ಶುಕ್ರವಾರ, ಸೆಪ್ಟೆಂಬರ್ 25, 2020
29 °C

ದಿನದ ಸೂಕ್ತಿ | ನಿಜವಾದ ತೀರ್ಥಕ್ಷೇತ್ರ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಸಾಧೂನಾಂ ದರ್ಶನಂ ಪುಣ್ಯಂ ತೀರ್ಥಭೂತಾ ಹಿ ಸಾಧವಃ ।
ತೀರ್ಥಂ ಫಲತಿ ಕಾಲೇನ ಸದ್ಯಃ ಸಾಧುಸಮಾಗಮಃ ।।

ಇದರ ತಾತ್ಪರ್ಯ ಹೀಗೆ:

‘ಸಾಧುಜನರ ದರ್ಶನ ಪುಣ್ಯಕರ; ಅವರು ತೀರ್ಥಕ್ಷೇತ್ರವಿದ್ದಂತೆ. ಆದರೆ ತೀರ್ಥಕ್ಷೇತ್ರವು ಕಾಲಾಂತರದಲ್ಲಿ ಫಲವನ್ನು ಕೊಡುತ್ತದೆ. ಸಾಧುಸಮಾಗಮವು ಕೂಡಲೇ ಒಳ್ಳೆಯ ಫಲವನ್ನು ಕೊಡುತ್ತದೆ.’

ತೀರ್ಥಕ್ಷೇತ್ರಗಳು ನಮ್ಮ ಸಂಸ್ಕೃತಿಯಲ್ಲಿ ತುಂಬ ಮಹತ್ವವನ್ನು ಪಡೆದಿವೆ. ಅವು ನಮ್ಮ ಪಾಪವನ್ನು ಹೋಗಲಾಡಿಸುತ್ತವೆ; ಮಾತ್ರವಲ್ಲ, ನಮಗೆ ಪುಣ್ಯವನ್ನೂ ತಂದುಕೊಡುತ್ತವೆ ಎಂಬ ವಿಶ್ವಾಸ ನಮ್ಮದು. ತೀರ್ಥಕ್ಷೇತ್ರಕ್ಕೆ ಯಾತ್ರೆಯನ್ನು ಮಾಡಬೇಕು ಎಂಬುದು ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಸೇರುತ್ತದೆ. 

ತೀರ್ಥ ಎನ್ನುವುದಕ್ಕೆ ಹಲವು ಅರ್ಥಗಳುಂಟು: ಉ‍ಪಾಧ್ಯಾಯ, ಗುರು, ಆಚಾರ್ಯ, ನೀರು, ಅಗ್ನಿ, ಯೋಗ – ಹೀಗೆ. ನಮ್ಮ ಜೀವನವನ್ನು ಉದ್ಧರಿಸಬಲ್ಲ ವಿವರಗಳನ್ನು ‘ತೀರ್ಥ’ ಎಂದು ಪರಂಪರೆ ಗುರುತಿಸಿರುವುದು ಸ್ಪಷ್ಟ.

ಇದಲ್ಲದೆ ‘ತೀರ್ಥ’ವನ್ನು ಮೂರು ವಿಧವಾಗಿ ಗುರುತಿಸುವುದುಂಟು. ಒಂದು: ಸ್ಥಾವರತೀರ್ಥ; ಇದೇ ಪುಣ್ಯಕ್ಷೇತ್ರ, ತೀರ್ಥಕ್ಷೇತ್ರಗಳು. ಎರಡು: ಜಂಗಮತೀರ್ಥ; ಇಲ್ಲಿ ಜ್ಞಾನಿಗಳು ಸೇರುತ್ತಾರೆ. ಮೂರು: ಮಾನಸತೀರ್ಥ; ಎಂದರೆ ಮನಸ್ಸಿನ ಶುದ್ಧತೆ.

ಇಲ್ಲಿ ಸುಭಾಷಿತ ಈ ಮೂರು ವಿಧದ ತೀರ್ಥಗಳಿಗೂ ಇರುವ ಪರಸ್ಪರ ಸಂಬಂಧವನ್ನು ತುಂಬ ಸೊಗಸಾಗಿ ಸಮನ್ವಯಮಾಡಿದೆ.

ಸಜ್ಜನರ ದರ್ಶನವನ್ನೇ ತೀರ್ಥಕ್ಷೇತ್ರದೊಂದಿಗೆ ಸುಭಾಷಿತ ಸಮೀಕರಿಸಿರುವುದು ಮನನೀಯವಾಗಿದೆ. ನಾವು ಸ್ಥಾವರತೀರ್ಥಕ್ಷೇತ್ರದ ಯಾತ್ರೆಗಾಗಿ ಸಾಕಷ್ಟು ಶ್ರಮವನ್ನು ಪಡಬೇಕು. ಆದರೆ ಸಜ್ಜನರು ಎಂಬ  ಜಂಗಮತೀರ್ಥ ಸಂದರ್ಶನಕ್ಕೆ ಅಂಥ ಕಷ್ಟಗಳನ್ನು ಪಡಬೇಕಾಗಿಲ್ಲ; ನಾವು ಅವರನ್ನು ನೋಡಬೇಕೆಂಬ ಸಂಕಲ್ಪಮಾಡಬೇಕಷ್ಟೆ. ಸ್ಥಾವರತೀರ್ಥಕ್ಷೇತ್ರದ ಸಂದರ್ಶನದಿಂದ ಪುಣ್ಯ ಲಭಿಸುತ್ತದೆ, ದಿಟ. ಆದರೆ ಅದು ಈಗಲೇ ಸಿಗುವಂಥದ್ದಲ್ಲ, ಮುಂದೆ ಕಾಲಾಂತರದಲ್ಲಿ ಅಥವಾ ಜನ್ಮಾಂತರದಲ್ಲಿ ಸಿಗುವಂಥದ್ದು. ಆದರೆ ಸಜ್ಜನರ, ಸಾಧುಪುರುಷರ ಸಂದರ್ಶನದ ಫಲ ಈ ಕೂಡಲೇ ಸಿಗುವಂಥದ್ದು. 

ಹಾಗಾದರೆ ತೀರ್ಥಕ್ಷೇತ್ರದಿಂದ ನಮಗೆ ಸಿಗುವ ಫಲವಾದರೂ, ಎಂದರೆ ಪುಣ್ಯವಾದರೂ, ಏನು – ಎಂಬುದನ್ನು ನಾವು ಆಲೋಚಿಸಬೇಕಾಗುತ್ತದೆ. 

ನಾವು ಸಾಮಾನ್ಯವಾಗಿ ಪುಣ್ಯ ಎಂದರೆ ನಾವು ಮುಂದೆ ಎಂದೋ ಸಿಗುವ ಆಸ್ತಿ, ಅಧಿಕಾರ, ಸ್ವರ್ಗ ಮುಂತಾದವುಗಳು ಎಂದುಕೊಳ್ಳುತ್ತೇವೆ. ಆದರೆ ಸುಭಾಷಿತ ಪುಣ್ಯಫಲದ ವ್ಯಾಖ್ಯಾನವನ್ನೂ ಇಲ್ಲಿ ಇನ್ನೊಂದು ವಿಧದಲ್ಲಿ ಮಾಡಿದೆ.

ನಾವು ಸಜ್ಜನರನ್ನು ನೋಡಿದಾಗ ನಮಗೆ ಸಿಗುವ ಫಲವಾದರೂ ಏನು? ಮನಸ್ಸಿಗೆ ನೆಮ್ಮದಿ, ಸಾಂತ್ವನ, ಧೈರ್ಯ. ಇವೇ ದಿಟವಾದ ಫಲಗಳು.

ವಸ್ತುತಃ ಸ್ಥಾವರತೀರ್ಥಕ್ಷೇತ್ರದ ಉದ್ದೇಶ, ಎಂದರೆ ಫಲವಾದರೂ ಇವೇ ಹೌದು. ಉದ್ವೇಗದಲ್ಲಿರುವ ನಮ್ಮ ಮನಸ್ಸನ್ನು ನೆಮ್ಮದಿಯಲ್ಲಿ ನಿಲ್ಲಿಸುವುದು, ಪರಸ್ಪರ ಸೌಹಾರ್ದದಲ್ಲಿ ನಾಲ್ಕು ಜನರೊಂದಿಗೆ ಬೆರೆಯುವುದು – ಇವೇ ದಿಟವಾದ ಫಲ. ಇಂಥ ಅಂತರಂಗಗುಣಗಳು ಎಲ್ಲಿ ಸಿಗುತ್ತವೆಯೋ ಅವೆಲ್ಲವೂ ನಮ್ಮ ಪಾಲಿಗೆ ತೀರ್ಥಕ್ಷೇತ್ರಗಳೇ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.