ಮಂಗಳವಾರ, ಆಗಸ್ಟ್ 3, 2021
28 °C
ದಿನದ ಸೂಕ್ತಿ

ತ್ಯಾಗವೂ ಬೇಕು ಭೋಗವೂ ಬೇಕು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

religion

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ

ಯೋ ಹ್ಯೇಕಭಕ್ತಃ ಸ ನರೋ ಜಘನ್ಯಃ ।

ತಯೋಸ್ತು ದಾಕ್ಷ್ಯಂ ಪ್ರವದಂತಿ ಮಧ್ಯಂ

ಸ ಉತ್ತಮೋ ಯೋsಭಿರತಸ್ತ್ರಿವರ್ಗೇ ।।

ಇದರ ತಾತ್ಪರ್ಯ:

’ಧರ್ಮ, ಅರ್ಥ, ಕಾಮ – ಈ ಮೂರನ್ನೂ ಸಮವಾಗಿ ಸೇವಿಸತಕ್ಕದ್ದು. ಇವುಗಳಲ್ಲಿ ಒಂದನ್ನು ಮಾತ್ರ ಸೇವಿಸತಕ್ಕವನು ಕನಿಷ್ಠ ದರ್ಜೆಯವನು; ಯಾವುದಾದರೂ ಎರಡರಲ್ಲಿ ಮಾತ್ರವಷ್ಟೆ ಆಸಕ್ತನಾದವನು ಮಧ್ಯಮ; ಮೂರರಲ್ಲಿಯೂ ಆಸಕ್ತನಾದವನೇ ಶ್ರೇಷ್ಠ.‘

ಮಹಾಭಾರತದ ಈ ಶ್ಲೋಕ ನಮ್ಮನ್ನು ಜೀವನದ ಸಮಗ್ರತೆಯ ಬಗ್ಗೆ ತಿಳಿಸಿಕೊಡುತ್ತಿದೆ.

ಜೀವನ ಎನ್ನುವುದನ್ನು ’ಹೀಗೆ‘ ಎಂದು ಹೇಳಲಾದೀತೆ? ಜೀವನಕ್ಕೊಂದು ನಿರ್ದಿಷ್ಟವಾದ ಲಕ್ಷಣವನ್ನು ಕೊಡುವುದು ಸುಲಭವಲ್ಲ; ಆದರೆ ಜೀವನವನ್ನು ನಿರ್ದೇಶಿಸುವ ವಿವರಗಳನ್ನು ತಿಳಿದುಕೊಳ್ಳಬಹುದು – ಎನ್ನುವುದನ್ನು ನಮ್ಮ ಪೂರ್ವಸೂರಿಗಳು ಕಂಡುಕೊಂಡರು. ಅವರ ಈ ಕಾಣ್ಕೆಯೇ ’ಪುರುಷಾರ್ಥ‘ ಎನಿಸಿಕೊಂಡಿತು. ಸ್ವಲ್ಪ ಸಾವಧಾನ! ಪುರುಷಾರ್ಥ ಎಂದ ಕೂಡಲೇ ’ಅವನ್ನು ಗಂಡಸರಿಗಷ್ಟೆ ಹೇಳಿದ್ದು‘ ಎಂದು ತೀರ್ಮಾನಿಸಬೇಡಿ! ’ಪುರುಷ‘ ಎನ್ನುವುದು ಇಲ್ಲಿ ಗಂಡಸರನ್ನು ಮಾತ್ರವೇ ಸೂಚಿಸುತ್ತಿಲ್ಲ; ಹೆಣ್ಣು–ಗಂಡುಗಳಿಬ್ಬರೂ ಸೇರಿಯೇ ’ಪುರುಷ‘; ಎಂದರೆ ಒಟ್ಟು ಮನುಷ್ಯಜಾತಿಯನ್ನು ಈ ಶಬ್ದ ಸೂಚಿಸುತ್ತದೆ. ಇರಲಿ, ವಿಷಯಕ್ಕೆ ಬರೋಣ.

ಮನುಷ್ಯರು ಏನೆಲ್ಲ ಬಯಸುತ್ತಾರೆಯೋ ಅವೆಲ್ಲವೂ ’ಪುರುಷಾರ್ಥ‘ಗಳೇ. ಎಂದರೆ ಜೀವವನ್ನು ’ಹೀಗೆ‘ ಎಂದು ಹೇಳಲಾಗದಿದ್ದರೂ ಜೀವನವನ್ನು ಕಟ್ಟುವ ಮನುಷ್ಯನ ಬಯಕೆಗಳ ವಿವರಗಳನ್ನು ಪೂರ್ವಸೂರಿಗಳು ಪಟ್ಟಿಮಾಡಿದರು. ಹೀಗೆ ಮಾಡಿದ ಪಟ್ಟಿ ಕೂಡ ದೊಡ್ಡದಲ್ಲ ಎನ್ನುವುದನ್ನೂ ಗಮನಿಸತಕ್ಕದ್ದು. ಮನುಷ್ಯನು ಜೀವನದಲ್ಲಿ ಏನೆಲ್ಲ ಬಯಸುತ್ತಾನೆಯೋ, ತನ್ನ ಜೀವನದ ಅನಿವಾರ್ಯಗಳೆಂದು ಭಾವಿಸುತ್ತಾನೆಯೋ, ಆ ಪುರುಷಾರ್ಥಗಳನ್ನು, ನಮ್ಮವರು ನಾಲ್ಕು ಎಂದು ಒಕ್ಕಣಿಸಿದರು: ಅವೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಕೆಲವರು ಈ ಪಟ್ಟಿಯಿಂದ ಮೋಕ್ಷವನ್ನು ಹೊರಗಿಟ್ಟು ಪುರುಷಾರ್ಥಗಳ ಎಣಿಕೆಯನ್ನು ಮೂರಕ್ಕೇ ಮಿತಗೊಳಿಸಿದರು; ಇದು ಏಕೆಂಬುದು ವಿವರವಾದ ಚರ್ಚೆ; ಸದ್ಯಕ್ಕೆ ಅದು ಇಲ್ಲಿ ಬೇಡ ಅಲ್ಲವೆ?

ಈಗ ಒಂದೊಂದಾಗಿ ಪುರುಷಾರ್ಥಗಳ ಸ್ವರೂಪವನ್ನು ನೋಡೋಣ. 

ಧರ್ಮ. ಇಂದು ಇದರಷ್ಟು ಅಪಾರ್ಥಗಳಿಗೆ ತುತ್ತಾಗಿರುವ ಪದ ಇನ್ನೊಂದಿರಲಾರದು. ಇದು ಬಹಳ ಸೂಕ್ಷ್ಮವಾದ, ಬಹುಸ್ತರೀಯ ಅರ್ಥಗಳನ್ನು ಹೊಂದಿದ ಪದ. ಸದ್ಯದ ನಮ್ಮ ಚರ್ಚೆಯ ಹಿನ್ನೆಲೆಯಲ್ಲೂ ಹಲವು ಪಾತಳಿಗಳ ಅರ್ಥವಿಸ್ತಾರ ಇದೆಯೆನ್ನಿ! ಅವುಗಳ ಎಲ್ಲ ಸಾರವನ್ನು ಹೀಗೆ ಹೇಳಬಹುದು: ಕಟ್ಟುಪಾಡು, ನಿಯಮ, ಕರ್ತವ್ಯ, ಸರಿ–ತಪ್ಪುಗಳ ವಿವೇಚನೆ. ಮನುಷ್ಯ ’ಮನುಷ್ಯ‘ನಾಗಲು ಹಲವು ಕರ್ತವ್ಯಗಳನ್ನು ಮಾಡಬೇಕಾಗುತ್ತದೆ; ಹಲವು ಕಟ್ಟುಪಾಡುಗಳ ಚೌಕಟ್ಟಿನಲ್ಲಿಯೇ ಮಾಡಬೇಕಾಗುತ್ತದೆ; ಆಯಾ ಸಂದರ್ಭಕ್ಕೆ ತಕ್ಕುದಾದ ರೀತಿಯಲ್ಲಿ, ವ್ಯಷ್ಟಿ–ಸಮಷ್ಟಿಗಳ ಹಿತವನ್ನು ಕಾಪಾಡುವಂಥ ಕ್ರಿಯಾಶೀಲತೆಯಿಂದ ಅವನು ನಡೆದುಕೊಳ್ಳಬೇಕಾಗುತ್ತದೆ. ಇದೇ ಧರ್ಮದ ವ್ಯಾಪ್ತಿ. ಹಕ್ಕುಗಳನ್ನು ಕರ್ತವ್ಯಗಳ ಹಿನ್ನೆಲೆಯಲ್ಲಿ ಸ್ಥಾಪಿಸುವ ವಿವೇಕದ ದಾರಿಯೇ ಧರ್ಮ; ಅದರ ವಿರುದ್ಧಪದ ’ಅಧರ್ಮ‘.

ಕಾಮ. ಈ ಪದವನ್ನು ಕೇಳಿದ ಕೂಡಲೇ ಹಲವರಿಗೆ ಮುಜುಗರ; ಕೆಲವರಿಗೆ ಸಡಗರ. ಆದರೆ ಇಲ್ಲಿ ಎರಡಕ್ಕೂ ಅವಕಾಶ ಇಲ್ಲವೆನ್ನಿ! ’ಧರ್ಮ‘ದಂತೆಯೇ ಈ ಪದವನ್ನೂ ಸಂಕುಚಿತಾರ್ಥದ ಪಂಜರದಲ್ಲಿಟ್ಟೇ ನೋಡಲಾಗುತ್ತದೆ. ಮನುಷ್ಯನಿಗೆ ಒದಗುವ, ಅವನು ಬಯಸುವ ಎಲ್ಲ ಆಸೆಗಳೂ ಬಯಕೆಗಳೂ ’ಕಾಮ‘ ಎಂಬ ಪದವೊಂದರಲ್ಲಿಯೇ ಅಡಕವಾಗಿವೆ; ಅದು ಕೇವಲ ಹೆಣ್ಣು–ಗಂಡುಗಳ ಪರಸ್ಪರ ಆಕರ್ಷಣೆಗಷ್ಟೆ ಸೀಮಿತವಾಗಿಲ್ಲ; ’ನಾನು ಲೋಕೋದ್ಧಾರವನ್ನು ಮಾಡಬೇಕು‘ ಎನ್ನುವುದೂ ಕಾಮದ ವ್ಯಾಪ್ತಿಗೇ ಬರುವಂಥದ್ದು; ’ನಾನು ಚೆನ್ನಾಗಿ ಓದಬೇಕು‘ ಎಂಬುದೂ ಅದರ ವ್ಯಾಪ್ತಿಯ ವಿಷಯವೇ. ಈ ಬಯಕೆಗಳಿಂದ ಹಿತವೆಷ್ಟು, ಅಹಿತವೆಷ್ಟು; ಯಾರಿಗೆ ತಾರಕ, ಯಾರಿಗೆ ಮಾರಕ – ಎಂಬ ಮೀಮಾಂಸೆಯ ಮೂಲಕವೇ ನಮ್ಮ ’ಕಾಮ‘ ಸರಿಯೋ ತಪ್ಪೋ ಎಂದು ತೀರ್ಮಾನವಾಗುವುದು. ಹೀಗಾಗಿ ’ಕಾಮ‘ ಎಂದ ಕೂಡಲೇ ನಾವು ಮೂಗು ಮುರಿಯಬೇಕಿಲ್ಲ; ಧರ್ಮಾಧರ್ಮಗಳ ತಕ್ಕಡಿಯಲ್ಲಿ ಅದರ ಬೆಲೆಯನ್ನು ನಿರ್ಧರಿಸಬೇಕಾಗುತ್ತದೆ.

’ಅರ್ಥ‘ವನ್ನೂ ನಾವು ತಪ್ಪಾಗಿಯೇ ಅರ್ಥಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ’ಅರ್ಥ‘ ಎಂದರೆ ಇಲ್ಲಿ ಇಂಗ್ಲಿಷಿನ ’ಮೀನಿಂಗ್‌‘, ಎಂದರೆ ಒಂದು ಪದದ ತಿಳಿವಳಿಕೆ ಎಂಬಂತಲ್ಲ; :ಸಂಪತ್ತು‘, ’ಸಾಧನ‘ – ಎಂಬ ಅರ್ಥದಲ್ಲಿ ’ಪುರುಷಾರ್ಥ‘ವಾಗಿ ವಿನಿಯೋಗವಾಗಿದೆ. ಜೀವನದಲ್ಲಿ ಎಲ್ಲಿರಿಗೂ ಬಯಕೆಗಳು, ಎಂದರೆ ಕಾಮ, ಇರುವುದು ಸಹಜ. ಬಯಕೆಗಳು ಇದ್ದ ಮಾತ್ರಕ್ಕೆ ಜೀವನ ’ಜೀವನ‘ ಆಗದು; ಬಯಕೆಗಳು ಕೈಗೂಡಬೇಕು. ಆಗಲೇ ಜೀವನದ ಉದ್ದೇಶ ಈಡೇರುವುದು; ನಾವು ಬಯಸುವ ಸಂತೋಷ ಸಿಗುವುದು. ’ಸಂತೋಷವೇ ಜೀವನ‘ ಎಂದು ಅನಿಸುವುದು ಕೂಡ ಬಯಕೆಗಳು ಈಡೇರಿದಾಗಲೇ ಅಲ್ಲವೆ? ಆದರೆ ಬಯಕೆಗಳು ತಮ್ಮಷ್ಟಕ್ಕೆ ತಾವೇ ಈಡೇರವಷ್ಟೆ! ಅವನ್ನು ದಕ್ಕಿಸಿಕೊಳ್ಳಲು ದಾರಿಯೊಂದು ಬೇಕಾಗುತ್ತದೆ. ಈ ದಾರಿಯಲ್ಲಿ ಒದಗುವ ಸಾಧನಗಳೆಲ್ಲವೂ ’ಅರ್ಥ‘ವೇ; ಹಣ, ಅಧಿಕಾರ, ವಿದ್ಯೆ, ಸಂಪತ್ತು – ಹೀಗೆ ಯಾವುದೆಲ್ಲ ನಮ್ಮ ಬಯಕೆಗಳನ್ನು ಪೂರೈಸುತ್ತವೆಯೋ ಅವೆಲ್ಲವೂ ’ಅರ್ಥ‘ವೇ. ಆದರೆ ಈ ಅರ್ಥವೂ ಕೂಡ ಧರ್ಮಬದ್ಧವಾಗಿರತಕ್ಕದ್ದು; ಇಲ್ಲವಾದಲ್ಲಿ ಅರ್ಥವೂ ಅನರ್ಥವೇ ಆದೀತು! ಇಲ್ಲಿ ಗಮನಿಸಬೇಕಾದ್ದು ಧರ್ಮವು ಕಾಮವನ್ನೂ ಅರ್ಥವನ್ನೂ ಸ್ವೇಚ್ಛೆಯಾಗಿ ಬಿಡದೆ ಅವನ್ನು ಎಚ್ಚರಿಕೆಯಿಂದ ಹದ್ದುಬಸ್ತಿನಲ್ಲಿಡುತ್ತಿರುತ್ತದೆ.

ಧರ್ಮ, ಅರ್ಥ ಮತ್ತು ಕಾಮ – ಈ ಮೂರರ ಸುತ್ತಾಟದಲ್ಲಿಯೇ ನಮ್ಮ ಜೀವನಚಕ್ರದ ಪಯಣವಿರುವುದು ಸ್ಪಷ್ಟ. ಆದರೆ ಜೀವನಪ್ರಯಾಣದಲ್ಲಿ ನಮ್ಮ ರಥ ಹಲವು ಸಲ ಮುಗ್ಗರಿಸುವುದುಂಟು; ತಲಪಬೇಕಾದ ಗುರಿಯನ್ನು ಸೇರುವುದಕ್ಕೂ ಸಾಧ್ಯವಾಗದಿರಬಹುದು. ಇದಕ್ಕೆ ಕಾರಣ ಏನು?

ಮಹಾಭಾರತ ಅದಕ್ಕೆ ಕಾರಣವನ್ನು ಸೂಚಿಸುತ್ತಿದೆ. ನಾವು ಈ ಮೂರರಲ್ಲಿ ಯಾವುದೋ ಒಂದನ್ನು ಮಾತ್ರವೇ ಆರಿಸಿಕೊಂಡು ಮತ್ತೊಂದನ್ನು ನಿರ್ಲಕ್ಷಿಸುವುದುಂಟು. ಇದು ಸರಿಯಲ್ಲ. ಕುರ್ಚಿಯೊಂದು ಗಟ್ಟಿಯಾಗಿ ನೆಲೆಯೂರಬೇಕಾದರೆ ಅದು ನಾಲ್ಕು ಕಾಲುಗಳ ಮೇಲೆ ನಿಂತಿರಬೇಕಲ್ಲವೆ? ಹೀಗೆಯೇ ನಮ್ಮ ಜೀವನವೂ ಸುಭದ್ರವಾಗಿರಬೇಕಾದರೆ ಎಲ್ಲ ಪುರುಷಾರ್ಥಗಳನ್ನೂ ನಾವು ಉಚಿತವಾದ ರೀತಿಯಲ್ಲಿ ಸೇವಿಸಬೇಕು. ಎಂದರೆ ಬದುಕಿನ ಎಲ್ಲ ವಿವರಗಳಿಗೂ ಅವುಗಳಿಗೆ ಸಲ್ಲಬೇಕಾದ ತಕ್ಕ ಮರ್ಯಾದೆ–ಸ್ಥಾನಗಳನ್ನು ಒದಗಿಸಬೇಕು. ಕೇವಲ ಓದು, ಕೇವಲ ಸಂಪಾದನೆ, ಕೇವಲ ನಿಯಮಪಾಲನೆ, ಕೇವಲ ಸಂಭ್ರಮ – ಹೀಗೆ ಯಾವುದೋ ಒಂದಕ್ಕೆ ಮಾತ್ರವೇ ಒತ್ತು ಕೊಟ್ಟರೆ ಜೀವನ ಸಾರ್ಥಕವೂ ಆಗದು, ಸುಂದರವೂ ಆಗದು ಎಂಬುದನ್ನು ಮಹಾಭಾರತ ಒತ್ತಿಹೇಳುತ್ತಿದೆ. ನಿಯಮಗಳಿಗೆ ಸ್ಥಾನ ಇರುವಂತೆ ಸ್ವಾತಂತ್ರ್ಯಕ್ಕೂ ಉಚಿತ ಸ್ಥಾನವೊಂದು ಇರುತ್ತದೆ; ತ್ಯಾಗಕ್ಕೆ ಅವಕಾಶ ಇರುವಂತೆ ಭೋಗಕ್ಕೂ ತಕ್ಕ ಅವಕಾಶ ಇದ್ದೇ ಇರತಕ್ಕದ್ದು. ಯಾವಾಗ ಯಾವುದಕ್ಕೆ ಅವಕಾಶ ನೀಡಬೇಕು ಎಂಬ ವಿವೇಚನೆಯಲ್ಲಿ ಸಾಕ್ಷಾತ್ಕಾರವಾಗುವ ಪುರುಷಾರ್ಥಗಳ ಬೆಳಕಿನಲ್ಲಿ ಮಾತ್ರವೇ ನಮ್ಮ ಜೀವನ ಸಂತೋಷಮಯವೂ ಸುಖಮಯವೂ ಆಗಬಲ್ಲದು. ಇದು ಮಹಾಭಾರತ ಇಲ್ಲಿ ನೀಡಿರುವ ಸಂದೇಶ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು