ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಜೀವನ್ಮುಕ್ತರ ಸಮಾನತೆ

Last Updated 2 ಏಪ್ರಿಲ್ 2021, 1:05 IST
ಅಕ್ಷರ ಗಾತ್ರ

ಕುಸುಮಶಯನಂ ಪಾಷಣೋ ವಾ ಪ್ರಿಯಂ ಭವನಂ ವನಂ

ಪ್ರತನುಮಸೃಜಣಸ್ಪರ್ಶಂ ವಾಸಸ್ತ್ವಗಪ್ಯಥ ತಾರವೀ ।

ಸರಸಮಶನಂ ಕುಲ್ಮಾಷೋ ವಾ ಧನಾನಿ ತೃಣಾನಿ ವಾ

ಶಮಸುಖಸುಧಾಪಾನಕ್ಷೈಬ್ಯೇ ಸಮಂ ಹಿ ಮಹಾತ್ಮನಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಶಾಂತಿಸುಖ ಎಂಬ ಮಧುವನ್ನು ಕುಡಿದು ತನ್ನನ್ನೇ ಮರೆತ ಮಹಾತ್ಮರಿಗೆ ಹೂವಿನ ಹಾಸಿಗೆಯಾಗಲೀ ಕಲ್ಲುಚಪ್ಪಡಿಯಾಗಲೀ ಒಂದೇ; ದೊಡ್ಡ ಮನೆಯಾಗಲೀ ಕಾಡಾಗಲೀ, ಮೆತ್ತಗಿನ ಬಟ್ಟೆಗಳಾಗಲೀ ನಾರುಮಡಿಯಾಗಲೀ, ರುಚಿಯಾದ ಊಟವಾಗಲೀ ಹುರುಳಿಯಾಗಲೀ, ಹಣವಾಗಲೀ ಹುಲ್ಲಾಗಲೀ ಒಂದೇ.’

ಜೀವನ್ಮುಕ್ತರ ಲಕ್ಷಣವನ್ನು ಹೇಳುತ್ತಿದೆ ಸುಭಾಷಿತ.

ಜೀವನ್ಮುಕ್ತರು ಎಂದರೆ ಇಲ್ಲಿ, ಈ ಲೋಕದಲ್ಲಿದ್ದುಕೊಂಡೇ ಮುಕ್ತಿಯನ್ನು ಸಂಪಾದಿಸಿದವರು.

ಮುಕ್ತಿ ಎಂಬುದನ್ನು ಆನಂದ, ಮೋಕ್ಷ, ಸ್ವರೂಪಜ್ಞಾನ, ನಿರ್ವಾಣ – ಹೀಗೆ ಹಲವು ಪದಗಳ ಮೂಲಕ, ಹಲವು ಅರ್ಥಸ್ತರಗಳಲ್ಲಿ ವಿವರಿಸಬಹುದು. ಜೀವನದಲ್ಲಿ ಯಾವುದೇ ರೀತಿಯ ವಿಕಾರಗಳಿಗೆ ತುತ್ತಾಗದೆ, ಸದಾ ನೆಮ್ಮದಿಯಾಗಿರುವ, ಧರ್ಮಾಧರ್ಮಗಳನ್ನು ಮೀರಿದ ಸ್ಥಿತಿಯೇ ಮುಕ್ತಿ ಎಂದು ಸರಳವಾಗಿಯೂ ಹೇಳಬಹುದು. ಅಂಥ ಸ್ಥಿತಿಯನ್ನು ಪಡೆದವರು ಹೇಗಿರುತ್ತಾರೆ ಎಂದು ಸುಭಾಷಿತ ನಿರೂಪಿಸುತ್ತಿದೆ. ನಮ್ಮ ನೆಮ್ಮದಿ ಹಾಳಾಗುವುದು ಯಾವಾಗ? ಇದು ಸರಿ, ಇದು ತಪ್ಪು; ಇದು ಸುಖ, ಇದು ದುಃಖ;ಇದು ಒಳಿತು, ಇದು ಕೆಡುಕು ಮುಂತಾದ ಲೆಕ್ಕಾಚಾರದಲ್ಲಿ ಮನಸ್ಸು ಮುಳುಗಿದ್ದಾಗ ನಮಗೆ ನೆಮ್ಮದಿ ಇರದು. ಇಂಥ ಹೊಯ್ದಾಟಗಳಿಂದ ಮುಕ್ತರಾದವರೇ ನೆಮ್ಮದಿಯಾಗಿರಬಹುದು. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ಆನಂದವನ್ನು ಪಡೆಯಲು ಮೊದಲಿಗೆ ಶಾಂತಿ, ಎಂದರೆ ನೆಮ್ಮದಿ ಇರಬೇಕು. ಅದನ್ನು ಮಧುವಿಗೆ ಹೋಲಿಸಿದೆ ಸುಭಾಷಿತ. ಮಧುವಿನ ಉದ್ದೇಶವೇ ನಮ್ಮನ್ನು ನಾವು ಮರೆಯವುದು, ಆ ಮೂಲಕ ನಮ್ಮ ಸದ್ಯದ ತೊಂದರೆಗಳಿಂದ ಬಿಡುಗಡೆಯನ್ನು ಪಡೆಯುವುದು. ಶಾಂತಿ ಎನ್ನುವುದು ಕೂಡ ಮಧುವಿಗೆ ಸಮಾನವಂತೆ. ಇದನ್ನು ಕುಡಿದ ಮಹಾತ್ಮರು ತಮ್ಮನ್ನೇ ಮರೆತುಬಿಟ್ಟಿರುತ್ತಾರಂತೆ. ನಮ್ಮನ್ನೇ ಮರೆಯುವುದು ಎಂದರೆ ನನ್ನ ಸ್ಥಾನಮಾನ, ಸುಖ, ದುಃಖ, ಜಾತಿ, ವಿದ್ಯೆ, ಸಂಪತ್ತು ಮುಂತಾದವನ್ನು ಮರೆಯುವುದೇ ಹೌದು. ಇವೇ ನಮ್ಮ ದುಃಖಕ್ಕೆ ಕಾರಣವಾಗುವಂಥವು. ಇವುಗಳೇ ನಮ್ಮ ಸಂತೋಷವನ್ನು ಅಳೆಯುವ ಮಾನದಂಡವಾಗಿರುತ್ತವೆ; ಹೀಗಾಗಿಯೇ ಇವು ದುಃಖಕ್ಕೆ ಕಾರಣ. ಆದರೆ ಮಹಾತ್ಮರು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಅವರಿಗೆ ‘ಹೂವಿನ ಹಾಸಿಗೆಯಾಗಲೀ ಕಲ್ಲುಚಪ್ಪಡಿಯಾಗಲೀ ಒಂದೇ; ದೊಡ್ಡ ಮನೆಯಾಗಲೀ ಕಾಡಾಗಲೀ, ಮೆತ್ತಗಿನ ಬಟ್ಟೆಗಳಾಗಲೀ ನಾರುಮಡಿಯಾಗಲೀ, ರುಚಿಯಾದ ಊಟವಾಗಲೀ ಹುರುಳಿಯಾಗಲೀ, ಹಣವಾಗಲೀ ಹುಲ್ಲಾಗಲೀ ಒಂದೇ’ ಆಗಿರುತ್ತದೆ.

ಶಾಂತಿ–ಸಮಾಧಾನಗಳು ಇದ್ದರೆ ನಮ್ಮ ಜೀವನದೃಷ್ಟಿ ಬದಲಾಗುವುದರಲ್ಲಿ ಸಂದೇಹವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT