ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸತ್ಪುರುಷರು ಯಾರು?

Last Updated 8 ನವೆಂಬರ್ 2020, 18:17 IST
ಅಕ್ಷರ ಗಾತ್ರ

ಧನಿನೋsಪಿ ನಿರುನ್ಮಾದಾಃ ಯುವಾನೋsಪಿ ನ ಚಂಚಲಾಃ ।

ಪ್ರಭವೋsವ್ಯಪ್ರಮತ್ತಾಸ್ತೇ ಮಹಾಮಹಿಮಶಾಲಿನಃ ।।

ಇದರ ತಾತ್ಪರ್ಯ ಹೀಗೆ:

‘ಸತ್ಪುರುಷರು ಎಂದಿಗೂ ಪ್ರಮಾದ ಮಾಡುವವರಲ್ಲ; ತುಂಬ ಮಹಿಮೆಯುಳ್ಳವರು; ಶ್ರೀಮಂತರಾಗಿದ್ದರೂ ಅವರಿಗೆ ಮದ ಇರುವುದಿಲ್ಲ; ತಾರುಣ್ಯದಲ್ಲಿಯೂ ಅವರು ಚಪಲರಾಗಿರುವುದಿಲ್ಲ; ಅಧಿಕಾರಿಗಳಾಗಿದ್ದರೂ ಎಚ್ಚರವನ್ನು ತಪ್ಪುವುದಿಲ್ಲ.’

ಸೃಷ್ಟಿಯಲ್ಲಿ ಬಹುಶಃ ಯಾವ ವಸ್ತುವೂ ಪೂರ್ಣಪ್ರಮಾಣದಲ್ಲಿ ನಮಗೆ ಹಿತವಾಗಿ ಒದಗುವುದಿಲ್ಲ; ಹೂವಿನ ಜೊತೆಗೆ ಮುಳ್ಳು ಕೂಡ ಇರುತ್ತದೆ; ಹಣ್ಣಿನ ಜೊತೆಗೆ ಸಿಪ್ಪೆಯೂ ಇರುತ್ತದೆ. ಅಷ್ಟೇಕೆ, ಊಟ ಮಾಡುವ ಮೊದಲು ಅಡುಗೆ ಮಾಡಬೇಕು; ಅಡುಗೆಗೂ ಮೊದಲು ಅಕ್ಕಿ–ಬೇಳೆಗಳನ್ನು ಸಂಪಾದಿಸಬೇಕು; ಭೋಜನ ಮಾಡಿದಮೇಲೆ ಕೈ ತೊಳೆಯಬೇಕು, ಇತ್ಯಾದಿ, ಇತ್ಯಾದಿ.

ಹೀಗೆಯೇ ನಮ್ಮ ವ್ಯಕ್ತಿತ್ವದ ವಿಷಯದಲ್ಲೂ ಸಂಭವಿಸುತ್ತಿರುತ್ತದೆ. ನಾವು ಒಂದು ಗುಣವನ್ನು ಗಳಿಸಿಕೊಂಡರೆ ಅದರ ಜೊತೆಗೆ ಇನ್ನೊಂದು ಗುಣವೋ ಅವಗುಣವೋ ಜೊತೆಯಾಗಿಯೇ ಬಂದೊದಗುತ್ತದೆ. ಉದಾಹರಣೆಗೆ, ನಾವು ತುಂಬ ಕೆಲಸಗಳಲ್ಲಿ ತೊಡಗಿಕೊಂಡು ಹಣವನ್ನೂ ಕೀರ್ತಿಯನ್ನೂ ಸಂಪಾದಿಸಬಹುದು; ಆದರೆ ಈ ಪ್ರಕ್ರಿಯೆಯಲ್ಲಿ ಕೆಲವೊಂದನ್ನು ಕಳೆದುಕೊಳ್ಳುತ್ತೇವೆ, ಕೆಲವೊಂದನ್ನು ಪಡೆದುಕೊಳ್ಳುತ್ತೇವೆ. ಇದು ಅನಿವಾರ್ಯವೂ ಆಗಿರಬಹುದು. ಕೆಲಸಗಳ ಬಾಹುಳ್ಯದಿಂದ ಮನೆಯಲ್ಲಿ ಹೆಚ್ಚಿನ ಸಮಯ ತೊಡಗಿಕೊಳ್ಳಲು ಆಗದಿರಬಹುದು; ಕೆಲಸಗಳ ಸರಾಗ ನಿರ್ವಹಣೆಗೆ ಶಿಸ್ತುಬದ್ಧವಾಗಿರಬೇಕಾಗುತ್ತದೆ; ಈ ಕಾರಣದಿಂದ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಕಟುವಾಗಿ ನಡೆದುಕೊಳ್ಳುವುದು ಅನಿವಾರ್ಯವೂ ಆಗುತ್ತದೆ.

ಆದರೆ ಸಜ್ಜನರು ಮಾತ್ರ ಯಾವ ಸ್ಥಿತಿಯಲ್ಲೂ ಒಂದೇ ರೀತಿಯಲ್ಲಿ ಇರುತ್ತಾರೆ; ಒಂದನ್ನು ಅವರು ದಕ್ಕಿಸಿಕೊಂಡದ್ದರ ಫಲವಾಗಿ ಇನ್ನೊಂದು ಬೇಕಾಗಿರುವ ಗುಣವನ್ನೂ ಕಳೆದುಕೊಳ್ಳುವುದಿಲ್ಲ, ಬೇಡವಾದ ಅವಗುಣವನ್ನೂ ಅವರು ಬೆಳೆಸಿಕೊಳ್ಳುವುದಿಲ್ಲ ಎನ್ನುತ್ತಿದೆ, ಸುಭಾಷಿತ. ಇದನ್ನು ಕೆಲವೊಂದು ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದೆ.

ಸಿರಿತನದ ಜೊತೆಗೆ ಮದವೂ ಉಡುಗೊರೆಯಾಗಿ ಬರುತ್ತದೆ; ಆದರೆ ಸಜ್ಜನರಲ್ಲಿ ಹಾಗೆ ಆಗುವುದಿಲ್ಲ. ತಾರುಣ್ಯಕ್ಕೂ ಚಂಚಲತೆಗೂ ನೇರ ನಂಟಿದೆ; ಚಂಚಲತೆಯ ಕಾರಣದಿಂದಲೇ ಹೊಣೆಗಾರಿಕೆಯನ್ನೂ ಮರೆಯುತ್ತೇವೆ. ಆದರೆ ಸತ್ಪರುಷರು ತಾರುಣ್ಯದಲ್ಲಿರಲಿ, ವೃದ್ಧಾಪ್ಯದಲ್ಲಿರಲಿ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ. ಅಧಿಕಾರ ಇರುವ ಕಡೆ ಎಚ್ಚರ ಇರುವುದಿಲ್ಲ. ಏಕೆಂದರೆ ಅಧಿಕಾರದ ದರ್ಪವನ್ನೇ ನಾವು ಎಚ್ಚರಸ್ಥಿತಿ ಎಂದು ಭಾವಿಸಿಕೊಂಡಿರುತ್ತೇವೆ. ಆದರೆ ಸಜ್ಜನರನ್ನು ಮಾತ್ರ ಅಧಿಕಾರದ ಅಮಲು ಕೂಡ ಏನನ್ನೂ ಮಾಡುವುದಿಲ್ಲ ಎಂದು ಸುಭಾಷಿತ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT