ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಾಳೆಯ ಕೆಲಸವನ್ನು ಇಂದೇ ಮಾಡಿ

Last Updated 3 ಸೆಪ್ಟೆಂಬರ್ 2020, 0:58 IST
ಅಕ್ಷರ ಗಾತ್ರ

ಪೂರ್ವೇ ವಯಸಿ ತತ್‌ ಕುರ್ಯಾತ್‌ ಯೇನ ವೃದ್ಧಃ ಸುಖಂ ವಸೇತ್‌ ।

ಯಾವಜ್ಜೀವೇನ ತತ್‌ ಕುರ್ಯಾತ್‌ ಯೇನ ಪ್ರೇತ್ಯ ಸುಖಂ ವಸೇತ್‌ ।।

ಇದರ ತಾತ್ಪರ್ಯ ಹೀಗೆ:

‘ವಯಸ್ಸಾದಮೇಲೆ ಸುಖವಾಗಿರಲು ಯಾವುದು ಬೇಕಾಗಿದೆಯೋ ಅದನ್ನು ತಾರುಣ್ಯದಲ್ಲಿಯೇ ಮಾಡಿ ಮುಗಿಸಬೇಕು. ಸತ್ತಮೇಲೆ ಜನ್ಮಾಂತರದಲ್ಲಿ ಯಾವುದರಿಂದ ಸುಖವಾಗುವುದೋ ಅದನ್ನು ಜನ್ಮಪೂರ್ತಿಯಾಗಿ ಮಾಡುತ್ತಿರಬೇಕು.‘

ನಮ್ಮ ಎಲ್ಲರ ಆಸೆಯೂ ಗುರಿಯೂ ಒಂದು: ವಯಸ್ಸಾದ ಮೇಲೆ ಸಂತೋಷವಾಗಿರಬೇಕು.

ನಾವು ಸಂಪಾದಿಸುವುದು, ಕೂಡಿಡುವುದು ನಾವು ವಯಸ್ಸಾದಮೇಲೆ ಕಷ್ಟವನ್ನು ಪಡದೆ ಸುಖವಾಗಿರಬೇಕು ಎಂಬ ಕಾರಣದಿಂದ. ಮಕ್ಕಳನ್ನು ಬೆಳೆಸುವುದು, ಅವರನ್ನು ಓದಿಸುವುದು – ಇವು ಕೂಡ ವಯಸ್ಸಾದ ಮೇಲೆ ಅವರು ನಮ್ಮನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ. ಅಂದರೆ ನಾವು ವಯಸ್ಸಾದಮೇಲೆ ಸುಖವಾಗಿರಬೇಕು ಎಂದರೆ ತಾರುಣ್ಯದಲ್ಲಿಯೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.

ಇದರ ತಾತ್ಪರ್ಯ: ನಾವು ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು; ಸಂಪಾದಿಸುವ ಸಮಯದಲ್ಲಿ ಚೆನ್ನಾಗಿ ಸಂಪಾದಿಸಬೇಕು; ಜೀವನದಲ್ಲಿ ಯಾವ ಸಮಯದಲ್ಲಿ ಯಾವ ಯಾವ ಹೊಣೆಗಾರಿಕೆಯನ್ನು ನಿರ್ವಹಿಸಬೇಕೋ ಆಯಾ ಸಮಯದಲ್ಲಿ ಅವನ್ನು ಚೆನ್ನಾಗಿ ನಿರ್ವಹಿಸಬೇಕು. ಮದುವೆ, ಮಕ್ಕಳ ಲಾಲನೆ–ಪೋಷಣೆಗಳು ಯುಕ್ತ ಕಾಲದಲ್ಲಿ ನಡೆಯಬೇಕು. ಆಗಷ್ಟೇ ವಯಸ್ಸಾದಮೇಲೆ ಸುಖವಾಗಿರಲು ಸಾಧ್ಯ.

ಸುಭಾಷಿತದ ಪೂರ್ವಾರ್ಧವನ್ನು ಇನ್ನೊಂದು ರೀತಿಯಲ್ಲೂ ಅರ್ಥೈಸಬಹುದು.

ಆಧ್ಯಾತ್ಮಿಕೆ ಎನ್ನುವುದು ಜೀವನಕ್ಕೆ ಒದಗುವ ಸಂತೋಷ ಎಂದು ತಿಳಿಯುವುದುಂಟು. ಆದರೆ ಅಧ್ಯಾತ್ಮದ ಜೀವನವನ್ನು ಬಯಸುವವರು ಹೆಚ್ಚಾಗಿ ವಯಸ್ಸಾದವರೇ ಆಗಿರುತ್ತಾರೆ. ಇಲ್ಲಿ ಸುಭಾಷಿತ ಹೇಳುತ್ತಿರುವುದು, ಅಧ್ಯಾತ್ಮ ಎನ್ನುವುದು ನೀವು ವಯಸ್ಸಾದ ಕೂಡಲೇ, ಶಕ್ತಿ ಕುಂದಿದಮೇಲೆ ಸಿದ್ಧಿಸುವಂಥದ್ದಲ್ಲ; ಅದಕ್ಕಾಗಿ ನೀವು ಜೀವನದುದ್ದಕ್ಕೂ, ಶಕ್ತಿ ಇರುವಾಗಲೇ ಸಾಧನಚತುಷ್ಟಯಗಳನ್ನು ಸಂಪಾದಿಸಿಕೊಂಡು, ಸಿದ್ಧವಾಗುತ್ತಲೇ ಇರಬೇಕಾಗುತ್ತದೆ. ಆಗ ಮಾತ್ರವೇ ಅದು ನಿಮ್ಮನ್ನು ಕೈಹಿಡಿಯುತ್ತದೆ.

ಇನ್ನು ಸುಭಾಷಿತದ ಉತ್ತರಾರ್ಧವನ್ನು ನೋಡೋಣ.

ಸತ್ತಮೇಲೆ ನಾವು ಏನಾಗುತ್ತೇವೆ? ನಮ್ಮ ಶಾಸ್ತ್ರಗಳ ನಂಬಿಕೆಯ ಪ್ರಕಾರ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತೇವೆ. ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಸ್ವರ್ಗ; ಕೆ‌ಟ್ಟ ಕೆಲಸಗಳನ್ನು ಮಾಡಿದ್ದರೆ ನರಕ. ಈ ಒಳ್ಳೆಯ ಕೆಲಸಗಳನ್ನೇ ಪುಣ್ಯ ಎಂದೂ, ಕೆಟ್ಟ ಕೆಲಸಗಳನ್ನೇ ಪಾಪ ಎಂದೂ ಕರೆಯುವುದು. ನಾವು ಯಾರೂ ನರಕವನ್ನು ಬಯಸುವುದಿಲ್ಲವಷ್ಟೆ! ಎಲ್ಲರಿಗೂ ಸ್ವರ್ಗವೇ ಬೇಕು.

ಹೀಗಾಗಿ ನಮಗೆ ಸ್ವರ್ಗ ಬೇಕು ಎಂದರೆ ಏನು ಮಾಡಬೇಕು? ಒಳ್ಳೆಯ ಕೆಲಸಗಳನ್ನು ಮಾಡಬೇಕು. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು. ಆದರೆ ಒಳ್ಳೆಯ ಕೆಲಸವನ್ನು ಸಾಯುವ ಸಮಯದಲ್ಲಿ ಮಾಡಿದರೆ ಪ್ರಯೋಜನ ಇರದು; ಅದನ್ನು ಜೀವನದುದ್ದಕ್ಕೂ ಮಾಡುತ್ತಲೇ ಇರಬೇಕು. ನಾಲ್ಕು ಜನರಿಗೆ ಪ್ರಯೋಜನವಾಗುವಂಥ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸ್ವರ್ಗ ಸಿಗುತ್ತಿದೆಯೋ ಇಲ್ಲವೋ – ಅದು ಅನಂತರದ ಪ್ರಶ್ನೆ. ಆದರೆ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ನಮಗೆ ನೆಮ್ಮದಿ ಸಿಗುತ್ತದೆ; ನಮ್ಮ ಜೀವನವೂ ಸಾರ್ಥಕತೆಯನ್ನು ಪಡೆಯುತ್ತದೆ. ಇದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT