ಬುಧವಾರ, ಆಗಸ್ಟ್ 4, 2021
20 °C

ದಿನದ ಸೂಕ್ತಿ । ದೈನ್ಯ: ದುಃಖದ ಆಪ್ತಮಿತ್ರ!

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಅಪ್ರಾರ್ಥಿತಾನಿ ದುಃಖಾನಿ ಯಥೈವಾಯಾಂತಿ ದೇಹಿನಾಮ್‌ ।

ಸುಖಾನ್ಯಪಿ ತಥಾ ಮನ್ಯೇ ದೈನ್ಯಮತ್ರಾತಿರಿಚ್ಯತೇ ।।

ಇದರ ತಾತ್ಪರ್ಯ ಹೀಗೆ:

’ಬಯಸದೇ ಇದ್ದರೂ ದುಃಖಗಳು ಹೇಗೆ ಮನುಷ್ಯರಿಗೆ ಬಂದು ಸೇರುತ್ತವೆಯೋ ಸುಖಗಳೂ ಹಾಗೆ ಎಂದು ನಾನು ತಿಳಿಯುತ್ತೇನೆ. ಆದರೆ ದುಃಖದಲ್ಲಿ ಮಾತ್ರ ಒಂದು ಅಧಿಕವಾಗಿರುತ್ತದೆ: ಅದು ಯಾವುದೆಂದರೆ – ದೈನ್ಯ.‘

ಈ ಸುಭಾಷಿತ ಸಾಯಣಾಚಾರ್ಯರ ’ಸುಭಾಷಿತಸುಧಾನಿಧಿ‘ ಕೃತಿಯಲ್ಲಿದೆ; ತುಂಬ ಮಾರ್ಮಿಕವಾಗಿದೆ; ದುಃಖದ ಬೇಗೆ ಎಂಥದು ಎನ್ನುವುದನ್ನು ಒಂದೇ ಪದದಲ್ಲಿ ವಿಸ್ತರಿಸಿದೆ.

ಸುಖ ಮತ್ತು ದುಃಖ – ಎರಡು ಕೂಡ ನಮಗೆ ಒದಗುವುದು ’ಅದೃಷ್ಟ‘ಗಳಾಗಿಯೇ! ನಾವು ಯಾರೂ ದುಃಖವನ್ನು ಬಯಸುವುದಿಲ್ಲ; ಆದರೆ ಅದು ಯಾವಾಗ ನಮ್ಮ ಹೆಗಲೇರುತ್ತದೆಯೋ, ಹೇಳಲು ಆಗದು. ಇನ್ನು ಸುಖವನ್ನು ಸದಾ ಬಯಸುತ್ತಲೇ ಇರುತ್ತೇವೆ; ಆದರೆ ಅದು ಯಾವಾಗ ನಮಗೆ ದಕ್ಕುತ್ತದೆಯೋ, ಅದನ್ನೂ ನಾವು ತಿಳಿಯಲು ಆಗದು. ’ಇದರಿಂದ ಸುಖ‘ ಎಂದು ಹೊರಡುತ್ತೇವೆ, ಅಲ್ಲಿ ಸಿಗುವುದು ದುಃಖ; ’ಇದರಿಂದ ಏನಾಗುವುದೋ‘ ಎಂಬ ಅಂಜಿಕೆಯಿಂದಲೇ ಹೊರಡುತ್ತೇವೆ, ಅಲ್ಲಿ ಸುಖವನ್ನೇ ಎದುರುಗೊಳ್ಳಬಹುದು; ಕನಸಿನಲ್ಲೂ ಸುಖ ನಮ್ಮ ಕೈ ಹಿಡಿತೀತು ಎಂದು ಎಣಿಸಿರುವುದಿಲ್ಲ; ಆದರೆ ಸುಖದ ಅಪ್ಪುಗೆ ನಮ್ಮದಾಗಿರುತ್ತದೆ. ಇದರ ತಾತ್ಪರ್ಯ ಏನೆಂದರೆ – ಸುಖವಾಗಲೀ ದುಃಖವಾಗಲೀ, ನಮ್ಮ ಎಣಿಕೆಯಂತೆ ದಕ್ಕದು. ಹೇಗೆ ದುಃಖ ನಮ್ಮ ಎಲ್ಲ ನಿರೀಕ್ಷೆಗಳನ್ನು ತಪ್ಪಿಸಿ ನಮ್ಮೆಡೆಗೆ ನುಗ್ಗುತ್ತದೆಯೋ, ಅದೇ ವಿಧದಲ್ಲಿ ಸುಖವೂ ಅನಿರೀಕ್ಷಿತವಾಗಿ ನಮ್ಮನ್ನು ಸ್ವಾಗತಿಸುತ್ತದೆ. ಹಾಗಾದರೆ ಎರಡಕ್ಕೂ ವ್ಯತ್ಯಾಸವಿಲ್ಲವೆ? ಖಂಡಿತ ಇದೆ, ಎನ್ನುತ್ತಿದೆ ಸುಭಾಷಿತ. ಆದರೆ ವ್ಯತ್ಯಾಸ ತುಂಬ ವಿವರಗಳಲ್ಲಿ ಇಲ್ಲ; ಒಂದೇ ಒಂದು ವ್ಯತ್ಯಾಸವಷ್ಟೆ ಇರುವುದು. ಸುಖ ಬಂದಾಗ ನಮ್ಮಲ್ಲಿ ದೈನ್ಯ ಇರುವುದಿಲ್ಲ; ದುಃಖ ಬಂದಾಗ ಮಾತ್ರ ಅದರೊಂದಿಗೆ ದೈನ್ಯವೂ ನಮ್ಮನ್ನು ಆಲಂಗಿಸಿಕೊಂಡಿರುತ್ತದೆ. 

ಸುಖ ಎಂದರೆ ನಮಗೆ ಹಿತವಾದ ಅನುಭವವೇ; ನಮಗೆ ಇನ್ನೂ ಬೇಕು ಎಂದು ಅನಿಸುವಂಥ ಅನುಭವ. ಏಕೆಂದರೆ ಇಲ್ಲಿ ಸಂದರ್ಭ ನಮ್ಮ ಪರವಾಗಿರುತ್ತದೆ; ವಿಧಿ ನಮ್ಮ ಪರವಾಗಿದ್ದರಿಂದಲೇ ನಮಗೆ ಸುಖಪ್ರಾಪ್ತಿ. ಆದರೆ ದುಃಖದ ವಿಷಯದಲ್ಲಿ ಹಾಗಲ್ಲ; ಕಾಲ ನಮಗೆ ವಿರುದ್ಧವಾಗಿ ನಿಲ್ಲುವುದೇ ದುಃಖ; ವಿಧಿ ನಮ್ಮ ಪಾಲಿಗೆ ವೈರಿಸ್ಥಾನದಲ್ಲಿರುತ್ತದೆ; ನಾವು ಎಣಿಸಿದಂತೆ ಯಾವುದೂ ನಡೆಯದ ವಿಪರೀತಪರಿಸ್ಥಿತಿ ಎದುರಾಗಿರುತ್ತದೆ; ದುರಂತದಿಂದ ತಪ್ಪಿಸಿಕೊಳ್ಳಲಾಗದಂತೆ ಎಲ್ಲ ದಾರಿಗಳೂ ಮುಚ್ಚಿಕೊಂಡಿರುತ್ತವೆ; ಕೊನೆಗೆ ನಮಗೆ ಉಳಿಯುವುದು ಹತಾಶೆ ಮಾತ್ರವೇ; ಹತಾಶೆಯ ಭಾವ ನಮ್ಮ ಅಸಹಾಯಕತೆಗೆ ಸೂಚಕ. ಸಹಾಯ ಬೇಕು; ಆದರೆ ಅದು ಎಲ್ಲೂ ಸಿಗದ ಸ್ಥಿತಿ. ಆಗ ನಾವು ಎಲ್ಲ ದಿಕ್ಕಿಗಳಲ್ಲೂ ಸಹಾಯಕ್ಕಾಗಿ ಕೂಗುತ್ತೇವೆ; ಕಂಡಕಂಡವರಿಗೆಲ್ಲ ಕೈ ಮುಗಿದು ಸಹಾಯವನ್ನು ಯಾಚಿಸುತ್ತೇವೆ; ನಾವು ಯಾರನ್ನು ಸಹಾಯಕ್ಕಾಗಿ ಕೇಳಿಕೊಳ್ಳುತ್ತಿದ್ದೇವೆಯೋ ಅವರು ನಮಗಿಂತ ಸಣ್ಣವರೋ ದೊಡ್ಡವರೋ, ಗುಣಶಾಲಿಗಳೋ ನೀಚರೋ – ಯಾವುದನ್ನೂ ಗಮನಿಸುವುದಿಲ್ಲ. ’ನಮಗೆ ಈಗ ದುಃಖ ಬಂದಿದೆ; ಅದರಿಂದ ನಮ್ಮನ್ನು ಯಾರು ಪಾರು ಮಾಡಿದರೂ ಸರಿಯೇ‘ ಎಂಬ ಭಾವಕ್ಕೆ ಬಂದು ಮುಟ್ಟಿರುತ್ತೇವೆ. ಇದೇ ದೈನ್ಯ. ಸುಖದಲ್ಲಿ ನಮ್ಮ ಕೈ ಮೇಲಿರುತ್ತದೆ; ಹೀಗಾಗಿ ಅಲ್ಲಿ ದೈನ್ಯಕ್ಕೆ ಎಡೆಯಿರದು; ಅಲ್ಲಿರುವುದು ಸಂಭ್ರಮ, ಉತ್ಸಾಹ. ಆದರೆ ದುಃಖದಲ್ಲಿ ನಮ್ಮ ಕೈಗಳು ಕಟ್ಟಲ್ಪಟ್ಟಿರುತ್ತೇವೆ. ಮನಸ್ಸು ಸೋತಿರುತ್ತದೆ; ಸಂಭ್ರಮಕ್ಕೆ ಅವಕಾಶವಾದರೂ ಎಲ್ಲಿದ್ದೀತು? ಕೈ ಮತ್ತು ಮನಸ್ಸು ಸೋತ ಸ್ಥಿತಿಯಲ್ಲಿ ಮಾಡುವ ಕೊನೆಯ ಮುದ್ರೆಯೇ ಅಂಗಲಾಚುವುದು; ಇದೇ ದೈನ್ಯ. ಇದು ದುಃಖದ ಆಪ್ತಮಿತ್ರ!

ದುಃಖಕ್ಕಿಂತಲೂ ಅದರಿಂದ ಒದಗುವ ದೈನ್ಯ ತುಂಬ ಹೀನವಾದುದು ಎಂಬುದು ಸುಭಾಷಿತದ ಆಶಯ. ಈ ಸೂಕ್ಷ್ಮವನ್ನು ಇಲ್ಲಿ ತಿಳಿದುಕೊಳ್ಳಬೇಕು. ಸುಖ–ದುಃಖಗಳೆರಡೂ ನಮಗೆ ಅತಿಥಿಗಳಾಗಿರುವಾಗ, ಒಬ್ಬ ಅತಿಥಿಯನ್ನು ಸಂತೋಷದಿಂದಲೂ ಮತ್ತೊಬ್ಬನನ್ನು ದೈನ್ಯದಿಂದಲೂ ಸ್ವಾಗತಿಸುವುದು ಸಲ್ಲದು. ದುಃಖ ಬಂದಾಗ ಅದನ್ನು ಸಂತೋಷದಿಂದ ಅಲ್ಲದಿದ್ದರೂ ಧೈರ್ಯವಾಗಿ ಎದುರಿಸಬೇಕು; ದುಃಖದ ಮುಂದೆ ನಾವು ಸೋತು, ಅದಕ್ಕೆ ಕೈ ಮುಗಿದರೆ ಅದು ನಮ್ಮನ್ನು ಮತ್ತಷ್ಟು ಕುಬ್ಜವನ್ನಾಗಿಸುತ್ತದೆ. ದುಃಖದ ದೆಸೆಯಿಂದ ನಾವೇನೂ ನಮ್ಮ ಆತ್ಮಾಭಿಮಾನವನ್ನು ಕಳೆದುಕೊಳ್ಳಬೇಕಿಲ್ಲವಷ್ಟೆ. ದುಃಖದಲ್ಲಿ ಕುಗ್ಗದೆ, ಪರಿಸ್ಥಿತಿಯನ್ನು ಧೈರ್ಯವಾಗಿಯೂ ವಿವೇಕಯುತವಾಗಿಯೂ ಎದುರಿಸುವಂಥ ಧೀಮಂತಿಕೆಯನ್ನು ನಾವು ಕಳೆದುಕೊಳ್ಳಬಾರದು. ಸೋತಾಗ ಗೆಲುವಿನ ದಾರಿಯನ್ನು ಹುಡುಕುವುದಕ್ಕೂ, ಸೋಲನ್ನೇ ಸಾವು ಎಂದು ಭಾವಿಸಿ ಸಂಪೂರ್ಣ ಶರಣಾಗುವುದಕ್ಕೂ ವ್ಯತ್ಯಾಸ ಉಂಟಷ್ಟೆ! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು