ಬುಧವಾರ, ಅಕ್ಟೋಬರ್ 28, 2020
19 °C

ದಿನದ ಸೂಕ್ತಿ: ಲಕ್ಷ್ಮೀರಹಸ್ಯ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಉತ್ಸಾಹಸಂಪನ್ನಮದೀರ್ಘಸೂತ್ರಂ
ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್‌ ।
ಶೂರಂ ಕೃತಜ್ಞಂ ದೃಢಸೌಹೃದಂ ಚ
ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ।।

ಇದರ ತಾತ್ಪರ್ಯ ಹೀಗೆ:

‘ಉತ್ಸಾಹದಿಂದ ಕೂಡಿದವನೂ ಸೋಮಾರಿಯಲ್ಲದವನೂ ಕೆಲಸಮಾಡುವ ರೀತಿಯನ್ನು ಅರಿತವನೂ ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ ಶೂರನೂ ಕೃತಜ್ಞನೂ ಸ್ಥಿರವಾದ ಸೌಹಾರ್ದವುಳ್ಳವನೂ ಆದವನಲ್ಲಿ ನೆಲಸಲು ಲಕ್ಷ್ಮಿ ತಾನಾಗಿಯೇ ಬರುತ್ತಾಳೆ.‘

ಎಲ್ಲರೂ ಸುಖದಿಂದ ಬಾಳಬೇಕು ಎಂದು ಬಯಸುವುದು ಸಹಜ. ಸುಖದಿಂದ ಇರಲು ನಮಗೆ ಅರ್ಥದ ಬೆಂಬಲ ಬೇಕು ಎಂಬುದೂ ನಿಜ. ಅರ್ಥಸಂಪಾದನೆ ಎಂದರೆ ಕಷ್ಟಪಡಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು.

ಅರ್ಥಸಂಪಾದನೆ ಎಂದರೆ ಕೇವಲ ಹಣ ಮಾತ್ರವೇ ಅಲ್ಲ; ನಮ್ಮ ಕಾರ್ಯಸಿದ್ಧಿಗೆ ಬೇಕಾದ ಎಲ್ಲ ಸಲಕರಣೆಗಳೂ ‘ಅರ್ಥ’ವೇ ಹೌದು. ಈ ಅರ್ಥಕ್ಕೆಲ್ಲ ಒಡತಿ ಶ್ರೀಲಕ್ಷ್ಮಿ. ಅವಳು ಎಲ್ಲಿರುವಳೋ ಅಲ್ಲಿ ಬಡತನವಿರುವುದಿಲ್ಲ, ಕಷ್ಟಕಾರ್ಪಣ್ಯಗಳೂ ಇರುವುದಿಲ್ಲ. ಆದುದರಿಂದಲೇ ಎಲ್ಲರೂ ಲಕ್ಷ್ಮಿ ನಮ್ಮಲ್ಲಿ ನೆಲಸಲಿ ಎಂದು ಪ್ರಾರ್ಥಿಸುವುದು.

ಆದರೆ ಲಕ್ಷ್ಮಿ ಎಲ್ಲರ ಸನಿಹದಲ್ಲಿ ಸುಲಭಕ್ಕೆ ಬಂದು ನೆಲಸುವುದಿಲ್ಲ. ಅವಳಿಗೆ ಕೆಟ್ಟ ಗುಣಗಳನ್ನು ಕಂಡರೆ ಆಗದು; ಅಂಥ ಗುಣಗಳನ್ನು ರೂಢಿಸಿಕೊಂಡವರ ಹತ್ತಿರವೂ ಅವಳು ಸುಳಿಯವುದಿಲ್ಲ. ಇಷ್ಟಕ್ಕೂ ಆ ದುರ್ಗುಣಗಳಾದರೂ ಯಾವುವು?

ಸದಾ ಜಡವಾಗಿ ಬೇಸರದಲ್ಲಿಯೇ ಮುಳುಗಿರುವುದು; ಸೋಮಾರಿಯಾಗಿ ಮೈಗಳ್ಳನಾಗಿರುವುದು; ಕೆಲಸಮಾಡಿದರೂ ಸರಿಯಾದ ರೀತಿಯಲ್ಲಿ ಅದರಲ್ಲಿ ತೊಡಗದಿರುವುದು; ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡವನು; ಹೇಡಿಯಾಗಿ ಪ್ರತಿಯೊಂದಕ್ಕೂ ಹೆದರುವವನು; ಉಪಕಾರಮಾಡಿದವರನ್ನು ಮರೆತು ಅವರಿಗೇ ಅಪಕಾರಮಾಡಲೂ ಹಿಂಜರಿಯದವನು; ಜಗಳಗಂಟ, ಯಾರೊಂದಿಗೂ ಸ್ನೇಹದಿಂದ ನಡೆದುಕೊಳ್ಳದವನು – ಇಂಥವನ ಹತ್ತಿರವೂ ಲಕ್ಷ್ಮಿ ಸುಳಿಯುವುದಿಲ್ಲ.

ಎಂದರೆ ಮೇಲಣ ದುರ್ಗುಣಗಳು ಯಾರಲ್ಲಿ ಇಲ್ಲವೋ ಅವರಲ್ಲಿ ಲಕ್ಷ್ಮಿ ನೆಲಸುತ್ತಾಳೆ ಎಂಬುದು ಸುಭಾಷಿತದ ಭಾವ. 

ನಮ್ಮಲ್ಲಿ ಎಂಥ ಗುಣಗಳು ನೆಲಸಿವೆ ಎಂಬದೇ ನಮ್ಮ ಸುಖ–ಸಂಪತ್ತುಗಳಿಗೆ ಮಾನದಂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.