ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದೋಕುಳಿಗೆ ಸಜ್ಜಾಯ್ತು ಹೂಬಳ್ಳಿ...

Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬದುಕು ಪ್ರೀತಿಸುವ ಮನಸುಗಳಿಗೆ ನಿತ್ಯವೂ ಬಣ್ಣದ ಹಬ್ಬವೇ. ಬಣ್ಣ ಬಣ್ಣದ ಕನಸುಗಳನು ನೆನಪಿನಲ್ಲಿ ಉಳಿಸಲು ಹೋಳಿ ವಿಶೇಷ ಸಂದರ್ಭ. ಬಣ್ಣದ ಕನಸು ನನಸಾಗಿಸಲು ಹೊರಟವರಿಗೆ ಹೋಳಿ ಹುಣ್ಣಿಮೆಯು ಸಿಹಿ ನೆನಪು ದಾಖಲಿಸಲಿ...

ರಂಗ ಪಂಚಮಿ ಹಾಗೂ ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ತರಹೇವಾರಿ ರಾಸಾಯನಿಕ ಮುಕ್ತ ಬಣ್ಣಗಳು ಮಾರುಕಟ್ಟೆಗೆ ಬಂದಿವೆ. ತರಕಾರಿ, ಅರಿಸಿನ ಹಾಗೂ ಕುಂಕುಮ ಬಳಸಿ ತಯಾರಿಸಿದ ಹಲವು ಬಣ್ಣಗಳು ಸಿಗುತ್ತಿವೆ.

‘ತಮಿಳುನಾಡಿನಿಂದ ಟಾರ್ಚ್‌ ಪೌಡರ್‌ (ತರಕಾರಿಗಳಿಂದ ತಯಾರಿಸಿದ ಬಣ್ಣ) ತರಿಸಿದ್ದೇವೆ. ನೈಸರ್ಗಿಕ ವಸ್ತುಗಳಿಂದ ತಯಾರಾದ ಬಣ್ಣ ಬಳಸುವುದರಿಂದ ಯಾವುದೇ ಅಪಾಯ ಇಲ್ಲ. ಇದರ ಜತೆಗೆ ಹರ್ಬಲ್‌ ಬಣ್ಣಗಳೂ ಸಿಗುತ್ತಿವೆ’ ಎಂದು ದಶಕಗಳಿಂದ ಬಣ್ಣದ ವ್ಯಾಪಾರ ನಡೆಸುತ್ತಿರುವ ದುರ್ಗದಬೈಲಿನ ವ್ಯಾಪಾರಿ ಹಾಗೂ ದೇವಿ ಆರಾಧಕರಾದ ಬಸವಲಿಂಗಪ್ಪ ಎಸ್‌.ಮರಗಾಳ ಪ್ರಜಾವಾಣಿ ಮೆಟ್ರೊಗೆ ತಿಳಿಸಿದರು.

‘ಶಿವಮೊಗ್ಗ, ಹಾವೇರಿ, ದಾವಣಗೆರೆ, ಬಾಳೆಹೊನ್ನೂರು, ಕುಮುಟಾ, ಹೊನ್ನಾವರ, ಶಿರಸಿಯಿಂದಲೂ ಗ್ರಾಹಕರು ಬಣ್ಣ ಖರೀದಿಸುತ್ತಾರೆ. ಚಾಕೊಲೇಟ್‌ ಬಣ್ಣ ಸೇರಿ ಹಲವು ನಮೂನೆಯ ಬಣ್ಣಗಳನ್ನು ಎರಡು ತಿಂಗಳ ಹಿಂದೆಯೇ ತರಿಸಿ ದಾಸ್ತಾನು ಮಾಡಿದ್ದೇವೆ’ ಎಂದು ವಿವರಿಸಿದರು.

‘ಟಾರ್ಚ್‌ ಪೌಡರ್‌ ಕೆ.ಜಿ.₹60 ರಿಂದ ₹120ರವರೆಗೆ ಮಾರಾಟವಾಗುತ್ತಿದೆ. ಅರ್ಧ ಕೆ.ಜಿ.ಯ 10 ಬಣ್ಣದ ಪ್ಯಾಕ್‌ ಬೆಲೆ ₹50, ಐದು ಬಣ್ಣದ ಹರ್ಬಲ್‌ ಪ್ಯಾಕ್‌ ₹280 ರಂತೆ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ರೇಡಿಯಂ ಬಣ್ಣದ ಪೌಚ್‌, ಕಡು ಬಣ್ಣದ ಪೌಚ್‌ಗಳು ಮಾರುಕಟ್ಟೆಗೆ ಬಂದಿವೆ’ ಎಂದರು.

ಮೋಡಿ ಮಾಡುವ ರತಿ, ಕಾಮಣ್ಣ

ಹೋಳಿ ಹುಣ್ಣಿಮೆಯಲ್ಲಿ ರತಿ, ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಹಳೆಯ ಹುಬ್ಬಳ್ಳಿಯ ಬಮ್ಮಾಪುರ ಚಿತ್ರಗಾರ ಓಣಿಯಲ್ಲಿ ಉದಯ ಕಾಂಬಳೆ ಕುಟುಂಬ 150 ವರ್ಷಗಳಿಂದ ರತಿ, ಕಾಮಣ್ಣ ಮೂರ್ತಿ, ಗಣೇಶ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ಹೋಳಿ ಹುಣ್ಣಿಮೆ ಅಂಗವಾಗಿ ರತಿ, ಕಾಮಣ್ಣರ ಮೂರ್ತಿ ತಯಾರಿಕೆಯಲ್ಲಿ ಇಡೀ ಕುಟುಂಬದ ಸದಸ್ಯರು ತೊಡಗಿಸಿಕೊಂಡಿದ್ದಾರೆ. ‘ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೇ ಮೂರ್ತಿ ತಯಾರಿಕೆಯೇ ನಮ್ಮ ವೃತ್ತಿಯಾಗಿದೆ. ಮಣ್ಣಿನ ಮೂರ್ತಿ ತಯಾರಿಕೆ, ಕ್ಯಾನ್ವಾಸ್‌ ಕೂಡ ಮಾಡಲಾಗುತ್ತಿದೆ’ ಎಂದು ಕುಟುಂಬದ ಸದಸ್ಯರಾದ ಕಲಾವಿದ ಮಹೇಶ ಸೋನಾವಣೆ ಪ್ರಜಾವಾಣಿ ಮೆಟ್ರೊಗೆ ತಿಳಿಸಿದರು.

ಹೋಳಿ ಹುಣ್ಣಿಮೆ ಅಂಗವಾಗಿ ಎರಡು ತಿಂಗಳಿಂದ ಸಿದ್ಧತೆ ಆರಂಭಿಸಿದ್ದೇವೆ. ಕೆರೆಯ ಮಣ್ಣು ತಂದು ಹದ ಮಾಡಿ, ಮೂರ್ತಿ ತಯಾರಿಸುತ್ತೇವೆ. ಈಗ ಬಣ್ಣ ಲೇಪ‍ನ ಮಾಡಲಾಗುತ್ತಿದೆ. ಹಾವೇರಿ, ರಾಣೆಬೆನ್ನೂರು ಹಾಗೂ ಜಿಲ್ಲೆಯ ಹಲವು ಭಾಗಗಳಿಂದ ಜನ ರತಿ, ಕಾಮಣ್ಣ ಮೂರ್ತಿ ಖರೀದಿಸಿ ಕೊಂಡೊಯ್ಯುತ್ತಾರೆ. ಆದರೆ, ವರ್ಷ ಕಳೆದಂತೆ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಒಮ್ಮೆ ಖರೀದಿಸಿ ತೆಗೆದುಕೊಂಡ ಹೋದ ಮೂರ್ತಿಗಳಿಗೆ ಹೊಸ ಬಣ್ಣ ಹಾಕಿಸಿ, ಪೂಜಿಸಿ ಸಂಗ್ರಹಿಸಿಡುವ ಪ್ರವೃತ್ತಿ ಜನರಲ್ಲಿ ಬೆಳೆಯುತ್ತಿದೆ. ಹಾಗಾಗಿ ಹೊಸ ಮೂರ್ತಿಗಳ ಮಾರಾಟ ಅಷ್ಟಕ್ಕಷ್ಟೇ ಎಂದು ವಿವರಿಸಿದರು.

ಎರಡೂವರೆ ಅಡಿಯ ವಿಗ್ರಹ ₹2000 ದಂತೆ ಮಾರಾಟ ಮಾಡಲಾಗುತ್ತಿದೆ. 5 ಅಡಿಯ ರತಿ, ಕಾಮಣ್ಣ ವಿಗ್ರಹ ಮಾಡಿಸಲು ಕನಿಷ್ಠ ₹20ರಿಂದ 30 ಸಾವಿರ ತಗುಲುತ್ತದೆ ಎಂದರು. ಈಹಿಂದೆ ಹೋಳಿ ಹುಣ್ಣಿಮೆ ಸಡಗರ ಹೆಚ್ಚಿತ್ತು. ಆದರೆ, ಈಗ ಆಚರಣೆ ಜತೆಗೆ ಜನರಲ್ಲಿನ ಉತ್ಸಾಹವೂ ಕಡಿಮೆಯಾಗುತ್ತಿದೆ. ಐದು ದಿನ ಆಚರಿಸುತ್ತಿದ್ದ ಹಬ್ಬ ಈಗ ಒಂದೇ ದಿನಕ್ಕೆ ಸೀಮಿತವಾಗಿದೆ. ಇಲ್ಲಿರುವ ಸುಮಾರು 8 ಕುಟುಂಬಗಳು ಮೂರ್ತಿ ತಯಾರಿಕೆಯನ್ನೇ ಅವಲಂಬಿಸಿವೆ ಎಂದರು.

ಸಾಮಾನ್ಯವಾಗಿ ಕಾಮದಹನದ ವೇಳೆಯೇ ರತಿ ಹಾಗೂ ಕಾಮಣ್ಣನ ಮೂರ್ತಿಗಳನ್ನು ದಹಿಸಬೇಕು. ಆದರೆ, ಸಣ್ಣ ಮೂರ್ತಿಗಳನ್ನು ದಹಿಸಿ, ದೊಡ್ಡ ಮೂರ್ತಿಗಳನ್ನು ಹಾಗೆಯೇ ಕಾಪಿಡುತ್ತಿದ್ದಾರೆ. ಇದರಿಂದ ಮೂರ್ತಿ ತಯಾರಿಕೆಗೆ ಬೇಡಿಕೆಯೂ ಕಡಿಮೆಯಾಗುತ್ತಿದೆ ಎಂದ ಅವರು, ಕಮರಿ ಪೇಟೆ, ಮೆಣಸಿನಕಾಯಿ ಓಣಿ, ಚನ್ನಪೇಟೆಗಳಲ್ಲಿ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ ಎಂದು ಹೇಳಿದರು. ಕಲಾವಿದರ ಕುಟುಂಬದ ನೀಲಕಂಠ ಕಾಂಬಳೆ, ಉದಯ ಕಾಂಬಳೆ, ವಿಜಯ ಕಾಂಬಳೆ ಅವರೂ ಕೂಡ ಮೂರ್ತಿ ತಯಾರಿಕೆಯಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ಮೂರ್ತಿ ಖರೀದಿಸುವವರು ಮಹೇಶ ಸೋನಾವಣೆ, ಮೊ: 9606537401 ಸಂಪರ್ಕಿಸಿ.

ಮುಂಬೈ ಹಾಗೂ ದೆಹಲಿಯಿಂದ ಪಿಚಕಾರಿ, ವಾಟರ್‌ಗನ್‌, ಮುಖವಾಡ ಹಾಗೂ ಬಣ್ಣ ಬಣ್ಣದ ಕೂದಲು(ವಿಗ್‌) ತರಿಸಿದ್ದೇವೆ. ಇನ್ನಷ್ಟೇ ವ್ಯಾಪಾರ ಆರಂಭವಾಗಬೇಕಿದೆ. ಹಬ್ಬಕ್ಕೆ ನಾಲ್ಕು ದಿನ ಇರುವಂತೆ ವ್ಯಾಪಾರ ಗರಿಗೆದರುವ ನಿರೀಕ್ಷೆ ಇದೆ.
ತನ್ವೀರ್, ಆಟಿಕೆ ಸಾಮಗ್ರಿ ವ್ಯಾಪಾರಿ, ದುರ್ಗದಬೈಲು

ನಮ್ಮ ಅಪ್ಪ, ಅಜ್ಜನ ಕಾಲದಿಂದಲೂ ರಂಗ ಪಂಚಮಿಗೆ ಬಣ್ಣಗಳನ್ನು ಮಾರಾಟ ಮಾಡುತ್ತಿದ್ದೇವೆ.120 ವರ್ಷಗಳಿಂದ ರಾಸಾಯನಿಕ ಮುಕ್ತ ಬಣ್ಣಗಳನ್ನು ಮಾರಾಟ ಮಾಡುತ್ತಿರುವುದರಿಂದ ಇಂದಿಗೂ ಗ್ರಾಹಕರಲ್ಲಿ ವಿಶ್ವಾಸ ಉಳಿಸಿಕೊಂಡಿದ್ದೇವೆ
ಬಸವಲಿಂಗಪ್ಪ ಎಸ್‌. ಮರಗಾಳ, ಬಣ್ಣದ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT