ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ದುಗ್ಗಾಣಿ ಎಂಬೋದು ದುರ್ಜನ ಸಂಘ

Last Updated 15 ಜೂನ್ 2020, 19:30 IST
ಅಕ್ಷರ ಗಾತ್ರ

ಕೈಯಲ್ಲಿ ದುಡ್ಡಿದ್ದಾಗ ನಮ್ಮಲ್ಲೊಂದು ಉತ್ಸಾಹಭಾವ ಪುಟಿಯುತ್ತಿರುತ್ತದೆ; ಒಂದು ವಿಧದ ನಶೆ ಎನ್ನಿ! ನಶೆಯಲ್ಲಿದ್ದಾಗ ನಾವು ವಾಸ್ತವಲೋಕದಲ್ಲಿಯೇ ಇರುವುದಿಲ್ಲ...

ಯದುತ್ಸಾಹೀ ಸದಾ ಮರ್ತ್ಯಃ ಪರಾಭವತಿ ಯಜ್ಜನಾನ್‌ ।

ಯದುದ್ಧತಂ ವದೇದ್ವಾಕ್ಯಂ ತತ್ಸರ್ವಂ ವಿತ್ತಜಂ ಬಲಮ್‌ ।।

ಇದರ ತಾತ್ಪರ್ಯ ಹೀಗೆ:

’ಮನುಷ್ಯ ಯಾವಾಗಲೂ ಉತ್ಸಾಹಯುತನಾಗಿರುವುದು, ಇತರ ಜನರನ್ನು ಅಪಮಾನಗೊಳಿಸುವುದು ಮತ್ತು ಅಹಂಕಾರದ ಧೋರಣೆಯಿಂದ ಮಾತನಾಡುವುದು – ಇವೆಲ್ಲ ಹಣದಿಂದ ಬಂದ ಬಲ.‘

ನಮ್ಮ ಕಿಸೆಯು ನೋಟುಗಳ ಭಾರದಲ್ಲಿರುವಾಗ ತಲೆಯೂ ಆ ತೂಕಕ್ಕೆ ಬಗ್ಗಿ ಎಲ್ಲೆಲ್ಲೂ ತೂರಾಡುತ್ತ, ಕೊನೆಗೆ ದಾರಿಯ ದಿಕ್ಕನ್ನೇ ತಪ್ಪಿಸುತ್ತಿರುತ್ತದೆ – ಎನ್ನುತ್ತಿದೆ ಸುಭಾಷಿತ.

ಜೇಬಿನಲ್ಲಿ ಕಾಸಿನ ’ಝಣ ಝಣ‘ದ ಸದ್ದು ’ಕೊರೊನಾ ನನ್ನನ್ನು ಏನು ತಾನೆ ಮಾಡೀತು‘ ಎಂಬ ಅತಿಯಾದ ಧೈರ್ಯವನ್ನೂ ಕೊಡುತ್ತದೆ. ಕೊರೊನಾಸಮಸ್ಯೆಯಂಥ ಕಷ್ಟಕಾಲದಲ್ಲೂ ಭ್ರಷ್ಟಾಚಾರಕ್ಕೆ ಮುಂದಾಗುತ್ತೇವೆ; ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ದುಡ್ಡನ್ನು ಪೀಕುತ್ತೇವೆ. ಇದಕ್ಕೆ ಕಾರಣ: ’ಹಣವೊಂದಿದ್ದರೆ ಸಾಕು, ನಾನು ಸಾವಿರ ವರ್ಷ ಬದುಕುತ್ತೇನೆ‘ ಎಂಬ ಎಣಿಕೆ!

ಹಣ ಕೊಡುವ ಇಂಥ ಹಲವು ’ಮಹಾಗುಣ‘ಗಳ ಬಗ್ಗೆ ಸುಭಾಷಿತ ನಮ್ಮ ಗಮನವನ್ನು ಸೆಳೆಯುತ್ತಿದೆ.

ಪುರಂದರದಾಸರ ಪದವೊಂದು ದುಡ್ಡಿನ ’ಮಂಗಚೇಷ್ಟೆ‘ಗಳನ್ನು ಸೊಗಸಾಗಿ ವರ್ಣಿಸಿದೆ:

’ದುಗ್ಗಾಣಿ ಎಂಬೋದು ದುರ್ಜನ ಸಂಘ
ದುಗ್ಗಾಣಿ ಬಲು ಕೆಟ್ಟದಣ್ಣ ।

ಆಚಾರ ಹೇಳೋದು ದುಗ್ಗಾಣಿ
ಬಲು ನೀಚರ ಮಾಡೋದು ದುಗ್ಗಾಣಿ
ನಾಚಿಕೆಯಿಲ್ಲದೆ ಮನೆ ಮನೆ ತಿರುಗಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ ।।

ನೆಂಟತನ ಹೇಳೋದು ದುಗ್ಗಾಣಿ
ಬಹುನೆಂಟರನೊಲಿಸುವುದು ದುಗ್ಗಾಣಿ
ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕುಂಟನೆನಿಸೋದು ದುಗ್ಗಾಣಿಯಣ್ಣ ।।

ಮಾನವ ಹೇಳೋದು ದುಗ್ಗಾಣಿ
ಮಾನ ಹದೆಗೆಡಿಸೋದು ದುಗ್ಗಾಣಿ
ಬಹುಮಾನನಿಧಿ ಶ್ರೀಪುರಂದರ ವಿಠ್ಠಲನ
ಕಾಣಿಸದಿರುವುದು ದುಗ್ಗಾಣಿಯಣ್ಣ ।।‘

ಮೇಲಿನ ಪದ ಸರಳವಾಗಿರುವುದಿರಂದ ಅರ್ಥವಿವರಣೆ ಹೆಚ್ಚಾಗಿ ಬೇಕಾಗದು.

ಇಲ್ಲೊಂದು ಸಂಗತಿಯನ್ನು ಗಮನಿಸಬಹುದು. ಹಣದ ದೆಸೆಯಿಂದ ನಮ್ಮಲ್ಲಿ ಎರಡು ಅತಿರೇಕಗಳು ಉಂಟಾಗುತ್ತವೆ. ಒಂದು: ಅದು ನಮ್ಮಲ್ಲಿ ನೆಲೆ ನಿಂತಾಗ ಕೊಡುವ ಅತಿಯಾದ ‘ಧೈರ್ಯ‘ ನಮ್ಮ ಅಹಂಕಾರವನ್ನು ವಿಪರೀತವಾಗಿ ಬೆಳೆಸುತ್ತದೆ; ನಮ್ಮನ್ನು ಅತಿಯಾಗಿ ಹಿಗ್ಗಿಸುತ್ತದೆ; ’ಇಡೀ ಜಗತ್ತು ನಾನೇ‘ ಎಂಬಷ್ಟು ರಾಕ್ಷಸಾಕಾರಕ್ಕೆ ಕಾರಣವಾಗುತ್ತದೆ. ಇನ್ನೊಂದು: ಅದು ನಮ್ಮಲ್ಲಿ ಇಲ್ಲದಿದ್ದಾಗ, ನಮ್ಮಲ್ಲಿ ಅತಿಯಾದ ದೈನ್ಯ ಉಂಟಾಗುತ್ತದೆ; ಅದು ನಮ್ಮ ಅಹಂಪ್ರತ್ಯಯವನ್ನೇ ತುಂಬ ಕುಬ್ಜವನ್ನಾಗಿಸುತ್ತದೆ; ’ನಾವು ಕಣದಲ್ಲಿ ಕಣ‘ ಎನಿಸುವಷ್ಟು ನಮ್ಮತನವನ್ನು ಕುಂಠಿತಗೊಳಿಸುತ್ತದೆ; ’ನಾನೊಬ್ಬ ನಿಷ್ಪ್ರಯೋಜಕ‘ ಎಂಬ ನಿಲವಿಗೆ ನಮ್ಮನ್ನು ದಬ್ಬಿ, ಆತ್ಮನಾಶಕ್ಕೂ ಕಾರಣವಾಗುತ್ತದೆ. ಈ ಎರಡು ನಿಲವುಗಳೂ ಕೂಡ ಅತಿರೇಕಗಳು ಎನ್ನುವುದು ಸ್ಪಷ್ಟ.

ಇದಕ್ಕೆ ಕಾರಣವಾದರೂ ಏನು? ಸುಭಾಷಿತ ಇದಕ್ಕೆ ಉತ್ತರವನ್ನೂ ಕೊಟ್ಟಿದೆ. ನಮ್ಮ ಶರೀರಕ್ಕೆ ಬಲ ಬರುವುದು ನಾವು ತಿನ್ನುವ ಅನ್ನದಿಂದ; ಬುದ್ಧಿಗೆ ಶಕ್ತಿ ಬರುವುದು ನಮ್ಮ ಅಧ್ಯಯನದಿಂದ. ಒಂದು ಶರೀರಕ್ಕೆ ಸಂಬಂಧಪಟ್ಟ ಬಲ, ಇನ್ನೊಂದು ಬುದ್ಧಿಗೆ ಸಂಬಂಧಪಟ್ಟ ಬಲ. ಒಂದರ ಮೂಲ ಅನ್ನ, ಇನ್ನೊಂದರ ಮೂಲ ಅಕ್ಷರ. ಆದರೆ ನಾವು ಮಾತ್ರ ವಿತ್ತಶಕ್ತಿಯಲ್ಲಿ ನಮ್ಮ ಚಿತ್ತದ ಮೂಲವನ್ನೂ ಚೈತನ್ಯದ ಮೂಲವನ್ನೂ ಹುಡುಕುವ ಅವಿವೇಕಕ್ಕೆ ಪಕ್ಕಾಗಿದ್ದೇವೆ. ಹೀಗಾಗಿ ನಮ್ಮ ಭಾವ–ಬುದ್ಧಿಗಳ ಬೆಳವಣಿಗೆಯಲ್ಲಿ ಅಸಮತೋಲ ಕಾಣಿಸಿಕೊಳ್ಳುತ್ತಿದೆ. ಈ ವಿಕಲತೆಯ ಕೆಲವೊಂದು ವಿವರಗಳನ್ನು ಮಾತ್ರವೇ ಸುಭಾಷಿತ ಇಲ್ಲಿ ಹೇಳಿರುವುದು.

ಕೈಯಲ್ಲಿ ದುಡ್ಡಿದ್ದಾಗ ನಮ್ಮಲ್ಲೊಂದು ಉತ್ಸಾಹಭಾವ ಪುಟಿಯುತ್ತಿರುತ್ತದೆ; ಒಂದು ವಿಧದ ನಶೆ ಎನ್ನಿ! ನಶೆಯಲ್ಲಿದ್ದಾಗ ನಾವು ವಾಸ್ತವಲೋಕದಲ್ಲಿಯೇ ಇರುವುದಿಲ್ಲ. ಹೀಗಿರುವಾಗ ನಮ್ಮ ಎದುರಿಗೆ ಯಾರು ಇದ್ದಾರೆಂದು ಹೇಗಾದರೂ ತಿಳಿದೀತು? ಇಂಥ ಸಂದರ್ಭದಲ್ಲಿ ನಾವು ಯಾರನ್ನೂ ಬೇಕಾದರೂ ಅಪಮಾನಮಾಡುತ್ತೇವೆ. ನಮ್ಮ ಮುಂದೆ ಯಾರೂ ಕಾಣದಿದ್ದಾಗ ಇರುವುದು ನಾವೊಬ್ಬರೇ ಎಂದಾಯಿತಲ್ಲ! ಆಗ ಅಹಂಕಾರದಿಂದ ಮಾತನಾಡುವುದರಲ್ಲಿ ಅಚ್ಚರಿಯೇನು ಬಂತು?

ಹಾಗಾದರೆ ಹಣವನ್ನು ಸಂಪಾದಿಸುವುದೇ ತಪ್ಪೇ? ಖಂಡಿತ ಅಲ್ಲ, ಆದರೆ ಅದು ನಮಗೆ ಮದವಾಗಿ ಪರಿಣಮಿಸಬಾರದು, ಅಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT