ಭಾನುವಾರ, ಜೂನ್ 20, 2021
28 °C

ದಿನದ ಸೂಕ್ತಿ: ಮಾತಿಗೆ ಮರುಳಾಗಬೇಡಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ ।

ತಸ್ಮಾತ್‌ ಸರ್ವಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬ ।।

ಇದರ ತಾತ್ಪರ್ಯ ಹೀಗೆ:

ಒಮ್ಮೆ ದೇಹ ಸುಟ್ಟು ಭಸ್ಮವಾದರೆ ಮತ್ತೆ ಅದು ಹಿಂದಕ್ಕೆ ಬರುವುದೇ? ಆದ್ದರಿಂದ ಸಾಲವನ್ನಾದರೂ ಮಾಡಿ ತುಪ್ಪವನ್ನು ತಿನ್ನು'

ಪಾಂ. ವೆಂ. ಆಚಾರ್ಯ ಅವರು ಕನ್ನಡದಲ್ಲಿ ಇದನ್ನು ಹೀಗೆ ಅನುವಾದಿಸಿದ್ದಾರೆ:

ಬೂದಿಯಾದ ದೇಹ ಮತ್ತೆ

ಬರುವುದುಂಟೆ?

ಸಾಲ ಮಾಡಿ ತುಪ್ಪ ಸುರಿದು

ಸುಖಿಸೊ ಮಂಕೇ!

ಇಂಥದೇ ಮಾತುಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿಯೂ ಒಂದಲ್ಲ ಒಂದು ಸಲ ಉದ್ಗರಿಸಿರುತ್ತೇವೆ; ಯೋಚಿಸಿ ನೋಡಿ.

ಜೀವನ ಎನ್ನುವುದು ಅನಿಶ್ಚಯ; ಯಾವಾಗ ಏನಗುವುದೋ ಗೊತ್ತಾಗದು. ಹೀಗಿದ್ದರೂ ಒಂದು ವಿಷಯವಂತೂ ವಾಸ್ತವ; ಸತ್ತವರು ಯಾರೂ ಮತ್ತೆ ಹಿಂದಿರುಗಿ ಬಂದಿಲ್ಲ.

ಎಂದರೆ ನಮಗೆ ಈಗ ದಕ್ಕಿರುವ ಈ ದೇಹ ಒಮ್ಮೆ ನಾಶವಾದರೆ ಪುನಃ ನಮಗೆ ಸಿಗುವುದಿಲ್ಲ. ಇದಂತೂ ಸತ್ಯ. ಹೀಗಿರುವಾಗ ನಾವು ಪಾಪ–ಪುಣ್ಯಗಳ ಬಗ್ಗೆ ಏಕಾದರೂ ತಲೆ ಕೆಡಿಸಿಕೊಳ್ಳಬೇಕು? ಹೀಗೆಂಬುದು ಹಲವರು ಯೋಚನೆ, ಸಿದ್ಧಾಂತ.

ಪಾಪ ಎಂದರೆ ನಾವು ಯಾವುದಾದರೂ ತಪ್ಪು ಕೆಲಸಗಳನ್ನು ಮಾಡಿದಾಗ ಒದಗುವಂಥ ದುಷ್ಫಲ; ಪುಣ್ಯ ಎಂದರೆ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಸಿಗುವ ಸುಫಲ. ಒಳ್ಳೆಯ ಕೆಲಸಗಳನ್ನು ಮಾಡಲು ನಾವು ತುಂಬ ಶ್ರಮ ಪಡಬೇಕು. ಇಷ್ಟು ಕಷ್ಟ ಪಟ್ಟು ಅಂಥ ಒಳ್ಳೆಯ ಕೆಲಸಗಳನ್ನು ಏಕಾದರೂ ಮಾಡಬೇಕು? ಇದರಿಂದ ಸಿಗುವ ಫಲದ ಫಲವಾದರೂ ಏನು? ಒಂದು: ಸ್ವರ್ಗ‍ಪ್ರಾಪ್ತಿ; ಮತ್ತೊಂದು: ಮುಂದಿನ ಜನ್ಮದಲ್ಲಿ ಅದರ ಫಲವಾಗಿ ಸುಖ. ಶಾಸ್ತ್ರಗಳು ಹೇಳುವುದಾದರೂ ಇದನ್ನೇ ಅಲ್ಲವೆ?

ಈ ಫಲಗಳೆಲ್ಲವೂ ನಾವು ಸತ್ತ ಮೇಲೆ ಸಿಗುವಂಥದ್ದು. ಆದರೆ ನಮ್ಮ ದೇಹವನ್ನು ಇಲ್ಲಿ ಸುಟ್ಟ ಮೇಲೆ ಅದು ಮತ್ತೆ ವಾಪಸ್‌ ಬಂದಿರುವುದಕ್ಕೆ ಒಂದೇ ಒಂದು ಸಾಕ್ಷ್ಯ ಕೂಡ ನಮಗೆ ಸಿಕ್ಕಿಲ್ಲ. ಹೀಗಿರುವಾಗ ಎಲ್ಲೋ ಸ್ವರ್ಗದಲ್ಲಿ, ಎಂದೋ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ಕಲ್ಪಿಸಿಕೊಳ್ಳುವ ಸುಖಕ್ಕಾಗಿ ಈಗ ಈ ಜನ್ಮದಲ್ಲಿ ಏಕಾದರೂ ಕಷ್ಟಗಳನ್ನು ನಾವಾಗಿ ತಂದುಕೊಳ್ಳಬೇಕು? ಇದು ಈ ಸುಭಾಷಿತದವರ ಪಕ್ಷದಲ್ಲಿರುವವರ ಸಿದ್ಧಾಂತ.

ಕೇಳಿ: Podcast: ದಿನದ ಸೂಕ್ತಿ–ಮಾತಿಗೆ ಮರುಳಾಗಬೇಡಿ

ಈ ಮಾತುಗಳು ನಮ್ಮ ಕಾಲದ ಚಿಂತನೆ ಎಂದೆನಿಸಬಹುದು; ಹಲವೊಮ್ಮೆ ನಮಗೂ ಸರಿ ಎಂದೂ ಅನಿಸಬಹುದೆನ್ನಿ! ಆದರೆ ಈ ಮಾತುಗಳು ಪ್ರಾಚೀನ ಕಾಲದ ಮಾತುಗಳು. ಇಂಥ ಮಾತುಗಳಲ್ಲಿ ಸಿದ್ಧಾಂತ ಕಟ್ಟಿದವರನ್ನು ನಮ್ಮ ದರ್ಶನಪರಂಪರೆಯಲ್ಲಿ ‘ಲೋಕಾಯತರು‘ ಎಂದು ಕರೆಯಲಾಗಿದೆ.

ಹೌದು, ನಮಗೂ ಈ ಸಿದ್ಧಾಂತದ ‘ಲಾಜಿಕ್‌’ ಸರಿ ಎನಿಸುತ್ತದೆ; ನಮ್ಮ ಯುಗಧರ್ಮದ ಮನೋಧರ್ಮವನ್ನೇ ಎತ್ತಿಹಿಡಿಯುವಂತಿದೆ. ಆದರೆ ಒಂದೇ ಒಂದು ಕ್ಷಣ ಯೋಚಿಸಿ: ‍ಪ್ರಪಂಚದಲ್ಲಿ ಎಲ್ಲರೂ ಹೀಗೇ ಯೋಚಿಸಿ, ಅದರಂತೆ ನಡೆದುಕೊಂಡಿದ್ದರೆ ನಮ್ಮ ಜೀವನ ಇಷ್ಟು ಸುಖಮಯವಾಗಿರುತ್ತಿತ್ತೆ? ಮಾನವ ಇತಿಹಾಸದ ಆರಂಭದ ದಿನಗಳಿಂದಲೂ ಮನುಷ್ಯ ಸರಿ–ತಪ್ಪುಗಳ ಚೌಕಟ್ಟಿನಲ್ಲಿ ಬದುಕುತ್ತಿದ್ದಾನೆ; ಅದನ್ನೇ ‘ಧರ್ಮ‘ ಎಂದೂ ಕರೆಯಲಾಗಿದೆ. ಪಾಪ–ಪುಣ್ಯ, ಸರಿ–ತಪ್ಪು, ಧರ್ಮ–ಅಧರ್ಮಗಳ ವ್ಯತ್ಯಾಸವನ್ನು ಕಾಣದೇ ಮನುಷ್ಯ ತನ್ನ ಜೀವನವನ್ನು ರೂಪಿಸಿಕೊಂಡಿದಿದ್ದರೆ ಮನುಷ್ಯ ಮನುಷ್ಯನಾಗಿಯೇ ಇಂದು ಉಳಿಯುತ್ತಿರಲಿಲ್ಲ. ಇಂದೂ ನಮ್ಮ ನಡುವೆ ಮೌಲ್ಯಗಳು ಉಳಿದಿವೆ ಎಂದರೆ ಅದಕ್ಕೆ ಕಾರಣವೇ ಮನುಷ್ಯನಲ್ಲಿರುವ ಧರ್ಮಾಧರ್ಮಗಳ ತಿಳಿವಳಿಕೆ, ಸರಿ–ತಪ್ಪುಗಳ ಮೌಲ್ಯ, ಪಾಪ–ಪುಣ್ಯಗಳ ಕಲ್ಪನೆ. 

ಹೀಗಾಗಿ ನಾವು ನಮ್ಮನ್ನು ದಾರಿ ತಪ್ಪಿಸುವ ಮಾತುಗಳನ್ನು ನಂಬದೆ, ನಮ್ಮ ಅಂತರಂಗದ ದನಿಗೆ ಕಿವಿ ಕೊಡಬೇಕು; ವಿವೇಕದ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು. ಲೋಕಾಯತರ ಇನ್ನೊಂದು ಹೆಸರು ‘ಚಾರ್ವಕರು‘; ಎಂದರೆ ಸವಿಯಾದ ಮಾತುಗಳನ್ನಾಡುವವರು ಎಂದು ಅರ್ಥ. ಸವಿಯಾದ ಮಾತುಗಳೆಲ್ಲವೂ ನಮ್ಮ ಹಿತವನ್ನು ಕಾಪಾಡುತ್ತದೆ ಎನ್ನಲಾಗುವುದಿಲ್ಲ, ಎಚ್ಚರ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.