ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ದುಷ್ಟನ ಸ್ನೇಹ

Last Updated 1 ಡಿಸೆಂಬರ್ 2020, 1:22 IST
ಅಕ್ಷರ ಗಾತ್ರ

ಯಥಾ ಪೂರ್ವಂ ಗಜಃ ಸ್ನಾತ್ವಾ ಗೃಹ್ಯ ಹಸ್ತೇನ ವೈ ರಜಃ ।

ದೂಷಯತ್ಯಾತ್ಮನೋ ದೇಹಂ ತಥಾsನಾರ್ಯೇಷು ಸೌಹೃದಮ್‌ ।।

ಇದರ ತಾತ್ಪರ್ಯ ಹೀಗೆ:

‘ಆನೆಯು ಮೊದಲು ಸ್ನಾನಮಾಡಿ ಆಮೇಲೆ ಸೊಂಡಿಲಿನಿಂದ ಧೂಳೆರೆಚಿಕೊಂಡು ತನ್ನ ಮೈಯನ್ನು ಮತ್ತೆ ತಾನೇ ಕೊಳೆಮಾಡಿಕೊಳ್ಳುತ್ತದೆಯಷ್ಟೆ! ಅಂತೆಯೇ ದುಷ್ಟರೂ ತಾವಾಗಿಯೇ ಬೆಳಸಿಕೊಂಡ ಸ್ನೇಹವನ್ನು ಮತ್ತೆ ತಾವಾಗಿಯೇ ಕೆಡಿಸಿಕೊಳ್ಳುತ್ತಾರೆ.’

ಸ್ನೇಹವನ್ನು ಗಳಿಸಿಕೊಳ್ಳುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟ ಅದನ್ನು ಉಳಿಸಿಕೊಳ್ಳುವುದು. ದುಷ್ಟರು ಸಂಪಾದಿಸಿಕೊಂಡ ಸ್ನೇಹ ಹೆಚ್ಚು ದಿನ ಉಳಿಯಲಾರದು. ಸುಭಾಷಿತ ಹೇಳುತ್ತಿರುವುದು ಇದನ್ನು. ಈ ವಿದ್ಯಮಾನವನ್ನು ಅರ್ಥಮಾಡಿಸಲು ಅದು ಉಪಯೋಗಿಸಿಕೊಂಡಿರುವ ವಿದ್ಯಮಾನವೂ ಸ್ವಾರಸ್ಯಕರವಾಗಿದೆ.

ಆನೆಗೆ ನೀರೆಂದರೆ ತುಂಬ ಇಷ್ಟ. ಅದು ಯಥೇಷ್ಟವಾಗಿ ಸ್ನಾನವನ್ನೇನೋ ಮಾಡುತ್ತದೆ. ಆದರೆ ಸ್ನಾನ ಮಾಡಿದಮೇಲೆ ಧೂಳನ್ನು ತನ್ನ ಮೈಮೇಲೆ ತಾನೇ ಎರಚಿಕೊಳ್ಳುತ್ತದೆ! ಸ್ನಾನದ ಉದ್ದೇಶ ಏನು? ಮೈಮೇಲಿನ ಕೊಳೆಯನ್ನು ಹೋಗಲಾಡಿಸಿಕೊಂಡು ಶುಭ್ರರಾಗಬೇಕೆಂಬುದು ತಾನೆ? ಅದರೆ ಆನೆಗೆ ಇದು ಹೇಗೆ ಗೊತ್ತಾಗಬೇಕು? ಅದಕ್ಕೆ ನೀರನ್ನು ಎರಚಿಕೊಳ್ಳುವುದೂ ಒಂದು ಆಟ; ಆಮೇಲೆ ಧೂಳನ್ನು ಎರಚಿಕೊಳ್ಳುವುದೂ ಒಂದು ಆಟ. ಹೀಗಾಗಿ ಸ್ನಾನಮಾಡಿಯೂ ಅದು ಕೊಳೆಯಿಂದಲೇ ಇರಬೇಕಾಗುತ್ತದೆ.

ದುಷ್ಟರ ಸ್ನೇಹಸ್ವಭಾವಕ್ಕೂ ಆನೆಯ ಸ್ನಾನಕ್ಕೂ ಸುಭಾಷಿತ ಸಾದೃಶ್ಯವನ್ನು ಗುರುತಿಸಿದೆ.

ದುಷ್ಟರು ನಮ್ಮ ಸ್ನೇಹವನ್ನು ಸಂಪಾದಿಸುತ್ತಾರೆ. ಆದರೆ ಅವರೇ ಆ ಸ್ನೇಹವನ್ನೂ ಕೆಡಿಸಿಕೊಳ್ಳುತ್ತಾರೆ – ಸ್ನಾನ ಮಾಡಿದ ಆನೆ ತಾನೇ ಧೂಳನ್ನು ಎರಚಿಕೊಳ್ಳುವಂತೆ! ದುಷ್ಟರಿಗೆ ಸ್ನೇಹದ ಬೆಲೆ ಗೊತ್ತಾಗದು. ಅಷ್ಟೇ ಅಲ್ಲ, ಅವರ ದುಷ್ಟತನ ಎಂಥ ಸ್ನೇಹವನ್ನೂ ಉಳಿಸದು ಕೂಡ. ಅವರ ಅಯೋಗ್ಯತದಿಂದಾಗಿ ಎಂಥವರೂ ಅವರಿಂದ ದೂರ ಸರಿಯಲೇ ಬೇಕಾಗುತ್ತದೆ. ದುಷ್ಟರಿಗೆ ಎಲ್ಲ ಬಾಂಧವ್ಯಗಳೂ ತಮ್ಮ ದುಷ್ಟತನಕ್ಕೆ ಒದಗುವ ವಿಷಯಗಳಷ್ಟೆ!

ನಾವು ಸ್ನೇಹವನ್ನು ಮಾಡಲು ನೂರು ಸಲ ಯೋಚಿಸಬೇಕು. ಆದರೆ ಒಮ್ಮೆ ಸ್ನೇಹ ಗಟ್ಟಿಯಾದಮೇಲೆ ಅದನ್ನು ಒಡೆಯುವ ಮುನ್ನ ಸಾವಿರ ಸಲ ಯೋಚಿಸಬೇಕು. ಸ್ನೇಹಕ್ಕೂ ನಮ್ಮ ವ್ಯಕ್ತಿತ್ವಕ್ಕೂ ನೇರ ಸಂಬಂಧ ಇದೆ ಎನ್ನುವುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT