ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಸತ್ಸಹವಾಸದ ಫಲ

Last Updated 12 ಅಕ್ಟೋಬರ್ 2020, 1:34 IST
ಅಕ್ಷರ ಗಾತ್ರ

ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಂ
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ ।
ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿಃ ಕಥಯ ಕಿಂ ನ ಕರೋತಿ ಪುಂಸಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಸತ್ಪುರುಷರ ಸಹವಾಸವು ಬುದ್ಧಿಯ ಜಡತ್ವವನ್ನು ಹೋಗಲಾಡಿಸುತ್ತದೆ; ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ; ಗೌರವವನ್ನು ಹೆಚ್ಚಿಸುತ್ತದೆ; ಪಾಪವನ್ನು ದೂರಮಾಡುತ್ತದೆ; ಮನಸ್ಸನ್ನು ಪ್ರಸನ್ನಗೊಳಿಸುತ್ತದೆ; ಎಲ್ಲ ದಿಕ್ಕುಗಳಲ್ಲಿಯೂ ಕೀರ್ತಿಯನ್ನು ಹರಡುತ್ತದೆ. ಒಳ್ಳೆಯ ಸಹವಾವು ಜನರಿಗೆ ಏನು ತಾನೆ ಮಾಡುವುದಿಲ್ಲ?’

ನಮ್ಮ ಹಿರಿಯರು ನಮಗೆ ಚಿಕ್ಕವಯಸ್ಸಿನಿಂದಲೇ ಒಂದು ಎಚ್ಚರಿಕೆಯನ್ನು ಕೊಡುತ್ತಿರುತ್ತಾರೆ: ಒಳ್ಳೆಯವರ ಸಹವಾಸ ಮಾಡಿ.

ಈ ದೊಡ್ಡವರು ಯಾವಾಗಲೂ ನಮಗೆ ಉಪದೇಶ ಕೊಡ್ತಾನೆ ಇರ್ತಾರೆ; ಯಾಕಾದರೂ ಹೀಗೆ ಹೇಳ್ತಾರೋ – ಎಂದೂ ನಮಗೆ ಅನಿಸಿರುತ್ತದೆ. ಒಳ್ಳೆಯವರ ಸ್ನೇಹದಿಂದ ಏನೆಲ್ಲ ಲಾಭಗಳಾಗುತ್ತವೆ – ಎಂಬುದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ನಮ್ಮ ಎಲ್ಲ ದೋಷಗಳಿಗೂ ದೊಡ್ಡ ಕಾರಣ ಎಂದರೆ ನಮ್ಮ ಬುದ್ಧಿಯ ನಿಷ್ಕ್ರಿಯತೆ; ಎಂದರೆ ಜಡತೆ. ಕಲ್ಲಿನಂತೆ ಯಾವಾಗಲೂ ಮಲಗಿರುವ, ನಿಂತ ನೀರಿನಂತೆ ಕಲುಷಿತವಾಗಿರುವ ಬುದ್ಧಿಯೇ ನಿಷ್ಕ್ರಿಯಬುದ್ಧಿ. ಸತ್ಸಹವಾಸದಿಂದ ಬುದ್ಧಿಯ ಇಂಥ ಜಡತೆ ತೊಲಗುತ್ತದೆ. ಇದು ನಮಗೆ ಒಳ್ಳೆಯವರಿಂದ ಆಗವ ಪ್ರಥಮ ಮತ್ತು ಪ್ರಧಾನ ಪ್ರಯೋಜನ.

ನಮ್ಮ ಬುದ್ಧಿಯನ್ನು ಚುರುಕುಗೊಳಿಸಿದಮೇಲೆ ಸಜ್ಜನರ ಸ್ನೇಹವು ನಮಗೊಂದು ವ್ಯಕ್ತಿತ್ವವನ್ನೂ ಕಟ್ಟಿಕೊಡುತ್ತದೆ. ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ – ಎಂದರೆ ಇದೇ ಅರ್ಥ; ನಮಗೊಂದು ಗಟ್ಟಿಯಾದ ವ್ಯಕ್ತಿತ್ವ ಒದಗುತ್ತದೆ. ಮಾತಿನ ಪ್ರಾಮಾಣಿಕತೆಯ ಮೂಲಕ ಸುಭಾಷಿತ ನಮ್ಮ ವ್ಯಕ್ತಿತ್ವದ ಸೌರಭವನ್ನು ಸೂಚಿಸಿದೆ.

ಈಗ ನಮ್ಮ ವ್ಯಕ್ತಿತ್ವವನ್ನು ಸಮಾಜ ಗುರುತಿಸುತ್ತದೆ, ನಮ್ಮ ನಡೆ–ನುಡಿಗಳಿಗೆ ಸಮಾಜದಿಂದ ಬೆಲೆ ಬಂದಿರುತ್ತದೆ; ಎಂದರೆ ನಮ್ಮನ್ನು ಈಗ ಸಮಾಜ ಗೌರವದಿಂದ ನೋಡುತ್ತಿರುತ್ತದೆ. ಸತ್ಸಹವಾಸದಿಂದ ಪಾಪವೂ ದೂರವಾಗುತ್ತದೆಯಂತೆ. ಸಜ್ಜನರು ನಾವು ಕೆಟ್ಟ ದಾರಿಯನ್ನು ಹಿಡಿಯದಂತೆ ನಮ್ಮನ್ನು ಕಾಪಾಡುತ್ತಿರುತ್ತಾರೆ.

ಸಜ್ಜನರು ಪ್ರಸನ್ನತೆ, ಸಂತೋಷ, ಉತ್ಸಾಹಗಳ ಮೂಲವೇ ಆಗಿರುವುದರಿಂದ ಅವರ ಸಾಮೀಪ್ಯದಿಂದ ನಮ್ಮಲ್ಲೂ ಪ್ರಸನ್ನತೆ ಎನ್ನುವುದು ಸಹಜಸ್ವಭಾವವಾಗಿಯೇ ನೆಲೆ ನಿಲ್ಲುತ್ತದೆ.

ಇಷ್ಟೆಲ್ಲ ಗುಣಗಳು ನಮ್ಮ ವ್ಯಕ್ತಿತ್ವಕ್ಕೆ ಒದಗಿದೆ ಎಂದರೆ ಅದು ಈಗ ಸದೃಢವೂ ಸುಂದರವೂ ಆಗಿದೆ ಎಂದೇ ಅರ್ಥ ಅಲ್ಲವೆ? ಇಂಥ ವ್ಯಕ್ತಿತ್ವ ನಮ್ಮದಾಗಿದ್ದಾಗ ಸಮಾಜವೂ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತದೆ. ಎಂದರೆ ಸಮಾಜದಲ್ಲಿ ನಮಗೆ ಕೀರ್ತಿ ಲಭಿಸುತ್ತಿದೆ ಎಂದೇ ತಾತ್ಪರ್ಯ.

ನಾವು ಎಂಥವರ ಸ್ನೇಹವನ್ನು ಮಾಡಬೇಕು ಎಂಬ ಸಂಕಲ್ಪ ಮತ್ತು ತೀರ್ಮಾನ – ಈ ಎರಡನ್ನೂ ನಿರ್ಧಾರಮಾಡಬೇಕಾದವರು ನಾವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT