ಶುಕ್ರವಾರ, ಜೂನ್ 18, 2021
20 °C

ದಿನದ ಸೂಕ್ತಿ: ಹೌದು, ಒಳ್ಳೆಯತನಕ್ಕೆ ಕಷ್ಟ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನೈರ್ಗುಣ್ಯಮೇವ ಸಾಧೀಯೋ ಧಿಗಸ್ತು ಗುಣಗೌರವಮ್‌ ।
ಶಾಖಿನೋsನ್ಯೇ ವಿರಾಜಂತೇ ಖಂಡ್ಯಂತೇ ಚಂದನದ್ರುಮಾಃ ।।

ಇದರ ತಾತ್ಪರ್ಯ ಹೀಗೆ:

‘ಒಳ್ಳೆಯ ಗುಣಗಳಿಲ್ಲದಿರುವುದೇ ಮೇಲು. ಒಳ್ಳೆಯ ಗುಣಗಳಿಂದ ದಕ್ಕುವ ಗೌರವವೂ ಬೇಡ. ಬೇರೆ ಮರಗಳು ರೆಂಬೆಕೊಂಬೆಗಳಿಂದ ಮೆರೆಯುತ್ತಿರುವಾಗ ಶ್ರೀಗಂಧದ ಮರಗಳು ಕತ್ತರಿಸಲ್ಪಡುತ್ತಿವೆಯಲ್ಲ!’

ನಮ್ಮ ಒಳ್ಳೆಯತನ, ಸೌಜನ್ಯಗಳೇ ನಮಗೆ ಮಾರಕವಾಗುವ ಸಾಧ್ಯತೆಗಳುಂಟು. ಅಂಥ ಸಂದರ್ಭದಲ್ಲಿ ನಾವು ಹತಾಶರಾಗುವುದೂ ಉಂಟು. ಅಂಥ ಸಂದರ್ಭದಲ್ಲಿ ನಮ್ಮಿಂದ ಹೊರಡಬಹುದಾದ ಉದ್ಗಾರಕ್ಕೆ ಸಮನಾಗಿದೆ ಈ ಸುಭಾಷಿತದ ಉದ್ಗಾರ.

ಒಳ್ಳೆಯತನ ಒಳ್ಳೆಯದೇ! ಆದರೆ ಅದರ ಮೂಲಕ ಜೀವನವನ್ನು ರೂಪಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ಒಳ್ಳೆಯತನ ಎಂಬುದು ಸದಾ ದಾಳಿಗೆ ಒಳಗಾಗಬಲ್ಲದು, ಮೋಸಕ್ಕೆ ತುತ್ತಾಗಬಹುದು. 

ಒಂದು ಉದಾಹರಣೆಯನ್ನು ನೋಡೋಣ. ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಗುಣ ಇದೆ; ಕಷ್ಟದಲ್ಲಿರುವವರಿಗೆ ಹಣವನ್ನು ಸಹಾಯಮಾಡುವ ಬುದ್ಧಿಯೂ ಇದೆ. ಪಾಪ! ಕ್ರಮೇಣ ಅವನ ಪರಿಸ್ಥಿತಿ ಯಾವ ಹಂತವನ್ನು ತಲಪುತ್ತದೆ? ಜನರಿಂದ ನಡೆಯವ ಅವನ ಈ ಒಳ್ಳೆಯ ಗುಣದ ದುರುಪಯೋಗದಿಂದ ಬೇಸತ್ತು ಅವನು ’ಈ ಜನರ ಸಹವಾಸವೇ ಸಾಕಪ್ಪ‘ ಎಂಬ ಸ್ಥಿತಿಯನ್ನು ಮುಟ್ಟುತ್ತಾನಲ್ಲವೆ?

ಎಲ್ಲ ಒಳ್ಳೆಯವರ ಪಾಡು ಹೆಚ್ಚು ಕಡಿಮೆ ಹೀಗೆ ಆಗುತ್ತದೆ. ಕಬ್ಬಿನ ಜಲ್ಲೆಯನ್ನು ಹಿಂಡುವಂತೆ ಜನರು ಅವರನ್ನು ಹಿಂಸಿಸುತ್ತಾರೆ. ಇದು ಹೇಗೆಂದರೆ ರಸ್ತೆಯ ನಿಯಮಗಳನ್ನು ಪಾಲಿಸುವವನಿಗೇ ಹೆಚ್ಚು ದಂಡ ಕಟ್ಟುವ ಸನ್ನಿವೇಶ ಉಂಟಾಗುವಂತೆ! 

ಸುಭಾಷಿತ ಇಲ್ಲಿ ಹೇಳಿರುವ ಉದಾಹರಣೆಯೂ ಚೆನ್ನಾಗಿದೆ.

ಕಾಡಿನಲ್ಲಿ ಹಲವು ಜಾತಿಯ ಮರಗಳು ಬೆಳೆಯುತ್ತಿರುತ್ತವೆ. ಅವುಗಳ ಜೊತೆಗೆ ಶ್ರೀಗಂಧದ ಮರಗಳೂ ಬೆಳೆಯುತ್ತಿರುತ್ತವೆ. ಈ ಮರಗಳಲ್ಲಿ ಹೆಚ್ಚಿನ ಅಪಾಯ ಯಾವುದಕ್ಕೆ? ಶ್ರೀಗಂಧದ ಮರಗಳಿಗೆ ತಾನೆ? ಈ ಅಪಾಯವಾದರೂ ಏಕೆ? ಅವುಗಳ ಒಳ್ಳೆಯತನ, ಎಂದರೆ ಸುಗಂಧವನ್ನು ನೀಡಬಲ್ಲ ಗುಣ. ಸುಭಾಷಿತ ಈ ಸುಗಂಧವನ್ನೇ ಒಳ್ಳೆಯತನಕ್ಕೆ ಹೋಲಿಸಿದೆ. 

ಹೌದು, ಒಳ್ಳೆಯತನಕ್ಕೆ ಗೌರವ ಸಿಗುತ್ತದೆ. ಆದರೆ ಅದಕ್ಕೆ ತೆರಬೇಕಾದ ಬೆಲೆಯೂ ಅಧಿಕವೇ ಆಗಿರುತ್ತದೆ. ಹೀಗಾಗಿ ಒಳ್ಳೆಯತನವೂ ಬೇಡ, ಅದರಿಂದ ಸಿಗುವ ಗೌರವವೂ ಬೇಡ; ಈ ಒಳ್ಳೆಯತನ, ಗೌರವಗಳೇ ಕೊನೆಗೆ ಮುಳುವಾಗುತ್ತದೆ ಎಂದು ಹತಾಶೆಯಿಂದ ನುಡಿಯುತ್ತಿದೆ ಸುಭಾಷಿತ. ಒಳ್ಳೆಯವರನ್ನು ಜನರು ಕೆಣಕುತ್ತಾರೆ; ದುಷ್ಟರನ್ನು ಕಂಡು ಹೆದರಿ ದೂರ ಓಡುತ್ತಾರೆ.

ಭಾರತೀಯರ ಒಳ್ಳೆಯತನದ ಕಾರಣದಿಂದಲೇ ಈ ದೇಶ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಲೂ ಈ ಕಷ್ಟಪರಂಪರೆ ಮುಂದುವರೆದಿರುವುದು ಸುಳ್ಳಲ್ಲ.

ಒಳ್ಳೆಯತನ ಕೆಟ್ಟದ್ದಲ್ಲ; ಆದರೆ ಅದು ನಮ್ಮ ನಾಶಕ್ಕೆ ಮೂಲವಾಗಬಾರದು ಎಂಬ ಎಚ್ಚರಿಕೆಯೂ ಒಳ್ಳೆಯತನದ ಜೊತೆಗೆ ಇರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.