ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಹಣ ಸ್ಥಿರವಲ್ಲ

Last Updated 17 ಡಿಸೆಂಬರ್ 2020, 1:06 IST
ಅಕ್ಷರ ಗಾತ್ರ

ಅಪದ್ಗತಂ ಹಸಸಿ ಕಿಂ ದ್ರವಿಣಾಂಧ ಮೂಢ

ಲಕ್ಷ್ಮೀಃ ಸ್ಥಿರಾ ನ ಭವತೀತಿ ಕಿಮತ್ರ ಚಿತ್ರಮ್‌ ।

ಕಿಂ ತ್ವಂ ನ ಪಶ್ಯಸಿ ಘಟೀರ್ಜಲಯಂತ್ರಚಕ್ರೇ

ರಿಕ್ತಾ ಭವಂತಿ ಭರಿತಾ ಭರಿತಾಶ್ಚ ರಿಕ್ತಾಃ ।।

ಇದರ ತಾತ್ಪರ್ಯ ಹೀಗೆ:

‘ಹಣದಿಂದ ಕುರುಡನಾದ ಮೂರ್ಖನೇ! ಕಷ್ಟದಲ್ಲಿರುವವರನ್ನು ಕಂಡು ಏಕೆ ನಗುವೆ? ಸಂಪತ್ತು ಯಾರಿಗೂ ಸ್ಥಿರವಲ್ಲ. ಮಾತ್ರವಲ್ಲ, ಇದರಲ್ಲಿ ಆಶ್ಚರ್ಯವೂ ಇಲ್ಲ. ನೀರಿನ ರಾಟೆಯಲ್ಲಿ ಘಟಗಳು ತುಂಬುತ್ತವೆ ಮತ್ತು ಬರಿದಾಗುತ್ತವೆಯಷ್ಟೆ; ಇದನ್ನು ನೀನು ನೋಡಿಲ್ಲವೆ?’

ಹಣದ ಮದ ತುಂಬ ಕೆಟ್ಟ ಮದ. ಇದು ಮಾಡಿಸುವ ವಿಪರೀತ ಚೇಷ್ಟೆಗಳು ಅಸಂಖ್ಯ. ಒಬ್ಬನಲ್ಲಿ ಯಾವುದೇ ಒಂದೇ ಒಂದು ಒಳ್ಳೆಯ ಗುಣವೂ ಇಲ್ಲದಿರಬಹುದು; ಹಣವಷ್ಟೆ ಅವನಲ್ಲಿ ಇರುವ ಸಂಪತ್ತು ಆಗಿರುತ್ತದೆ. ಅವನ ಯೋಚನೆ ಹೇಗಿರುತ್ತದೆ ಎಂದರೆ, ಜಗತ್ತಿನಲ್ಲಿರುವ ಎಲ್ಲ ಗುಣಗಳೂ ಅವನಲ್ಲಿಯೇ ನೆಲಸಿವೆ ಎಂದು ಅವನು ಭಾವಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಇಡಿಯ ಜಗತ್ತು ತನಗೆ ಶರಣಾಗಬೇಕೆಂದೂ, ಶರಣಾಗಿದೆಯೆಂದೂ ನಂಬುತ್ತಾನೆ. ಹಣ ಇಲ್ಲದವರನ್ನು ಕಂಡರೆ ಇವನಿಗೆ ತಾತ್ಸಾರ; ಅಂಥವರನ್ನು ಹೀನಯವಾಗಿ ಕಾಣುತ್ತಾನೆ. ಸುಭಾಷಿತ ಇಂಥವನ ಬಗ್ಗೆಯೇ ಮಾತನಾಡುತ್ತಿರುವುದು.

ಹಣದ ಮದದಲ್ಲಿರುವವನಿಗೆ ಸುಭಾಷಿತ ಒಂದು ಎಚ್ಚರಿಕೆಯನ್ನೂ ಕೊಡುತ್ತಿದೆ: ಸಂಪತ್ತು ಯಾರಿಗೂ ಸ್ಥಿರವಲ್ಲ.

ಬಡವರು ಸಿರಿವಂತರಾಗುವುದನ್ನೂ, ಸಿರಿವಂತರು ಬಡವರಾಗುವುದನ್ನೂ ನಾವು ಸಮಾಜದಲ್ಲಿ ನೋಡುತ್ತಲೇ ಇರುತ್ತೇವೆ. ಇದರ ಅರ್ಥ, ಅರ್ಥಸಂಪತ್ತು ಯಾರಲ್ಲೂ ಶಾಶ್ವತವಾಗಿ ನಿಲ್ಲದು.

ಈ ಶಾಶ್ವತಸತ್ಯವನ್ನು ತಿಳಿಸಲು ಸುಭಾಷಿತ ಬಳಸಿಕೊಂಡಿರುವ ಉಪಮೆಯೂ ಸೊಗಸಾಗಿದೆ.

ಹಿಂದಿನ ಕಾಲದಲ್ಲಿ ತೋಟಕ್ಕೆ ನೀರನ್ನು ಹಾಯಿಸಲು ರಾಟೆಯನ್ನು ಉಪಯೋಗಿಸುತ್ತಿದ್ದರು. ಚಕ್ರಾಕಾರವಾಗಿ ಇರುತ್ತಿದ್ದ ರಾಟೆಯಲ್ಲಿ ಹಲವು ಕೊಡಗಳು ಇರುತ್ತಿದ್ದವು. ಒಂದೊಂದು ಕೊಡವೂ ಹಳ್ಳದ ಒಳಗಿನ ನೀರಿನಿಂದ ತುಂಬಿ ಹೊರಗೆ ಬಂದಕೂಡಲೇ ಅದನ್ನು ಚೆಲ್ಲುವುದು. ಎಂದರೆ ಕೊಡಗಳು ತುಂಬುವುದು, ಮತ್ತೆ ಖಾಲಿಯಾಗುವುದು ರಾಟೆಯ ಸುತ್ತಾಟದಲ್ಲಿ ಸಹಜವಾದ ವಿದ್ಯಮಾನ.

ಹೀಗೆಯೇ ನಮ್ಮ ಜೀವನದಲ್ಲೂ ಹಣ ಬರುವುದು, ಮತ್ತೆ ಅದು ಖಾಲಿಯಾಗುವುದು ಸಹಜವಾಗಿಯೇ ನಡೆಯುತ್ತಿರುತ್ತದೆ. ಸಂಪತ್ತು ಎಂದಿಗೂ ಸ್ಥಿರವಲ್ಲ. ಇದನ್ನು ನಾವು ಅರ್ಥಮಾಡಿಕೊಂಡು ಸಮಚಿತ್ತದಿಂದ ಜನರೊಂದಿಗೆ ನಡೆದುಕೊಳ್ಳಬೇಕು. ಹಣ ಇಲ್ಲದವರನ್ನು ಕಂಡು ಈಗ ನಾವು ನಗಬಹುದು; ನಮ್ಮಲ್ಲಿಯೂ ನಾಳೆ ಹಣ ಖಾಲಿಯಾದಾಗ ನಮ್ಮನ್ನೂ ನೋಡಿ ಜನರು ನಕ್ಕರೆ ಆಗ ನಮ್ಮ ಮನಸ್ಸು ಎಷ್ಟು ಸಂಕಟ ಪಡಬಹುದು ಎಂಬ ಎಚ್ಚರಿಕೆ ನಮಗೆ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT