ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸುಖದ ಆರು ಮುಖಗಳು

Last Updated 17 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಆರೋಗ್ಯಮಾನೃಣ್ಯಮವಿಪ್ರವಾಸಃ
ಸದ್ಭಿರ್ಮನುಷ್ಯೈಃ ಸಹ ಸಂಪ್ರಯೋಗಃ ।
ಸ್ವಪ್ರತ್ಯಯಾ ವೃತ್ತಿರಭೀತವಾಸಃ
ಷಡ್‌ ಜೀವಲೋಕಸ್ಯ ಸುಖಾನಿ ರಾಜನ್‌ ।।

ಇದರ ತಾತ್ಪರ್ಯ ಹೀಗೆ:

‘ಆರೋಗ್ಯ, ಸಾಲವಿಲ್ಲದಿರುವುದು, ಪ್ರವಾಸಮಾಡದಿರುವುದು, ಸಜ್ಜನರ ಸಹವಾಸ, ಸ್ವತಂತ್ರಜೀವನೋಪಾಯ, ನಿರ್ಭಯಸ್ಥಳದಲ್ಲಿ ವಾಸ – ಈ ಆರು ಸಂಗತಿಗಳು ಜನರಿಗೆ ಸುಖಕರವಾದವು.’

ಸುಖ ನಮಗೆಲ್ಲರಿಗೂ ಬೇಕು. ಆದರೆ ಸುಖ ಎಂದರೆ ಏನು ಎನ್ನುವುದು ಗೊತ್ತಾಗದೆ ಒದ್ದಾಡುತ್ತಿರುತ್ತೇವೆ. ಸುಭಾಷಿತ ನಮ್ಮ ಸುಖದ ದಾರಿಗೆ ಗುರಿಯೊಂದನ್ನು ಸೂಚಿಸಿದೆ. ಸುಖ ಎಂದರೆ ಏನು – ಎಂಬುದರ ವ್ಯಾಖ್ಯಾನವನ್ನೇ ಮಾಡಿದೆ. ವಿಶೇಷ ಎಂದರೆ ಪ್ರಸ್ತುತ ಸಂದರ್ಭಕ್ಕಂತೂ ಸಂಪೂರ್ಣವಾಗಿ ಈ ಶ್ಲೋಕ ಅನ್ವಯವಾಗುವಂತಿದೆ.

ಆರೋಗ್ಯವೇ ದೊಡ್ಡ ಭಾಗ್ಯ. ಸುಭಾಷಿತವೂ ಈ ಮಾತನ್ನು ಎತ್ತಿಹಿಡಿದಿದೆ. ಆರೋಗ್ಯವೇ ಇಂದು ಇಡಿಯ ಜಗತ್ತಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ನಮಗೆಲ್ಲರಿಗೂ ಆರೋಗ್ಯದ ಮಹತ್ವ ಈಗ ಚೆನ್ನಾಗಿಯೇ ಮನವರಿಕೆಯಾಗುತ್ತಿದೆ.

ಸಾಲವನ್ನು ಮಾಡುವುದು ಸುಲಭ; ಅದನ್ನು ತೀರಿಸುವಾಗ ಮಾತ್ರ ಪ್ರಾಣಸಂಕಟ. ಸಾಲಗಾರನಾಗಿ ಬದುಕುವುದು ಎಷ್ಟು ಕಷ್ಟ ಎನ್ನುವುದು ಎಲ್ಲ ಸಾಲಗಾರರ ಅನುಭವಕ್ಕೂ ಬಂದಿರಬಹುದಾದ ಸತ್ಯವೇ ಹೌದು.

ನಮಗೆ ಸಂಪತ್ತಿನ ಸಾಂಗತ್ಯ ಮಾತ್ರ ಇದ್ದರೆ ಸಾಲದು, ಸಜ್ಜನರ ಸಹವಾಸವೂ ಬೇಕು. ನಮ್ಮ ಸಂತೋಷವನ್ನು ಕಂಡು ತಾವೂ ಸಂತೋಷಪಡುವವರು, ನಮಗೆ ಆಪತ್ತು ಎದುರಾದಾಗ ನಮ್ಮ ಕೈ ಹಿಡಿದು ಧೈರ್ಯ ತುಂಬುವವರು, ನಾವು ತಪ್ಪುದಾರಿಯಲ್ಲಿ ನಡೆಯದಂತೆ ತಡೆಯಬಲ್ಲವೇ ಸಜ್ಜನರು. ಅಂಥವರ ಸಹವಾಸ ನಮಗೆ ಬೇಕೇ ಬೇಕು. ಅಂಥವರ ಸಾಮೀಪ್ಯವೇ ನಮಗೆ ಸುಖವನ್ನು ತರಬಲ್ಲದು.

ಸ್ವಾತಂತ್ರ್ಯಕ್ಕಿಂತಲೂ ದೊಡ್ಡ ಸಂಪತ್ತು ಇನ್ನೊಂದು ಇರದು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳುವಂಥ, ಮತ್ತೊಬ್ಬರ ದಯೆ–ದಾಕ್ಷಿಣ್ಯಗಳಿಗೆ ತುತ್ತಾಗದಂಥ ಸ್ವತಂತ್ರಜೀವನವೇ ಸ್ವರ್ಗಸುಖ. ಆದರೆ ಇದು ಎಷ್ಟು ಜನರಿಗೆ ಸಿಕ್ಕೀತು?

ಎಲ್ಲ ವಿಧದ ಸುಖ–ಸಂಪತ್ತು ಇದ್ದರೂ ಭಯ ನಮ್ಮನ್ನು ಆವರಿಸಿಕೊಡರೆ ಆಗ ಎಲ್ಲವೂ ವ್ಯರ್ಥ ಆದಂತೆಯೇ ಸರಿ. ಭಯವಿಲ್ಲದ ಸ್ಥಳದಲ್ಲಿ ಬದುಕುವ ಅವಕಾಶ ದೊರೆತರೆ ನೆಮ್ಮದಿ ಎನ್ನುವುದು ನಮ್ಮ ಜೊತೆ ಇದ್ದಂತೆಯೇ ಆಗುವುದು. ಭಯವಿಲ್ಲದ ಜೀವನವೇ ನೆಮ್ಮದಿಗೆ ಮೂಲ.

ಆರೋಗ್ಯ, ಸಾಲವಿಲ್ಲದಿರುವುದು, ಪ್ರವಾಸಮಾಡದಿರುವುದು, ಸಜ್ಜನರ ಸಹವಾಸ, ಸ್ವತಂತ್ರಜೀವನೋಪಾಯ, ನಿರ್ಭಯಸ್ಥಳದಲ್ಲಿ ವಾಸ – ಇವು ನಮಗೆಲ್ಲರಿಗೂ ಸುಖಕರ ಎನ್ನುವುದಕ್ಕೆ ಹೆಚ್ಚಿನ ವಿವರಗಳು ಬೇಕಿಲ್ಲ; ನಮ್ಮ ಅನುಭವಕ್ಕೆ ಸಹಜವಾಗಿಯೇ ಒದಗಿರುತ್ತದೆಯೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT