ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪವೂ ಸಂತೋಷವೂ ದುಃಖವೂ

Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ

ಭಯೇ ವಾ ಯದಿ ವಾ ಹರ್ಷೇ ಸಂಪ್ರಾಪ್ತೇ ಯೋ ವಿಮರ್ಶಯೇತ್ ।

ಕೃತ್ಯಂ ನ ಕುರೇತ್‌ ವೇಗಾತ್‌ ನ ಸ ಸಂತಾಪಮಾಪ್ನುಯಾತ್ ।।

ಇದರ ತಾತ್ಪರ್ಯ ಹೀಗೆ:

’ಭಯ ಉಂಟಾದಾಗ ಅಥವಾ ಸಂತೋಷ ಉಂಟಾದಾಗ ಯಾವನು ನಿಧಾನವಾಗಿ ಯೋಚಿಸುತ್ತಾನೆಯೋ, ಆ ಕೂಡಲೇ ಯಾವನು ಕೆಲಸಮಾಡುವುದಿಲ್ಲವೋ, ಅವನು ದುಃಖವನ್ನು ಹೊಂದುವುದಿಲ್ಲ.‘

ಮನುಷ್ಯ ಯಾವ ಸಂದರ್ಭಗಳಲ್ಲಿ ಎಚ್ಚರ ತಪ್ಪುತ್ತಾನೆ, ಎನ್ನುವುದನ್ನು ಸುಭಾಷಿತ ತುಂಬ ಸೊಗಸಾಗಿ ಹೇಳುತ್ತಿದೆ. ಅದು ಮನುಷ್ಯನ ಮನಸ್ಸಿನ ಸೂಕ್ಷ್ಮ ಪದರಗಳನ್ನು ಮುಟ್ಟಿಬಂದು ಮಾತನಾಡುತ್ತಿದೆ.

ನಾವು ಯಾವುದೇ ಕೆಲಸವನ್ನು ನಿಧಾನವಾಗಿ ಯೋಚಿಸಿ ಮಾಡಬೇಕು; ಮನಸ್ಸಿಗೆ ಬಂದ ಕೂಡಲೇ ಮಾಡಬಾರದು. ಯೋಚಿಸಿ ಮಾಡದ ಕೆಲಸಕ್ಕೆ ಹಲವು ತೊಂದರೆಗಳು ಎದುರಾಗಬಹುದು; ಕೊನೆಗೆ ಗುರಿಯನ್ನು ಮುಟ್ಟದೆ ವಿಫಲವೂ ಆಗಬಹುದು. ಹೀಗೆಂದು ಯೋಚಿಸಿ ಮಾಡಿದ ಕೆಲಸವೆಲ್ಲ ಯಶಸ್ಸನ್ನು ಕಾಣುತ್ತದೆ ಎಂದೇನೂ ಅಲ್ಲ. ಆದರೆ ಯೋಚಿಸಿ ಮಾಡಿದರೆ ಅಪಾಯದ ಪ್ರಮಾಣವನ್ನಂತೂ ಖಂಡಿತ ಕಡಿಮೆ ಮಾಡಬಹುದು.

ಕೆಲಸವನ್ನು ಯೋಚಿಸದೆ ಮಾಡುವುದಕ್ಕೆ ಕಾರಣ ನಮ್ಮ ಅತಿಯಾದ ಉತ್ಸಾಹ; ಅದರಿಂದ ಒದಗುವ ಮೈ ಮರೆವು. ಈ ಮೈ ಮರೆವು ಆವರಿಸಿಕೊಳ್ಳುವುದಾದರೂ ಏಕೆ? ಸುಭಾಷಿತ ಆ ಸಂದರ್ಭಗಳನ್ನು ಹೇಳಿದೆ. ಎರಡು ಸಂದರ್ಭದಲ್ಲಿ ನಾವು ಎಚ್ಚರ ತಪ್ಪುತ್ತೇವೆ. ನಮಗೆ ಕೋಪ ಬಂದಾಗ, ನಮ್ಮ ಮೇಲೆ ನಾವೇ ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ. ಹೀಗೆಯೇ ತುಂಬ ಸಂತೋಷ ಆದಾಗಲೂ ನಾವು ನಮ್ಮ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ. ನಮ್ಮ ಮೇಲೆ ನಾವು ನಿಯಂತ್ರಣವನ್ನು ಕಳೆದುಕೊಂಡಿರುವಾಗ ಯೋಚನಶಕ್ತಿಯನ್ನೂ ಕಳೆದುಕೊಂಡಿರುತ್ತೇವೆ. ಆಗ ನಾವು ಏನು ಮಾಡಿದರೂ ಅದು ದಿಕ್ಕು ತಪ್ಪುವುದು ಖಂಡಿತ; ಇದರಲ್ಲಿ ಅನುಮಾನವೇ ಬೇಡವೆನ್ನಿ!

ಒಂದು ವೇಳೆ ನಾವು ಎಚ್ಚರ ತಪ್ಪಿರುವ ಕಾಲದಲ್ಲಿ ಯಾವುದಾದರೂ ಕೆಲಸವನ್ನು ಆರಂಭಿಸಿದೆವು ಎಂದಿಟ್ಟುಕೊಳ್ಳಿ, ಆಗ ನಮಗೆ ದುಃಖ ತಪ್ಪದು. ಏಕೆಂದರೆ ಎಚ್ಚರ ತಪ್ಪಿರುವಾಗ ನಮ್ಮ ಬುದ್ಧಿ ನಮ್ಮ ವಶದಲ್ಲಿರದು; ಅದೊಂದು ವಿಧದ ನಶೆಯನ್ನು ಏರಿಸಿಕೊಂಡ ಸ್ಥಿತಿಯಲ್ಲಿ ನಾವಿರುತ್ತೇವೆ. ಈ ನಶೆಗೆ ಕಾರಣವಾಗಬಲ್ಲದು, ಕೋಪ ಮತ್ತು ಸಂತೋಷ.

ರಸ್ತೆಯಲ್ಲಿ ಹೋಗುತ್ತಿದ್ದೇವೆ; ಪೊಲೀಸ್ ಅಧಿಕಾರಿ ನಮ್ಮ ತಡೆದು ನಿಲ್ಲಿಸಿದ್ದಾರೆ. ವಾಹನದ ದಾಖಲೆಗಳನ್ನು ಕೇಳುತ್ತಿದ್ದಾರೆ. ಏಕೋ, ಇದ್ದಕ್ಕಿದ್ದ ಹಾಗೆ ಕೋಪ ನಮ್ಮನ್ನು ಆವರಿಸಿಕೊಂಡಿತು. ಕೋಪದ ದೆಸೆಯಿಂದ ನಮ್ಮ ಮೇಲೆ ಹಿಡಿತವನ್ನು ಕಳೆದುಕೊಂಡೆವು. ಆ ಅಧಿಕಾರಿ ಜೊತೆಗೆ ಮಾತಿಗೆ ಮಾತು ಬೆಳೆಯಿತು. ಸಂದರ್ಭಕ್ಕೆ ವಿಕೋಪಕ್ಕೆ ಹೋಯಿತು. ಅಪಾಯದಲ್ಲಿ ಸಿಲುಕಿದೆವು. ಸುಲಭದಲ್ಲಿ ಪರಿಹಾರ ಕಾಣುತ್ತಿದ್ದ ಸಮಸ್ಯೆಯೊಂದು ಈಗ ಕೋಪದ ದೆಸೆಯಿಂದ ನಮ್ಮನ್ನು ದುಃಖಕ್ಕೆ ತಳ್ಳುವಷ್ಟು ವಿಪರೀತವಾಯಿತು.

ಇಂಥವು ಕೇವಲ ರಸ್ತೆಯಲ್ಲಿ ಮಾತ್ರವೇ ಅಲ್ಲ; ಮನೆಯಲ್ಲೂ ನಡೆಯುತ್ತಲೇ ಇರುತ್ತವೆ. ಗಂಡ–ಹೆಂಡತಿ ನಡುವೆ ಒಂದು ಸಣ್ಣ ಸಮಸ್ಯೆಯು ಪರಸ್ಪರ ಕೋಪಾವೇಶಕ್ಕೆ ಕಾರಣವಾಗಿ, ಅದರ ದುಷ್ಫಲವಾಗಿ ಮುಂದೆ ದುಃಖಪರಂಪರೆಯನ್ನೇ ಅನುಭವಿಸಬೇಕಾಗುತ್ತದೆ. ಹೀಗೆ ಕೋಪದಿಂದ ಮನುಷ್ಯರು ಮಾತ್ರವೇ ಅಲ್ಲ, ದೇವತೆಗಳೂ ರಾಕ್ಷಸರೂ ಕೂಡ – ದುಃಖವನ್ನು ಅನುಭವಿಸಿದರು ಎನ್ನುವುದನ್ನು ಪುರಾಣಗಳು ಹೇಳುತ್ತಿವೆ.

ಕೋಪದ ಸಮಯದಲ್ಲಿ ನಮ್ಮಲ್ಲಿ ಒಂದು ವಿಧದ ಹತಾಶೆ ತಲೆದೋರಿ ದುರಂತಕ್ಕೆ ನಾಂದಿ ಹಾಡಿದರೆ, ಸಂತೋಷದ ಸಮಯದಲ್ಲಿ ಒಂದು ವಿಧದ ಉನ್ಮಾದ ನಮ್ಮ ಮೇಲೆ ಸವಾರಿ ಮಾಡುತ್ತದೆ.

ಸಂತೋಷದ ತೀವ್ರತೆಯಲ್ಲಿ ನಮ್ಮ ನಡೆ–ನುಡಿಗಳ ಮೇಲೆ ಹತೋಟಿಯನ್ನು ಕಳೆದುಕೊಳ್ಳುತ್ತೇವೆ. ಒಂದು ಮಾತು ಆಡುವ ಜಾಗದಲ್ಲಿ ನೂರು ಮಾತನ್ನು ಆಡುತ್ತೇವೆ. ಆ ಬಳಿಕ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಹೀಗಾಗಿ ಸಂತೋಷದಲ್ಲಿರುವಾಗಲೂ ನಾವು ಯಾವುದೇ ಕೆಲಸಕ್ಕೆ ಕೈ ಹಾಕದಿರುವುದೇ ಒಳ್ಳೆಯದು.

ಸ್ನೇಹಿತರೆಲ್ಲ ಎಲ್ಲೋ ಪಿಕ್‌ನಕ್‌ಗೆ ಹೋಗಿರುತ್ತೇವೆ. ಎಲ್ಲರೂ ಸಂತೋಷದಲ್ಲಿ ಮುಳುಗಿದ್ದೇವೆ. ಜಗತ್ತಿನಲ್ಲಿ ನಾವು ನಮ್ಮ ಸಂತೋಷ – ಇಷ್ಟನ್ನು ಬಿಟ್ಟು ನಮಗೆ ಬೇರೇನೂ ಅರಿವಿಗೇ ಬರುತ್ತಿಲ್ಲ. ಆಗ ಅಲ್ಲೇ ಹತ್ತಿರ ಇರುವ ಯಾರನ್ನೋ ಅನಗತ್ಯವಾಗಿ ಕೀಟಲೆ ಮಾಡುತ್ತೇವೆ; ಏಕೆಂದರೆ ಸಂತೋಷದ ನಶೆ ಮುಂದಿನ ಸಾಧಕ–ಬಾಧಕಗಳನ್ನು ಯೋಚಿಸುವಂಥ ಬುದ್ಧಿಯನ್ನೇ ನಮ್ಮಿಂದ ಕಿತ್ತುಕೊಂಡಿರುತ್ತದೆ. ಹೀಗಾಗಿ ನಮ್ಮ ಅತಿಯಾದ ಸಂತೋಷದ ದೆಸೆಯಿಂದ ಅನವಶ್ಯಕವಾದ ಸಮಸ್ಯೆಗೆ ಒಳಗಾಗುತ್ತೇವೆ.

ಹೀಗಾಗಿ ನಾವು ಯಾವುದಾದರೂ ಕೆಲಸವನ್ನು ಮಾಡುವಾಗ – ನಾವು ತಪ್ಪದೇ ಆಲೋಚಿಸಬೇಕಾದುದೆಂದರೆ, ನಾವು ಈಗ ಯಾವ ಸ್ಥಿತಿಯಲ್ಲಿ ಇದ್ದೇವೆ ಎನ್ನುವುದು. ನಮ್ಮನ್ನು ಆಗ ಕೋಪವಾಗಲೀ ಸಂತೋಷವಾಗಲೀ ಸವಾರಿ ಮಾಡುತ್ತಿಲ್ಲ ಎಂಬುದನ್ನು ನಮಗೆ ನಾವೇ ಖಾತರಿ ಮಾಡಿಕೊಂಡು, ಆ ಬಳಿಕವಷ್ಟೆ ಕೆಲಸದಲ್ಲಿ ತೊಡಗಬೇಕು. ಇಲ್ಲವಾದಲ್ಲಿ ದುಃಖವನ್ನು ಅನುಭವಿಸಬೇಕಾಗಿಬರುವುದು ನಿಶ್ಚಯವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT