ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ಸುಖ

Last Updated 2 ನವೆಂಬರ್ 2020, 1:54 IST
ಅಕ್ಷರ ಗಾತ್ರ

ಅಕಿಂಚನಸ್ಯ ದಾಂತಸ್ಯ ಶಾಂತಸ್ಯ ಸಮಚೇತಸಃ ।

ಸದಾ ಸಂತುಷ್ಟಮನಸಃ ಸರ್ವಾಃ ಸುಖಮಯಾ ದಿಶಃ ।।

ಇದರ ತಾತ್ಪರ್ಯ ಹೀಗೆ:

‘ಬಡವನಾಗಿದ್ದರೂ ಆತ್ಮಸಂಯಮಿಯೂ ಶಾಂತನೂ ಸಮಚಿತ್ತನೂ ಸದಾ ಸಂತುಷ್ಟವಾದ ಮನಸ್ಸಿನಿಂದ ಕೂಡಿರುವವನೂ ಆದವನಿಗೆ ಸಮಸ್ತ ದಿಕ್ಕುಗಳೂ ಸುಖಮಯವಾಗಿರುವವು.’

ಬಡವ ಮತ್ತು ಶ್ರೀಮಂತ – ಇವೆರಡರ/ಇವರಿಬ್ಬರ ಲಕ್ಷಣವನ್ನು ಈ ಸುಭಾಷಿತ ತುಂಬ ಸೊಗಸಾಗಿ ಕಟ್ಟಿಕೊಡುತ್ತಿದೆ. ಇದರ ಜೊತೆಗೆ ಸುಖ ಮತ್ತು ದುಃಖಗಳ ವ್ಯಾಪ್ತಿಯನ್ನೂ ನಿರೂಪಿಸುತ್ತಿದೆ.

ನಾವು ಸಿರಿಯನ್ನು ಬಯಸುವುದಾದರೂ ಏಕೆ? ಸುಖವಾಗಿರಲು ತಾನೆ? ಹಾಗಾದರೆ ಸಿರಿತನ ಇದ್ದ ಮಾತ್ರಕ್ಕೆ ಸುಖ ಒದಗುತ್ತದೆಯೆ? ಇಲ್ಲ ಎನ್ನುತ್ತಿದೆ ಸುಭಾಷಿತ. ಸುಖ ಎನ್ನುವುದು ನಮ್ಮ ಮಾನಸಿಕ ಸ್ಥಿತಿ; ಅದು ಹಣದಲ್ಲಾಗಲೀ ಆಸ್ತಿಯಲ್ಲಾಗಲೀ ಇಲ್ಲ ಎಂದು ಅದು ಘೋಷಿಸುತ್ತಿದೆ. ಸುಖಕ್ಕೂ ಸಿರಿವಂತಿಕೆಗೂ ನೇರ ಸಂಬಂಧ ಇಲ್ಲ ಎನ್ನುತ್ತಿದೆ ಅದು.

ಬಡವ ಎಂದರೆ ಯಾರು? ಹಣ–ಐಶ್ವರ್ಯ ಇಲ್ಲದವನು ಎಂದೇ ತಾನೆ ಲೋಕದ ಅರ್ಥ? ಸುಭಾಷಿತ ಹೇಳುತ್ತಿದೆ; ನಮ್ಮಲ್ಲಿ ಹಣ ಇಲ್ಲದೇ ನಾವು ಬಡವರಾಗಿರಬಹುದು. ಆದರೆ ಮನಸ್ಸಿನ ಶ್ರೀಮಂತಿಕೆ ಇದ್ದರೆ ಆಗ ನಾವು ಎಲ್ಲೆಲ್ಲೂ ಸುಖವಾಗಿಯೇ ಇರುತ್ತೇವೆ. ಹಾಗಾದರೆ ಮನಸ್ಸನ್ನು ಸಿರಿಯ ಕಣಜವನ್ನಾಗಿಸಿಕೊಳ್ಳುವುದು ಹೇಗೆ? ಮನಸ್ಸನ್ನು ಸಂಯಮದಲ್ಲಿಟ್ಟುಕೊಳ್ಳುವುದು, ಯಾವ ಪರಿಸ್ಥಿತಿಯಲ್ಲೂ ಉದ್ವೇಗಕ್ಕೆ ಒಳಪಡದೆ ಶಾಂತವಾಗಿರುವುದು, ಎಲ್ಲವನ್ನೂ ಒಂದೇ ಮನಸ್ಸಿನಿಂದ ಸ್ವೀಕರಿಸುವ ಪ್ರಬುದ್ಧತೆ, ನಮಗೆ ದೊರೆತಿರುವುದರಲ್ಲಿ ತೃಪ್ತಿಯಾಗಿರುವುದು – ಇವಿಷ್ಟು ನಮ್ಮ ಅಂತರಂಗದ ಸಂಪತ್ತುಗಳು ಎಂದು ಪಟ್ಟಿ ಮಾಡಿದೆ ಅದು. ಈ ಗುಣಗಳು ನಮ್ಮಲ್ಲಿ ಇದ್ದರೆ, ಆಗ ನಮ್ಮಲ್ಲಿ ಹಣ ಇರಲಿ ಅಥವಾ ಬಿಡಲಿ – ನಾವಂತೂ ಸುಖಿಗಳಾಗಿರುತ್ತೇವೆ ಎಂಬ ವಿಶ್ವಾಸವನ್ನು ಸುಭಾಷಿತ ಕೊಡುತ್ತಿದೆ.

ಡಿವಿಜಿ ಅವರು ಈ ಅಂತರಂಗದ ತುಂಬುತನದ ಬಗ್ಗೆ ಇನ್ನೊಂದು ವಿಧದಲ್ಲಿ ಸೊಗಸಾಗಿ ಹೇಳಿದ್ದಾರೆ:

ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಗನೋಲಗದಿ ಕುಳಿತು ಮೈಮರೆಯದನು |
ಬಡಮನಸೆ ಬಡತನವೊ - ಮರುಳ ಮುನಿಯ ||

‘ಬಡಮನಸೆ ಬಡತನ’ – ಈ ಮಾತನ್ನು ನಾವು ಎಂದಿಗೂ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT