ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಬಡವನನ್ನು ಕೇಳುವರಾರು?

Last Updated 17 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ವನಾನಿ ದಹತೋ ವಹ್ನೇಃ ಸಖಾ ಭವತಿ ಮಾರುತಃ ।
ಸ ಏವ ದೀಪನಾಶಾಯ ಕೃಶೇ ಕಸ್ಯಾಸ್ತಿ ಸೌಹೃದಮ್ ।।

ಇದರ ತಾತ್ಪರ್ಯ ಹೀಗೆ:
‘ಕಾಡುಗಳನ್ನು ಸುಡುವ ಕಿಚ್ಚಿಗೆ ಗಾಳಿಯು ಸ್ನೇಹಿತನಾಗುತ್ತಾನೆ; ಆ ಗಾಳಿಯೇ ದೀಪವನ್ನು ಆರಿಸುತ್ತಾನೆ. ಬಡವರಲ್ಲಿ ಯಾರಿಗೆ ತಾನೆ ಸ್ನೇಹವಿರುತ್ತದೆ?‘

ಶಕ್ತಿಯಿದ್ದವನನ್ನೇ ಶಕ್ತಿ ಆಶ್ರಯಿಸುತ್ತದೆ; ಸಿರಿವಂತನನ್ನೇ ಸಂಪತ್ತು ಹುಡುಕಿಕೊಂಡುಬರುತ್ತದೆ; ಇದು ಹೇಗೆಂದರೆ ಹಳ್ಳದ ಕಡೆಗೇ ನೀರು ಸಹಜವಾಗಿ ಹರಿಯುವಂತೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಬೆಂಕಿಗೆ ಗಾಳಿಯ ಸಹಾಯ ಬೇಕೇ ಬೇಕು. ಬೆಂಕಿ ಹುಟ್ಟಲೂ ಅದು ಹಬ್ಬಲೂ – ಗಾಳಿಯ ನೆರವು ಅದಕ್ಕೆ ಬೇಕು. ಸುಭಾಷಿತ ಈ ವಾಸ್ತವವನ್ನೇ ಉದಾಹರಣೆಯಾಗಿ ಉಪಯೋಗಿಸಿಕೊಂಡು ಬಡತನದ ಅಸಹಾಯಕತೆಯನ್ನು ನಿರೂಪಿಸುತ್ತಿದೆ.

ಕಾಡಿನಲ್ಲಿ ಸಣ್ಣದಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಆಗ ಗಾಳಿ ಬೀಸಲು ತೊಡಗಿದರೆ ಆ ಬೆಂಕಿ ಉರಿಯಾಗಿ ಹಂತ ಹಂತವಾಗಿ ಇಡಿಯ ಕಾಡನ್ನೇ ಆವರಿಸಿಕೊಳ್ಳುತ್ತದೆ. ಬೆಂಕಿಗೆ ಕೂಡಲೇ ಗಾಳಿ ಸಹಕಾರ ಕೊಡದಿದ್ದರೆ ಅದು ಇಡಿಯ ಕಾಡನ್ನು ವ್ಯಾಪಿಸದು. ಗಾಳಿ ಸಹಕಾರ ಕೊಡುತ್ತಿದ್ದಂತೆ ಅದು ಹಬ್ಬುತ್ತ ಹಬ್ಬುತ್ತ ಇಡಿಯ ಕಾಡನ್ನೇ ಸುಟ್ಟುಬಿಡುತ್ತದೆ.

ಇದೇ ಗಾಳಿ ಮನೆಯ ಕಡೆಗೂ ಬೀಸುತ್ತದೆ. ಆಗ ಏನಾಗುತ್ತದೆ? ಮನೆಯಲ್ಲಿ ಹಚ್ಚಿಟ್ಟಿರುವ ದೀಪ ಆರಿಹೋಗುತ್ತದೆ.

ಗಾಳಿಯಿಂದ ಕಾಡಿನ ಬೆಂಕಿ ಹೆಚ್ಚುತ್ತದೆ; ಆದರೆ ಮನೆಯ ದೀಪ ನಂದಿಹೋಗುತ್ತದೆ.

ಇಲ್ಲಿ ಸುಭಾಷಿತ ಕಾಡಿನ ಬೆಂಕಿಯನ್ನು ಸಿರಿತನಕ್ಕೂ, ಮನೆಯ ದೀಪವನ್ನು ಬಡತನಕ್ಕೂ ಸಮೀಕರಿಸಿರುವುದು ಸ್ವಾರಸ್ಯಕರವಾಗಿದೆ. ‘ಕಾಡು’ ದೊಡ್ಡ ಜನ; ‘ಮನೆಯ ದೀಪ‘ ಸಣ್ಣ ಜನ!

ಕಾಡಿನಲ್ಲಿ ಬೆಂಕಿ ಉರಿಯುವುದಕ್ಕೆ ಗಾಳಿಯ ಜೊತೆ ಕಾಡಿನ ಸಂಪತ್ತು ಕೂಡ ನೆರವಾಗುತ್ತದೆ. ಎಂದರೆ ಕಾಡಿನ ಮರಗಳೇ ಬೆಂಕಿಯನ್ನು ಆಲಂಗಿಸಿಕೊಂಡು ಇಡಿಯ ಕಾಡಿಗೆ ಹರಡಲು ಸಿದ್ಧವಾಗುತ್ತವೆ; ಗಾಳಿ ಅದರ ಪ್ರಸರಣಕ್ಕೆ ನೆರವಾಗುತ್ತದೆಯಷ್ಟೆ! ಗಾಳಿ ಹೆಚ್ಚಿದಷ್ಟೂ ಬೆಂಕಿಯ ಹರಡುವಿಕೆಯೂ ಅಲ್ಲಿ ಹೆಚ್ಚಾಗುತ್ತದೆ. ಆದರೆ ಮನೆಯ ದೀಪಕ್ಕೆ ಸಣ್ಣ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಇರುವುದಿಲ್ಲ. ಮನೆಯಲ್ಲಿ ಬೆಳಕಿಗಾಗಿ ಹಚ್ಚಿರುವ ದೀಪ, ಪಾಪ! ಅದು ಏಕಾಂಗಿ. ಅದರ ಜೊತೆಗೆ ಬೆಂಕಿಯನ್ನು ಪಸರಿಸಬಲ್ಲ ಇನ್ನೊಂದರ ಬೆಂಬಲ–ಶಕ್ತಿ ಇರುವುದಿಲ್ಲವಷ್ಟೆ.

ಕಾಡಿನಲ್ಲಿ ಮರದ ಜೊತೆಗೆ ಮರದ ಗುಂಪು; ಸಾವಿರ ಸಾವಿರ ಮರಗಳ ಗುಂಪೇ ಕಾಡು ಎನಿಸಿಕೊಳ್ಳುತ್ತದೆಯಷ್ಟೆ! ಇದು ಹೇಗೆಂದರೆ ಹಣ ಹಣ ಸೇರಿ ಆಗುವಂಥ ಸಿರಿತನ. ಕಾಡು ಎಂಬ ಸಿರಿವಂತನ ಜೊತೆಗೆ ಗಾಳಿ ಬೆಂಬಲವಾಗಿ ನಿಂತಿದೆಯೋ ಅದೇ ವಿಧದಲ್ಲಿ ಅದು ಮನೆಯ ಸಣ್ಣ ಹಣತೆಯ ವಿಷಯದಲ್ಲಿ ಬೆಂಬಲ ನೀಡುತ್ತಿಲ್ಲ; ಕಾಡಿನ ಬೆಂಕಿಯನ್ನು ಹೆಚ್ಚಿಸುವಗಾಳಿ ಮನೆಯ ದೀಪವನ್ನು ಮಾತ್ರ ಆರಿಸುತ್ತದೆ.

ಹೀಗೆಯೇ ಲೋಕದಲ್ಲಿ ಕೂಡ ಸಿರಿವಂತನಿಗೇ ಜನರು ಬೆಂಬಲವಾಗಿ ನಿಲ್ಲುತ್ತಾರೆಯೇ ಹೊರತು ಬಡವನ ಪರವಾಗಿ ನಿಲ್ಲಬಲ್ಲವರ ಸಂಖ್ಯೆ ಕಡಿಮೆ ಕಡಿಮೆ. ಇದು ಸುಭಾಷಿತದ ನಿಲವು.

ಇದನ್ನು ಇನ್ನೊಂದು ರೀತಿಯಲ್ಲೂ ಅರ್ಥೈಸಬಹುದು: ಒಂದು ಪಕ್ಷದ ಭ್ರಷ್ಟನಿಗೆ ಇನ್ನೊಂದು ಪಕ್ಷದ ಭ್ರಷ್ಟ ಬೆಂಬಲಕ್ಕೆ ನಿಲ್ಲುವಂತೆ, ಒಬ್ಬ ಭ್ರಷ್ಟ ಅಧಿಕಾರಿ ಇನ್ನೊಬ್ಬ ಭ್ರಷ್ಟ ಅಧಿಕಾರಿಗೆ ಬೆಂಬಲ ನೀಡುವಂತೆ, ಪ್ರಾಮಾಣಿಕರಿಗೂ ಸಜ್ಜನರಿಗೂ ಸುಲಭವಾಗಿ ಲೋಕದಲ್ಲಿ ಬೆಂಬಲ ಸಿಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT