ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆಲಸ್ಯಕ್ಕೆ ವಿದ್ಯೆ ಒಲಿಯದು

Last Updated 12 ಜೂನ್ 2021, 19:44 IST
ಅಕ್ಷರ ಗಾತ್ರ

ಅಲಸಸ್ಯ ಕಥಂ ವಿದ್ಯಾ

ಕಥಮಂಧಸ್ಯ ಸುಂದರೀ ।

ಬಧಿರಸ್ಯ ಕಥಂ ವೀಣಾ

ಕಥಂ ಮಾಲಾ ಶವಸ್ಯ ಚ ।।

ಇದರ ಅನುವಾದವನ್ನು ಪಾವೆಂ ಆಚಾರ್ಯ ಅವರು ಪದ್ಯರೂಪದಲ್ಲಿಯೇ ಮಾಡಿದ್ದಾರೆ:

’ಕುರುಡಗೇತಕೆ ಚೆನ್ನೆ?

ಕಿವುಡಗೇಕೆ ವೀಣೆ?

ಹೆಣಕ್ಕೇಕೆ ಮಾಲ್ಯ?

ಸೋಮಾರಿಗೆ ವಿದ್ಯ?’

ಪದ್ಯದ ಸಾಲುಗಳು ಅನುವಾದದಲ್ಲಿ ಅನುಕ್ರಮವಾಗಿ ಬಂದಿಲ್ಲ; ಆದರೆ ಯಾವ ಸಾಲೂ ಬಿಟ್ಟಿಲ್ಲ; ಮಾತ್ರವಲ್ಲ, ಹೀಗೆ ಕ್ರಮವನ್ನು ತಪ್ಪಿಸಿದ್ದರಿಂದ ಅರ್ಥಕ್ಕೆ ಏನೂ ವ್ಯತ್ಯಾಸವಾಗಿಲ್ಲವೆನ್ನಿ!

ಸೋಮಾರಿಯಾದವನಿಗೆ ವಿದ್ಯೆ ದಕ್ಕದು. ನಿರಂತರವಾದ ಅಧ್ಯಯನಶೀಲತೆಯಿಂದಲೇ ವಿದ್ಯೆಯನ್ನು ಸಂಪಾದಿಸಲು ಸಾಧ್ಯ. ಆಲಸ್ಯವಿರದಂತೆ ನಿರಂತರ ಪರಿಶ್ರಮವೇ ವಿದ್ಯೆಯನ್ನು ಗಳಿಸಲು ಇರುವ ಏಕೈಕ ಮಾರ್ಗ. ಹೀಗಾಗಿಯೇ ಸುಭಾಷಿತ ಕೇಳುತ್ತಿರುವುದು: ’ಸೋಮಾರಿಗೆ ವಿದ್ಯೆ ಏಕೆ?‘ ಎಂದರೆ ಸೋಮಾರಿಯೂ ಆಗಿರುತ್ತೇನೆ, ವಿದ್ಯೆಯನ್ನೂ ಸಂಪಾದಿಸುತ್ತೇನೆ – ಎಂದರೆ ಆಗದು ಎಂದು ಎಚ್ಚರಿಸುತ್ತಿದೆ.

ಸೋಮಾರಿಯಾದವನು ವಿದ್ಯೆಯನ್ನು ಬಯಸುವುದು ಎಂದರೆ ಏನು ಗೊತ್ತೆ – ಎನ್ನುತ್ತಿದೆ ಸುಭಾಷಿತ.

ಸುಂದರಿಯಾದ ತರುಣಿ ನಮ್ಮ ಕಣ್ಣ ಮುಂದೆಯೇ ಇರಬಹುದು. ಆದರೆ ಅವಳ ಲಾವಣ್ಯವನ್ನು ಸವಿಯಲು ನಮಗೆ ಇರಬೇಕಾದ ಮೊದಲ ಅರ್ಹತೆ ಎಂದರೆ ಕಣ್ಣು. ಹೌದು, ಕಣ್ಣಿಗೆ ನೋಡುವ ಶಕ್ತಿ ಇರಬೇಕು. ಆಗ ಮಾತ್ರವೇ ನಾವು ಸೌಂದರ್ಯವನ್ನು ಸವಿಯಲು ಸಾಧ್ಯ.

ಹೀಗೆಯೇ ಸಂಗೀತವನ್ನು ಕೇಳಲು ಕಿವಿ ಇರಬೇಕು; ಎಂದರೆ ಶ್ರವಣಶಕ್ತಿ ಇರಬೇಕು. ಕೇಳಬಲ್ಲ ಸಾಮರ್ಥ್ಯವೇ ಇಲ್ಲದಿದ್ದಾಗ ನಮಗೆ ವೀಣೆಯ ನಾದವೂ ಒಂದೇ, ಪ್ರಾಣಿಗಳ ಅರಚಾಟವೂ ಒಂದೇ, ವಾಹನಗಳ ಸದ್ದೂ ಒಂದೇ; ಏನೂ ಕೇಳದು. ಏನೂ ಕೇಳದಿದ್ದವನಿಗೆ ಸಂಗೀತದ ಸಹವಾಸವಾದರೂ ಏಕೆ?

ಹೆಣಕ್ಕೆ ಎಷ್ಟು ಸಿಂಗಾರ ಮಾಡಿದರೆ ಏನು ಪ್ರಯೋಜನ? ಅದೇನು ಮೆಚ್ಚುತ್ತದೆಯೇ? ಸಂಭ್ರಮಿಸುತ್ತದೆಯೇ? ಹೀಗಾಗಿ ಹೆಣಕ್ಕೆ ಮಾಡುವ ಅಲಂಕಾರ ಎಲ್ಲವೂ ವ್ಯರ್ಥವಷ್ಟೆ!

ಎಂದರೆ ಎಲ್ಲ ಕೆಲಸಗಳಿಗೂ ಫಲಗಳಿಗೂ ಒಂದೊಂದು ನಿಖರವಾದ ಉದ್ದೇಶ, ಸಲಕರಣೆ, ಅರ್ಹತೆ ಇರುತ್ತದೆ ಎಂದಾಯಿತು. ಅಂತೆಯೇ ವಿದ್ಯೆಯನ್ನು ಸಂಪಾದಿಸಲು ಇರಬೇಕಾದ ಸಲಕರಣೆ, ಅರ್ಹತೆ ಎಂದರೆ ಅದು ಕ್ರಿಯಾಶೀಲತೆ; ಕಷ್ಟಪಡಬಲ್ಲ ವ್ಯಕ್ತಿತ್ವ; ಏಕಾಗ್ರತೆಯನ್ನು ಸಾಧಿಸಬಲ್ಲ ಮನಸ್ಸು; ಹಗಲು–ರಾತ್ರಿ ಶ್ರಮಪಡುವ, ಭೋಗದ ಬಯಕೆಯನ್ನು ತ್ಯಾಗಮಾಡಿದ ಬುದ್ಧಿ. ಹೀಗಲ್ಲದ ಅಲಸಿಗೆ, ಎಂದರೆ ಸೋಮಾರಿಗೆ ವಿದ್ಯೆ ಒಲಿಯುತ್ತದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT