ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆಸೆಯ ಬಲೆ

Last Updated 28 ಫೆಬ್ರುವರಿ 2021, 5:38 IST
ಅಕ್ಷರ ಗಾತ್ರ

ಸಿಲಂ ಕಮನಲಂ ಭವೇದನಲಮೌದರಂ ಬಾಧಿತುಂ
ಪಯಃ ಪ್ರಸೃತಿಪೂರಕಂ ಕಿಮುನ ಧಾರಕಂ ಸಾರಸಮ್‌ ।
ಅಯತ್ನ ಮಲವಲ್ಲಿಕಂ ಪಥಿಪಟಚ್ಚರಂ ಕಚ್ಚರಂ
ಭಜಂತಿ ವಿಬುಧಾ ಮುಧಾ ಹ್ಯಹಹ ಕುಕ್ಷಿತಃ ಕುಕ್ಷಿತಂ ।।

ಇದರ ತಾತ್ಪರ್ಯ ಹೀಗೆ:

‘ಹೊಟ್ಟೆಯ ಹಸಿವಿನ ಬೆಂಕಿಯನ್ನು ಆರಿಸಲು ಆರಿಸಿದ ಕಾಳುಗಳು ಸಾಲವೆ? ಸರೋವರದ ಬೊಗಸೆನೀರು ಶರೀರವನ್ನು ಕಾಪಾಡಲಾರದೆ? ದಾರಿಯಲ್ಲಿ ಸಿಕ್ಕುವ ಹರಿದ ಚಿಂದಿ ಬಟ್ಟೆಗಳು ಸುಲಭವಾಗಿ ಒದಗುವ ಕೌಪೀನವಾಗಲಾರವೆ? ಆದರೆ, ತಿಳಿವಳಿಕೆಯನ್ನುಳ್ಳವರು ಕೂಡ ಹೊಟ್ಟೆಗಾಗಿ ರಾಜರನ್ನು ವ್ಯರ್ಥವಾಗಿ ಆಶ್ರಯಿಸುತ್ತಾರಲ್ಲ, ಅಯ್ಯೋ!’

ರಾಜಕಾರಣಿಗಳ ಹಿಂದು ಮುಂದೆ ಹಲ್ಲುಗಿಂಜುತ್ತ ಸ್ವಾರ್ಥಕ್ಕಾಗಿ ಓಡಾಡುವ ಸ್ವಘೋಷಿತ ಬುದ್ಧಿಜೀವಿಗಳು, ಕಲಾವಿದರು, ಪತ್ರಕರ್ತರು ಮುಂತಾದವರಿಗೆ ಚೆನ್ನಾಗಿ ಅನ್ವಯವಾಗುವಂತಿದೆ ಈ ಸುಭಾಷಿತ.

ನಾವು ಬದುಕುವುದಕ್ಕೆ ಬೇಕಾದ ಅತ್ಯಂತ ಆವಶ್ಯಕ ವಸ್ತುಗಳು ಯಾವುವು? ಆಹಾರ, ನೀರು, ಬಟ್ಟೆ, ಇರಲು ಒಂದು ನೆಲೆ –ಇಷ್ಟಿದ್ದರೆ ಸಾಕಲ್ಲವೆ?

ಇವು ಕೂಡ ಯಾವ ಪ್ರಮಾಣದಲ್ಲಿ ಬೇಕಾಗುತ್ತವೆ?

ಆಹಾರ ನಮಗೆ ಬೇಕೆಂದು ಎಷ್ಟು ಮೂಟೆಗಳ ಅಕ್ಕಿಯನ್ನು ಸಂಗ್ರಹಿಸುವುದು? ನೀರು ಬೇಕೆಂದು ನಮಗಾಗಿಯೇ ಒಂದು ಅಣೆಕಟ್ಟನ್ನು ಕಟ್ಟಿಸಿಕೊಳ್ಳಬೇಕೆ? ಬಟ್ಟೆ ಬೇಕೆಂದು ಎಷ್ಟು ಜೊತೆ ಸೀರೆ ಪಂಚೆ ಪ್ಯಾಂಟುಗಳನ್ನು ಸಂಗ್ರಹಿಸುವುದು? ಇರಲು ಜಾಗ ಬೇಕು, ನಿಜ; ಆದರೆ ಎಷ್ಟು ಎಕರೆಯಲ್ಲಿ ಮನೆ ಕಟ್ಟಬೇಕು?

ನಮಗೆ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಸಾಕು ಎಂಬ ಮಾನಸಿಕತೆ ನಮ್ಮದಾದರೆ ಆಗ ನಮ್ಮ ಜೀವನದ ಹಾದಿ ಸುಗಮವಾಗಿಯೇ ಸಾಗುತ್ತದೆ. ಕಷ್ಟಪಟ್ಟು ನಮಗೆ ಬೇಕಾದುದನ್ನು ನಾವೇ ಸಂಪಾದಿಸಿಕೊಳ್ಳಬಹುದು; ನಮ್ಮ ಸ್ವಾಭಿಮಾನವನ್ನೂ ಕಾಪಾಡಿಕೊಳ್ಳಬಹುದು. ಹೀಗಲ್ಲದೆ ಅತಿಯಾಸೆಯನ್ನು ಪಟ್ಟರೆ ಆಗ ಕಂಡವರ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ; ಅವರಿವರ ಮುಂದೆ ಹಲ್ಲುಗಿಂಜುತ್ತ ಕೈ ಮುಗಿಯಬೇಕಾಗುತ್ತದೆ; ಎಷ್ಟೋ ಜನರನ್ನು ಮೋಸದಿಂದ ವಂಚಿಸಲೂ ಬೇಕಾಗುತ್ತದೆ.

ನಮ್ಮದು ಕೇವಲ ಅನ್ನ–ಬಟ್ಟೆಗಳ ಹಸಿವು ಮಾತ್ರವೇ ಅಲ್ಲ; ನಮ್ಮ ಹಸಿವೆಗೆ ಕೊನೆಯೇ ಇಲ್ಲ. ಮಂಕುತಿಮ್ಮನ ಕಗ್ಗದ ಈ ಪದ್ಯ ನಮ್ಮ ಹಸಿವಿನ ಹಾಹಾಕಾರವನ್ನು ಸೊಗಸಾಗಿ ಅನಾವರಣ ಮಾಡಿದೆ:

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ – ಮಂಕುತಿಮ್ಮ ।।

ನಮ್ಮದು ಕೇವಲ ಅನ್ನ–ನೀರು–ಬಟ್ಟೆಗಳ ಸಮಸ್ಯೆಯಾದರೆ ಅದನ್ನು ಬಹಳ ಸುಲಭವಾಗಿ ಪೂರೈಸಿಕೊಳ್ಳಬಹುದು ಎಂದು ಸುಭಾಷಿತ ಹೇಳಿದೆ: ’ಹೊಟ್ಟೆಯ ಹಸಿವಿನ ಬೆಂಕಿಯನ್ನು ಆರಿಸಲು ಆರಿಸಿದ ಕಾಳುಗಳು ಸಾಲವೆ? ಸರೋವರದ ಬೊಗಸೆನೀರು ಶರೀರವನ್ನು ಕಾಪಾಡಲಾರದೆ? ದಾರಿಯಲ್ಲಿ ಸಿಕ್ಕುವ ಹರಿದ ಚಿಂದಿ ಬಟ್ಟೆಗಳು ಸುಲಭವಾಗಿ ಒದಗುವ ಕೌಪೀನವಾಗಲಾರವೆ?‘

ಆದರೆ ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ಹಣವನ್ನು ಲೂಟಿಮಾಡುವುದಕ್ಕಾಗಿಯೋ, ಪ್ರಶಸ್ತಿಗಳನ್ನು ದೋಚಿಕೊಳ್ಳುವುದಕ್ಕಾಗಿಯೋ, ಪದವಿಗಳನ್ನು ಕಬಳಿಸುವುದಕ್ಕಾಗಿಯೋ ರಾಜಕಾರಣಿಗಳ ಹಿಂದೆಮುಂದೆ ಓಡಾಡುವ ನಮ್ಮ ದೈನ್ಯವನ್ನು ಸುಭಾಷಿತ ಹಂಗಿಸುತ್ತಿದೆ; ಅದೂ ವಿದ್ಯಾವಂತರು ಹೀಗೆ ಮಾಡುತ್ತಿದ್ದಾರಲ್ಲ – ಎಂದು ಅದು ಕೊರಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT