ಗುರುವಾರ , ಸೆಪ್ಟೆಂಬರ್ 23, 2021
22 °C

ದಿನದ ಸೂಕ್ತಿ: ಸಾಧನಚತುಷ್ಟಯ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಶಾಸ್ತ್ರ–ಪ್ರಾತಿನಿಧಿಕ ಚಿತ್ರ

ನಿತ್ಯಾನಿತ್ಯವಿವೇಕತೋ ಹಿ ನಿತರಾಂ ನಿರ್ವೇದಮಾಪದ್ಯ ಸದ್‌–

ವಿದ್ವಾನತ್ರ ಶಮಾದಿಷಟ್ಕಲಸಿತಃ ಸ್ಯಾನ್ಮುಕ್ತಿಕಾಮೋ ಭುವಿ ।

ಪಶ್ಚಾದ್‌ ಬ್ರಹ್ಮವಿದುತ್ತಮಂ ಪ್ರಣತಿಸೇವಾದೈಃ ಪ್ರಸನ್ನಂ ಗುರುಂ

ಪೃಚ್ಛೇತ್‌ ಕೋsಹಮಿದಂ ಕುತೋ ಜಗದಿತಿ ಸ್ವಾಮಿನ್‌ ವದ ತ್ವಂ ಪ್ರಭೋ ।।

ಇದರ ತಾತ್ಪರ್ಯ ಹೀಗೆ:

’ವಿದ್ವಾಂಸನಾದವನು ನಿತ್ಯಾನಿತ್ಯವಿವೇಕವನ್ನು ಚೆನ್ನಾಗಿ ಪಡೆದು, ವೈರಾಗ್ಯವನ್ನು ಸಂಪಾದಿಸಿಕೊಂಡು, ಶಮದಮಾದಿ ಆರು ಗುಣಗಳನ್ನು ಮೈಗೂಡಿಸಿಕೊಂಡು, ಮೋಕ್ಷಕ್ಕಾಗಿ ಈ ಲೋಕದಲ್ಲಿಯೇ ಹಂಬಲಿಸುತ್ತಾನೆ. ಬಳಿಕ ಬ್ರಹ್ಮಜ್ಞಾನಿಯನ್ನು ಸಮೀಪಿಸಿ, ಸಮಸ್ಕಾರಾದಿ ಸೇವೆಗಳಿಂದ ಅವನನ್ನು ಪ್ರಸನ್ನಗೊಳಿಸಿ, ‘ನಾನು ಯಾರು? ಈ ಜಗತ್ತಿನ ಮೂಲ ಯಾವುದು?’ – ಎಂದು ಪ್ರಶ್ನಿಸಬೇಕು.’

ಇಂದು ಬ್ರಹ್ಮರ್ಷಿ ನಾರಾಯಣಗುರು ಅವರ ಜಯಂತಿ. 

ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು. ಅದ್ವೈತದರ್ಶನದ ಅಡಿಪಾಯದ ಮೇಲೆ ಸಮಾಜದಲ್ಲಿ ಸಮಾನತೆಯ ಆನಂದನಿಲಯವನ್ನು ನಿರ್ಮಿಸಲು ಜೀವನದುದ್ದಕ್ಕೂ ಶ್ರಮಿಸಿದವರು ಅವರು. ಅಧ್ಯಾತ್ಮಸಾಧನೆಗೆ ಆವಶ್ಯಕವಾಗಿರುವ ಸಾಧನಚತುಷ್ಟಯದ ಬಗ್ಗೆ ಅವರು ’ಬ್ರಹ್ಮವಿದ್ಯಾಪಂಚಕಮ್‌‘ ಎಂಬ ತಮ್ಮ ಕೃತಿಯ ಆರಂಭದಲ್ಲಿಯೇ ಹೀಗೆ ತಿಳಿಸಿದ್ದಾರೆ.

ಮೊದಲನೆಯದು ನಿತ್ಯಾನಿತ್ಯವಸ್ತುವಿವೇಕ. ಹೀಗೆಂದರೇನು?

ಬ್ರಹ್ಮಸತ್ಯಂ ಜಗನ್ಮಿಥ್ಯೇತ್ಯೇವಂ ರೂಪೋ ವಿನಿಶ್ಚಯಃ ।

ಸೋಽಯಂ ನಿತ್ಯಾನಿತ್ಯವಸ್ತುವಿವೇಕಃ ಸಮುದಾಹೃತಃ ।।

’ಪರಬ್ರಹ್ಮವಸ್ತು ಒಂದೇ ಸತ್ಯ; ಈ ಜಗತ್ತೆಲ್ಲವೂ ಮಿಥ್ಯೆ – ಎಂಬ  ಗಟ್ಟಿಯಾದ ನಿರ್ಣಯವೇ ನಿತ್ಯಾನಿತ್ಯವಸ್ತುವಿವೇಕ ಎಂದು ಅನಿಸಿಕೊಳ್ಳುವುದು.’

ಎರಡನೆಯದು ವೈರಾಗ್ಯ, ವಿರಾಗ, ನಿರ್ವೇದ. ಹೀಗೆಂದರೇನು?

ತದ್ವೈರಾಗ್ಯಂ ಜಿಹಾಸಾ ಯಾ ದರ್ಶನಶ್ರವಣಾದಿಭಿಃ ।
ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ ।।

‘ದೇಹದಿಂದ ಆರಂಭಿಸಿ ಬ್ರಹ್ಮನ ವರೆಗಿನ ಅನಿತ್ಯವಾಗಿರುವ ಭೋಗವಸ್ತುಗಳಲ್ಲಿ ದರ್ಶನಶ್ರವಣಾದಿಗಳಿಂದ ಯಾವ ಜುಗುಪ್ಸೆ ಉಂಟಾಗುವುದೋ ಅದೇ ವೈರಾಗ್ಯ.’

ಮೂರನೆಯ ಸಾಧನೆ ಎಂದರೆ ಆರು ಗುಣಗಳ ಸಂಪಾದನೆ. ಅದನ್ನೇ ಶಮಾದಿಷಟ್ಕಸಂಪತ್ತಿ ಎನ್ನುತ್ತಾರೆ. ಅವು ಯಾವುವೆಂದರೆ:

ಶಮ: ಬೇರೆ ಚಿಂತೆಯನ್ನು ಇಟ್ಟುಕೊಳ್ಳದೆ ಅಂತರಿಂದ್ರಿಯಗಳನ್ನು ಹದ್ದಿನಲ್ಲಿರಿಸಿಕೊಳ್ಳುವುದು, ಮನಸ್ಸನ್ನು ಸ್ವಸ್ಥವಾಗಿರಿಸಿಕೊಳ್ಳುವುದು.

ದಮ: ಬಾಹ್ಯೇಂದ್ರಿಯಗಳನ್ನು ಹದ್ದಿನಲ್ಲಿರಿಸಿಕೊಳ್ಳುವುದು.

ಉಪರತಿ: ಹೊರಗಿನ ವ್ಯಾಪಾರಗಳಿಂದ ಮನಸ್ಸನ್ನು ಒಳಕ್ಕೆಳಕೊಂಡು ಸ್ವಸ್ಥತೆಯಿಂದಿರುವುದು.

ತಿತಿಕ್ಷೆ: ಲಾಭ–ನಷ್ಟ, ಸುಖ–ದುಃಖ, ರಾಗ–ದ್ವೇಷ, ಶೀತ–ಉಷ್ಣ ಮುಂತಾದ ದ್ವಂದ್ವಗಳಿಂದ ಮನಸ್ಸನ್ನು ತೊಂದರೆ ಮಾಡಿಕೊಳ್ಳದೆ ಸಮಸ್ಥಿತಿಯಲ್ಲಿರುವುದು.

ಶ್ರದ್ಧೆ: ಶಾಸ್ತ್ರವಾಕ್ಯಗಳನ್ನೂ ಗುರುಹಿರಿಯರ ಉಪದೇಶವನ್ನೂ ನಂಬಿಕೆಯಿಂದ ಗ್ರಹಿಸುವುದು.

ಸಮಾಧಾನ: ಮನಸ್ಸನ್ನು ನೆಮ್ಮದಿಯಲ್ಲಿಟ್ಟುಕೊಳ್ಳುವುದು.

ನಾಲ್ಕನೆಯದು ಮುಮುಕ್ಷತ್ವ. ಎಂದರೆ ಮೋಕ್ಷದ ಬಗ್ಗೆ ಕುತೂಹಲ, ಶ್ರದ್ಧೆ.

ಈ ನಾಲ್ಕು ಸಾಧನೆಗಳ ಸಮೂಹವನ್ನು ದೃಢಮಾಡಿಕೊಂಡು, ಆ ಬಳಿಕ ಸಮರ್ಥನಾದ ಗುರುವಿನ ಬಳಿಗೆ ತೆರಳಿ, ಅವನಿಂದ ವೇದಾಂತಜ್ಞಾನವನ್ನು ಸಂಪಾದಿಸಬೇಕು – ಎನ್ನುವುದು ಪರಂಪರೆಯ ನಿಲವು.

ಜಾತಿಪದ್ಧತಿಯಂಥ ಕಳಂಕಗಳು ಧರ್ಮದ ಹೆಸರಿನಲ್ಲಿಯೇ ನಡೆಯುತ್ತಿರುವುದರಿಂದ ಧರ್ಮದ ದಾರಿಯಲ್ಲಿಯೇ ಅವನ್ನು ದೂರಮಾಡಬೇಕೆಂದು ಸಂಕಲ್ಪಿಸಿ ಅದರಂತೆ ಕ್ರಾಂತಿಯನ್ನೇ ಮಾಡಿದವರು ನಾರಾಯಣಗುರುಗಳು. ಅವರ ತೋರಿಸಿಕೊಟ್ಟ ಮಾರ್ಗ ಇಂದಿಗೂ ನಮ್ಮ ಸಮಾಜಕ್ಕೆ ಬೇಕಾದ ಬೆಳಕಿನ ಮಾರ್ಗ. ಅದ್ವೈತದರ್ಶನದ ಭೂಮಿಕೆಯಲ್ಲಿಯೇ ಅವರು ಸಮಾಜಸುಧಾರಣೆಯ ಅಭಿಯಾನವನ್ನು ಕೈಗೆತ್ತಿಕೊಂಡರು. ಮೇಲು–ಕೀಳು ಎಂಬ ಭೇದಬುದ್ಧಿ ವೇದಾಂತದ ಸರಿಯಾದ ತಿಳಿವಳಿಕೆಯಿಂದ ನಮ್ಮಿಂದ ದೂರವಾಗುತ್ತದೆ. ವೇದಾಂತದ ಅಧ್ಯಯನಕ್ಕೂ ಅನುಷ್ಠಾನಕ್ಕೂ ಬೇಕಾಗಿರುವ ಅರ್ಹತೆಯೇ ಈ ಸಾಧನಚತುಷ್ಟಯ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು