ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಲಂಗೋಟಿ ಪುರಾಣ!

Last Updated 27 ಜುಲೈ 2020, 2:25 IST
ಅಕ್ಷರ ಗಾತ್ರ

ಕೌಪೀನರಕ್ಷಣಾರ್ಥಂ ಮಾರ್ಜಾಲೋ ಮಾರ್ಜಾಲರಕ್ಷಣಾರ್ಥಂ ಗಾವಃ

ಗವಾಂ ರಕ್ಷಣಾರ್ಥಂ ಭೃತ್ಯೋ ಭೃತ್ಯರಕ್ಷಣಾರ್ಥಂ ಸ್ತ್ರೀ ।

ಇದರ ತಾತ್ಪರ್ಯ ಹೀಗೆ:

’ಲಂಗೋಟಿಯ ರಕ್ಷಣೆಗಾಗಿ ಬೆಕ್ಕು, ಬೆಕ್ಕಿನ ರಕ್ಷಣೆಗಾಗಿ ಹಸು, ಹಸುವಿನ ರಕ್ಷಣೆಗಾಗಿ ಸೇವಕ, ಸೇವಕನ ರಕ್ಷಣೆಗಾಗಿ ಹೆಂಗಸು.‘

ಇಷ್ಟನ್ನು ಹೇಳಿದರೆ ಇಲ್ಲಿರುವ ಸ್ವಾರಸ್ಯ ಗೊತ್ತಾಗದು; ಇದರ ಹಿಂದಿರುವ ಕಥೆಯನ್ನು ಹೇಳಬೇಕಾಗುತ್ತದೆ:

ಒಂದೂರಿನಲ್ಲಿ ಒಬ್ಬ ಸಂನ್ಯಾಸಿಯಿದ್ದ; ಎಲ್ಲೋ ಆ ಊರಿನ ಪಾಳು ಬಿದ್ದ ದೇವಾಲಯದಲ್ಲಿ ವಾಸವಾಗಿದ್ದ. ಅವನದ್ದು ಎಂದು ಹೇಳುವ ಯಾವ ಆಸ್ತಿಯೂ ಇರಲಿಲ್ಲ; ಅವನಲ್ಲಿದ್ದ ಆಸ್ತಿ ಎಂದರೆ ಕೌಪೀನ, ಎಂದರೆ ಲಂಗೋಟಿ ಮಾತ್ರ – ಅದು ಎರಡು ಮಾತ್ರ, ಒಂದು ದೇಹದ ಮೇಲೆ, ಇನ್ನೊಂದು ದಂಡದ ಮೇಲೆ.

ಅದರೆ ಅವನ ಆ ಲಂಗೋಟಿಗೂ ಕಂಟಕ ಎದುರಾಗುತ್ತಿತ್ತು; ಇಲಿಗಳು ಅದನ್ನು ಕಡಿದು ಹಾಳುಮಾಡುಬಿಡುತ್ತಿದ್ದವು. ಅವನು ಯೋಚಿಸಿ ಯೋಚಿಸಿ, ಕೊನೆಗೊಂದು ನಿರ್ಧಾರಕ್ಕೆ ಬಂದ. ಇಲಿಗಳಿಂದ ಲಂಗೋಟಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಒಂದು ಬೆಕ್ಕನ್ನು ಸಾಕಲು ನಿರ್ಧರಿಸಿದ.

ಈಗ ಅವನಿಗೆ ಇನ್ನೊಂದು ಸಮಸ್ಯೆ ಎದುರಾಯಿತು. ಬೆಕ್ಕಿಗೆ ಹಾಲು ಬೇಕಲ್ಲ, ಏನು ಮಾಡುವುದು? ಅದಕ್ಕೂ ಒಂದು ಉಪಾಯವನ್ನು ಯೋಚಿಸಿದ; ಬೆಕ್ಕನ್ನು ರಕ್ಷಿಸುವುದಕ್ಕಾಗಿ ಹಸುವನ್ನೊಂದು ತಂದ.

ಹಸುವಿನ ಆರೈಕೆ ಹೇಗೆ? ಅದಕ್ಕೆ ಮೇವು, ನೀರುಗಳನ್ನು ಒದಗಿಸುವವರು ಯಾರು? ಹಾಲನ್ನು ಕರೆಯುವುದಕ್ಕೂ ಜನ ಬೇಕಲ್ಲ? ಹಸುವನ್ನು ನೋಡಿಕೊಳ್ಳಲು ಒಬ್ಬ ಆಳನ್ನು ನೇಮಿಸಿಕೊಂಡ.

ಸರಿ, ಆ ಆಳಿನ ಯೋಗಕ್ಷೇಮಗಳನ್ನು ನೋಡಿಕೊಳ್ಳುವವರು ಯಾರು? ಅವನಿಗೆ ಅನ್ನಪಾನಾದಿಗಳ ವ್ಯವಸ್ಥೆ ಆಗಬೇಕಲ್ಲವೆ?ಅವನು ಸರಿಯಾಗಿ ಕೆಲಸಮಾಡುತ್ತಿದ್ದಾನೋ ಇಲ್ಲವೋ – ಎಂಬ ಮೇಲ್ವಿಚಾರಣೆಯೂ ನಡೆಯಬೇಕಲ್ಲವೆ? ಅಡುಗೆ ಮಾಡುವವರು ಯಾರು? ಇವನು ಸಂನ್ಯಾಸಿ, ಅಡುಗೆಯನ್ನು ಮಾಡಬಾರದು; ಧ್ಯಾನದಲ್ಲಿರುತ್ತಾನೆ, ಆದ್ದರಿಂದ ಮೇಲ್ವಿಚಾರಣೆ ಸಾಧ್ಯವಾಗದು! ಏನು ಮಾಡುವುದು? ಅವನಿಗೊಂದು ಅದ್ಭುತ ಉಪಾಯ ಹೊಳೆಯಿತು; ಅಡುಗೆಮಾಡಲು ಒಬ್ಬ ಹೆಂಗಸನ್ನು ನೇಮಿಸಿದ.

ಹೆಂಗಸು ಬಂದಮೇಲೆ ಸುಮ್ಮನಿರಲು ಸಾಧ್ಯವೆ? ಅವಳ ಯೋಗಕ್ಷೇಮಗಳೂ ನಡೆಯಬೇಕಲ್ಲ? ಅವಳೊಂದಿಗೆ ಸಂನ್ಯಾಸಿಗೂ ಕ್ರಮೇಣ ಸಾಮೀಪ್ಯ ಬೆಳೆಯಿತು, ಸಖ್ಯವೂ ಉಂಟಾಯಿತು; ಕೊನೆಗೆ ಸಂಲಗ್ನವೂ ಆಯಿತು. ಈಗ ಅವರಿಗೆ ಇಬ್ಬರು ಮಕ್ಕಳು; ಸಂಸಾರ ಸಂತೋಷವಾಗಿದೆ.

ನಮ್ಮ ಈ ಸಂನ್ಯಾಸಿ ಇಂದಿನ ಹಲವರು ಸಂನ್ಯಾಸಿಗಳಿಗೆ ಸ್ಫೂರ್ತಿಯೂ ಇರಬಹುದೆನ್ನಿ!

ಇರಲಿ, ಈ ಕಥೆಯ ತಾತ್ಪರ್ಯವನ್ನು ಅಲ್ಲಮಪ್ರಭುವಿನ ಮಾತೊಂದು ಚೆನ್ನಾಗಿ ಹಿಡಿದಿದೆ: ’ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.‘

ಸಂಸಾರ ಬೇಡ – ಎಂದು ಸಂನ್ಯಾಸಿಯಾದವನು, ಕೇವಲ ಒಂದು ಲಂಗೋಟಿಯ ಕಾರಣದಿಂದ ಕೊನೆಗೆ ಸಂಸಾರಿಯೇ ಆಗಬೇಕಾಯಿತು. ನಮ್ಮದೇ ದೊಡ್ಡ ಮನೆಯಲ್ಲಿ ನೆಮ್ಮದಿಯಾಗಿರಬೇಕು ಎಂದು ಸಾಲ ಮಾಡಿ, ಬಂಗಲೆಯನ್ನು ಕಟ್ಟುತ್ತೇವೆ; ಕೊನೆಗೆ ಆ ಸಾಲ ತೀರಿಸಲು ಜೀವನದುದ್ದಕ್ಕೂ ಆತಂಕ–ಅಪಮಾನ–ಶ್ರಮಗಳಲ್ಲಿ ನೆಮ್ಮದಿಯನ್ನೇ ಕಳೆದುಕೊಳ್ಳುತ್ತೇವೆ.

ಇಂಥ ಹಲವು ಉದಾಹರಣೆಗಳನ್ನು ನೋಡಬಹುದು.

ಮಕ್ಕಳಿಂದಲಾದರೂ ಸಂತೋಷ ಸಿಗುತ್ತದೆ ಎಂದು ಭಾವಿಸಿಕೊಂಡು, ಹಗಲು–ರಾತ್ರಿ ಅವರಿಗಾಗಿ ಕಷ್ಟವನ್ನು ಪಡುತ್ತೇವೆ; ಕೊನೆಗೆ ನಮಗೆ ಉಳಿಯುವುದು ಆ ಕಷ್ಟವೊಂದೇ ಆಗಿರುತ್ತದೆಯಷ್ಟೆ! ಇಲ್ಲಿ ಭರ್ತೃಹರಿಯ ಪದ್ಯವೊಂದು ಉಲ್ಲೇಖಾರ್ಹವಾಗಿದೆ:

ಕ್ಷಾಂತಂ ನ ಕ್ಷಮಯಾ ಗೃಹೋಚಿತಸುಖಂ ತ್ಯಕ್ತಂ ನ ಸಂತೋಷತಃ

ಸೋಢಾ ದುಃಸಹಶೀತತಾಪಪವನಕ್ಲೇಶಾ ನ ತಪ್ತಂ ತಪಃ |

ಧ್ಯಾತಂ ವಿತ್ತಮಹರ್ನಿಶಂ ನಿಯಮಿತಪ್ರಾಣೈರ್ನ ಶಂಭೋಃ ಪದಂ

ತತ್ತತ್ಕರ್ಮ ಕೃತಂ ಯದೇವ ಮುನಿಭಿಸ್ತೈಸ್ತೈಃ ಫಲೈರ್ವಂಚಿತಾಃ‌ ।।

ಇದರ ತಾತ್ಪರ್ಯ:

’ಗೃಹಸ್ಥಾಶ್ರಮದ ಸುಖವನ್ನು ಸಹಿಸಲೂ ಇಲ್ಲ, ಬೇಡವೆಂದು ಸಂತೋಷದಿಂದ ಬಿಡಲೂ ಇಲ್ಲ; ಸಹಿಸಲು ಅಸದಳವಾದ ಚಳಿ, ಗಾಳಿ, ಬಿಸಿಲು ಮೊದಲಾದ ಕ್ಲೇಶಗಳ ಪರಂಪರೆಯನ್ನೇ ಅನುಭವಿಸಿಯಾಯಿತು; ಆದರೆ ತಪಸ್ಸನ್ನು ಆಚರಿಸಿದಂತೆ ಆಗಲಿಲ್ಲ. ಹಗಲು–ರಾತ್ರಿ ಹಣದ ಬಗ್ಗೆಯೇ ಧ್ಯಾನಮಾಡಿಯಾಯಿತು; ಆದರೆ ದೇವರನ್ನು ಧ್ಯಾನಿಸಿದಂತೆ ಆಗಲಿಲ್ಲ. ಋಷಿಗಳು ಯಾವ ಯಾವ ಕ್ಲೇಶಗಳನ್ನು ಸಹಿಸಿದರೋ ಅವೆಲ್ಲವನ್ನೂ ನಾವೂ ಅನುಭವಿಸಿದೆವು; ಆದರೆ ಋಷಿಗಳಿಗೆ ಸಿಕ್ಕ ಫಲ ಮಾತ್ರ ನಮಗೆ ಸಿಕ್ಕದೆಹೋಯಿತು.‘

ನಮಗೆ ಜೀವನದಲ್ಲಿ ಸ್ಪಷ್ಟತೆ ಇಲ್ಲದೆ ಹೋದರೆ ಅನರ್ಥಪರಂಪರೆಯನ್ನೇ ಅನುಭವಿಸಬೇಕಾಗುತ್ತದೆ. ಮೊಸರು ಬೇಕಾದರೆ ಹಾಲಿಗೆ ಹೆಪ್ಪು ಹಾಕಲೇಬೇಕು ನಿಜ; ಆದರೆ ನಮಗೆ ಎರಡೂ ಬೇಕು ಎಂದಾದಲ್ಲಿ, ಇರುವ ಹಾಲಿನಲ್ಲಿ ಸ್ವಲ್ಪ ಭಾಗ ಹಾಲಾಗಿಯೂ, ಇನ್ನು ಉಳಿದ ಭಾಗ ಮೊಸರಿಗಾಗಿಯೂ ಬಳಸಿಕೊಳ್ಳುವುದು ವಿವೇಕವಾಗುತ್ತದೆ. ಆದರೆ ಇದನ್ನು ಹೆಪ್ಪು ಹಾಕುವ ಮೊದಲೇ ಯೋಚಿಸಬೇಕಷ್ಟೆ! ಆಮೇಲೆ ’ಅಯ್ಯೋ ಸ್ವಲ್ಪ ಹಾಲನ್ನು ಉಳಿಸಿಕೊಳ್ಳಬೇಕಿತ್ತು‘ ಎಂದು ಪೇಚಾಡಿದರೆ ಪ್ರಯೋಜನವಿರದು; ಅಲ್ಲೂ ಭ್ರಷ್ಟರಾಗಿರುತ್ತೇವೆ, ಇಲ್ಲೂ ಭ್ರಷ್ಟರಾಗಿರುತ್ತೇವೆ, ಅಷ್ಟೇ!

ಹಾಲನ್ನು ಹಾಲಿಗಾಗಿಯೂ, ಜೊತೆಗೆ ಮೊಸರಿಗಾಗಿಯೂ ಬಳಸಿಕೊಳ್ಳಲಾದೀತು. ಆದರೆ ಮೊಟ್ಟೆಯೊಂದರ ಅರ್ಧವನ್ನು ಕೋಳಿಗಾಗಿಯೂ ಇನ್ನರ್ಧ ಆಮ್ಲೇಟ್‌ಗಾಗಿಯೂ ಬಳಸಿಕೊಳ್ಳಲು ಸಾಧ್ಯವಿಲ್ಲವಷ್ಟೆ! ಇದನ್ನು ಮರೆಯಬಾರದು!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT