ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನಸ್ಸಿನ ಪ್ರತಿಫಲನ

Last Updated 17 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಚಿದಾನಂದಕಲಾಂ ವಾಣೀಂ ವಂದೇ ಚಂದ್ರಕಲಾಧರಾಮ್ |
ನೈರ್ಮಲ್ಯತಾರತಮ್ಯೇನ ಬಿಂಬಿತಾಂ ಚಿತ್ತಭಿತ್ತಿಷು ||

ಈ ಶ್ಲೋಕವು ಸಾಯಣಾಚಾರ್ಯರ ‘ಅಲಂಕಾರಸುಧಾನಿಧೀ’ ಎಂಬ ಗ್ರಂಥದ್ದು; ಇದು ಅಲಂಕಾರಶಾಸ್ತ್ರಕ್ಕೆ ಸೇರಿದ ಕೃತಿ. ಆದುದರಿಂದ ಈ ಸೊಲ್ಲಿಗೆ ತುಂಬ ಮಹತ್ವವಿದೆ.

ಜ್ಞಾನದ ಆನಂದವನ್ನೇ ತನ್ನಲ್ಲಿ ಸೌಂದರ್ಯವನ್ನಾಗಿಸಿಕೊಂಡಿರುವ, ಚಂದ್ರನನ್ನು ಒಡವೆಯನ್ನಾಗಿಸಿಕೊಂಡಿರುವ, ಚಂದ್ರಕಲಾಧರೆಯಾದ ಆ ವಾಣಿಗೆ ನಮಸ್ಕಾರ. ಅವಳು ನಮ್ಮ ಮನಸ್ಸಿನ ಕನ್ನಡಿಯಲ್ಲಿ ಅದರ ಸ್ವಚ್ಛತೆಗೆ ಅನುಸಾರವಾಗಿ ಪ್ರತಿಫಲಿಸುತ್ತಾಳೆ.

ಇದು ಈ ಶ್ಲೋಕದ ಭಾವಾರ್ಥ.

`ಸೂರ್ಯ' ಎನ್ನುವುದು ಜ್ಞಾನಕ್ಕೆ ಸಂಕೇತ, ಜೀವನಕ್ಕೆ ಸಂಕೇತ, ದರ್ಶನಕ್ಕೆ ಸಂಕೇತ, ಚಟುವಟಿಕೆಗೆ ಸಂಕೇತ.

`ಚಂದ್ರ' ಎಂದರೆ ಆನಂದಕ್ಕೆ ಸಂಕೇತ, ಕಲೆಗೆ ಸಂಕೇತ, ಮನಸ್ಸಿಗೆ ಸಂಕೇತ, ಶಾಂತಸ್ಥಿತಿಗೆ ಸಂಕೇತ.

`ಬೆಳುದಿಂಗಳು' ಎಂದರೇನು? ಚಂದ್ರನ ಪೂರ್ಣಪ್ರಕಾಶ. ಸೂರ್ಯನ ಬೆಳಕು ಶಾಂತವಾಗಿ, ಪೂರ್ಣಚಂದ್ರನಲ್ಲಿ ಪ್ರತಿಫಲಿತವಾಗುವುದೇ `ಬೆಳುದಿಂಗಳು'. ಬೆಳಕಿನ ಮೂಲವಾದ ಸೂರ್ಯನನ್ನು ದಿಟ್ಟಿಸಿ ನೋಡಲು ಸಾಧ್ಯವಾಗದು; ಆದರೆ ಚಂದ್ರನನ್ನು ನೋಡಬಹುದು, `ಅವನ' ಬೆಳಕನ್ನು ನೋಡಬಹುದು; ಮಾತ್ರವಲ್ಲ, ಆ ಬೆಳಕಿನ ಹಿತವನ್ನು ಮನಸ್ಸಿನಲ್ಲಿ ತುಂಬಿಸಿಕೊಳ್ಳಬಹುದು ಕೂಡ.

ಹೀಗೆಯೇ ಜೀವನದಲ್ಲಿ ಕೂಡ ನಮ್ಮ ಅರಿವು (=ಜ್ಞಾನ) ನೆಮ್ಮದಿಯಲ್ಲಿ ನಿಲ್ಲಬೇಕು; ಆಗ ಮಾತ್ರವೇ ನಾವು ನಡೆಸುವ ಜೀವನದ ಚಟುವಟಿಕೆಗಳೂ ಹಿತವಾಗಿರಬಲ್ಲದು, ಸರಸವಾಗಿರಬಲ್ಲದು. ಆಗ ಮಾತ್ರವೇ ಜೀವನದ ಉರಿಬಿಸಿಲಿನ ಉರಿಯೂ ಸಹ ಬೆಳುದಿಂಗಳಂತೆ ತಂಪಾಗಿರುತ್ತದೆ; ಜೀವನವು ಸಹನೀಯವೂ ಆಗಿರುತ್ತದೆ. ಜೀವನಪ್ರವಾಹ- ದಲ್ಲಿಯೇ ಮುಳುಗಿಹೋಗದೆ, ಜೀವನತರಂಗಗಳಲ್ಲಿ ಒಂದು ಗೊತ್ತಾದ ದೂರವನ್ನು ಕಾಯ್ದುಕೊಂಡರೆ ಜೀವನಭಿತ್ತಿಯ ಎಲ್ಲ ವಿವರಗಳಲ್ಲೂ ಜೀವನಸೌಂದರ್ಯವು ಚೆನ್ನಾಗಿಯೇ ಎದ್ದುಕಾಣುತ್ತದೆ. ಇಂಥ ಸಾಕ್ಷಿಭಾವದ?ಪ್ರತಿಫಲನವೇ ಸೂರ್ಯನ ಪ್ರತಿಫಲನ; ಚಂದ್ರಪ್ರಕಾಶ; ಇದೇ ಜೀವನದ ರಸದರ್ಶನ. ಜೀವನವನ್ನು ಸವಿಯಲು ಜ್ಞಾನ ಬೇಕು; ಇದೂ ಕೂಡ ಶಾಂತಸ್ಥಿತಿಯಲ್ಲಿ ನೆಲೆ ನಿಂತ ಆನಂದದಾಯಕ ಅರಿವು. ಕಲೆಯನ್ನು ಸವಿಯಲು ಕೂಡ ಇಂಥದೇ ಶಾಂತಸ್ಥಿತಿ ಅನಿವಾರ್ಯ.

ಪುರಂದರದಾಸರ ಪದವೊಂದು ಹೀಗಿದೆ: `ತಾಳ ಬೇಕು ತಕ್ಕ ಮೇಳ ಬೇಕು ಶಾಂತವೇಳೆ ಬೇಕು ಗಾನವನ್ನು ಕೇಳಬೇಕೆಂಬುವರಿಗೆ.' ಇಲ್ಲಿ `ತಾಳ ಬೇಕು' ಎಂದರೆ ಗಾಯನ-ವಾದನಗಳ ಕಾಲಮಾಪಕವೂ ಗತಿಸೂಚಕವೂ ಆದ ಲಯದ ಆವಶ್ಯಕತೆಯ ಸೂಚಕ. ಅದು ತಾಳ್ಮೆ, ಸಹನೆ, ಸಮಾಧಾನಗಳಿಗೂ ಸೂಚನೆಯಾಗುತ್ತದೆ. ನೆಮ್ಮದಿ ಇಲ್ಲದಿದ್ದಾಗ ಗಾನವೂ ಅರಚಾಟದಂತೆ ನಮ್ಮನ್ನು ಹಿಂಸಿಸಬಲ್ಲದು; ನೆಮ್ಮದಿ ಇದ್ದಾಗ ಅರಚಾಟವೂ ಗಾನಕ್ಕೆ ಸಮನಾಗಿ ನಮ್ಮನ್ನು ಸಂತೋಷಿಸಬಹುದೆನ್ನಿ!

ಕಲಾದೇವತೆಯಾದ ಸರಸ್ವತಿಯನ್ನು `ಚಂದ್ರಕಲಾಧರೆ' ಎಂದು ಸ್ತುತಿಸಿರುವ ಹಿನ್ನೆಲೆಯಾದರೂ ಇದೇ--ಕಲೆಯ ಒಡತಿ ನಮ್ಮ ಬದುಕಿಗೆ ಶಾಂತಿಯನ್ನೂ ಕಾಂತಿಯನ್ನೂ ಆನಂದವನ್ನೂ ಒದಗಿಸುತ್ತಾಳೆ. ಅವಳು ಸೂರ್ಯನನ್ನು, ಎಂದರೆ ಮೂಲವನ್ನು ಬಿಟ್ಟಿಲ್ಲ. ಜ್ಞಾನದ ಆನಂದವನ್ನು ಕೂಡ ಅವಳು ಒಂದು ಒಡವೆಯನ್ನಾಗಿಸಿಕೊಂಡು ನಲಿಯುತ್ತಿದ್ದಾಳೆ. ಹೀಗಾಗಿ ಅವಳ ಪಾಲಿಗೆ ಕಲಾನಂದವೂ ಬ್ರಹ್ಮಾನಂದವೂ--ಎರಡೂ ಕೂಡ ಒಂದೇ. ಭಾರತೀಯ ಪರಂಪರೆಯಲ್ಲಿ ಕಲಾನಂದವನ್ನು `ಬ್ರಹ್ಮಾನಂದದ ಸಹೋದರ' ಎಂದೇ ವ್ಯವಹರಿಸಿರುವ ಸ್ವಾರಸ್ಯವನ್ನು ಇಲ್ಲಿ ಮೆಲುಕು ಹಾಕಬಹುದಾಗಿದೆ.

ಮೇಲಣ ಶ್ಲೋಕದ ಉತ್ತಾರಾರ್ಧದಲ್ಲಿ ಸಹೃದಯತತ್ತ ್ವದ ವಿಮರ್ಶೆಯಿದೆ. ನಮಗೆ ಕಲಾನಂದವಾಗಲೀ ಜೀವನಾನಂದವಾಗಲೀ ಯಾವಾಗ ದಕ್ಕುತ್ತದೆ? ನಮ್ಮ ಮನಸ್ಸು ಸ್ವಚ್ಛವಿದ್ದಾಗಲೇ ಅಲ್ಲವೆ? `ನಮ್ಮ ಮನಸ್ಸು ಎಷ್ಟೆಷ್ಟು ಸ್ವಚ್ಛವಾಗಿರುವುದೋ ಅಷ್ಟಷ್ಟು ಆ ಆನಂದಸ್ವರೂಪಿಣಿಯು ನಮಗೆ ಕಾಣಿಸುತ್ತಾಳೆ' ಎನ್ನುತ್ತಿದೆ, ಶ್ಲೋಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT