ಮಂಗಳವಾರ, ಸೆಪ್ಟೆಂಬರ್ 21, 2021
28 °C

ದಿನದ ಸೂಕ್ತಿ: ಮಾತು ಎಂಬ ತಪಸ್ಸು

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ ।

ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದಾರಿದ್ರತಾ ।।

ಇದರ ತಾತ್ಪರ್ಯ ಹೀಗೆ:

‘ಪ್ರಿಯವಾದ ಮಾತುಗಳನ್ನು ಆಡುವುದರಿಂದ ಎಲ್ಲರೂ ಸಂತೋಷವನ್ನು ಪಡುತ್ತಾರೆ. ಹೀಗಾಗಿ ಪ್ರಿಯವಾದ ಮಾತುಗಳನ್ನೇ ಆಡತಕ್ಕದ್ದು. ಮಾತಿಗೆ ಬಡತನವಾದರೂ ಏನು?’

ನಮ್ಮ ಬಾಂಧವ್ಯಗಳ ಮೊದಲ ಮೆಟ್ಟಿಲು ಎಂದರೆ ಮಾತು. ಈ ಮಾತು ಹಿತವಾಗಿರಬೇಕು, ನಮ್ಮ ಮನಸ್ಸಿಗೆ ಹಿಡಿಸುವಂತೆ ಇರಬೇಕು – ಹೀಗೆಲ್ಲ ನಾವು ಯೋಚಿಸುವುದು ಸಹಜ. ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು.

ಸ್ನೇಹವೊಂದು ಏರ್ಪಡಲು, ಅದು ಗಟ್ಟಿಯಾಗಲು ನಾವು ಆಡುವ ಮಾತುಗಳೇ ಕಾರಣವಾಗುತ್ತವೆ. ಮಾತ್ರವಲ್ಲ, ನಮ್ಮ ಮಾತುಗಳು ನಮ್ಮನ್ನು ಅಪಾಯಕ್ಕೂ ತಳ್ಳಬಹುದು, ಒದಗಿರುವ ಅಪಾಯದಿಂದ ಪಾರು ಕೂಡ ಮಾಡಬಹುದು. ಇವೆಲ್ಲಕ್ಕೂ ನಮ್ಮ ನಿತ್ಯಜೀವನದಲ್ಲಿಯೇ ಸಾಕಷ್ಟು ಉದಾಹರಣೆಗಳನ್ನು ನೋಡುತ್ತಿರುತ್ತೇವೆ.

ನಮ್ಮ ಮನದ, ಮನೆಯ ನೆಮ್ಮದಿ–ಸಂತೋಷಗಳೂ ನಮ್ಮ ಮಾತಿನ ಮೇಲೆಯೇ ನಿಂತಿರುತ್ತವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಒಂದು ಮಾತಿನಿಂದ ಆರಂಭವಾಗುವ ಸಮಸ್ಯೆ ಅದು ಉಲ್ಬಣವಾಗಿ ಹಲವು ಸಂಸಾರಗಳೇ ಆ ಕಾರಣದಿಂದ ಛಿದ್ರವಾಗಿರುವಂಥದ್ದೂ ಸಮಾಜದಲ್ಲಿ ನಡೆದಿದೆ. ಸ್ನೇಹ–ಪ್ರೀತಿ–ವಿಶ್ವಾಸಗಳು ಕೂಡ ನಾವು ಆಡುವ ಮಾತುಗಳನ್ನು ಅವಲಂಬಿಸಿಯೇ ಗಟ್ಟಿಯಾಗುತ್ತವೆ, ಅಥವಾ ಚದುರಿಹೋಗುತ್ತವೆ. ಹೀಗಾಗಿ ನಮ್ಮ ಜೀವನದ ಎಲ್ಲ ಸಂಗತಿಗಳಲ್ಲೂ ಮಾತಿನ ಪ್ರಭಾವ ಇರುವುದರಿಂದ ಅದನ್ನು ತುಂಬ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಎಲ್ಲರೂ ಪ್ರಿಯವಾದ ಮಾತುಗಳನ್ನೇ ಕೇಳಲು ಇಷ್ಟಪಡುವುದರಿಂದ ನಾವು ಅಂಥ ಮಾತುಗಳನ್ನೇ ಆಡಬೇಕು ಎಂದು ಸುಭಾಷಿತ ಹೇಳುತ್ತಿದೆ. ಇದರ ಜೊತೆಗೆ ಇನ್ನೊಂದು ಮಾತನ್ನೂ, ಪ್ರಿಯವಾದ ಮಾತನ್ನೇ, ಸುಭಾಷಿತ ಸೇರಿಸಿದೆ. ಮಾತಿಗೆ ನಾವೇನೂ ಹಣ ಕೊಡಬೇಕಿಲ್ಲವಷ್ಟೆ! ನಮ್ಮಲ್ಲಿ ಆಸ್ತಿ ಇಲ್ಲದಿದ್ದರೂ, ನಾವು ಬಡವರಾದರೂ, ಮಾತಿನ ಶ್ರೀಮಂತಿಕೆಯನ್ನು ತೋರಿಸಬಹುದಲ್ಲವೆ?

ಭಗವದ್ಗೀತೆಯಂತೂ ಪ್ರಿಯವಾದ ಮಾತನ್ನು ತಪಸ್ಸಿಗೆ ಹೋಲಿಸಿದೆ: 

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ।

ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ।।

’ಉದ್ವೇಗಕರವಲ್ಲದ, ಸತ್ಯವಾಗಿರುವ, ಪ್ರಿಯವಾದ, ಹಿತವಾದ ಮಾತು ಮತ್ತು ವೇದಗಳ ಅಧ್ಯಯನ – ಇವನ್ನು ಮಾತಿನ ಮೂಲಕ ಮಾಡುವ ತಪಸ್ಸು ಎಂದೇ ಕರೆಯಲಾಗಿದೆ.’

ಹೌದು, ಮಾತಿಗೆ ಬಡತನವಾದರೂ ಏನು? ಒಳ್ಳೆಯ ಮಾತುಗಳನ್ನೇ ಆಡೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು