನಪದ ಭಂಡಾರದಲ್ಲಿ ಅಡಗಿರುವ ಜನಪದ ಪ್ರೇಕ್ಷಕನೊಂದಿಗೆ ನಿಸ್ತಂತುವಾಗಿ ಸಂವಹನ ಕ್ರಿಯೆಯಲ್ಲಿ ತೊಡಗಿಕೊಂಡಿರುತ್ತದೆ ಎನ್ನುವುದನ್ನು ಮರೆಯುವಂತೆಯೇ ಇಲ್ಲ. ‘ಇವತ್ತಿನ ಅವಶ್ಯಕತೆಗಳನ್ನು ಪೂರೈಸಲು ಇಂಗ್ಲಿಷ್ ಇಲ್ಲವೇ ಹಿಂದೀಭಾಷೆ ಅತ್ಯಂತ ಸಮರ್ಥವೆಂದು ಕೆಲವರು ಭಾವಿಸಿರಬಹುದು. ಆದರೆ ಮುಂದೊಂದು ದಿನ ಅವುಗಳ ಬದಲು ಈಗ ತೀರಾ ಕೆಳಮಟ್ಟದಲ್ಲಿರುವ ಗುಡ್ಡಗಾಡಿನ ಜನರ ಭಾಷೆಯೊಂದು ಹೆಚ್ಚು ಸಮರ್ಥವೆಂದು ಸಿದ್ಧವಾಗಲು ಸಾಧ್ಯವಿದೆ’ ಎಂದು ಪಂಪ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾಷಾವಿಜ್ಞಾನಿ ಡಿ.ಎನ್.ಶಂಕರಭಟ್ ಹೇಳಿರುವುದು ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವೆನಿಸುತ್ತದೆ.

ಕನ್ನಡ ಚಿತ್ರಗಳಿಗೆ ಆಂಗ್ಲ ಶೀರ್ಷಿಕೆಯನ್ನಿಡುವ ವಿಷಯ ಪ್ರಸ್ತಾಪವಾದಾಗ, ಮೂಕಿಚಿತ್ರಗಳ ಕಾಲದ ಪರಿಸ್ಥಿತಿ ನೆನಪಾಗುತ್ತದೆ. ಅಂದಿನ ದಿನಗಳಲ್ಲಿ ಚಿತ್ರಗಳ ಹೆಸರು ಬಹುತೇಕ ಇಂಗ್ಲಿಷ್‌ನಲ್ಲೇ ಇರುತ್ತಿತ್ತು. ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್ ಲಾಂಛನದಲ್ಲಿ ಗುಬ್ಬಿವೀರಣ್ಣ ಅವರು ತಯಾರಿಸಿದ ಚಿತ್ರಗಳ ಹೆಸರುಗಳೇ ‘ಹಿಸ್ ಲವ್ ಅಫೇರ್’ (೧೯೨೯), ‘ಸಾಂಗ್ ಆಫ್ ಲೈಫ್’ (೧೯೩೧) ಎಂದಿದ್ದವು. ‘ಹಾರ್ಟ್ ಆಫ್ ದಿ ಕಿಂಗ್’ (೧೯೨೯), ‘ಚಾಯ್ಸ್ ಆ ಫ್ ಎ ಬ್ರೈಡ್’, ‘ಸಿತಮ್ ಘರ್’, ‘ಡಿಸ್‌ಕಾರ್ಡೆಡ್ ಲವ್’... ಹೀಗೆ ಕರ್ನಾಟದದಲ್ಲಿ ತಯಾರಾದ ಚಿತ್ರಗಳ ಹೆಸರುಗಳೇ ಆಂಗ್ಲದವಾಗಿದ್ದವು.

ದೇಶದಾದ್ಯಂತ ಪ್ರದರ್ಶಿಸಲು ಅನುಕೂಲಕರ ಎನ್ನುವ ತಂತ್ರಗಾರಿಕೆ ಇದರ ಹಿನ್ನೆಲೆಯಲ್ಲಿತ್ತು. ಇದೇ ಸಂದರ್ಭದಲ್ಲೇ ನಡೆದ ಒಂದು ಬೆಳವಣಿಗೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ೧೯೨೯ರಲ್ಲಿ ಮುಂಬೈನ ಅಜಂತಾ ಸಿನಿಟೋನ್‌ನ ಒಡೆಯರಾದ ಮೋಹನ್‌ ಭವನಾನಿ ಮತ್ತು ನಾಟಕಕಾರ ಟಿ.ಪಿ. ಕೈಲಾಸಂ ‘ಸಾಹಿತಿ, ಪ್ರಾಧ್ಯಾಪಕರ ಬಳಗ’ ಕಟ್ಟಿ ಶೂದ್ರಕ ಮಹಾಕವಿಯ ‘ಮೃಚ್ಛಕಟಿಕ’ ಆಧರಿಸಿ ‘ವಸಂತಸೇನ’ ಎನ್ನುವ ಚಿತ್ರವನ್ನು ತಯಾರಿಸಿದ್ದರು. ಯಾವುದೇ ಸ್ಟುಡಿಯೋ ಸೌಲಭ್ಯವಾಗಲಿ, ಸ್ಥಳೀಯವಾಗಿ ಬೆಳೆದ ತಾಂತ್ರಿಕ ಜ್ಞಾನವಾಗಲಿ ಇನ್ನೂ ಪರಿಪಕ್ವವಾಗಿರದ ಕಾಲದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯ ದೃಷ್ಟಿಯಿಂದ ಸಂಪೂರ್ಣವಾಗಿ ಆಗಿನ ಮೈಸೂರು ರಾಜ್ಯದಲ್ಲೇ ಚಿತ್ರೀಕರಣವಾದ ‘ವಸಂತ ಸೇನ’ ಮೂಕಿಚಿತ್ರವನ್ನು ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರತಿಭೆಯ ಅಪೂರ್ವ ಸಂಗಮ ಎಂದು ಬಣ್ಣಿಸುತ್ತಾರೆ. ೮೪ ವರ್ಷಗಳ ಹಿಂದೆಯೇ ‘ವಸಂತಸೇನ’ ಎಂಬ ಸುಂದರ ಶೀರ್ಷಿಕೆ ಸಲ್ಲುವುದಾದರೆ, ಇಂದು ಇಂತಹ ಅಪ್ಪಟ ಕನ್ನಡ ಶೀರ್ಷಿಕೆಗಳು ಬರಲು ಏಕೆ ಸಾಧ್ಯವಾಗುವುದಿಲ್ಲ? ಕನ್ನಡಾಭಿಮಾನ ಎೆನ್ನುವುದು ನಮ್ಮೊಳಗೇ ನಾಭೀಮೂಲದಿಂದ ಹುಟ್ಟಿಬರಬೇಕೆ ವಿನಾ ಬಲವಂತವಾಗಿ ಹೇರುವಂತದ್ದಾಗಬಾರದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT