ಬುಧವಾರ, ಆಗಸ್ಟ್ 10, 2022
20 °C

ದಿನದ ಸೂಕ್ತಿ: ದುಷ್ಟಕೂಟ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ ।

ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಮ್‌ ।।

ಇದರ ತಾತ್ಪರ್ಯ ಹೀಗೆ:

’ತಾರುಣ್ಯ, ಹಣ, ಅಧಿಕಾರ ಮತ್ತು ಅವಿವೇಕ – ಇವುಗಳಲ್ಲಿ ಯಾವುದಾದರೂ ಒಂದೇ ಸಾಕು ಅನರ್ಥಕ್ಕೆ. ಇವು ನಾಲ್ಕೂ ಒಂದೇ ಕಡೆ ಸೇರಿತೆಂದರೆ ಆಗ ಏನೆಂದು ಹೇಳಲಾದೀತು?’

ಮನುಷ್ಯನಿಂದ ಯಾವ ಯಾವ ಸಂದರ್ಭದಲ್ಲಿ ಅನರ್ಥಗಳು ನಡೆಯುತ್ತವೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮ ಶಕ್ತಿ ನಮಗೆ ಒಳಿತನ್ನು ಮಾಡುವಂತೆ ಕೆಡುಕನ್ನೂ ಮಾಡಬಲ್ಲದು. ಶಕ್ತಿಗೆ ಸಂಕೇತವಾಗಿ ಇಲ್ಲಿ ತಾರುಣ್ಯವನ್ನು ಹೇಳಲಾಗಿದೆ. ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸಿಕೊಳ್ಳದಿದ್ದರೆ ಆಗ ಅನಾಹುತ ನಡೆಯವುದು ನಿಶ್ಚಿತ. ಇಲ್ಲಿ ಶಕ್ತಿಯನ್ನು ತಾರುಣ್ಯದೊಂದಿಗೆ ಜೋಡಿಸಿರುವುದಕ್ಕೂ ಕಾರಣವಿದೆ. ತಾರುಣ್ಯದಲ್ಲಿ ಅನುಭವದ ಪಾಕವನ್ನು ಕಾಣಲಾರೆವು; ಅಲ್ಲಿ ಬುದ್ಧಿಗಿಂತಲೂ ಶಕ್ತಿಯದ್ದೇ ಮೇಲಾಟ ಎನ್ನುವ ಕಾರಣದಿಂದ. ಹೀಗಾಗಿ ತಿಳಿವಳಿಕೆಯ ಜೊತೆಯಲ್ಲಿ ಇಲ್ಲದ ಶಕ್ತಿ ಎಂದಿಗೂ ಅಪಾಯವೇ ಹೌದು.

ಹಣ. ಇಂದು ನಮ್ಮ ಎಲ್ಲ ಆಲೋಚನೆಗಳ ಕೇಂದ್ರವಸ್ತುವೇ ದುಡ್ಡು. ಹಣ ಇದ್ದರೆ ಏನನ್ನೂ ಮಾಡಬಹುದು, ಏನನ್ನೂ ಕೊಳ್ಳಬಹುದು ಎಂಬ ಅಹಂಕಾರ ನಮ್ಮನ್ನು ಆವರಿಸಿದೆ. ಹೀಗಾಗಿಯೇ ಹಣದ ಹಿಂದೆ ಎಲ್ಲರೂ ಓಡುತ್ತಿರುವುದು.

ಅಧಿಕಾರ ಏನೆಲ್ಲ ಅನರ್ಥಗಳನ್ನು ಮಾಡಬಲ್ಲದು ಎಂಬುದನ್ನು ನಿತ್ಯ ನಾವು ಸಮಾಜದಲ್ಲಿ ನೋಡುತ್ತಿರುತ್ತೇವೆ. ಜನರ ಮೇಲೆ ದಬ್ಬಾಳಿಕೆ ನಡೆಸಲು, ತಮಗೆ ಬೇಕಾದ್ದನ್ನು ಕಬಳಿಸಲು ಅಧಿಕಾರದ ದುರುಪಯೋಗ ನಡೆಯುತ್ತದೆ. ನಮ್ಮ ದೇಶದಲ್ಲಂತೂ ಅಧಿಕಾರಕ್ಕೂ ಭ್ರಷ್ಟಾಚಾರಕ್ಕೂ ಇರುವ ಅಕ್ರಮಸಂಬಂಧ ನಮಗೆ ಗೊತ್ತಿರುವಂಥದ್ದೇ.

ಸುಭಾಷಿತ ಹೇಳುತ್ತಿರುವ ಕೊನೆಯ ಸಂಗತಿ ಅವಿವೇಕ. ಯಾವುದು ಸರಿ, ಯಾವುದು ತಪ್ಪು – ಎಂಬ ವಿಮರ್ಶೆಯನ್ನು ಕಳೆದುಕೊಂಡಿರುವ ಮಾನಸಿಕಸ್ಥಿತಿಯೇ ಅವಿವೇಕ. ಇದರ ಕಾರಣದಿಂದ ಏನೆಲ್ಲ ಅನರ್ಥಗಳು ನಡೆಯಬಹುದು ಎನ್ನುವುದು ನಮ್ಮ ಕಲ್ಪನೆಯನ್ನೂ ಮೀರಿರುವಂಥದ್ದು.

ಮೇಲೆ ಹೇಳಿರುವ ನಾಲ್ಕು ಸಂಗತಿಗಳೂ ಅನರ್ಥಪರಂಪರೆಗೆ ಕಾರಣವಾಗಬಲ್ಲದು. ಈ ಒಂದೊಂದರಿಂದ ಎದುರಾಗುವ ಅನಾಹುತಗಳನ್ನು ಎದುರಿಸುವುದೇ ಕಷ್ಟ; ಇನ್ನು ಈ ನಾಲ್ಕು ಒಂದೇ ಜಾಗದಲ್ಲಿ ಸೇರಿಕೊಂಡರೆ ಆಗ ಆಗುವ ಅನಾಹುತಗಳಿಗೆ ಕೊನೆಯೇ ಇರದು ಎಂಬ ಆತಂಕವನ್ನು ಸುಭಾಷಿತ ವ್ಯಕ್ತಪಡಿಸುತ್ತಿದೆ. ಇಂದಿನ ಹಲವರು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು – ಸುಭಾಷಿತದ ಆತಂಕವನ್ನು ನಿಜಮಾಡುತ್ತಿರುವುದನ್ನು ನಾವು ಕೂಡ ಅನುಭವಿಸುತ್ತಲೇ ಇರುತ್ತೇವೆ, ಅಲ್ಲವೆ? 

ಇನ್ನೊಂದು ಸಂಸ್ಕೃತಸುಭಾಷಿತ ಈ ದುಷ್ಟಕೂಟವನ್ನು ಇನ್ನೊಂದು ಉದಾಹರಣೆಯ ಮೂಲಕ ಕಟ್ಟಿಕೊಟ್ಟಿದೆ. ಅದರ ತಾತ್ಪರ್ಯ ಹೀಗೆ:

‘ಮೊದಲೇ ಕೋತಿ; ಈಗ ಅದು ಹೆಂಡವನ್ನೂ ಕುಡಿದಿದೆಯಂತೆ; ಅದರಳೊಗೆ ಭೂತವೂ ಪ್ರವೇಶ ಮಾಡಿತಂತೆ. ಅಷ್ಟರಲ್ಲಿ ಅದನ್ನು ಚೇಳೊಂದು ಕುಟುಕಿತು. ಆಗ ಆ ಕೋತಿಯ ಚೇಷ್ಟೆಯನ್ನು ಏನೆಂದು ವರ್ಣಿಸುವುದು?‘

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು