ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಉತ್ತಮರ ಕರ್ತವ್ಯಪ್ರಜ್ಞೆ

Last Updated 23 ಮಾರ್ಚ್ 2021, 2:14 IST
ಅಕ್ಷರ ಗಾತ್ರ

ಕಿಂ ಶೇಷಸ್ಯ ಭರವ್ಯಥಾ ನ ವಪುಷಿ ಕ್ಷ್ಮಾಂನ ಕ್ಷಿಪತ್ಯೇಷ ಯತ್‌

ಕಿಂ ವಾ ನಾಸ್ತಿ ಪರಿಶ್ರಮೋ ದಿನಪತೇರಾಸ್ತೇನ ಯನ್ನಿಶ್ಚಲಃ ।

ಕಿಂ ತ್ವಮಂಗೀಕೃತಮುತ್ಸೃಜನ್‌ ಕೃಪಣವತ್‌ ಶ್ಲಾಘ್ಯೋ ಜನೋ ಲಜ್ಜತೇ

ನಿರ್ವ್ಯೂಢಂ ಪ್ರತಿಪನ್ನವಸ್ತುಷು ಸತಾಮೇತದ್ಧಿ ಗೋತ್ರವ್ರತಮ್‌ ।।

ಇದರ ತಾತ್ಪರ್ಯ ಹೀಗೆ:

’ಆದಿಶೇಷನಿಗೆ ಶರೀರದಲ್ಲಿ ಭಾರದ ನೋವು ಇಲ್ಲವೆ? ಆದರೂ ಅವನು ತಾನು ಹೊತ್ತಿರುವ ಭೂಮಿಯನ್ನು ಮಾತ್ರ ಕೆಳಗೆ ಇಳಿಸಲಿಲ್ಲ. ಸೂರ್ಯನಿಗೂ ಕಷ್ಟ ಇಲ್ಲವೆ? ಆದರೂ ನಿಲ್ಲದೆ ಸಂಚರಿಸುತ್ತಿದ್ದಾನೆ. ಉತ್ತಮರಾದ ಜನರು ಒಪ್ಪಿಕೊಂಡ ಕೆಲಸವನ್ನು ಬಿಡಬೇಕಾದರೆ ನಾಚಿಕೆ ಪಡುತ್ತಾರೆ. ಒಪ್ಪಿಕೊಂಡ ಕೆಲಸವನ್ನು ಕೊನೆಯವರೆಗೂ ನಿರ್ವಹಿಸುವುದು ಮಹಾತ್ಮರ ವ್ರತ.’

ನಮಗೆಲ್ಲರಿಗೂ ಜೀವನದಲ್ಲಿ ಸಾಧನೆ ಮಾಡಬೇಕೆಂದು ಆಸೆ ಇರುತ್ತದೆ. ಸಾಧನೆಯ ಕಡೆಗೆ ಹೆಜ್ಜೆಯನ್ನೂ ಹಾಕುತ್ತೇವೆ. ಆದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಸೋತುಹೋಗುತ್ತೇವೆ. ಆದರೆ ಯಾರೋ ಕೆಲವರು ಮಾತ್ರ ಸಾಧನೆಯ ಗುರಿಯವರೆಗೂ ಪ್ರಯಾಣವನ್ನು ಮುಂದುವರೆಸುತ್ತಾರೆ. ಅಂಥವರೇ ಉತ್ತಮರು ಎಂದು ಹೇಳುತ್ತಿದೆ ಸುಭಾಷಿತ.

ಸುಭಾಷಿತ ಎರಡು ಉದಾಹರಣೆಗಳನ್ನು ನೀಡಿದೆ.

ಒಂದು: ಆದಿಶೇಷನದ್ದು. ಈ ಭೂಮಿಯನ್ನು ಆದಿಶೇಷ ಹೊತ್ತಿದ್ದಾನೆ ಎಂಬ ಕಲ್ಪನೆ ನಮ್ಮಲ್ಲಿದೆ. ನಾವು ನಾಲ್ಕು ಕೆಜಿ ಭಾರ ಇರುವ ಚೀಲವನ್ನು ಅರ್ಧ ಗಂಟೆ ಹೊತ್ತರೂ ಸುಸ್ತಾಗಿಬಿಡುತ್ತೇವೆ; ಚೀಲವನ್ನು ನೆಲದಮೇಲೆ ಇಡುವ ತನಕ ನಮ್ಮ ಆಯಾಸ ತಗ್ಗದು. ನಮ್ಮ ಭೂಮಿಯ ತೂಕ ಎಷ್ಟು ಎಂದು ಅಂದಾಜಿಸುವುದೂ ನಮ್ಮಿಂದ ಸಾಧ್ಯವಾಗದು. ಇಷ್ಟು ಅಗಾಧ ಭಾರವಿರುವ ಭೂಮಿಯನ್ನು ಹೊತ್ತಿದ್ದಾನೆ ಆದಿಶೇಷ; ಅದು ಒಂದು ಘಂಟೆಯಿಂದಲೋ ಒಂದು ದಿನದಿಂದಲೋ ಅಲ್ಲ; ಕೋಟ್ಯಂತರ ವರ್ಷಗಳಿಂದ. ಹೀಗೆ ಭೂಮಿಯನ್ನು ಹೊರಬೇಕೆಂಬುದು ಅವನಿಗೆ ವಿಧಿಸಲ್ಪಟ್ಟಿರುವ ಕರ್ತವ್ಯ. ಅದನ್ನು ಅವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾನೆ. ಭಾರವಾಗಿದೆ ಎಂದು ಅವನು ಒಂದು ಕ್ಷಣವೂ ಭೂಮಿಯನ್ನು ಕೆಳಗೆ ಇಟ್ಟಿಲ್ಲ.

ಎರಡನೆಯ ಉದಾಹರಣೆ ಸೂರ್ಯನದ್ದು. ಅವನು ಕೂಡ ಲಕ್ಷಾಂತರ ವರ್ಷಗಳಿಂದ ಸುತ್ತುತ್ತಲೇ ಇದ್ದಾನೆ. ಅವನ ಈ ಸುತ್ತಾಟದಿಂದಲೇ ನಾವು ಭೂಮಿಯ ಮೇಲೆ ಜೀವಿಸಲು ಸಾಧ್ಯವಾಗಿರುವುದು. ಆದರೆ ಅವನು ಆಯಾಸವಾಗಿದೆ ಎಂದು ಒಂದು ಕ್ಷಣವೂ ತನ್ನ ಸುತ್ತಾಟವನ್ನು ನಿಲ್ಲಿಸಿಲ್ಲ.

ನಾವು ಕೂಡ ನಮ್ಮ ಪಾಲಿನ ಕರ್ತವ್ಯವನ್ನು ಮಧ್ಯದಲ್ಲಿ ನಿಲ್ಲಿಸದೆ ಅದನ್ನು ನಿರಂತರವಾಗಿ ಪಾಲಿಸಬೇಕು. ಆಗಲೇ ನಾವು ಉತ್ತಮರು ಎಂದೆನಿಸಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT