ಶನಿವಾರ, ಜುಲೈ 24, 2021
21 °C

ದಿನದ ಸೂಕ್ತಿ: ಬುದ್ಧಿಶಕ್ತಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಛಾರೀರಮೌಷಧೈಃ ।

ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್ ।।

ಇದರ ತಾತ್ಪರ್ಯ ಹೀಗೆ:

‘ಮಾನಸಿಕವಾದ ದುಃಖವನ್ನು ವಿಚಾರಶಕ್ತಿಯಿಂದ ಹೋಗಲಾಡಿಸಿಕೊಳ್ಳತಕ್ಕದ್ದು; ಶರೀರಕ್ಕೆ ಒದಗಿದ ರೋಗ ಮುಂತಾದ ಆಪತ್ತನ್ನು ಔಷಧಗಳಿಂದ ಗುಣಪಡಿಸಿಕೊಳ್ಳತಕ್ಕದ್ದು. ಬುದ್ಧಿಯ ಸಾಮರ್ಥ್ಯ ಎಂದರೆ ಇದೇ. ಹೀಗಲ್ಲದೆ ಬಾಲಿಶವಾಗಿ ವರ್ತಿಸಬಾರದು.’

ನಾವು ಸುಖ ಬಂದಾಗ ಹಿಗ್ಗುತ್ತೇವೆ, ದುಃಖ ಬಂದಾಗ ಕುಗ್ಗುತ್ತೇವೆ. ಇದು ಸಹಜ. ಹಿಗ್ಗಿನಲ್ಲಿ ಮನಸ್ಸು ತೇಲಾಡುತ್ತಿರುತ್ತದೆ; ಆದರೆ ಕುಗ್ಗಿನಲ್ಲಿ ಮನಸ್ಸು ಹೀಗೆ ಇರುವುದಿಲ್ಲ. ಮನಸ್ಸಿಗೆ ಆಗುವ ಈ ಸಂಕಟವನ್ನೇ ದುಃಖ ಎಂದು ಕರೆಯುವುದು.

ನಮಗೆ ದುಃಖ ಬಂದಾಗ ನಾವು ಗೋಳಾಡುತ್ತೇವೆ. ದಿಕ್ಕು ತೋಚದೆ ಕಂಗಾಲಾಗುತ್ತೇವೆ. ಜೀವನದಲ್ಲಿ ಎಲ್ಲ ಮುಗಿದುಹೋಯಿತು ಎಂದು ಆತಂಕಕ್ಕೂ ಒಳಗಾಗುತ್ತೇವೆ. ಮುಖ್ಯವಾಗಿ ನಮ್ಮ ಬುದ್ಧಿಯನ್ನು ಕಳೆದುಕೊಳ್ಳುತ್ತೇವೆ. ಸುಭಾಷಿತ ಇದನ್ನೇ ಹೇಳುತ್ತಿರುವುದು, ಮನಸ್ಸಿಗೆ ದುಃಖ ಎದುರಾದಾಗ ನಾವು ಬುದ್ಧಿಯನ್ನು ಕಳೆದುಕೊಳ್ಳಬಾರದು; ಬುದ್ಧಿಶಕ್ತಿಯ, ಎಂದರೆ ವಿಚಾರಶಕ್ತಿಯ ಮೂಲಕವೇ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.

ಇದು ಹೇಗೆಂದರೆ, ನಮ್ಮ ಶರೀರಕ್ಕೆ ಆಪತ್ತು ಬಂದಾಗ, ಎಂದರೆ ಅನಾರೋಗ್ಯ ಬಂದರೆ ಏನು ಮಾಡುತ್ತವೆ? ಅಳುತ್ತ ಕೂಡುವುದಿಲ್ಲವಷ್ಟೆ! ಕೂಡಲೇ ವೈದ್ಯರ ಸಲಹೆಯನ್ನು ಪಡೆಯುತ್ತೇವೆ; ಅವರು ಹೇಳಿದಂತೆ ಔಷಧವನ್ನು ಸೇವಿಸುತ್ತೇವೆ. ಹೀಗೆ ಮಾಡಬೇಕು; ಹೀಗೆ ಮಾಡದಿದ್ದರೆ ಆಗ ನಮ್ಮ ನಡೆವಳಿಕೆ ಅವಿವೇಕ ಎಂದೆನಿಸಿಕೊಳ್ಳುತ್ತದೆಯೆನ್ನಿ!

ಹೀಗೆ ದೇಹಕ್ಕೆ ಅನಾರೋಗ್ಯ ಎದುರಾದಾಗ ಹೇಗೆ ವೈದ್ಯರನ್ನು ಸಂಪರ್ಕಿಸುತ್ತವೆಯೋ, ಅಂತೆಯೇ ಮನಸ್ಸಿಗೆ ರೋಗ ಹಿಡಿದಾಗಲೂ ವೈದ್ಯರನ್ನು ಸಂಪರ್ಕಿಸಬೇಕು. ಆದರೆ ಈ ವೈದ್ಯ ಇರುವುದು ಆಸ್ಪತ್ರೆಯಲ್ಲಿ ಅಲ್ಲ, ನಮ್ಮಲ್ಲಿಯೇ, ನಮ್ಮ ಮೆದುಳಿನಲ್ಲೇ; ನಮ್ಮ ಬುದ್ಧಿಶಕ್ತಿಯೇ ಈ ವೈದ್ಯ. ವಿಚಾರವನ್ನು ಮಾಡಬೇಕು; ಸಮಸ್ಯೆಗೆ ಕಾರಣ ಏನು ಎಂದು ಹುಡುಕಬೇಕು, ಅದಕ್ಕೆ ಪರಿಹಾರವನ್ನೂ ಹುಡುಕಬೇಕು.

ನಮ್ಮ ಬುದ್ಧಿಯನ್ನು ಉಪಯೋಗಿಸುವುದು ಎಂದರೆ ಇದೇ; ಯಾವ ಸಮಸ್ಯೆಗೆ ಯಾವ ಪರಿಹಾರ ಎಂದು ಕಂಡುಕೊಳ್ಳುವುದೇ ಬುದ್ಧಿಯ ನಿಜವಾದ ಶಕ್ತಿ. ಹೀಗಲ್ಲದೆ ನಮಗೆ ದುಃಖವಾದಾಗ ದಡ್ಡರಂತೆಯೂ, ಅನಾರೋಗ್ಯ ಬಂದಾಗ ಹುಚ್ಚರಂತೆಯೂ ನಡೆದುಕೊಂಡರೆ ಆಗ ನಮ್ಮ ನಡತೆ ಬಾಲಿಶ ಎನಿಸಿಕೊಳ್ಳುತ್ತದೆ, ಅಷ್ಟೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು