ಶನಿವಾರ, ನವೆಂಬರ್ 28, 2020
25 °C

ದಿನದ ಸೂಕ್ತಿ: ಮಹಾತ್ಮರ ಲಕ್ಷಣ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವಿವೇಕಃ ಸಹ ಸಂಪತ್ತ್ಯಾ ವಿನಯೋ ವಿದ್ಯಯಾ ಸಹ ।

ಪ್ರಭುತ್ವಂ ಪ್ರಶ್ರಯೋಪೇತಂ ಚಿಹ್ನಮೇತನ್ಮಹಾತ್ಮನಾಮ್ ।।

ಇದರ ತಾತ್ಪರ್ಯ ಹೀಗೆ:

‘ವಿವೇಕದಿಂದ ಕೂಡಿದ ಸಂಪತ್ತು, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ – ಇವು ಮಹಾತ್ಮರ ಲಕ್ಷಣ.’

ಮಹಾತ್ಮರ ಲಕ್ಷಣವನ್ನು ಸುಭಾಷಿತ ಹೇಳುತ್ತಿದೆ.

ನಮ್ಮಂಥ ಸಾಮಾನ್ಯರ ಎಣಿಕೆ ಹೇಗಿರುತ್ತದೆ ಎಂದರೆ ನಮ್ಮ ಗುರಿಯನ್ನು ಮುಟ್ಟಿದರೆ ಆಯಿತು; ಅದೇ ನಮ್ಮ ಬದುಕಿನ ಸಾರ್ಥಕತೆ, ಅದೇ ನಿಜವಾದ ಸಾಧನೆ ಎಂದುಕೊಳ್ಳುತ್ತೇವೆ. ಆದರೆ ಮಹಾತ್ಮರ ಎಣಿಕೆ ಬೇರೆಯೇ ರೀತಿಯಲ್ಲಿರುತ್ತದೆ; ಗುರಿಯನ್ನು ಮುಟ್ಟುವುದೇ ಮುಖ್ಯವಾಗುವುದಿಲ್ಲ. ಅದನ್ನು ಹೇಗೆ ಸಾಧಿಸಿದ್ದೇವೆ ಎಂಬುದೂ ಮುಖ್ಯವಾಗುತ್ತದೆ; ಸಾಧಿಸಿದ ಮೇಲೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇದು ಮಹಾತ್ಮರ ಮನೋಧರ್ಮ.

ಸುಭಾಷಿತ ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ಮಹಾತ್ಮರ ಲಕ್ಷಣವನ್ನು ನಿರೂಪಿಸಿದೆ. 

ಸಂಪತ್ತನ್ನು ಗಳಿಸುವುದೇ ವಿಶೇಷವಲ್ಲ; ಅದರ ಜೊತೆಗೆ ವಿವೇಕವೂ ಇರಬೇಕು. ವಿದ್ಯಾವಂತರಾದರಷ್ಟೆ ಸಾಲದು; ಅದರ ಜೊತೆಗೆ ವಿನಯವೂ ಇರಬೇಕು. ಅಧಿಕಾರವನ್ನು ದಕ್ಕಿಸಿಕೊಳ್ಳುವುದೇ ಸಾಧನೆಯಲ್ಲ; ಅದರ ಜೊತೆಗೆ ಸರಳತೆಯೂ ಇರಬೇಕು. ಹೀಗೆ ಸಂಪತ್ತಿನ ಜೊತೆ ವಿವೇಕವನ್ನೂ, ವಿದ್ಯೆಯ ಜೊತೆಗೆ ವಿನಯವನ್ನೂ, ಅಧಿಕಾರದ ಜೊತೆಗೆ ಸರಳತೆಯನ್ನೂ ಹೊಂದಿರುವವರೇ ಮಹಾತ್ಮರು ಎನ್ನುತ್ತಿದೆ ಸುಭಾಷಿತ.

ಸಂಪತ್ತನ್ನು ಸಂಪಾದಿಸುವುದೇನೂ ಕಷ್ಟವಲ್ಲ; ಮೋಸದ ಸಹಾಯದಿಂದ ತುಂಬ ಸುಲಭವಾಗಿಯೇ ಸಂಪಾದಿಸಿಬಿಡಬಹುದು. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು: ಸಂಪತ್ತನ್ನು ಗಳಿಸುವುದೇ ದೊಡ್ಡಲ್ಲ; ಅದರ ಜೊತೆಗೆ ವಿವೇಕವನ್ನೂ ಸಂಪಾದಿಸಿಕೊಳ್ಳಬೇಕು. ಸಂಪತ್ತು ಸೇರಿದಾಗ ಅದನ್ನು ಹೇಗೆ ನಿಭಾಯಿಸಬೇಕು, ವಿನಿಯೋಗಿಸಬೇಕು ಎಂಬ ವಿವೇಕ ತುಂಬ ಮುಖ್ಯ; ಇಲ್ಲವಾದಲ್ಲಿ ಅನರ್ಥವೇ ಉಂಟಾಗುತ್ತದೆ. ವಿದ್ಯೆ ಹೆಚ್ಚಿದಷ್ಟೂ ಅಹಂಕಾರವೂ ಬೆಳೆಯುವುದು ಸಹಜ; ಆದರೆ ಮಹಾತ್ಮರಲ್ಲಿ ಮಾತ್ರ ವಿದ್ಯೆ ಹೆಚ್ಚಿದಷ್ಟೂ ವಿನಯವೂ ಹೆಚ್ಚುತ್ತಿರುತ್ತದೆ. 

ಇನ್ನು ಸುಭಾಷಿತ ಹೇಳಿರುವ ಕೊನೆಯ ಉದಾಹರಣೆ: ಸರಳತೆಯಿಂದ ಕೂಡಿದ ಅಧಿಕಾರ; ಇದು ಮಹಾತ್ಮರ ಲಕ್ಷಣವಾಗಿರುತ್ತದೆ.

ನಮ್ಮ ಸುತ್ತಮುತ್ತಲಿನ ಅಧಿಕಾರಿಗಳನ್ನೂ ಜನನಾಯಕರನ್ನೂ ನೋಡಿದಾಗ ಈ ಮಾತಿನ ಮರ್ಮ ತಿಳಿಯುತ್ತದೆ. ಹಲವರಿಗೆ ಅಧಿಕಾರ ಸಿಕ್ಕ ಕೂಡಲೇ ಪಿತ್ತ ನೆತ್ತಿಗೆ ಏರುತ್ತದೆ. ನಾವೇ ರಾಜರು, ಚಕ್ರವರ್ತಿಗಳು; ಎಂದೆಂದಿಗೂ ಈ ಕುರ್ಚಿ ನನ್ನದೇ – ಎಂಬಂತೆ ವರ್ತಿಸುತ್ತಿರುತ್ತಾರೆ. ಸುಭಾಷಿತ ಅಂಥವರನ್ನು ಇಲ್ಲಿ ತಿರಸ್ಕರಿಸಿದೆ. ಅಧಿಕಾರದ ಜೊತೆಗೆ ಸರಳತೆ ಇದ್ದರೆ ಮಾತ್ರ ಆ ಪದವಿಗೆ ಭೂಷಣ ಎಂದು ಅದು ಧ್ವನಿಸಿದೆ.

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.