ಮಂಗಳವಾರ, ಸೆಪ್ಟೆಂಬರ್ 21, 2021
28 °C

ದಿನದ ಸೂಕ್ತಿ | ಭಯ ಬೇಡ, ಎಚ್ಚರ ಇರಲಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್ ।
ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ ।।

ಇದರ ತಾತ್ಪರ್ಯ ಹೀಗೆ:

'ಓದುವಿಕೆಯಿಂದ ಮೂರ್ಖತ್ವ ತೊಲಗುತ್ತದೆ; ಜಪದಿಂದ ಪಾಪದ ಪರಿಹಾರವಾಗುತ್ತದೆ; ಮೌನಿಗಳಿಗೆ ಜಗಳ ಎದುರಾಗದು; ಎಚ್ಚರವಾಗಿರುವವರಿಗೆ ಭಯ ಇರದು.'

ಬುದ್ಧ ಹೇಳಿದ: 'ಹೌದು, ಜಗತ್ತಿನಲ್ಲಿ ದುಃಖ ಇದೆ. ಆದರೆ ಹೆದರಬೇಡಿ, ಆ ದುಃಖಕ್ಕೆ ಪರಿಹಾರವೂ ಇದೆ. ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಮೂಲಶಕ್ತಿ ಇರುವುದು ಸರಿಯಾದ ತಿಳಿವಳಿಕೆಯಲ್ಲಿ, ಸರಿಯಾದ ನಡೆಯಲ್ಲಿ.'

ನಮ್ಮ ನಡೆ–ನುಡಿ ಸೇರಿದಂತೆ ನಮ್ಮ ನಿತ್ಯದ ಎಲ್ಲ ಸಂಗತಿಗಳೂ ಮೊದಲು ‘ಸರಿ’ಯಾಗಿದೆಯೇ ಎಂದು ಮೊದಲು ಪರೀಕ್ಷಿಸಿಕೊಳ್ಳಿ ಎಂದು ಬುದ್ಧ ಭಗವಂತ ಹೇಳಿದೆ. ಹೀಗಾಗಿಯೇ ಅವನು ದುಃಖಪರಿಹಾರದ ಮಾರ್ಗದಲ್ಲಿ ಹೇಳಿದ ಎಲ್ಲ ಪರಿಹಾರದ ವಿಧಿಗಳಿಗೂ ಮೊದಲಲ್ಲಿ 'ಸಮ್ಯಕ್‌' – ಸರಿಯಾಗಿರುವುದು – ಎಂಬುದನ್ನು ಸೇರಿಸಿದ: ಸಮ್ಯಕ್‌ ದೃಷ್ಟಿ, ಸಮ್ಯಕ್‌ ಕರ್ಮ – ಹೀಗೆ.

ಇಲ್ಲಿ ಸುಭಾಷಿತ ಕೂಡ ನಮ್ಮ ಸಮಸ್ಯೆಗಳನ್ನು ಪರಿಹರಿಸಬಲ್ಲ ವಿಧಾನಗಳನ್ನು ಕುರಿತು ಹೇಳುತ್ತಿದೆ.

ಮೊದಲನೆಯ ಸಮಸ್ಯೆ ಎಂದರೆ ನಮ್ಮ ಮೂರ್ಖತನ. ಮೂರ್ಖತನಕ್ಕೆ ದೊಡ್ಡ ಚಿಕಿತ್ಸೆ ಎಂದರೆ ಓದು. ಓದು ಎಂದ ಕೂಡಲೇ ಅದೇನೂ ಪುಸ್ತಕಗಳ ಓದೇ ಆಗಬೇಕಿಲ್ಲ; ಜಗತ್ತಿನ ಓದು ಕೂಡ ಆಗಬಹುದು. ಜೀವನವನ್ನು ಹತ್ತಿರದಿಂದ ಸೂಕ್ಷ್ಮವಾಗಿ, ವಿವೇಕದಿಂದ ನೋಡುವುದು ದೊಡ್ಡ ಓದೇ ಹೌದು. ದಿಟ, ಪುಸ್ತಕಗಳೂ ನಮಗೆ ಜಗತ್ತನ್ನು ಪರಿಚಯಿಸುತ್ತವೆ. ಆದರೆ ಪುಸ್ತಕಗಳನ್ನು ಆರಿಸಿಕೊಳ್ಳುವಾಗ ಎಚ್ಚರವಾಗಿರಬೇಕು; ಯಾವುದು ನಮ್ಮ ಅರಿವಿಗೆ ಪೂರಕ, ಯಾವುದು ಮಾರಕ ಎಂಬ ಅರಿವೂ ಮುಖ್ಯವಾಗುತ್ತದೆ. ಒಟ್ಟಿನಲ್ಲಿ ಓದು ನಮ್ಮ ಮೂರ್ಖತನವನ್ನು ವಾಸಿಮಾಡಬಲ್ಲ ದಿವ್ಯೌಷಧ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಾವು ಮಾಡುವ ತಪ್ಪು ಕೆಲಸಗಳೆಲ್ಲವೂ ಪಾಪವೇ ಹೌದು. ನಿತ್ಯವೂ ಹತ್ತಾರು ಇಂಥ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಪಾಪದ ಒಂದು ವಿಶಿಷ್ಟ ಗುಣ ಎಂದರೆ ಅದು ನಮ್ಮ ಕಣ್ಣಿಗೆ ಪ್ರತ್ಯಕ್ಷ ಕಾಣದು. ಕಣ್ಣಿಗೆ ಕಾಣದ ನಮ್ಮ ತಪ್ಪುಗಳನ್ನೇ ಪಾಪಗಳು ಎನ್ನಬಹುದೆನ್ನಿ! ಸಾವಿನ ಪ್ರಮಾಣಪತ್ರ ಕೇಳಿ ಬಂದವರಲ್ಲೂ ಲಂಚವನ್ನು ಕೇಳುತ್ತೇವೆ. ಲಂಚವನ್ನು ಕೊಡುವವರು ಆ ಹಣವನ್ನು ಎಷ್ಟು ಕಷ್ಟಪಟ್ಟು ತಂದಿರುತ್ತಾರೆ ಎಂಬುದು ನಮಗೆ ಕಾಣದು; ಆದರೆ ಲಂಚವನ್ನು ಪಡೆಯುತ್ತೇವೆ. ಆಗ ನಮ್ಮಿಂದ ನಡೆಯುವ ಕಾರ್ಯವೇ ಪಾಪಕಾರ್ಯ. ನಾವು ತಿನ್ನುವ ಅನ್ನ ನಮ್ಮ ಬೆವರು ಆಗದೇ ಮತ್ತೊಬ್ಬರ ಬೆವರೋ ರಕ್ತವೋ ಆಗಿದ್ದರೆ ಆಗ ನಾವು ತಿನ್ನುವ ಅನ್ನ ಪಾಪದ ಅನ್ನ. ಪಾಪದಿಂದ ಬಿಡುಗಡೆ ಹೊಂದಲು ಜಪ ಮಾಡತಕ್ಕದ್ದು ಎನ್ನುತ್ತಿದೆ ಸುಭಾಷಿತ. ಜಪ – ಎಂದರೆ ನಿರಂತರವಾಗಿ ಒಂದು ಮಂತ್ರ ಅಥವಾ ಒಂದು ಮಹಾತತ್ತ್ವ ಅಥವಾ ಯಾವುದಾದರೊಂದು ದೇವರ ಹೆಸರಿನ ಪಠಣ. ನಾವು ಮಾಡುವ ಒಂದೊಂದು ಕೆಲಸದ ಸಮಯದಲ್ಲೂ ’ನಾನು ಹೀಗೆ ಮಾಡುತ್ತಿರುವುದು ಸರಿಯೇ ತಪ್ಪೇ' – ಎಂದು ಹತ್ತು ಸಲ ಯೋಚಿಸುವುದೇ ನಮ್ಮ ಕಾಲದಲ್ಲಿ ಜಪ ಎನಿಸಿಕೊಳ್ಳುವುದು; ಇದು ದೇವರನ್ನು ಕುರಿತ ಅನುಸಂಧಾನವೇ ಆಗಬೇಕಿಲ್ಲ; ನಮ್ಮ ಅಂತರಂಗದಲ್ಲಿ ಕುಳಿತಿರುವ ನಮ್ಮ ಸಾಕ್ಷಿಪ್ರಜ್ಞೆಯ ಸಮ್ಮುಖದಲ್ಲಿ ನಮ್ಮ ಕಾರ್ಯಗಳ ಸರಿ–ತಪ್ಪುಗಳ ತುಲನೆಯೇ ಜಪವಾಗುತ್ತದೆ. ಇಂಥ ತುಲನೆ, ಅದೇ ಜಪವಾಗಿ ನಮ್ಮನ್ನು ಪಾಪಗಳಿಂದ ರಕ್ಷಿಸಬಲ್ಲದು.

ಇನ್ನು ಜಗಳ. ಜಗಳ ಹುಟ್ಟುವುದೇ ಮಾತಿನ ದುಂದುಗಾರಿಕೆಯಲ್ಲಿ. ಅನವಶ್ಯಕವಾದ ಮಾತುಗಳು ಜಗಳಕ್ಕೆ ಕಾರಣವಾಗುತ್ತವೆ. ಎಷ್ಟೋ ಸಂದರ್ಭದಲ್ಲಿ ಮಾತುಗಳ ಆವಶ್ಯಕತೆಯೇ ಇರುವುದಿಲ್ಲ. ಅಂಥ ಸಮಯದಲ್ಲಿ ಏನೇನೋ ಮಾತನಾಡಿ ಜಗಳಕ್ಕೆ ಆಹ್ವಾನವನ್ನು ಕೊಡುತ್ತೇವೆ. ಹೀಗಾಗಿ ಸುಭಾಷಿತ ಹೇಳುತ್ತಿದೆ, ಮೌನದ ಬೆಲೆಯನ್ನು ತಿಳಿದಿರುವವರಿಗೆ ಜಗಳವೇ ಎದುರಾಗದು. ಮಾತಿಗೊಂದು ಮಾತು, ಆ ಮಾತಿಗೊಂದು ಇನ್ನೊಂದು ಮಾತು – ಹೀಗೆ ಅನಗತ್ಯವಾಗಿ ಮಾತು ಮಾತು ಬೆಳೆದು ಕದನಕ್ಕೆ ಆಸ್ಪದ ಕೊಡುತ್ತದೆ. ಹೀಗಾಗಿ ಜೀವನದಲ್ಲಿ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯವಾದ ವಿವರ. ಮಾತು–ಮೌನಗಳ ಔಚಿತ್ಯವನ್ನು ತಿಳಿದುಕೊಂಡವನಿಗೆ ಜಗಳದಿಂದ ಶಾಶ್ವತ ನಿವೃತ್ತಿಯಾಗುತ್ತದೆ.

ಎಚ್ಚರವಾಗಿರುವವರಿಗೆ ಭಯ ಇರದು. ಇದು ಸುಭಾಷಿತ ಇನ್ನೊಂದು ಮಹತ್ವದ ಉಪದೇಶ. ಇಂದು ನಾವು ಹಲವು ಭಯಗಳ ಮಧ್ಯೆ ಬದುಕುತ್ತಿದ್ದೇವೆ. ಹಾಗಾದರೆ ಭಯಗಳಿಂದ ನಮಗೆ ಮುಕ್ತಿಯೇ ಇಲ್ಲವೆ? ಇದೆ, ಸದಾ ಎಚ್ಚರವಾಗಿರುವುದೇ ಭಯದಿಂದ ನಿವೃತ್ತಿಗಿರುವ ದಾರಿ. ವಾಸ್ತವವಾಗಿ ಭಯಗಳನ್ನು ಸೃಷ್ಟಿಸಿಕೊಳ್ಳುವವರು ನಾವೇ. ನಾವು ಎಚ್ಚರ ತಪ್ಪಿರುವಾಗ ಎದುರಾಗುವ ಹಠಾತ್‌ ಪರಿಸ್ಥಿತಿಯೇ ಹಲವು ಸಂದರ್ಭಗಳಲ್ಲಿ ನಮ್ಮ ಭಯಕ್ಕೆ ಕಾರಣವಾಗಿರುತ್ತದೆ. ಆದರೆ ಪರಿಸ್ಥಿತಿಯನ್ನು ಎಚ್ಚರದಿಂದ ವಿಶ್ಲೇಷಿಸಿದಾಗ ನಮ್ಮ ಭಯಕ್ಕೆ ದಿಟವಾದ ಕಾರಣವೇ ಇಲ್ಲ ಎಂದು ಮನವರಿಕೆಯಾಗುತ್ತದೆ; ಆಗ ಭಯ ನಮ್ಮಿಂದ ತಾನೇ ತಾನಾಗಿ ತೊಲಗುತ್ತದೆ. ಈಗ ಬಂದಿರುವ ಕೊರೊನಾ ವೈರಸ್‌ನ ಹಾವಳಿಯಿಂದಲೂ ನಾವು ಭಯ ಪಡುವುದರಲ್ಲಿ ಅರ್ಥವೇ ಇಲ್ಲ; ನಾವು ಈಗ ಎಚ್ಚರವಾಗಿರಬೇಕೆ ಹೊರತು ಭಯ ಪಡಬೇಕಾದ ಆವಶ್ಯಕತೆ ಇಲ್ಲವೆನ್ನಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು