ಬುಧವಾರ, ನವೆಂಬರ್ 25, 2020
21 °C

ದಿನದ ಸೂಕ್ತಿ: ಕಟ್ಟುವ ಕೆಲಸ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಘಾತಯಿತುಮೇವ ನೀಚಃ ಪರಕಾರ್ಯಂಸು ವೇತ್ತಿ ನ ಪ್ರಸಾಧಯಿತುಮ್ ।

ಪಾತಯಿತುಮಸ್ತಿ ಶಕ್ತಿರ್ವಾಯೋರ್ವೃಕ್ಷಂ ನ ಚೋನ್ನಮಿತುಮ್‌ ।।

ಇದರ ತಾತ್ಪರ್ಯ ಹೀಗೆ:

‘ಮತ್ತೊಬ್ಬನ ಕೆಲಸವನ್ನು ಕೆಡಿಸುವುದಕ್ಕಾಗಿ ಮಾತ್ರ ನೀಚನಿಗೆ ಗೊತ್ತಾಗುತ್ತದೆಯೇ ಹೊರತು ಅದನ್ನು ಸಾಧಿಸುವುದಕ್ಕಲ್ಲ. ಗಾಳಿಗೆ ಮರವನ್ನು ಉರುಳಿಸಲು ಶಕ್ತಿಯಿದೆ; ಆದರೆ ಅದನ್ನು ಎತ್ತಿ ನಿಲ್ಲಿಸುವುದಕ್ಕಲ್ಲ.’

ಸುಭಾಷಿತ ಹೇಳಿರುವಂಥ ವ್ಯಕ್ತಿಗಳನ್ನು ನಾವೆಲ್ಲರೂ ಪ್ರತಿ ದಿನವೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಣುತ್ತಲೇ ಇರುತ್ತೇವೆ.

ಮನೆಯನ್ನು ಕಟ್ಟುವುದು ಕಷ್ಟದ ಕೆಲಸ; ಆದರೆ ಕೆಡವುವುದು ಸುಲಭದ ಕೆಲಸ. ಹೀಗೆಯೇ ಸಮಾಜವನ್ನು ಕಟ್ಟುವುದು ಕಷ್ಟದ ಕೆಲಸ; ಸಮಾಜವನ್ನು ಒಡೆಯವುದು ಸುಲಭದ ಕೆಲಸ. ಯಾವಾಗಲೂ ಕಷ್ಟದ ಕೆಲಸವನ್ನು ಮಾಡುವವರ ಸಂಖ್ಯೆ ಸಮಾಜದಲ್ಲಿ ಕಡಿಮೆ; ಸುಲಭದ ಕೆಲಸವನ್ನು, ಅದರಲ್ಲೂ ಒಡೆಯುವ ಕೆಲಸ – ಅದು ಸುಲಭದಲ್ಲಿಯೇ ಸುಲಭವಾದುದು – ಮಾಡಲು ಜನರು ನಾ ಮುಂದು ತಾ ಮುಂದು – ಎಂದು ಸಿದ್ಧರಾಗಿನಿಲ್ಲುತ್ತಾರೆ, ಅಲ್ಲವೆ? ಅದನ್ನೇ ಸುಭಾಷಿತ ಹೇಳುತ್ತಿರುವುದು. ಹೀಗೆ ಮನೆಯನ್ನೂ ಸಮಾಜವನ್ನೂ ಒಡೆಯುವವರನ್ನು ಅದು ನೀಚರು ಎಂದು ಸರಿಯಾಗಿಯೇ ಕರೆದಿದೆ. ನೀಚರ ಸ್ವಭಾವವೇ ಇನ್ನೊಬ್ಬರಿಗೆ ಕಷ್ಟವನ್ನು ಕೊಡುವುದು: ಗಾಳಿಗೆ ಮರವನ್ನು ಉರುಳಿಸಲು ಶಕ್ತಿಯಿದೆ; ಆದರೆ ಅದನ್ನು ಎತ್ತಿ ನಿಲ್ಲಿಸುವುದಕ್ಕಲ್ಲ.  

ರಾಜಕಾರಣದಲ್ಲೂ ಈ ನೀಚರ ಹಾವಳಿಯನ್ನು ಹೆಚ್ಚಾಗಿಯೇ ನೋಡಬಹುದು. ಯಾವ ಪಕ್ಷವೇ ಪ್ರತಿಪಕ್ಷದಲ್ಲಿರಲಿ, ಅದು ಆಡಳಿತ ಪಕ್ಷ ಮಾಡಲು ಹೊರಡುವ ಎಲ್ಲ ಕಾರ್ಯಗಳನ್ನೂ ವಿರೋಧಿಸುತ್ತದೆ. ಮಾತ್ರವಲ್ಲ, ಅದು ತನ್ನ ಸ್ವಾರ್ಥಕ್ಕಾಗಿ ದೊಂಬಿಗಳನ್ನೂ ಸೃಷ್ಟಿಸುತ್ತದೆ. ರಾಷ್ಡ್ರನಿರ್ಮಾಣವೇ ನಮ್ಮ ಗುರಿಯಾಗಿರಬೇಕು – ಎಂಬ ಆದರ್ಶವನ್ನು ಎಲ್ಲ ರಾಜಕೀಯ ಪಕ್ಷಗಳೂ ಮರೆತು ಕೇವಲ ನೀಚಮಟ್ಟದ ರಾಜಕಾರಣದಲ್ಲಿಯೇ ಮುಳುಗಿರುತ್ತವೆ.

ಕೆಲವೊಂದು ಕುಟುಂಬಗಳಲ್ಲಿಯೂ ಇಂಥ ನೀಚರು ಇರಬಹುದು. ಇವರು ಮನೆಯ ಏಳಿಗೆಯನ್ನು ಸಹಿಸುವುದಿಲ್ಲ; ಎಲ್ಲರ ಸಂತೋಷವನ್ನು ಕಂಡು ಸಂತೋಷಪಡುವಂಥ ಮಾನಸಿಕತೆಯೂ ಇವರಿಗೆ ಇರುವುದಿಲ್ಲ. ಮನೆಯ ಸದಸ್ಯರ ನಡುವೆಯೇ ಜಗಳಗಳನ್ನು ಸೃಷ್ಟಿಸುತ್ತಿರುತ್ತಾರೆ. ಇಂಥ ಗೃಹಭಂಜಕರು ನೀಚರಲ್ಲದೆ ಮತ್ತೇನು? ಮನೆಯಲ್ಲಿ, ಕಚೇರಿಯಲ್ಲಿ, ಕಲಾಪ್ರಪಂಚದಲ್ಲಿ – ಎಲ್ಲೆಲ್ಲಿ ಮನುಷ್ಯರು ಇರುತ್ತಾರೋ, ಅಲ್ಲೆಲ್ಲ ಇಂಥ ನೀಚರು ಇದ್ದೇ ಇರುತ್ತಾರೆ; ನಾವು ಎಚ್ಚರಿಕೆಯಿಂದ ಇರಬೇಕಷ್ಟೆ.

ನಾವು ಕೂಡ ಆಗಾಗ ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕು – ನಾವು ಇನ್ನೊಬ್ಬರ ಏಳಿಗೆಯನ್ನು ಕಂಡು ಸಂತೋಷ ಪಡುತ್ತಿದ್ದೇವೆಯೋ? ಅಥವಾ ಸಂಕಟ ಪಡುತ್ತಿದ್ದೇವೆಯೋ? ಕುಟುಂಬವನ್ನು ನಿಲ್ಲಿಸುವ ಕೆಲಸ ನಮ್ಮಿಂದ ಆಗುತ್ತಿದೆಯೋ? ಮನೆಯನ್ನು ಮುಳುಗಿಸುವ ಕೆಲಸ ಆಗುತ್ತಿದೆಯೋ? ಸಮಾಜಕ್ಕೂ ರಾಷ್ಡ್ರಕ್ಕೂ ನನ್ನಿಂದ ಏನಾದರೂ ಉಪಯೋಗ ಆಗುತ್ತಿದದೆಯೋ? ಹಾನಿ ಆಗುತ್ತಿದೆಯೋ? – ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಒಳಿತಿನ ಕಡೆಗೆ ಹೆಜ್ಜೆ ಹಾಕಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.