ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದದ ಅಧ್ಯಯನ ಹೇಗೆ?

ಅಕ್ಷರ ಗಾತ್ರ

ವೇದವನ್ನು ಅಧ್ಯಯನ ಮಾಡುವ ಬಗೆ ಹೇಗೆ? ಈ ಪ್ರಶ್ನೆಯೂ ತುಂಬ ಮುಖ್ಯವಾದುದು. ಇದಕ್ಕೆ ಉತ್ತರವೂ ಸುಲಭವಲ್ಲ. ಆದರೆ ಪರಂಪರೆಯಲ್ಲಿ ನಿರ್ದಿಷ್ಟ ಸೂಚನೆಗಳಂತೂ ಇವೆ. ಹೀಗಿದ್ದರೂ ಇಲ್ಲಿ ಇನ್ನೊಂದು ಪ್ರಶ್ನೆಯೂ ಏಳುತ್ತದೆ: ‘ಪಾಶ್ಚಾತ್ಯ
ದೇಶದಲ್ಲೂ ತತ್ತ್ವಶಾಸ್ತ್ರ ಉಂಟಲ್ಲವೆ? ಅಲ್ಲಿ ಅದರ ಅಧ್ಯಯನದಲ್ಲಿ ಇಂಥ ಕಟ್ಟುಪಾಡುಗಳು ಇಲ್ಲ; ನಮ್ಮಲ್ಲಿ ಇಂಥವು ಬೇಕೆ?’

ಪಾಶ್ಚಾತ್ಯ ತತ್ತ್ವಶಾಸ್ತ್ರಕ್ಕೂ ವೇದಾಧ್ಯಯನಕ್ಕೂ ಇರುವ ವ್ಯತ್ಯಾಸಗಳು ಹಲವು. ಈ ವಿಷಯವಾಗಿ ಡಿವಿಜಿಯವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು:

‘ಪಾಶ್ಚಾತ್ಯ ದೇಶಗಳಲ್ಲಿ ತತ್ತ್ವಶಾಸ್ತ್ರ ಉಂಟಲ್ಲವೆ? ಅಲ್ಲಿಯ ಜನರು ತಮ್ಮ ಗ್ರಂಥಗಳನ್ನು ಪಾಠ ಹೇಳುವ ಪ್ರಸಂಗದಲ್ಲಿ ನಮ್ಮಂತೆ ತಡೆ, ಕಟ್ಟುಪಾಡುಗಳನ್ನಿಟ್ಟುಕೊಂಡಿರುತ್ತಾರೆಯೆ? ಇಲ್ಲವಲ್ಲ! ಅವರ ತತ್ತ್ವಶಾಸ್ತ್ರಕ್ಕೂ ವೈದಿಕತತ್ತ್ವಶಾಸ್ತ್ರಕ್ಕೂ ಒಂದು ಮೂಲಭೂತವಾದ ಭೇದವಿರುತ್ತದೆ. ಪಾಶ್ಚಾತ್ಯರ ತತ್ತ್ವಶಾಸ್ತ್ರವು ಕೇವಲ ಒಂದು ಬುದ್ಧಿವ್ಯಾಯಾಮ. ಅದು ಬರಿಯ ತರ್ಕದ ಕಸರತ್ತು (Exercise in logic) – ಕೇವಲವಾದ ಕೌಶಲ. ಗಣಿತಶಾಸ್ತ್ರ ಹೇಗೋ ಹಾಗೆ, ಚತುರಂಗದ ಆಟವು ಹೇಗೋ ಹಾಗೆ. ಚತುರಂಗವಾಡುವವನು ಆ ಆಟದ ಕಟ್ಟುಪಾಡುಗಳಿಗೆ ಒಳಪಟ್ಟಿರಬೇಕೇ ಹೊರತು ತನ್ನ ಜೀವನದ ಮಿಕ್ಕ ಕ್ಷೇತ್ರಗಳಲ್ಲಿಅವನು ತನ್ನಿಷ್ಟದಂತೆ ಬದುಕಬಹುದು. ಬಂಧುಮಿತ್ರರಲ್ಲಿ ನೀಚವೃತ್ತಿಯಿಂದ ನಡೆಯುವವನು ಗಣಿತದ ಗುಣಾಕಾರದಲ್ಲಿ ಸೂಕ್ಷ್ಮವೇತ್ತನಾಗಿರಬಹುದು. ಮೋಸಗಾರನೂ ಚತುರಂಗ ನಿಪುಣನಾಗಿರಬಹುದು. ಹಾಗೆಯೇ ಜೀವನವಿಧಾನಕ್ಕೂ ತತ್ತ್ವಶಾಸ್ತ್ರಕ್ಕೂ ಅವಶ್ಯವಾದ ನಿರ್ಬಂಧವೇನೂ ಇಲ್ಲವೆಂಬುದು ಪಾಶ್ಚಾತ್ಯರಲ್ಲಿ ಸಾಮಾನ್ಯವಾಗಿರುವ ರೂಢಿಯ ಅಭಿಪ್ರಾಯ.

ಭಾರತೀಯರ ತತ್ತ್ವವಿಚಾರಕ್ರಮ ಅಂಥದ್ದಲ್ಲ. ನಮ್ಮಲ್ಲಿ ತತ್ತ್ವದರ್ಶನಕ್ಕೆ ಅವಶ್ಯವಾದುದು ಬುದ್ಧಿಪರಿಶ್ರಮ ಮಾತ್ರವಲ್ಲ; ಸರ್ವೇಂದ್ರಿಯಗಳ ಸಹಕಾರವೂ ಅದಕ್ಕೆ ಬೇಕು. ತತ್ತ್ವಸಾಕ್ಷಾತ್ಕಾರವು ಸಮಸ್ತಜೀವನದ ಏಕಾಗ್ರ ಪ್ರಯತ್ನದ ಫಲ. ಭಗವತ್ತತ್ತ್ವವು ಅತ್ಯಂತ ಸೂಕ್ಷ್ಮವಾದ ವಿಷಯ. ಅದು ನಮ್ಮ ದುರ್ಬೀನು–ದೂರದರ್ಶಕಯಂತ್ರಗಳಿಗೂ, ನಮ್ಮ ತ್ರಾಸು–ತಕ್ಕಡಿಗಳಿಗೂ, ಮೊಳ–ಗಜಕೋಲುಗಳಿಗೂ ದೊರೆಯತಕ್ಕದ್ದಲ್ಲ. ಏಕೆಂದರೆ ಅದು ನಮ್ಮ ಇಂದ್ರಿಯಗಳಿಂದ ದೂರವಾದದ್ದು– ‘ಅತೀಂದ್ರಿಯ’. ಅದನ್ನು ನಾವು ಗ್ರಹಿಸಬೇಕೆಂದರೆ ಇಂದ್ರಿಯಗಳಿಗಿಂತ ಸೂಕ್ಷ್ಮವಾದ ಒಂದು ಸಾಧನವನ್ನು ಸಂಪಾದಿಸಿಕೊಳ್ಳಬೇಕು. ಆ ಸಾಧನವನ್ನು ‘ಅಂತರ್ದೃಷ್ಟಿ’ ಎಂದು ಕರೆಯಬಹುದು. ಅದನ್ನೇ ಶಾಸ್ತ್ರಗಳಲ್ಲಿ ‘ಉಪಲಬ್ಧಿ’ ಎಂದೂ, ‘ಅವಗತಿ’, ‘ಪ್ರತಿಬೋಧ’ ಎಂದೂ ಕರೆದಿರುವುದುಂಟು. ಅದು ನಮ್ಮ ಅಂತರಂಗದ ಒಳಗಡೆ, ಯಾವ ಬಾಹ್ಯ ಸಂದರ್ಭವನ್ನೂ ಅವಲಂಬಿಸದೆ ನಮಗೆ ಉಂಟಾಗುವ ಒಂದು ಅನುಭೂತಿ – ಸ್ವಾನುಭೂತಿ.’

ಯಾಕೆ ನಮ್ಮ ಬುದ್ಧಿಯಷ್ಟೆ ವೇದಾಧ್ಯಯನಕ್ಕೆ ಸಾಲದು? ಮುಂದೆ ನೋಡೋಣ.

(ಆಧಾರ: ಡಿವಿಜಿಯವರ ‘ವೇದ–ವೇದಾಂತ’)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT