ಮಂಗಳವಾರ, ಅಕ್ಟೋಬರ್ 19, 2021
24 °C

ದಿನದ ಸೂಕ್ತಿ: ಸರಸ್ವತೀತತ್ತ್ವ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದ್ವೇ ವರ್ತ್ಮನೀ ಗಿರಾಂ ದೇವ್ಯಾಃ ಶಾಸ್ತ್ರಂ ಚ ಕವಿಕರ್ಮ ಚ ।

ಪ್ರಜ್ಞೋಪಜ್ಞಂ ತಯೋರಾದ್ಯಂ ಪ್ರತಿಭೋದ್ಭವಮಂತಿಮಮ್‌ ।।

ಇದರ ತಾತ್ಪರ್ಯ ಹೀಗೆ:

‘ವಾಗ್ದೇವಿಯು ಸಾಗುವ ದಾರಿಗಳು ಎರಡು: ಒಂದು ಶಾಸ್ತ್ರ, ಇನ್ನೊಂದು ಕಾವ್ಯ; ಶಾಸ್ತ್ರವು ಸಿದ್ಧವಾಗುವುದು ಪ್ರಜ್ಞಾಬಲದಿಂದ, ಕಾವ್ಯ ಮೂಡುವುದು ಪ್ರತಿಭೆಯ ಬಲದಿಂದ.’

ಸರಸ್ವತಿ ಎಂದರೆ ವಿದ್ಯೆಗೆ ಒಡತಿ, ವಿದ್ಯಾಧಿದೇವತೆ. ಸರಸ್ವತಿಯ ಹಲವು ಹೆಸರುಗಳಲ್ಲಿ ಒಂದು ವಾಗ್ದೇವಿ. ಅವಳು ಎರಡು ದಾರಿಗಳಲ್ಲಿ ನಡೆಯುತ್ತಾಳೆ ಎಂದು ಈ ಶ್ಲೋಕ ಹೇಳುತ್ತಿದೆ.

ವಾಗ್ದೇವಿಯು ನಡೆಯವ ದಾರಿ ಎಂದರೆ ಅರ್ಥ ವಿದ್ಯೆ ತೋರಿಕೊಳ್ಳುವ ಮಾರ್ಗಗಳು. ಎಂದರೆ ಎರಡು ವಿಧದ ವಿದ್ಯೆಗಳು ಜಗತ್ತಿನ ವ್ಯವಹಾರದಲ್ಲಿ ಇವೆ ಎಂದು ಅರ್ಥ. ಒಂದು ಶಾಸ್ತ್ರ, ಮತ್ತೊಂದು ಕಾವ್ಯ. ಇವೇ ಆ ಎರಡು ವಿದ್ಯೆಗಳು.

ಇಲ್ಲಿ ಈ ಎರಡು ವಿದ್ಯೆಗಳನ್ನು ತುಂಬ ವಿಶಾಲವಾದ ಅರ್ಥದಲ್ಲಿ ಸ್ವೀಕರಿಸಲಾಗಿದೆ. ಶಾಸ್ತ್ರ ಎಂದರೆ ಎಲ್ಲ ರೀತಿಯ ವಿಚಾರಪ್ರಧಾನ ಕೃತಿಗಳೂ ಸೇರುತ್ತವೆ. ಅದರಲ್ಲಿ ವೈದ್ಯಶಾಸ್ತ್ರವೂ ಸೇರುತ್ತದೆ, ಗಣಿತವೂ ಸೇರುತ್ತದೆ, ಇತಿಹಾಸವೂ ಸೇರುತ್ತದೆ, ಕೃಷಿ–ತಂತ್ರಜ್ಞಾನಗಳೂ ಸೇರುತ್ತವೆ. ಹೀಗೆಯೇ ಕಾವ್ಯ ಎಂದರೆ ಅದರಲ್ಲಿ ಎಲ್ಲ ವಿಧದ ಭಾವಪ್ರಧಾನ ಕೃತಿಗಳೂ ಸೃಷ್ಟಿಶೀಲ ವಿದ್ಯೆಗಳೂ ಸೇರುತ್ತವೆ; ಅದರಲ್ಲಿ ಮಹಾಕಾವ್ಯಗಳೂ ಸೇರುತ್ತವೆ, ಶಿಲ್ಪವೂ ಸೇರುತ್ತದೆ, ಸಂಗೀತವೂ ಸೇರುತ್ತದೆ, ನಾಟ್ಯವೂ ಸೇರುತ್ತದೆ.

ಶಾಸ್ತ್ರ ಮತ್ತು ಕಾವ್ಯ – ಈ ಎರಡು ವಿದ್ಯೆಗಳೂ ನಮ್ಮ ಬಾಳಿಗೆ ಬೇಕಾದ ಬೆಳಕು.

ಹೀಗೆ ಜಗತ್ತಿನ ಎಲ್ಲ ರೀತಿಯ ವಿದ್ಯೆಗಳನ್ನೂ ಪರಂಪರೆ ಸರಸ್ವತಿಯ ಸ್ವರೂಪದಲ್ಲಿ ಕಾಣಿಸಿರುವುದು ಗಮನಾರ್ಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು