ಶುಕ್ರವಾರ, ಏಪ್ರಿಲ್ 23, 2021
23 °C

ದಿನದ ಸೂಕ್ತಿ| ಶರೀರಧರ್ಮ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಮಾತ್ರಾ ಸಮಂ ನಾಸ್ತಿ ಶರೀರಪೋಷಣಂ

ವಿದ್ಯಾಸಮಂ ನಾಸ್ತಿ ಶರೀರಭೂಷಣಮ್‌ ।

ಭಾರ್ಯಾಸಮಂ ನಾಸ್ತಿ ಶರೀರತೋಷಣಂ

ಚಿಂತಾಸಮಂ ನಾಸ್ತಿ ಶರೀರಶೋಷಣಮ್‌ ।।

ಇದರ ತಾತ್ಪರ್ಯ ಹೀಗೆ:

‘ತಾಯಿಗೆ ಸಮವಾದ ಶರೀರದ ಪೋಷಣವಿಲ್ಲ. ವಿದ್ಯೆಗೆ ಸಮವಾದ ಶರೀರದ ಭೂಷಣವಿಲ್ಲ. ಹೆಂಡತಿಗೆ ಸಮವಾದ ಶರೀರದ ತೋಷಣವಿಲ್ಲ. ಚಿಂತೆಗೆ ಸಮವಾದ ಶರೀರದ ಶೋಷಣವಿಲ್ಲ.’

ನಮ್ಮ ಜೀವನವೆಲ್ಲ ನಮ್ಮ ಶರೀರವನ್ನು ಆಶ್ರಯಿಸಿರುವುದು ಸುಳ್ಳಲ್ಲವಷ್ಟೆ. ಮೊದಲು ನಮ್ಮ ಶರೀರದ ಪೋಷಣೆಯಾಗಬೇಕು; ಅದರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು; ಅದನ್ನು ಸಂತೋಷವಾಗಿರಿಸಿಕೊಳ್ಳಬೇಕು. ಮಾತ್ರವಲ್ಲ, ಅದನ್ನು ಎಂದಿಗೂ ಚಿಂತೆಗೆ ಒಳಪಡಿಸಬಾರದು. ಇದನ್ನೇ ಸುಭಾಷಿತ ಹೇಳುತ್ತಿರುವುದು.

ನಮಗೆ ಜನ್ಮ ನೀಡುವವಳು ನಮ್ಮ ತಾಯಿ. ಅವಳಿಂದಲೇ ನಮ್ಮ ಈ ಶರೀರ. ಮಾತ್ರವಲ್ಲ, ಈ ಶರೀರವನ್ನು ಪೋಷಿಸುವವಳೂ ಅವಳೇ. ಸುಮ್ಮನೇ ನಮ್ಮ ಶರೀರ ಬೆಳೆದರೂ ಪ್ರಯೋಜನವಿಲ್ಲ. ಅದಕ್ಕೊಂದು ಆಕಾರ ಬರಬೇಕು; ಚೆನ್ನಾಗಿಯೂ ಕಾಣಬೇಕು; ಕೀರ್ತಿಯನ್ನೂ ಸಂಪಾದಿಸಬೇಕು. ನಾವು ನಾಲ್ಕು ಜನರಿಗೆ ಚೆನ್ನಾಗಿ ಕಾಣುವುದು, ನಮ್ಮ ಶರೀರಕ್ಕೆ ವ್ಯಕ್ತಿತ್ವ ಒದಗುವುದು ನಾವು ಕಲಿತಿರುವ ವಿದ್ಯೆಯಿಂದಲೇ ಹೌದು.

ನಮ್ಮ ಶರೀರಕ್ಕೆ ಸಂತೋಷ, ಸುಖವೂ ಬೇಕಾಗುತ್ತದೆ. ನಮ್ಮ ಮಡದಿಯಿಂದ ನಮಗೆ ಇವು ದೊರೆಯುತ್ತವೆ. ಇವುಗಳ ನಡುವೆ ನಮ್ಮ ಶರೀರಕ್ಕೆ ತೊಂದರೆಯೂ ಎದುರಾಗಬಹುದು; ಅದು ಹಿಂಸೆಗೆ ತುತ್ತಾಗಬಹುದು. ಚಿಂತೆಯೇ ನಮ್ಮ ಶೋಷಣೆಗೆ ಕಾರಣವಾಗುವಂಥದ್ದು.

ಹೀಗೆ ನಮ್ಮ ಶರೀರಕ್ಕೆ ಏನು ಬೇಕೋ ಏನು ಬೇಡವೋ ಎಂದು ತಿಳಿದುಕೊಂಡು ಅದರಂತೆ ಜೀವನವನ್ನು ರೂಪಿಸಿಕೊಂಡರೆ ಅಗ ನಮ್ಮ ಜೀವನವು ಸುಖವಾಗಿಯೂ ಸುಂದರವಾಗಿಯೂ ರೂಪುಗೊಳ್ಳುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು